ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಕುಡಿಯುವ ನೀರು ಸಂರ್ಪಕವಾಗಿ ಸರಬರಾಜು ಆಗುತ್ತಿಲ್ಲ, ವಿವಿಧ ಯೋಜನೆಗಳಲ್ಲಿ ಅಕ್ರಮ ಹಾಗು ಭ್ರಷ್ಟಾಚಾರ ನಡೆಯುತ್ತಿದೆ, ಗ್ರಾಮಸಭೆಯನ್ನು ನೀತಿ ನಿಯಮಗಳ ಪ್ರಕಾರ ನಡೆಸುತ್ತಿಲ್ಲ ಎಂದು ಆರೋಪಿಸಿ ಬಶೆಟ್ಟಹಳ್ಳಿ ಗ್ರಾಮಸ್ಥರು ಪಂಚಾಯತಿ ಕಚೇರಿಗೆ ಮಂಗಳವಾರ ಬೀಗ ಹಾಕಿ ಪ್ರತಿಭಟಿಸಿದರು.
ಬಶೆಟ್ಟಹಳ್ಳಿ ಗ್ರಾಮವು ಹೋಬಳಿ ಕೇಂದ್ರವಾಗಿದ್ದರೂ, ಪಂಚಾಯತಿಯಿಂದ ಸಂಪೂರ್ಣವಾಗಿ ಮೂಲಭೂತ ಸೌಕರ್ಯಗಳನ್ನು ನೀಡುವಲ್ಲಿ ವಿಫಲವಾಗಿದೆ. ಕನಿಷ್ಠ ಶಾಲಾ ಕಾಲೆಜುಗಳಲ್ಲಿ ಕೂಡ ಕುಡಿಯುವ ನೀರು ಒದಗಿಸುತ್ತಿಲ್ಲ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಎಂ.ವೆಂಕಟೇಶ್ ಅಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರ ಮನವಿ ಸ್ವೀಕರಿಸಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಫಣೀಂದ,್ರ ನೀರಿನ ಸಮಸ್ಯೆಯನ್ನು ಈ ಕ್ಷಣದಿಂದಲೇ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಮೂಲಕ ಬಗೆಹರಿಸಲಾಗುತ್ತದೆ. ಮುಂದಿನ ತಿಂಗಳಲ್ಲಿ ಗ್ರಾಮಸಭೆ ನಡೆಸುವುದಾಗಿ ತಿಳಿಸಿ ಪ್ರತಿಭಟನಾಕಾರರ ಮನವೊಲಿಸಿದರು.
ವೆಂಕಟೇಶ, ದೇವಪ್ಪ, ನಾರಾಯಣಪ್ಪ, ನರಸಿಂಹಪ್ಪ, ನರಸಿಂಹಮೂರ್ತಿ, ವೆಂಕಟನಾರಾಯಣ, ಗಂಗಾಧರ್, ಜಯರಾಮ್, ನರಸಿಂಹ, ಪಾಪಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬಶೆಟ್ಟಹಳ್ಳಿ ಗ್ರಾಮಸ್ಥರಿಂದ ಕುಡಿಯುವ ನೀರಿಗಾಗಿ ಪ್ರತಿಭಟನೆ
ಸಂಕ್ರಾಂತಿ ಸಂಭ್ರಮ – ಮಳೆಯಿಲ್ಲದೆ ಬೆಲೆ ಏರಿಕೆ
ತಾಲ್ಲೂಕಿನೆಲ್ಲೆಡೆ ಮನೆ-ಮನಗಳಲ್ಲಿ ಸಂಕ್ರಾಂತಿ ಸಂಭ್ರಮ ನೆಲೆಸಿದೆ. ಎಳ್ಳು-ಬೆಲ್ಲ ಹಬ್ಬದ ತಯಾರಿ ಜೋರಾಗಿದ್ದು ಮಾರುಕಟ್ಟೆಗೆ ಜನ ತೆರಳುತ್ತಿರುವುದು ಬುಧವಾರ ಕಂಡುಬಂದಿತು.
