16.1 C
Sidlaghatta
Monday, December 29, 2025
Home Blog Page 992

ಶಾಲೆಯ ವಿಧ್ಯಾರ್ಥಿಗಳಿಂದ ಪಲ್ಸ್ಪೋಲಿಯೋ ಜಾಗೃತಿ ಜಾಥಾ

0

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಖಡ್ಡಾಯವಾಗಿ ಜನವರಿ 18 ರ ಭಾನುವಾರದಂದು ಪಲ್ಸ್ಪೋಲಿಯೋ ಹನಿಗಳನ್ನು ಹಾಕಿಸುವ ಮುಖಾಂತರ ಭಾರತ ದೇಶವನ್ನು ಪೊಲಿಯೋ ಮುಕ್ತ ರಾಷ್ಟ್ರವನ್ನಾಗಿ ಮಾಡಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸಾರ್ವಜನಿಕ ಆಸ್ಪತ್ರೆಯ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಕಿರಣ್ಕುಮಾರ್ ಮನವಿ ಮಾಡಿದರು.
ಪಟ್ಟಣದ ಶಾರದಾ ಕಾನ್ವೆಂಟ್ ಶಾಲೆಯ ವಿಧ್ಯಾರ್ಥಿಗಳು ನಡೆಸಿದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ ದೇಶವನ್ನು ಪೊಲೀಯೋ ಮುಕ್ತ ರಾಷ್ಟ್ರವನ್ನಾಗಿಸುವ ಸಲುವಾಗಿ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಈ ಮುಂಚೆ ಪೊಲೀಯೋ ಹನಿಗಳನ್ನು ಹಾಕಿಸಿದ್ದರೂ ಕೂಡಾ ಪುನಃ ಹಾಕಿಸಬೇಕು, ಯಾವುದೇ ಹಳ್ಳಿಯಲ್ಲಿದ್ದರೂ ಎಲ್ಲಾ ಹಳ್ಳಿಗಳಲ್ಲಿರುವ ಅಂಗನವಾಡಿ ಕೇಂದ್ರಗಳು, ಬಸ್ನಿಲ್ದಾಣಗಳು, ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪೊಲೀಯೋ ಹನಿಗಳನ್ನು ಹಾಕಲಾಗುತ್ತದೆ. ಎಲ್ಲಾ ನಾಗರೀಕರು ತಪ್ಪದೇ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದರು.
ಶಾಲಾ ಮಕ್ಕಳು ಪಟ್ಟಣದ ಟಿ.ಬಿ.ರಸ್ತೆ, ಅಶೋಕ ರಸ್ತೆ, ವಾಸವಿ ರಸ್ತೆ, ಅಂಚೆ ಕಚೇರಿಯ ರಸ್ತೆಗಳು ಸೇರಿದಂತೆ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಮೂಡಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್, ಶಾರದಾ ವಿಧ್ಯಾಸಂಸ್ಥೆಯ ಶಿಕ್ಷಕರಾದ ರಾಘವೇಂದ್ರ, ಸಹಶಿಕ್ಷಕರು ಜಾಗೃತಿ ಜಾಥಾದಲ್ಲಿ ಭಾಗವಹಿಸಿದ್ದರು.

600 ಫ್ರೇಮ್ಗಳ ಅಂಚೆ ಅಂಕಣದಲ್ಲಿ ತಾಲ್ಲೂಕಿನ ಪ್ರತಿನಿಧಿಗಳು

0

ಅಂಚೆ ಚೀಟಿ ಸಂಗ್ರಹ ಪುರಾತನ ಹವ್ಯಾಸ. ಹವ್ಯಾಸಗಳಲ್ಲೆಲ್ಲಾ ಅಂಚೆ ಚೀಟಿ ಸಂಗ್ರಹವು ಮಹಾರಾಜನಂಥಹದ್ದೆಂದು ಪರಿಗಣಿಸಲ್ಪಟ್ಟಿದೆ. ದೇಶ, ಭಾಷೆಗಳ ಎಲ್ಲೆಗಳನ್ನು ಮೀರಿ ಬೆಳೆದಿರುವ ಅಂಚೆ ಚೀಟಿ ಸಂಗ್ರಹ ವಿಶ್ವದಲ್ಲೀಗ ಮುಂಚೂಣಿಯಲ್ಲಿರುವ ಹವ್ಯಾಸ. ಈ ಸಂಗ್ರಹದ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಪ್ರಾಂತೀಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸಲಾಗುತ್ತದೆ.

ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಪ್ರಕಾಶ್ಚಂದ್ರ ಬೆಂಗಳೂರಿನಲ್ಲಿ ನಡೆಯುತ್ತಿರುವ "ಕರ್ನಾಪೆಕ್ಸ್ 2015' ಅಂಚೆ ಚೀಟಿ ಪ್ರದರ್ಶನದಲ್ಲಿ ತಾಲ್ಲೂಕನ್ನು ಪ್ರತಿನಿಧಿಸುತ್ತಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಕನ್ನಮಂಗಲದ ಪ್ರಕಾಶ್ಚಂದ್ರ ಬೆಂಗಳೂರಿನಲ್ಲಿ ನಡೆಯುತ್ತಿರುವ “ಕರ್ನಾಪೆಕ್ಸ್ 2015′ ಅಂಚೆ ಚೀಟಿ ಪ್ರದರ್ಶನದಲ್ಲಿ ತಾಲ್ಲೂಕನ್ನು ಪ್ರತಿನಿಧಿಸುತ್ತಿದ್ದಾರೆ.