ತಾಲ್ಲೂಕಿನಲ್ಲಿ ಸಂಕ್ರಾಂತಿ ಪ್ರಯುಕ್ತ ಅವರೆಕಾಯಿ, ಕಬ್ಬು, ಗೆಣಸು, ಕಡಲೆಕಾಯಿ, ಹೂಗಳು ಮಾರಾಟ ಪೇಟೆ ಬೀದಿಗಳಲ್ಲಿ ಜೋರಾಗಿತ್ತು. ಆದರೆ ಸರಿಯಾಗಿ ಮಳೆಯಾಗದ ಕಾರಣ ಬೆಲೆ ಏರಿಕೆಯಾದ್ದರಿಂದ ಸರಿಯಾಗಿ ವ್ಯಾಪಾರವಾಗುತ್ತಿಲ್ಲವೆಂದು ಅಂಗವಿಕಲ ಅವರೆಕಾಯಿ ವ್ಯಾಪಾರಿ ನಾಗರಾಜ್ ದೂರಿದರು.
ವರ್ಷಪೂರ್ತಿ ಕಷ್ಟ ಪಟ್ಟು ಬೆಳೆದ ಫಸಲುಗಳು ಕೈಗೆ ಬರುವ ಹೊತ್ತು ಇದಾಗಿದ್ದರಿಂದ ಸಹಜವಾಗಿ ಈ ಹಬ್ಬದ ಸಮಯದಲ್ಲಿ ರೈತರಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಜೀವಜಾಲಕ್ಕೆ ಜಡತ್ವ ತುಂಬಿ ಏಕಚಕ್ರಾಧಿಪತ್ಯ ಸ್ಥಾಪಿಸಿದ್ದ ಚಳಿಯನ್ನು ಓಡಿಸುವುದರ ಜೊತೆಗೆ ಮರಣಶಯ್ಯೆಯಲ್ಲಿ ಮಲಗಿ ಭೀಷ್ಮ ಪಿತಾಮಹ ಬಾಳಯಾತ್ರೆಯ ಅಂತಿಮ ಕ್ಷಣಗಳನ್ನು ಪ್ರಾಣತ್ಯಾಗಕ್ಕೆ ಮೀಸಲಿಟ್ಟಿದ್ದು ಕೂಡ ಇದೇ ಉತ್ತರಾಯಣದ ಪುಣ್ಯಕಾಲದಲ್ಲಿ. ನೇಸರ ತನ್ನ ಚಲನೆಯನ್ನು ಉತ್ತರಾಭಿಮುಖವಾಗಿ ಆರಂಭಿಸುವ ಮಹತ್ವದ ದಿನವನ್ನು ಮಳೆ ಸಾಲದೆನ್ನುತ್ತಲೇ ರೈತ ಸಮೂಹ ಸಂಭ್ರಮದಿಂದಲೇ ಬರಮಾಡಿಕೊಳ್ಳುತ್ತಿದೆ.
ಎಳ್ಳು ಬೆಲ್ಲ ತಯಾರಿಯೇ ಒಂದು ಸಂಭ್ರಮ. ಮನೆಗಳಲ್ಲಿ ಹೆಣ್ಣು ಮಕ್ಕಳು ಈ ಎಳ್ಳು ಬೆಲ್ಲ ತಯಾರಿಯಲ್ಲಿ ತೊಡಗಿದ್ದರು.
ಜಿಲ್ಲಾ ಮಟ್ಟದ ಕರಾಟೆಯಲ್ಲಿ ಗೆದ್ದ ಮಕ್ಕಳು
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಗೊಜುರಿಯೋ ಕರಾಟೆ ಡೊ ಸೇವಾ ಕಾಯ್ನ ಎರಡನೇ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ದಿವ್ಯಾ ಭಾರತ್ ಕರಾಟೆ ಡೋ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಎಂಟು ವರ್ಷದೊಳಗಿನ ವೈಟ್ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಹೇಮಂತ್ ತೃತೀಯ, 16 ವರ್ಷದೊಳಗಿನ ವೈಟ್ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಓಂ ದೇಶಮುದ್ರೆ ದ್ವಿತೀಯ, 9 ವರ್ಷದೊಳಗಿನ ಗ್ರೀನ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಜಯಸಿಂಹ ದ್ವಿತೀಯ, 13 ವರ್ಷದೊಳಗಿನ ಗ್ರೀನ್ ಬೆಲ್ಟ್ ಕತಾ ಸ್ಪರ್ಧೆಯಲ್ಲಿ ಹರ್ಷನ್ ತೃತೀಯ, 10 ವರ್ಷದೊಳಗಿನ ಕುಮಿತೆ ಸ್ಪರ್ಧೆಯಲ್ಲಿ ಜಗದೀಶ್ ಪ್ರಥಮ, ಹೇಮಂತ್ ದ್ವಿತೀಯ, ಜಯಸಿಂಹ ತೃತೀಯ, 16 ವರ್ಷದೊಳಗಿನ ಕುಮಿತೆ ಸ್ಪರ್ಧೆಯಲ್ಲಿ ಪ್ರದೀಪ್ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಗೊಜುರಿಯೋ ಕರಾಟೆ ಡೊ ಸೇವಾ ಕಾಯ್ ಇಂಡಿಯಾ ಸಂಸ್ಥೆ ಮುಖ್ಯಸ್ಥ ಶಿಹಾನ್ ಸಂದೀಪ್ ಸಾಲ್ವಿ, ರಾಜ್ಯ ಮುಖ್ಯಸ್ಥ ಎಂ.ಡಿ.ಜಬೀವುಲ್ಲಾ, ತಾಲ್ಲೂಕು ಮುಖ್ಯಸ್ಥ ಅರುಣ್ ಕುಮಾರ್ ಹಾಜರಿದ್ದರು.
ಭಾರತ ಮಾತಾ ಪೂಜಾ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದರ 152ನೇ ಜಯಂತಿಯ ಕಾರ್ಯಕ್ರಮ
ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸೋಮವಾರ ಸಂಜೆ ಭಾರತ ಮಾತಾ ಪೂಜಾ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದರ 152ನೇ ಜಯಂತಿಯ ಕಾರ್ಯಕ್ರಮವನ್ನು ನಗರೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಮುಖ್ಯಅತಿಥಿಗಳಾದ ಚಿಕ್ಕಬಳ್ಳಾಪುರ ವಿಶ್ವ ಹಿಂದೂ ಪರಿಶತ್ತಿನ ಅಧ್ಯಕ್ಷ ವಿಜಯಶಂಕರ್ ಮಾತನಾಡಿ ಸಣ್ಣ ಸಣ್ಣ ಉಪಕಥೆಗಳ ಮೂಲಕ ವಿವೇಕಾನಂದರ ಆದರ್ಶ, ಭಕ್ತಿ, ದೇಶಪ್ರೇಮ, ನಿಷ್ಠೆ ಮುಂತಾದ ವಿಷಯಗಳನ್ನು ತಿಳಿಸಿ, ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಶ್ರೇಷ್ಠ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕೆಂದು ತಿಳಿಸಿದರು.
ವಕೀಲ ರವೀಂದ್ರನಾಥ್ ಮಾತನಾಡಿ ಸ್ವಾಮಿ ವಿವೇಕಾನಂದರು ಭಾರತ ಮಾತೆಗೆ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡ ಹಾಗೆ ನಾವುಗಳು ಸ್ವಾಮಿ ವಿವೇಕಾನಂದರ ಮಾರ್ಗದಲ್ಲಿ ನಡೆಯಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇಶಭಕ್ತಿಗೀತೆಯನ್ನು ಹಾಡಲಾಯಿತು. ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷ ಶಂಕರ್, ಹಿರಿಯ ಕಾರ್ಯಕರ್ತರು ಹಾಗೂ ಹೊಸ ಶಿಬಿರದ ಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ಕಾಲಕ್ಕೆ ಅನುಸಾರ ನೀವೂ ಬದಲಾಗಿ
1. ಬೇಸಿಗೆ ಕಾಲ, ಮಳೆಯ ಹಾಗೂ ಚಳಿಗಾಲಕ್ಕೆ ತಕ್ಕಂತೆ ನಮ್ಮ ಆಹಾರ ಪದ್ಧತಿ ಹಾಗೂ ದಿನಚರಿಗಳಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
2. ಚಳಿಗಾಲದಲ್ಲಿ ಬೆಚ್ಚಗಿರುವ ಉಣ್ಣೆ ಬಟ್ಟೆಗಳನ್ನು ಧರಿಸಬೇಕು. ಮನೆಯಿಂದ ಹೊರಗೆ ಹೋಗುವಾಗ ಕಿವಿಯಲ್ಲಿ ಹತ್ತಿ ಇಟ್ಟುಕೊಳ್ಳುವುದು ಒಳ್ಳೆಯದು.