ಅಂಚೆ ಇಲಾಖೆ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ “ಕರ್ನಾಪೆಕ್ಸ್ 2015′ ಹೆಸರಿನಲ್ಲಿ ಏಳು ವರ್ಷಗಳ ನಂತರ ನಾಲ್ಕು ದಿನಗಳ ಅಂಚೆ ಚೀಟಿ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸಿದ್ದಾರೆ. ಈ ಅಂಚೆ ಚೀಟಿಗಳ ಹಬ್ಬದಲ್ಲಿ ಹಲವು ಪ್ರತಿಷ್ಠಿತ ಸಂಗ್ರಹಕಾರಕಾರರು ತಮ್ಮ ವೈವಿಧ್ಯಮಯ ಅಂಚೆ ಚೀಟಿ ಸಂಗ್ರಹದೊಡನೆ ಪಾಲ್ಗೊಂಡಿದ್ದು, ತಾಲ್ಲೂಕಿನ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಆರು ಮಂದಿ ಸ್ಪರ್ಧಿಗಳು ಭಾಗವಹಿಸಿದ್ದಾರೆ.
ವಿವಿಧ ವಿಷಯಗಳನ್ನು ಆಧರಿಸಿ ಅಂಚೆ ಚೀಟಿಗಳನ್ನು ಪ್ರದರ್ಶಿಸಲಾಗುತ್ತಿದೆ. ತಾಲ್ಲೂಕಿನ ಮೇಲೂರಿನ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಎಂ.ಆರ್.ಪ್ರಭಾಕರ್ ‘ಭಾರತ ಸಂಸ್ಕೃತಿ’ಯ ಬಗ್ಗೆ, ಚೌಡಸಂದ್ರ ಸರ್ಕಾರಿ ಶಾಲೆಯವರು ‘ಪರಿಸರ ಜಾಗೃತಿ’ ಕುರಿತಂತೆ, ಕನ್ನಮಂಗಲದ ಪ್ರಕಾಶ್ಚಂದ್ರ
‘ಸ್ವಾತಂತ್ರ್ಯ ಪೂರ್ವ ಅಂಚೆ ಚೀಟಿಗಳು’, ಶಿಡ್ಲಘಟ್ಟದ ಅಜಿತ್ ಕೌಂಡಿನ್ಯ ‘ಭಾರತ ದರ್ಶನ‘, ಓಂ ದೇಶಮುದ್ರೆ ‘ಹಕ್ಕಿ’ಗಳ ಕುರಿತಂತೆ ಮತ್ತು ಮಲ್ಲಿಕಾರ್ಜುನ ‘ಭಾರತ ಭೂತಾನ್ ಸಹೋದರತ್ವ’ ಕುರಿತಂತೆ ಅಂಚೆ ಚೀಟಿಗಳನ್ನು ಪ್ರದರ್ಶಿಸಿದ್ದಾರೆ. ಒಟ್ಟಾರೆ 600 ಫ್ರೇಮ್ಗಳ ಪ್ರದರ್ಶನದಲ್ಲಿ ತಾಲ್ಲೂಕಿನ ಸ್ಪರ್ಧಿಗಳ 25 ಫ್ರೇಮ್ಗಳು ಪ್ರದರ್ಶಿತಗೊಂಡಿವೆ. ಒಂದು ಫ್ರೇಮ್ನಲ್ಲಿ ಹದಿನಾರು ಎ4 ಅಳತೆಯ ಹಾಳೆಗಳಿದ್ದು, ಅವುಗಳಲ್ಲಿ ಕಥನದ ರೀತಿಯಲ್ಲಿ ಆಯ್ದ ವಿಷಯದ ಕುರಿತಂತೆ ಅಂಚೆ ಚೀಟಿಗಳನ್ನು ವಿವರಣೆಯೊಂದಿಗೆ ಜೋಡಿಸಿಡಲಾಗಿರುತ್ತದೆ.
ಭಾರತೀಯ ಅಂಚೆ ಇಲಾಖೆ ಅಂಚೆ ಚೀಟಿ ಸಂಗ್ರಹವನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ 1975ರ ನಂತರ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನಗಳನ್ನು ಏರ್ಪಡಿಸುವ ಪದ್ಧತಿ ಶುರು ಮಾಡಿತು. ಈಗೆಲ್ಲಾ ಇ–ಮೇಲ್, ಎಸ್.ಎಂ.ಎಸ್. ಕಾಲ. ಅಂಚೆ ಡಬ್ಬಗಳಿಗೆ ಕಾಗದ ಪತ್ರಗಳನ್ನು ಹಾಕುವುದು ಹಿಂದಿನಷ್ಟಿಲ್ಲ. ಕೊರಿಯರ್ಗಳು ಬೇರೆ ಬಂದಿವೆ. ಅಂಚೆ ಪತ್ರಗಳ ರವಾನೆ ಕೊಂಚ ಇಳಿಮುಖವಾದರೂ ಅಂಚೆ ಚೀಟಿಗಳ ಮುದ್ರಣ ಸಾಂಗವಾಗಿ ನಡೆದಿದೆ. ಅಂಚೆ ಚೀಟಿಗಳ ಸಂಗ್ರಹಕಾರರ ಸಂಖ್ಯೆಯೂ ವೃದ್ಧಿಸಿದೆ.
‘ಅಬಾಲವೃದ್ಧರಾಗಿ ಎಲ್ಲರೂ ತೊಡಗಿಕೊಳ್ಳಬಹುದಾದ ಹವ್ಯಾಸವಾಗಿರುವ ಅಂಚೆ ಚೀಟಿ ಸಂಗ್ರಹಕ್ಕೆ ಬೆಂಗಳೂರಿನಲ್ಲಿ ಜರುಗುತ್ತಿರುವ ಪ್ರದರ್ಶನ ಪೂರಕವಾಗಲಿದೆ. ಕರ್ನಾಟಕ ಅಂಚೆ ವೃತ್ತ ಆಯೋಜಿಸಿರುವ ಈ ಪ್ರಾದೇಶಿಕ ಅಂಚೆ ಚೀಟಿಗಳ ಪ್ರದರ್ಶನಕ್ಕೆ ಕೇವಲ ಕರ್ನಾಟಕದ ಸಂಗ್ರಹಕಾರರು ಮಾತ್ರ ಬರುತ್ತಿಲ್ಲ. ದೇಶವಿದೇಶಗಳ ಖ್ಯಾತನಾಮ ಅಂಚೆ ಚೀಟಿ ಸಂಗ್ರಹಕಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ನಮ್ಮ ತಾಲ್ಲೂಕಿನಿಂದಲೂ ನಾವು ಆರು ಮಂದಿ ಸ್ಪರ್ಧಿಸಿ ಪ್ರದರ್ಶಿಸುತ್ತಿರುವುದು ಹೆಮ್ಮೆ ತಂದಿದೆ. ವಿವಿಧ ವಿನ್ಯಾಸಗಳ, ಬಗೆಬಗೆಯ ಬಣ್ಣಗಳು, ನಾನಾ ಆಕೃತಿಗಳ ರಂಗುರಂಗಿನ ಅಂಚೆ ಚೀಟಿಗಳು ಆಯಾ ದೇಶದ ಆಯಾ ವಿಷಯಗಳಿಗೆ ಸಂಬಂಧಿಸಿದ ಜ್ಞಾನವನ್ನು ಹೊತ್ತು ತರುವ ವಾಹಕಗಳು’ ಎಂದು ಕನ್ನಮಂಗಲದ ಪ್ರಕಾಶ್ಚಂದ್ರ ತಿಳಿಸಿದರು.

ನೋಡಿದಿರಾ ಧೂಮಕೇತುವಿನ ನೆತ್ತಿಗೆ ಕೊಟ್ಟ ಪೆಟ್ಟನ್ನು?