3. ಪೋಷಕಾಂಶ ಹೆಚ್ಚಿರುವ ಹಾಲಿನ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಚಳಿಗಾಲದಲ್ಲಿ ಸೇವಿಸಬೇಕು. ಎಳ್ಳು, ಬೆಲ್ಲ, ಉದ್ದು – ಇವುಗಳ ಸೇವನೆ ಒಳ್ಳೆಯದು.
4. ಒಣದ್ರಾಕ್ಷಿ, ಖರ್ಜೂರ, ದಾಳಿಂಬೆ, ಬಾದಾಮಿ, ಏಲಕ್ಕಿ ಬಾಳೆಹಣ್ಣು ಇವುಗಳನ್ನು ಚಳಿಗಾಲದಲ್ಲಿ ಸೇವಿಸಬೇಕು.
5. ಸಾಧ್ಯವಾದರೆ ಪ್ರತಿದಿನ, ಅಥವಾ ವಾರಕ್ಕೆರಡು ಬಾರಿ ಚಳಿಗಾಲದಲ್ಲಿ ತಪ್ಪದೇ ಎಳ್ಳೆಣ್ಣೆಯನ್ನು ಹಚ್ಚಿಕೊಂಡು ಸ್ನಾನಮಾಡಬೇಕು.
6. ಚಳಿಗಾಲದಲ್ಲಿ ಸ್ನಾನಕ್ಕೆ ಹಾಗೂ ಕುಡಿಯಲು ಬಿಸಿನೀರನ್ನು ಬಳಸುವುದು ಸೂಕ್ತ.
7. ಚಳಿಗಾಲದಲ್ಲಿ ಅಂಗೈ, ಅಂಗಾಲುಗಳು ಸಾಮಾನ್ಯವಾಗಿ ಬಿರುಕು ಬಿಡುತ್ತವೆ. ಇದನ್ನು ತಪ್ಪಿಸಲು ಈ ಜಾಗಗಳಿಗೆ ಎಳ್ಳೆಣ್ಣೆಯನ್ನು ನೀವಬೇಕು.
8. ಚಳಿಗಾಲದಲ್ಲಿ ಸಂಜೆ ಹೊತ್ತು ಇನ್ನೂ ಬಿಸಿಲಿದ್ದಾಗ ಹೊರಾಂಗಣದ ಆಟಗಳನ್ನು ಆಡುವುದು ಒಳಿತು.
9. ಬೇಸಿಗೆಯಲ್ಲಿ ಬಿಸಿಲಿನ ಝಳದಿಂದಾಗಿ ಶರೀರದಿಂದ ಜಲೀಯಾಂಶ ನಷ್ಟವಾಗುತ್ತಿರುತ್ತದೆ. ಹಾಗಾಗಿ ಜಲೀಯಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಬಳಸಬೇಕು.
10. ನೀರಿನ ಅಂಶವಿರುವ ಹಣ್ಣುಗಳಾದ ಕಲ್ಲಂಗಡಿ, ಕರಬೂಜ, ಕಿತ್ತಳೆ, ಮೂಸಂಬಿ, ತಾಳೆಹಣ್ಣು, ದ್ರಾಕ್ಷಿ ಇವುಗಳನ್ನು ಉಷ್ಣಕಾಲದಲ್ಲಿ ಸೇವಿಸಬೇಕು. ಇವುಗಳ ರಸವನ್ನೂ ಸೇವಿಸಬಹುದು.
11. ಸುಲಭವಾಗಿ ಜೀರ್ಣವಾಗುವಂಹ ಹಳೆಯ ಅಕ್ಕಿಯ ಅನ್ನ, ಹೆಸರುಬೇಳೆ ಸಾರು-ಇವುಗಳ ಸೇವನೆ ಬೇಸಿಗೆ ಕಾಲದಲ್ಲಿ ಸೂಕ್ತ.
12. ಅತಿಯಾದ ಖಾರವಾದ ಅಹಾರ ಪದಾರ್ಥಗಳು, ಎಣ್ಣೆ ತಿನಿಸುಗಳು ಬಿಸಿಲುಗಾಲದಲ್ಲಿ ಒಳ್ಳೆಯದಲ್ಲ.
13. ಬಿಸಿಲುಗಾಲದಲ್ಲಿ ಅತಿಯಾಗಿ ಬೆವರುವುದರಿಂದ ದಿನಕ್ಕೆ ಎರಡುಬಾರಿ ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡುವುದು ಒಳಿತು.