0

ದೂರದ ಆಗಸದಲ್ಲಿ ಪಟಾಕಿಯ ಸಿಡಿತ, ಶಬ್ದವಾಯಿತೇ? ತಿಳಿಯಲಿಲ್ಲ. ನೋಡಲು ಆ ದೃಶ್ಯ ಮಾತ್ರ ಗೋಚರವಾಯಿತು ಅದೂ ಟಿವಿ ಪರದೆಯ ಮೇಲೆ. ಅಂದು ೨೦೦೫ರ ಜುಲೈ ತಿಂಗಳ ನಾಲ್ಕನೇ ದಿನ. ಅಮೆರಿಕನ್ನರಿಗೆ ಸ್ವಾತಂತ್ರ ದಿನಾಚರಣೆಯ ದಿನ. ಅಂದು ಜನರಿಗೆ ಕೊಡುಗೆಯಾಗಿ ಅಮೆರಿಕದ ಪ್ರತಿಷ್ಠಿತ ನಾಸಾ ಅಥವಾ ರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಟೆಂಪೆಲ್-೧ ಎಂಬ ಹೆಸರಿನ ಧೂಮಕೇತುವಿಗೆ ಸುತ್ತಿಗೆಯೇಟು ನೀಡುವುದನ್ನು ಬೃಹತ್ ಪರದೆಯ ಮೇಲೆ ತೋರಿಸ ಹೊರಟಿತ್ತು. ಅಂದು ಹವಾಯಿ ನಡುಗಡ್ಡೆಯ ವೈಕಿಕಿ ಬೀಚಿನಲ್ಲಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಅಮೆರಿಕನ್ನರು ಈ ಕೌತುಕವನ್ನು ವೀಕ್ಷಿಸಿದರು. ನಿಗದಿತ ಸಮಯಕ್ಕೆ ಸರಿಯಾಗಿ ಸುತ್ತಿಗೆಯೇಟು ಧೂಮಕೇತುವಿನ ತಲೆಯಭಾಗಕ್ಕೆ ಜೋರಾಗಿ ಅಪ್ಪಳಿಸಿತು. ಬಿಳಿಯ ಮೋಡ ಟೆಂಪೆಲ್-೧ ರ ಶಿರಭಾಗದಿಂದ ಭುಗಿಲ್ಲೆಂದು ಮೇಲೆದ್ದಿತು. ಚಂದ್ರಾ ವೀಕ್ಷಣಾಲಯ, ಹಬ್ಬಲ್ ದೂರದರ್ಶಕ ಅಲ್ಲದೆ ಇನ್ನೂ ಅನೇಕ ಪ್ರಯೋಗಾಲಯಗಳು ಈ ಅಭೂತಪೂರ್ವ ಘಟನೆಯನ್ನು ದಾಖಲಿಸಿದವು. ನೆರೆದ ನಾಸಾದ ವಿಜ್ಞಾನಿಗಳು ‘ಓಹ್! ನಾವಿಂದು ಅಸಾಧ್ಯವೆನಿಸಿದ್ದನ್ನು ಸಾಧ್ಯವಾಗಿಸಿದೆವು’ ಎಂದು ಅಭಿನಂದನೆಗಳನ್ನು ಹಂಚಿಕೊಂಡರು.
ಧೂಮಕೇತುಗಳ ದರ್ಶನವೆಂದರೆ ಅಪಶಕುನವೆಂದು ಭೂಮಿಯ ಎಲ್ಲಾ ಕಡೆ ನಂಬಿಕೆಯಿದ್ದ ಕಾಲವೊಂದಿತ್ತು. ಆದರೀಗ ಮುಂದುವರೆದ ವಿಜ್ಞಾನ ತಂತ್ರಜ್ಞಾನಗಳು ಧೂಮಕೇತುಗಳ ಕುರಿತಾದ ಸಾಕಷ್ಟು ವಿವರಗಳನ್ನು ಕಂಡುಹಿಡಿದಿವೆ. ಇಪ್ಪತ್ತೊಂದನೇ ಶತಮಾನದ ವಿಜ್ಞಾನ ಒಂದು ಕಾಲಕ್ಕೆ ಅಪಶಕುನಕಾರಿಯಾಗಿದ್ದ ಧೂಮಕೇತುವೆಂಬ ವಸ್ತುವಿನ ತಲೆಬುರುಡೆಗೇ ಏಟು ನೀಡುವಷ್ಟು ಮುಂದುವರೆದಿದೆ.
ಆ ಕೆಲಸ ಸುಲಭವಾಗಿರಲಿಲ್ಲ. ಟೆಂಪೆಲ್-೧ ಹೆಸರಿನ ಆ ಧೂಮಕೇತು ೧೩ ಕೋಟಿ ಕಿ.ಮೀ. ಆಚೆ ಅತಿ ವೇಗದಲ್ಲಿ ಓಡುತ್ತಿತ್ತು (ಗಂಟೆಗೆ ೩೭ ಸಾವಿರ ಕಿ.ಮೀ.) ಭೂಮಿಯಿಂದ ಹಾರಿ ೧೩ ಕೋಟಿ ಕಿ.ಮೀ. ದೂರವನ್ನು ಸವೆಸಿ ಧೂಮಕೇತುವಿನ ವೇಗಕ್ಕೆ ಸರಿಯಾಗಿ ಓಡಿ ಸಮಯಕ್ಕೆ ಸರಿಯಾಗಿ ಅದರ ತಲೆಗೆ ಸುತ್ತಿಗೆಯನ್ನು ಬೀಸಿ ಕೂಡಲೇ ತಾನು ಅಲ್ಲಿಂದ ಪಾರಾಗಿ ಬರುವಂತಹ ನೌಕೆಯೊಂದು ತಯಾರಾಗಬೇಕಿತ್ತು. ಸುತ್ತಿಗೆಯಾಗಿ ಕಾರ್ಯನಿರ್ವಹಿಸುವ ವಸ್ತು ಕೂಡ ಮಾತೃನೌಕೆಯಿಂದ ಹೊರಬಿದ್ದಕೂಡಲೇ ಅತಿ ವೇಗವಾಗಿ ಸಾಗಿ ಧೂಮಕೇತುವಿನ ತಲೆಯನ್ನಪ್ಪಳಿಸಿ ಆತ್ಮಹತ್ಯೆಗೊಳಗಾಗುವ ಮೊದಲು ಒಂದಿಷ್ಟು ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಬೇಕಿತ್ತು. ಇವೆಲ್ಲವನ್ನೂ ಹಬ್ಲ್ ನಂತಹ ಪ್ರಮುಖ ದೂರದರ್ಶಕಗಳು ದಾಖಲಿಸಬೇಕಿತ್ತು. ಮತ್ತು ಈ ಕಾರ್ಯ ಅಮೆರಿಕದ ಸ್ವಾತಂತ್ರ್ಯ ದಿನದಂದೇ ನಡೆಯಬೇಕಿತ್ತು.
ಮಾನವನ ಜೀವನದಲ್ಲಿ ನಡೆಯುವ ಅವಘಡಗಳಿಗೆ ಧೂಮಕೇತುಗಳ ದರ್ಶನ ಕಾರಣವಲ್ಲವೆಂದು ಸಾಬೀತಾದ ಬಳಿಕವೂ ಈ ಟೆಂಪೆಲ್-೧ ಧೂಮಕೇತುವಿನ ಮೇಲೆ ವಿಜ್ಞಾನಿಗಳಿಗೇಕೆ ಆಕ್ರೋಶ? ಹಾಗೆ ನೋಡಿದರೆ ಧೂಮಕೇತುಗಳ ಮೇಲೆ ವಿಜ್ಞಾನಿಗಳ ಗೃದ ದೃಷ್ಟಿ ಇಂದು ನಿನ್ನೆಯದಲ್ಲ. ಆಗೀಗ ಬೇರೆ ಬೇರೆ ಧೂಮಕೇತುಗಳ ಬಳಿ ಬಾಹ್ಯಾಕಾಶ ನೌಕೆಯನ್ನು ಕಳಿಸಿ ಅತಿ ಸಮೀಪದಿಂದ ಅವುಗಳ ನೋಟದ ಸೆರೆ, ಅವುಗಳ ಬಾಲದಲ್ಲಿರುವ ಅನಿಲಗಳನ್ನು ಸಂಗ್ರಹಿಸುವ ಕಾರ್ಯ ಇತ್ಯಾದಿಗಳು ನಡೆದಿವೆ.
ಧೂಮಕೇತುಗಳ ಬಗ್ಗೆ ದೀರ್ಘವಾದ ಅಧ್ಯಯನದ ಬಳಿಕ ಅವು ಸೌರವ್ಯೂಹದ ಉಗಮದ ಸಮಯದಲ್ಲಿ ಹುಟ್ಟಿಕೊಂಡ ಅನಿಲದ ಚೆಂಡುಗಳಾಗಿದ್ದು ಸೌರವ್ಯೂಹದ ಅತಿ ಹೊರಗಿನ ಕವಚವಾದ ಊರ್ತ್ ಮೋಡ * ಗಳಿಂದ ಹೊರಜಿಗಿದು ಸೂರ್ಯನನ್ನು ಸುತ್ತುಹಾಕುತ್ತವೆಂದು ನಂಬಲಾಗುತ್ತಿದೆ. ಸೌರವ್ಯೂಹದ ಅತಿ ಹೊರಗಿನ ಗ್ರಹವೆಂದರೆ ಪ್ಲೂಟೋ ಅಲ್ಲವೆ? ಈ ಪ್ಲೂಟೋದಿಂದ ಆಚೆ ಮೋಡದಂತಹ ಕವಚವೊಂದು ಕವಿದಿದ್ದು ಅದನ್ನು ಊರ್ತ್ ಮೋಡವೆಂದು ಕರೆಯಲಾಗುತ್ತದೆ. ಈ ಊರ್ತ್ ಕವಚದಲ್ಲಿ ಸುಮಾರು ಮೂವತ್ತು ಸಾವಿರ ಕೋಟಿ ಧೂಮಕೇತುಗಳು ಅವಿತಿವೆ. ಸುತ್ತಲಿನ ವಿಶಾಲ ಆಕಾಶದ ಯಾವುದ್ಯಾವುದೋ ನಕ್ಷತ್ರಗಳ ಪ್ರಭಾವಕ್ಕೆ ಒಳಗಾಗಿ ಅವುಗಳಲ್ಲಿ ಕೆಲವು ಬಾಣ ಚಿಮ್ಮಿದಂತೆ ಸೌರವ್ಯೂಹವನ್ನು ಪ್ರವೇಶಿಸುತ್ತವೆ. ಮುಂದೆ ಸೂರ್ಯನ ಸುತ್ತಲೂ ಗಸ್ತು ತಿರುಗುವುದೇ ಅವುಗಳ ಕೆಲಸ. ಸೌರವ್ಯೂಹಕ್ಕೆ ಪ್ರವೇಶ ಗಿಟ್ಟಿಸಿದ ಧೂಮಕೇತುಗಳೊಂದೊಂದರದ್ದೂ ವಿಭಿನ್ನ ಗುಣ ಲಕ್ಷಣಗಳು. ಅವುಗಳ ಗಾತ್ರ ಬೇರೆ ಬೇರೆ. ಅವುಗಳ ಪರಿಭ್ರಮಣಾ ಅವಧಿ ಅಥವಾ ಸೂರ್ಯನನ್ನು ಒಂದು ಪ್ರದಕ್ಷಿಣೆ ಹಾಕಲು ಅವು ತೆಗೆದುಕೊಳ್ಳುವ ಸಮಯ ಕೂಡ ಬೇರೆ ಬೇರೆ. ಕೆಲವು ನಿಯಮಿತವಾಗಿ ಸೂರ್ಯನನ್ನು ಗಸ್ತು ಹೊಡೆಯುತ್ತಿವೆಯಾದರೆ ಕೆಲವು ಎಲ್ಲೋ ಒಮ್ಮೊಮ್ಮೆ ಮಾತ್ರ ಕಾಣಿಸಿಕೊಳ್ಳುತ್ತವೆ. ನಮಗೆ ಪರಿಚಿತವಾದ ಹ್ಯಾಲಿ ಧೂಮಕೇತುವನ್ನೇ ತೆಗೆದುಕೊಂಡರೆ ಪ್ರತಿ ಎಪ್ಪತ್ತಾರು ವರುಷಗಳಿಗೊಮ್ಮೆ ಸೂರ್ಯನನ್ನು ಸುತ್ತು ಹಾಕುವ ಇದು ಕಳೆದ ೧೯೮೬ರಲ್ಲಿ ಭೂಮಿಯ ಸಮೀಪ ಬಂದಿತ್ತು.
ಇಷ್ಟಕ್ಕೂ ಧೂಮಕೇತುಗಳ ಒಡಲಾಳದಲ್ಲಿರುವುದೇನು? ಬರೀ ಹಿಮದ ಗಡ್ಡೆ, ಅದೂ ರಾಸಾಯನಿಕಗಳಿಂದ ಕಲುಷಿತವಾದ ಹಿಮದ ತುಂಡು ಎಂದು ಫ಼್ರೆಡ್ ವಿಪಲ್ ಎಂಬ ಸಂಶೋಧಕರ ಅಂಬೋಣ. ಸರಿ ಹಾಗಾದರೆ ಬಿಳಿ ಮೋಡದಂತಹ ಬಾಲವಿದೆಯಲ್ಲ ಅದೇನಿರಬಹುದು? ದೂರದ ನೆಪ್ಚೂನ್ ಅಥವಾ ಕೆಲಬಾರಿ ಪ್ಲೂಟೋ ಆಚೆಯಿಂದಲೂ ಪ್ರತ್ಯಕ್ಷವಾಗುವ ಹಿಮದ ಗಡ್ಡೆ ಸೂರ್ಯನಿಗೆ ಹತ್ತಿರವಾದ ಹಾಗೆ ಕರಗುತ್ತ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತ ಹೋಗುತ್ತದೆ. ಗುರುಗ್ರಹದ ಬಳಿ ಬಂದಂತೆ ಕರಗಿ ಆವಿಯಾದ ಅದರ ಸಂಯುಕ್ತ ವಸ್ತುಗಳು ಹೊರಗೆ ಹಾರಲಾರದೆ ಸುತ್ತಲೂ ಕವಿದುಕೊಳ್ಳುತ್ತವೆ. ಭೂಮಿಯಲ್ಲಿರುವ ನಮಗೆ ಗೋಚರವಾಗುವ ಸಮಯದಲ್ಲಿ ಈ ಕರಗಿದ ಅನಿಲಗಳು ಮಧ್ಯದ ಧೂಮಕೇತುವಿನ ಮೂಲರೂಪವನ್ನು ಮುಚ್ಚಿ ಹಾಕಿ ಬರೀ ಮೋಡದ ಉಂಡೆ ಬಾಲದೊಡನೆ ಹಾರುತ್ತಿರುವಂತೆ ಕಾಣುತ್ತದೆ.
ನಾಸಾದ ಈ ಯೋಜನೆ ಆರಂಭವಾಗಿದ್ದು ವರ್ಷಗಳ ಹಿಂದೆಯೇ. ಇಂಪಾಕ್ಟರ್ ಎಂಬ ೩೭೦ ಕೆ.ಜಿ. ಅಥವಾ ಒಂದು ವಾಶಿಂಗ್ ಮಶಿನ್ನಿನಷ್ಟು ತೂಕದ ಉಪಕರಣವನ್ನು ಹೊತ್ತ ಡೀಪ್ ಇಂಪಾಕ್ಟ್ ಹೆಸರಿನ ನೌಕೆ ಕೆಲಕಾಲ ಭೂಮಿಯ ಕಕ್ಷೆಯಲ್ಲಿ ಹಾರುತ್ತಿದ್ದು ೨೦೦೫ರ ಜನವರಿ ನಾಲ್ಕರಂದು ಬಾಹ್ಯಾಕಾಶವನ್ನು ಸೇರಿ ಧೂಮಕೇತುವಿನತ್ತ ತನ್ನ ಪಯಣವನ್ನು ಪ್ರಾರಂಭಿಸಿತು. ಜುಲೈ ಮೂರರಂದು ಓಡುತ್ತಿರುವ ಧೂಮಕೇತುವಿನ ಬಳಿ ಸಾಗಿದ ನೌಕೆ ಅದರ ನೆತ್ತಿಗೆ ಪೆಟ್ಟನ್ನು ನೀಡಿದ ನಂತರ ಪಕ್ಕಕ್ಕೆ ಸರಿದು ಮತ್ತೂ ಇಪ್ಪತ್ನಾಲ್ಕು ಗಂಟೆಗಳ ಕಾಲ ಓಡುತ್ತ ನಡೆದ ಘಟನೆಯನ್ನು ಚಾಚೂ ತಪ್ಪದೆ ಗ್ರಹಿಸಿ ಅವನ್ನು ಭೂಮಿಗೆ ರವಾನಿಸಿತು. ಭೂಮಿಗೆ ಡೀಪ್ ಇಂಪಾಕ್ಟ್ ಕಳಿಸಿದ ವರದಿಗಳು ಭೂಮಿಯನ್ನು ತಲುಪಿದಾಗ ಇಪ್ಪತ್ನಾಲ್ಕು ಗಂಟೆಗಳು ಕಳೆದಿದ್ದವು.