14. ಮಳೆಗಾಲದಲ್ಲಿ ಸಾಧ್ಯವಾದಷ್ಟು ಮಳೆಯಲ್ಲಿ ನೆನೆಯದೆ ಛತ್ರಿ, ಮಳೆಯಂಗಿ (ರೈನ್‍ಕೋಟ್)ಗಳನ್ನು ಬಳಸಬೇಕು.
15. ಮಳೆಗಾಲದಲ್ಲಿಯೂ ಸಹ ಬೆಚ್ಚಗಿರುವ ಬಟ್ಟೆಗಳನ್ನೇ ಧರಿಸಬೇಕು. ಬೆಚ್ಚಗಿರುವ ವಾತಾರವರಣದಲ್ಲಿ ಇರಬೇಕು.
16. ಕುಲುಷಿತಗೊಂಡ ನೀರಿನಿಂದಾಗಿ ಮಳೆಗಾಲದಲ್ಲಿ ವಿವಿಧ ಸೋಂಕುಗಳು ಸರ್ವೇಸಾಮಾನ್ಯ. ಅವುಗಳನ್ನು ತಪ್ಪಿಸಲು ಕಾಯಿಸಿ ಆರಿಸಿದ ನೀರನ್ನು ಬಳಸಬೇಕು. ತಾಜಾ ಹಾಗೂ ಬಿಸಿ ಇರುವ ಆಹಾರವನ್ನೇ ಸೇವಿಸಬೇಕು. ಸುಲಭವಾಗಿ ಜೀರ್ಣವಾಗುವ ಆಹಾರದ ಸೇವನೆ ಮಳೆಗಾಲದಲ್ಲಿ ಒಳ್ಳೆಯದು. ಹಳೆಯ ಧಾನ್ಯಗಳಾದ ಅಕ್ಕಿ, ರಾಗಿ, ಜೋಳ, ಗೋಧಿ, ಹುರುಳಿ ಹೆಸರು – ಇವುಗಳಿಂದ ತಯಾರಿಸಿದ ಆಹಾರ ಸೇವನೆ ಒಳ್ಳೆಯದು.
17. ತೇವವಿರುವ ಸ್ಥಳದಲ್ಲಿರಬಾರದು. ಹಾಗೆಯೇ ಮಳೆಗಾಲದಲ್ಲಿ ಒಣಗಿರುವ, ತೇವವಿಲ್ಲದ ಬಟ್ಟೆಗಳನ್ನು ಧರಿಸಬೇಕು.
18. ಮಳೆಗಾಲದಲ್ಲಿ ಒಳಾಂಗಣದ ಆಟಗಳಾದ ಚೆಸ್ (ಚದುರಂಗ), ಕೇರಂ, ಚನ್ನೆಮಣೆ (ಅಳುಗುಳಿ ಮಣೆ) ಮೊದಲಾದುವುಗಳನ್ನು ಆಡಬೇಕು.
19. ಎಲ್ಲಾ ಕಾಲಗಳಲ್ಲೂ ಬೆಚ್ಚಗಿನ ನೀರಿನ ಸ್ನಾನ ಬಹಳ ಒಳ್ಳೆಯದು.
ಡಾ.ಶ್ರೀವತ್ಸ
ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಗೆ ಸೈಕಲ್ ವಿತರಣೆ
ಶಿಡ್ಲಘಟ್ಟ ತಾಲ್ಲೂಕಿನ ಮುತ್ತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಶಾಸಕ ಎಂ.ರಾಜಣ್ಣ ಶಾಲಾ ಮಕ್ಕಳಿಗೆ ಸೈಕಲ್ಗಳನ್ನು ವಿತರಣೆ ಮಾಡಿದರು. ಗ್ರಾಮದ ಕೆಂಪೇಗೌಡ, ಗೋಪಾಲಪ್ಪ, ವೆಂಕಟರಾಯಪ್ಪ, ನಾರಾಯಣಸ್ವಾಮಿ, ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗರಾಜ್, ಜಿ.ಮುರಳಿ, ದೇವರಾಜು, ಮಂಜುನಾಥ, ವಿಜಯಕುಮಾರ್, ಸೂರ್ಯನಾರಾಯಣಗೌಡ ಹಾಜರಿದ್ದರು.