೧೮೬೭ರಲ್ಲಿ ಟೆಂಪೆಲ್-೧ ಧೂಮಕೇತುವನ್ನು ಪತ್ತೆಹಚ್ಚಿದ ವಿಜ್ಞಾನಿ ವಿಲ್ಹೆಲ್ಮ್ ಟೆಂಪೆಲ್. ಗುರುಗ್ರಹದ ಅತಿ ಪ್ರಭಾವಕ್ಕೊಳಗಾದ ಅದರ ಕಕ್ಷೆ ಮೊದಲು ೫.೭೪ ವರ್ಷ ನಂತರ ೫.೬೮ ವರ್ಷ ಹಾಗೂ ಈಗ ಆರೂವರೆ ವರ್ಷಕ್ಕೊಮ್ಮೆಯೆಂದು ಹೇಳಲಾಗುತ್ತಿದೆ. ೧೯೦೫ ರಿಂದ ಅನೇಕ ವರ್ಷಗಳ ಕಾಲ ಸಂಶೋಧಕರ ಕಣ್ಣಿಗೆ ಮಣ್ಣೆರೆಚಿದ್ದ ಈ ಧೂಮಕೇತು ೧೯೭೨ರಲ್ಲಿ ಕಾಣಿಸಿಕೊಂಡು ಅಂದಿನಿಂದ ಅದರ ಚಲನೆಯನ್ನು ವಿಜ್ಞಾನಿಗಳು ನಿಖರವಾಗಿ ಸೆರೆ ಹಿಡಿಯಲು ಸಾಧ್ಯವಾಯಿತು.
ಈಗ ತನ್ನಷ್ಟಕ್ಕೆ ಓಡಿಕೊಂಡಿದ್ದ ಧೂಮಕೇತುವಿನ ತಲೆಗೊಂದು ಕುಟ್ಟಿದ್ದೇನೋ ಸರಿ, ಪರಿಣಾಮ ಫಲಿತಾಂಶಗಳು ಏನಿರಬಹುದು? ಧೂಮಕೇತುವಿನ ಗಾತ್ರ ಹಾಗೂ ಅದರ ವೇಗಕ್ಕೆ ಹೋಲಿಸಿದರೆ ಈ ಸುತ್ತಿಗೆಯೇಟು ಅದಕ್ಕೇ ಹೆಚ್ಚೇನೂ ಧಕ್ಕೆ ಉಂಟುಮಾಡಲಿಕ್ಕಿಲ್ಲ. ಆದರೆ ಢಿಕ್ಕಿಯ ಪರಿಣಾಮವಾಗಿ ಧೂಮಕೇತುವಿನ ಮೇಲ್ಮೈನ ಧೂಳು ಹಾಗೂ ಇತರ ವಸ್ತುಗಳು ಹೊರಕ್ಕೆ ಚದುರಬಹುದು. ಅವುಗಳ ಚಿತ್ರಗಳನ್ನು ಸೆರೆಹಿಡಿದು ಧೂಮಕೇತುವಿನ ಒಡಲಾಳದಲ್ಲಿರುವ ಭೌತಿಕ ಮತ್ತು ರಾಸಾಯನಿಕ ವಸ್ತುಗಳ ರೂಪ, ಪ್ರಮಾಣಗಳ ಲೆಕ್ಕ ಹಾಕಬಹುದೆಂದು ವಿಜ್ಞಾನಿಗಳ ನಿರೀಕ್ಷೆ. ಅಲ್ಲಿರುವುದು ನಿಜವಾಗಲೂ ಘನೀಕೃತ ಅನಿಲಗಳೇ? ಯಾವ ಅನಿಲಗಳಿದ್ದಾವು? ಸೃಷ್ಟಿಯ ಆದಿಯ ಸುಳುಹೇನಾದರೂ ಸಿಕ್ಕೀತೇ?
ಟೆಂಪೆಲ್-೧ರ ಶಿರ ಭೇದಿಸಿದ ನಾಸಾ ಅದಕ್ಕೆ ಎರಡು ಕಾರಣಗಳನ್ನು ನೀಡಿದೆ. ಮೊದಲನೆಯದು ಸೌರವ್ಯೂಹದ ಹುಟ್ಟಿನ ಬಗ್ಗೆ ಮಾಹಿತಿ ದೊರಕಿಸುವದು ಹಾಗೂ ಎರಡನೆಯದು ಈಗಲೇ ಧೂಮಕೇತುಗಳ ರಚನೆಯ ಬಗ್ಗೆ ತಿಳಿದಿಟ್ಟುಕೊಂಡರೆ ಮುಂದೆಂದಾದರೂ ಧೂಮಕೇತು ಭೂಮಿಗೆ ಅಪ್ಪಳಿಸಿದರೆ ಅದರಿಂದಾಗಬಹುದಾದ ಅವಘಡಗಳನ್ನು ತಪ್ಪಿಸುವುದು.
ವಿಜ್ಞಾನ ಮತ್ತು ತಂತ್ರಜ್ಞಾನಗಳ ಹೆಗ್ಗಳಿಕೆ ಈ ಘಟನೆ ಎಂಬುದರಲ್ಲಿ ಎರಡು ಮಾತಿಲ್ಲ. ಈ ಮುಖಾಮುಖಿಯ ಫಲಿತಾಂಶ ದೊರಕಲು ಇನ್ನೂ ಹಲವಾರು ವರ್ಷಗಳೇ ಬೇಕಾಗಬಹುದು. ಆದರೀಗ ನಾಲ್ಕೂ ಮೂಲೆಗಳಿಂದ ಪ್ರಶ್ನೆಯೊಂದು ಕೇಳಿಬರುತ್ತಿದೆ. ಭೂಮಿಯ ಮೇಲಿಂದು ಹಸಿವಿನಿಂದ, ಮಾರಕ ರೋಗಗಳಿಂದ ನರಳುತ್ತಿರುವ ಕೋಟಿಗಟ್ಟಲೆ ಜನರಿರುವಾಗ ಕೋಟಿಗಟ್ಟಲೆ ಡಾಲರ್ ಸುರಿದು ಕೋಟಿ ಮೈಲು ದೂರದ ಯಃಕಶ್ಚಿತ್ ಧೂಮಕೇತುವಿನ ಶಿರಚ್ಚೇದನ ಮಾಡುವುದವಶ್ಯವಿತ್ತೇ?
* ಸೌರವ್ಯೂಹದ ಆದಿಯನ್ನು ಸುಮಾರು ೪೫೦ ಕೋಟಿ ವರ್ಷಗಳ ಹಿಂದೆ ಆಯಿತೆನ್ನುತ್ತದೆ ವಿಜ್ಞಾನ. ಮೇಘಗಳ ರಾಶಿಯೊಂದು ಅಗಲವಾಗಿ ಹರಡಿಕೊಂಡು ನಟ್ಟನಡುವೆ ಉರಿಯುವ ಸೂರ್ಯ, ಸುತ್ತಲೂ ಗ್ರಹ, ಉಪಗ್ರಹಗಳ ನಿರ್ಮಾಣವಾಯಿತು. ಇವೆಲ್ಲವುಗಳನ್ನು ಆವರಿಸಿಕೊಂಡಂತೆ ಮೋಡದ ಒಂದು ಭಾಗ ಸೌರವ್ಯೂಹವನ್ನು ಹೊರಗಿನಿಂದ ಸುತ್ತುವರೆಯಿತು. ಯಾನ್ ಊರ್ತ್ ಎಂಬ ವಿಜ್ಞಾನಿ ಈ ವಿಷಯವನ್ನು ಕಂಡುಹಿಡಿದಿದ್ದರಿಂದ ಸೌರವ್ಯೂಹದ ಈ ಕವಚಕ್ಕೆ ಊರ್ತ್ ಕವಚವೆಂದೇ ಕರೆಯಲಾಗುತ್ತದೆ. ಸೂರ್ಯ, ಗ್ರಹ, ಉಪಗ್ರಹಗಳ ಉಗಮದ ನಂತರ ಉಳಿದ ಮೂಲ ಮೇಘರಾಶಿಯು ತುಣುಕುಗಳಾಗಿ ಸುತ್ತಲಿನ ಕವಚದಲ್ಲಿ ಹುದುಗಿಕೊಂಡಿವೆ. ಇವೇ ಆಗೀಗ ಧೂಮಕೇತುಗಳಾಗಿ ಸೌರವ್ಯೂಹದೊಳಕ್ಕೆ ನುಗ್ಗುತ್ತಿವೆ. ಈ ೪೫೦ ಕೋಟಿ ವರ್ಷಗಳಲ್ಲಿ ಗ್ರಹಗಳು, ಉಪಗ್ರಹಗಳು ಅನೇಕ ಬದಲಾವಣೆಗೊಳಗಾಗಿವೆ. ಆದರೆ ಧೂಮಕೇತುಗಳು ಮಾತ್ರ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡಿದ್ದು ಅವುಗಳ ರಚನೆಯನ್ನು ಕಂಡುಹಿಡಿಯಲು ಸಾಧ್ಯವಾದರೆ ಸೌರವ್ಯೂಹದ ಉಗಮದ ರಹಸ್ಯ ಹೊರಬಿದ್ದೀತು ಎಂಬುದು ವಿಜ್ಞಾನಿಗಳ ಲೆಕ್ಕಾಚಾರ.
ಸರೋಜ ಪ್ರಕಾಶ್

ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ

0

ತಾಲ್ಲೂಕಿನ ದಲಿತ ಸಂಘರ್ಷಸಮಿತಿ ಸದಸ್ಯರು ಶುಕ್ರವಾರ ದಲಿತ ಮುಖಂಡ ಎನ್.ಶಿವಣ್ಣ ಅವರ ಜನ್ಮದಿನದ ಪ್ರಯುಕ್ತ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದು ಮಾತನಾಡಿದ ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ದಲಿತರ ನಾಯಕ ಹಾಗೂ ಹುಟ್ಟು ಹೋರಾಟಗಾರ ಎನ್.ಶಿವಣ್ಣ ಅವರ 65 ನೇ ಜನ್ಮದಿನಾಚರಣೆಯನ್ನು ಬಡವರ ಸೇವೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹಣ್ಣು, ಬ್ರೆಡ್ ವಿತರಿಸುವ ಮೂಲಕ ದಲಿತ ಮುಖಂಡರು ಆಚರಿಸುತ್ತಿರುವುದು ಮೆಚ್ಚುವಂಥದ್ದು. ಶೋಷಿತರ, ಹಿಂದುಳಿದವರನ್ನು ಮೇಲೆತ್ತುವ ಕಾರ್ಯ ನಿರಂತರವಾಗಿರಲಿ’ ಎಂದು ನುಡಿದರು.
ತಾಲ್ಲೂಕು ವೈದ್ಯಾಧಿಕಾರಿ ಡಾ.ಅನಿಲ್ ಕುಮಾರ್, ದಲಿತ ಮುಖಂಡರಾದ ಅರುಣ್ ಕುಮಾರ್, ಸಾದಲಿ ಮುನಿವೆಂಕಟಪ್ಪ, ಮಳ್ಳೂರು ನರಸಿಂಹಯ್ಯ, ವೇಣುಗೋಪಾಲ್, ಅಶೋಕ, ಜಯಶೀಲ, ಶ್ರೀನಿವಾಸ, ಮೂರ್ತಿ, ನಾಗೇಂದ್ರ, ರವಿಚಂದ್ರ, ರಾಜೇಶ್, ಕಿರಣ್, ಗಂಗನಹಳ್ಳಿ ನರಸಿಂಹಮೂರ್ತಿ, ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಾಮ

0

ಶಿಡ್ಲಘಟ್ಟದ ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಗುರುವಾರ ಸಂಜೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರ್ನಾಟಕ ಶಾಸ್ತ್ರೀಯ ಸಂಗೀತ ದ್ವಂದ್ವಗಾಯನವನ್ನು ವಿದ್ವಾನ್ ಆರ್.ಜಗದೀಶ್ಕುಮಾರ್ ಮತ್ತು ಜೆ.ನವೀನ್ಕುಮಾರ್ ನಡೆಸಿಕೊಟ್ಟರು. ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್, ಮೃದಂಗ ವಿದ್ವಾನ್ ಯಶ್ವಂತ್, ಘಟಂ ನಟರಾಜ್ ಮತ್ತು ತಂಬೂರ ಜೆ.ರೇಖಾ ಸಾಥ್ ನೀಡಿದರು.

ಬಾಸುಂದಿ

0

ಬೇಕಾಗುವ ಸಾಮಾಗ್ರಿ
2 ಲೀಟರ್ ಹಾಲು
100 ಗ್ರಾಂ ಸ್ವೀಟ್ ಪಿಸ್ತಾ
50 ಗ್ರಾಂ ಗೋಡಂಬಿ
50 ಗ್ರಾಂ ಬಾದಾಮಿ
6 ಎಸಳು ಕೇಸರಿ
300 ಗ್ರಾಂ ಸಕ್ಕರೆ
3 ಸ್ಪೂನ್ ಎಂ.ಟಿ.ಆರ್. ಬಾದಾಮ್ ಡ್ರಿಂಕ್ ಮಿಕ್ಸ್ ಪೈಡರ್
ಮಾಡುವ ವಿಧಾನ
ಮೊದಲು ಕೇಸರಿಯನ್ನು ಹಾಲಿನಲ್ಲಿ ನೆನೆಸಿಟ್ಟುಕೊಳ್ಳಿ. ಬಾದಾಮಿ ಗೋಂಡಂಬಿ, ಪಿಸ್ತಾವನ್ನು ತರಿ ತರಿಯಾಗಿ ಮಿಕ್ಸಿ ಮಾಡಿಟ್ಟುಕೊಳ್ಳಿ.
2 ಲೀಟರ್ ಹಾಲನ್ನು ಒಂದು ಲೀಟರ್ ಗೆ ಬರುವಷ್ಟು ಕುದಿಸಿ ಸಕ್ಕರೆ, ಬಾದಾಮಿ ಡ್ರಿಂಕ್ ಮಿಕ್ಸ್ ಪೈಡರ್ ಅನ್ನು ಹಾಕಿ ಕರಡಿ, ನಂತರ ಸಣ್ಣದಾಗಿ ಹೆಚ್ಚಿಟ್ಟ ಬಾದಾಮಿ, ಗೋಂಡಂಬಿ, ಪಿಸ್ತಾವನ್ನು ಸೇರಿಸಿ ಕುದಿಸಿ, ನೆನೆಸಿಟ್ಟ ಕೇಸರಿಯನ್ನು ಹಾಲಿಗೆ ಹಾಕಿ ಈ ಮಿಶ್ರಣವನ್ನು ಚೆನಾಗಿ 20 ನಿಮಿಷ ಕುದಿಸಿ. ಇದು ಇಡ್ಲಿ ಹಿಟ್ಟಿನ ಹದದಷ್ಟು ದಪ್ಪ ಬರಬೇಕು. ತಣಿದ ನಂತರ ಫ್ರಿಜ್‍ನಲ್ಲಿಡಿ. ಪೂರ್ತಿಯಾಗಿ ತಣ್ಣಗಾದ ಮೇಲೆ ತಿನ್ನಲು ಕೊಡಿ.

ಸಂಕ್ರಾಂತಿ ಹಬ್ಬದ ಪ್ರಯುಕ್ತ ಎತ್ತುಗಳಿಗೆ ವಿಶೇಷ ಅಲಂಕಾರ

0

ಶಿಡ್ಲಘಟ್ಟದಲ್ಲಿ ಗುರುವಾರ ರಾತ್ರಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಎತ್ತುಗಳಿಗೆ ವಿಶೇಷ ಅಲಂಕಾರ ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಿಕೊಂಡು ಕಿಚ್ಚು ಹಾಯಿಸಲು ಕರೆದೊಯ್ಯಲಾಯಿತು.

ಎಲ್ಲಾ ವರ್ಗದ ಜನತೆಯು ಸಮಾನತೆಯಿಂದ ಬಾಳಬೇಕು

0

ಸಮಾಜದ ಎಲ್ಲಾ ವರ್ಗದ ಜನತೆಯು ಸಮಾನತೆಯಿಂದ ಬಾಳುವಂತಾಗಬೇಕು ಎಂದು ಶೂದ್ರಶಕ್ತಿ ಸಮಿತಿಯ ಅಧ್ಯಕ್ಷ ಬಿ.ಆರ್.ರಾಮೇಗೌಡ ಹೇಳಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಶೂದ್ರಶಕ್ತಿ ತಾಲ್ಲೂಕು ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಸಂಕ್ರಾಂತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ ಶೋಷಣೆಗೊಳಪಡುತ್ತಿರುವ ಶೂದ್ರಶಕ್ತಿಗಳು ಒಂದಾಗುವುದರೊಂದಿಗೆ ಮನುಸಂಸ್ಕೃತಿಯ ಅಂಶಗಳ ವಿರುಧ್ದ ಹೋರಾಟ ಮಾಡಬೇಕಾಗಿದೆ. ಅವರವರ ಕಸುಬುಗಳಿಗೆ ಅನುಗುಣವಾಗಿ ಜಾತಿಗಳನ್ನು ವಿಭಾಗಿಸಲಾಗಿದೆ. ಈ ಸತ್ಯವನ್ನು ಅರ್ಥಮಾಡಿಕೊಂಡು ಪ್ರತಿಯೊಬ್ಬ ನಾಗರಿಕರು ಸಮಾನತೆಯ ಜೀವನ ನಡೆಸುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೋಲಾರ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ಮಾತನಾಡಿ ತೀವ್ರವಾದ ಬರಗಾಲದಿಂದಾಗಿ ರೈತರ ಸುಗ್ಗಿಯ ಹಬ್ಬವಾದ ಸಂಕ್ರಾಂತಿ ಹಬ್ಬ ಇತ್ತೀಚೆಗೆ ಮಂಕಾಗುತ್ತಿದೆ. ಈ ಭಾಗದ ರೈತರು ನೀರಿನ ಕೊರತೆಯಿಂದಾಗಿ ವ್ಯವಸಾಯ ಮಾಡಲಾಗದೇ ಅತ್ತ ನಗರಗಳ ಕಡೆ ವಲಸೆ ಹೋಗಲಾಗದ ಅತಂತ್ರ ಸ್ಥಿತಿಯಲ್ಲಿದ್ದು, ರೈತರ ಉಳಿವಿಗಾಗಿ ಹೋರಾಟಗಳನ್ನು ಮಾಡಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದರು.
ಈ ಸಂದರ್ಭದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ಅಪ್ಪೇಗೌಡನಹಳ್ಳಿಯ ರೈತ ಕೆ.ಆನಂದಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಮುನಿಕೃಷ್ಣಪ್ಪ, ಹಾಪ್ಕಾಮ್ಸ್ನ ಮಾಜಿ ಅಧ್ಯಕ್ಷ ಬಿ.ವಿ.ಮುನೇಗೌಡ, ಶೂದ್ರಶಕ್ತಿ ಸಮಿತಿಯ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಖಜಾಂಚಿ ಹೆಚ್.ಟಿ.ಸುದರ್ಶನ್, ಅಧ್ಯಕ್ಷ ಎಸ್.ಬೈರೇಗೌಡ, ಮತ್ತಿತರರು ಹಾಜರಿದ್ದರು.

ಮೇಲೂರು ಗ್ರಾಮದಲ್ಲಿ ಸೀತಾರಾಮ ಲಕ್ಷ್ಮಣಮೂರ್ತಿ ಸಮೇತ ಆಂಜನೇಯಸ್ವಾಮಿ ಉತ್ಸವ

0

ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ ಗುರುವಾರ ಸೀತಾರಾಮ ಲಕ್ಷ್ಮಣಮೂರ್ತಿ ಸಮೇತ ಆಂಜನೇಯಸ್ವಾಮಿ ಉತ್ಸವವನ್ನು ಅದ್ದೂರಿಯಾಗಿ ಭಜನೆಯೊಂದಿಗೆ ಮೆರವಣಿಗೆ ಮಾಡಲಾಯಿತು.
ಗ್ರಾಮದೆಲ್ಲೆಡೆ ಮೆರವಣಿಗೆ ನಡೆಸಿದ ದೇವರುಗಳಿಗೆ ಪ್ರತಿ ಮನೆಯವರೂ ಪೂಜೆ ಸಲ್ಲಿಸಿದರು. ಊತ್ಸವ ನಡೆಸಿದ ನಂತರ ದೇವಾಲಯದಲ್ಲಿ ಮಹಾಮಂಗಳಾರತಿ ಹಾಗೂ ಪ್ರಸಾದವನ್ನು ವಿತರಿಸಲಾಯಿತು. ಸುತ್ತಮುತ್ತಲಿನ ಗ್ರಾಮಸ್ಥರೂ ಪೂಜೆ ಹಾಗೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
‘ಧನುರ್ಮಾಸದಲ್ಲಿ ನಡೆಯುವ ಈ ಉತ್ಸವವನ್ನು ಪುರಾತನ ಕಾಲದಿಂದಲೂ ಗ್ರಾಮದಲ್ಲಿ ಎಲ್ಲರೂ ಒಗ್ಗೂಡಿ ನಡೆಸುತ್ತಾ ಬಂದಿದ್ದು, ಅದನ್ನು ಮುಂದುವರೆಸಿದ್ದೇವೆ. ಸಂಕ್ರಾಂತಿಯಂದು ಮುಕ್ತಾಯವಾಗುವ ಈ ಉತ್ವವದ ಕಡೆಯ ದಿನ ವಿಶೇಷ ಪೂಜೆ, ಅಲಂಕಾರ, ಪ್ರಸಾದ ವಿನಿಯೋಗ ಹಾಗೂ ಹಿರಿಯರಿಗೆ ಸನ್ಮಾನ ನಡೆಸುತ್ತೇವೆ’ ಎಂದು ಭಜನೆ ತಂಡದ ಹಿರಿಯರಾದ ಎಂ.ಎಂ.ಸ್ವಾಮಿ ತಿಳಿಸಿದರು.
ಭಜನೆ ತಂಡದ ಚೌಡಸಂದ್ರದ ಹನುಮಂತಪ್ಪ, ಬೆಳ್ಳೂಟಿ ಮುನಿಯಪ್ಪ, ಮುನೀಂದ್ರ, ಗೋಪಾಲ್ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಆಚರಣೆ

0

ಪಟ್ಟಣದಲ್ಲಿ ಬುಧವಾರ ಶಿವಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಬೋವಿ ಜನಾಂಗದವರು ಆಚರಿಸಿದರು.
ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಪಲ್ಲಕ್ಕಿಗಳು, ವಿವಿಧ ಕಲಾತಂಡಗಳೊಂದಿಗೆ ಪಟ್ಟಣದಲ್ಲಿ ಬಸ್ ನಿಲ್ದಾಣದಿಂದ ಪ್ರಾರಂಭವಾದ ಮೆರವಣಿಗೆಗೆ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಕೆಪಿಸಿಸಿ ಉಪಾಧ್ಯಕ್ಷ ವಿ.ಮುನಿಯಪ್ಪ ಚಾಲನೆ ನೀಡಿದರು.
ಗಾರುಡಿ ಬೊಂಬೆ, ವೀರಗಾಸೆ, ಟೋಲಿನ ನಾದದೊಂದಿಗೆ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಬೋವಿ ಜನಾಂಗದವರು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಮಂಗಮ್ಮ, ‘ಬಸವಣ್ಣನವರ ಸಮಕಾಲೀನರಾದ ಸಿದ್ದರಾಮೇಶ್ವರರು ಹಿಂದುಳಿದ ಭೋವಿ ವಡ್ಡರ ಸಮಾಜಕ್ಕೆ ಸೇರಿದವರಾಗಿದ್ದರೂ ಅವರು ಯಾವುದೇ ಜಾತಿ ಜನಾಂಗವೆನ್ನದೆ ಎಲ್ಲ ಸಮಾಜದ ಏಳ್ಗೆಗಾಗಿ ದುಡಿದವರು. ಸರ್ಕಾರ ಇಂಥಾ ವ್ಯಕ್ತಿಯ ಜಯಂತಿಯನ್ನು ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ತಿಳಿಸಿದರು.

error: Content is protected !!