ಮಕ್ಕಳಲ್ಲಿರುವ ಅಪಾರ ಶಕ್ತಿಯನ್ನು ಹೊರತರುವಂತಹ ಪ್ರಾಮಾಣಿಕವಾದ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು
ಮಕ್ಕಳಲ್ಲಿ ಅಪಾರವಾದ ಶಕ್ತಿಯಿದ್ದು, ಅದನ್ನು ಹೊರತರುವಂತಹ ಪ್ರಾಮಾಣಿಕವಾದ ಪ್ರಯತ್ನವನ್ನು ಶಿಕ್ಷಕರು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದರು.
ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಆಯೋಜನೆ ಮಾಡಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ವಿದ್ಯಾರ್ಥಿಯ ಜೀವನದಿಂದಲೇ ನಿರ್ದಿಷ್ಟವಾದ ಗುರಿಯನ್ನು ಹೊಂದಿರಬೇಕು, ಆಗ ಮಾತ್ರ ಜೀವನದಲ್ಲಿ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿನ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವುದರ ಜೊತೆಗೆ ಅವರಲ್ಲಿರುವ ಕೌಶಲ್ಯಗಳನ್ನು ಹೊರತಂದು ಅವರನ್ನು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದರು.
ರೇಷ್ಮೆ ಕೃಷಿ ಅಭಿವೃದ್ದಿ ಆಯುಕ್ತ ಜಿ.ಸತೀಶ್ ಮಾತನಾಡಿ,‘ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರಪಡಿಸಬೇಕಾದರೆ, ಪೂರಕವಾಗಿರುವ ವಾತಾವರಣವನ್ನು ನಿರ್ಮಾಣ ಮಾಡಬೇಕು, ಯುವಜನತೆ ಉತ್ತಮವಾದ ದಿಕ್ಕಿನಲ್ಲಿ ಸಾಗಬೇಕು. ಪೋಷಕರು ಮಕ್ಕಳಿಗೆ ಆಸ್ತಿಗಳನ್ನು ಮಾಡುವುದಕ್ಕಿಂತ ಮಿಗಿಲಾಗಿ ಅವರಿಗೆ ಗುಣಮಟ್ಟದ ಶಿಕ್ಷಣವನ್ನು ಕೊಡಿಸಿದರೆ ಅವರು ಸಮಾಜದ ಮುಂದಿನ ಭವಿಷ್ಯದ ದೀಪಗಳಾಗುತ್ತಾರೆ ಎಂದು ಹೇಳಿದರು.
ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ವಿವೇಕಾನಂದ ವಿದ್ಯಾಸಂಸ್ಥೆಯ ಅಧ್ಯಕ್ಷ ಕೆ.ಎನ್.ರಾಮಾಂಜಿನಪ್ಪ, ಕಾರ್ಯದರ್ಶಿ ಎಂ.ಆರ್.ಶಿವಣ್ಣ, ಖಜಾಂಚಿ ಜಿ.ಪಿ.ಲಕ್ಷ್ಮೀಪತಿ, ನಿರ್ದೇಶಕರಾದ ಎಂ.ಎನ್.ಗೋಪಾಲಪ್ಪ, ಎಂ.ನಾಗರಾಜ್, ಸಿ.ನಾರಾಯಣಸ್ವಾಮಿ, ಸಿಎಂ.ದೇವರಾಜು, ಎಂ.ಕೆ.ಚಂದ್ರಶೇಖರ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪರೀಕ್ಷಾ ಒಡನಾಡಿ, ಪರೀಕ್ಷಾ ಸಂಜೀವಿನಿ ಪುಸ್ತಕ ಬಿಡುಗಡೆ
ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿ ಪ್ರೌಢಶಾಲೆಯಲ್ಲಿ ಈಚೆಗೆ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ಉತ್ತಮ ಫಲಿತಾಂಶಕ್ಕಾಗಿ ಸಿದ್ಧಪಡಿಸಿರುವ ‘ಪರೀಕ್ಷಾ ಒಡನಾಡಿ’ ಮತ್ತು ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ‘ಪರೀಕ್ಷಾ ಸಂಜೀವಿನಿ’ ಎಂಬ ವಿಷಯವಾರು ಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಬಿಡುಗಡೆ ಮಾಡಿದರು. ಶಿಕ್ಷಣ ಸಂಯೋಜಕ ಲಕ್ಷ್ಮೀನರಸಿಂಹಗೌಡ, ಶಿಕ್ಷಕರಾದ ಬೈರಾರೆಡ್ಡಿ, ಎಲ್.ವಿ.ವೆಂಕಟರೆಡ್ಡಿ ಹಾಜರಿದ್ದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷರ ನೇಮಕ
ಶಿಡ್ಲಘಟ್ಟ ತಾಲ್ಲೂಕಿನ ವಿ.ಸುಬ್ರಮಣಿ ಅವರನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷರನ್ನಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ನೇಮಕ ಮಾಡಿದೆ.
ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ
ಯಾರು ಇತರರಿಗಾಗಿ ಬಾಳುತ್ತಾರೋ ಅವರೇ ನಿಜವಾಗಿ ಬಾಳುತ್ತಾರೆ. ಉಳಿದವರು ಜೀವನ್ ಮೃತರು. ನೀವು ಈ ಜಗತ್ತಿಗೆ ಬಂದ ಮೇಲೆ ಏನಾದರೂ ಗುರುತನ್ನು ಬಿಟ್ಟು ಹೋಗಿ, ಅದಿಲ್ಲದಿದ್ದರೆ ನಿಮಗೂ ಮರಕಲ್ಲುಗಳಿಗೂ ಏನು ವ್ಯತ್ಯಾಸ ಎಂಬ ವಿವೇಕಾನಂದರ ಮಾತುಗಳು ಯುವಜನತೆಗೆ ಎಚ್ಚರಿಕೆಯ ಮಂತ್ರಗಳು ಎಂದು ಯುವಬ್ರಿಗೇಡ್ ಜಿಲ್ಲಾ ಸಂಚಾಲಕ ಎಸ್.ಜಿ.ಅಭಿಲಾಷ್ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವಕಾಲೇಜಿನಲ್ಲಿ ಯುವ ಬ್ರಿಗೇಡ್ ಸಂಘಟನೆಯ ವತಿಯಿಂದ ಆಚರಿಸಿದ ವಿವೇಕಾನಂದರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರು ಸ್ವಾಮಿ ವಿವೇಕಾನಂದ ಅವರ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ನಿಮ್ಮನ್ನು ನೀವು ಜಯಿಸಿ, ಆಗ ಇಡೀ ಜಗತ್ತೇ ನಿಮ್ಮದಾಗುತ್ತದೆ. ಹೇಡಿಗಳು ಹಾಗೂ ಬಲಹೀನರು ಮಾತ್ರ ಪಾಪವನ್ನು ಮಾಡುವುದು ಮತ್ತು ಸುಳ್ಳನ್ನು ಹೇಳುವುದು. ಧೀರರು ಯಾವಾಗಲೂ ನೀತಿವಂತರಾಗಿರುತ್ತಾರೆ. ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಉನ್ನತ ಆಲೋಚನೆಗಳಿಂದ, ಅತ್ಯುನ್ನತ ಆದರ್ಶಗಳಿಂದ ನಿಮ್ಮ ಮಿದುಳನ್ನು ತುಂಬಿ, ಅವುಗಳನ್ನು ಹಗಲಿರುಳೂ ನಿಮ್ಮ ಮುಂದಿರಿಸಿಕೊಳ್ಳಿ. ಇದರಿಂದ ಮಹತಕಾರ್ಯ ಉದ್ಭವಿಸುತ್ತದೆ ಎಂಬ ವಿವೇಕಾನಂದರ ಆದರ್ಶ ನುಡಿಗಳು ಎಲ್ಲರ ಧ್ಯೇಯಗಳಾಗಲಿ ಎಂದು ನುಡಿದರು.
ಬೆಳಿಗ್ಗೆ ಶಿಡ್ಲಘಟ್ಟದ ಬಸ್ ನಿಲ್ದಾಣದ ಬಳಿಯಿರುವ ಸಲ್ಲಾಪುರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಯುವ ಬ್ರಿಗೇಡ್ ಸದಸ್ಯರು ತಾಲ್ಲೂಕಿನ 14 ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ವಿವೇಕಾನಂದರ ಜೀವನ ಮತ್ತು ಆದರ್ಶಗಳ ಕುರಿತಂತೆ ವಿವರಿಸಿದರು. ಯುವ ಬ್ರಿಗೇಡ್ ಸದಸ್ಯರಾದ ನರ್ಮದಾ, ಗೋಪಾಲಕೃಷ್ಣ, ಶ್ರೇಯಸ್, ನವೀನ್ ಭಾಷಣಕಾರರಾಗಿ ಆಗಮಿಸಿದ್ದರು.
ಯುವ ಬ್ರಿಗೇಡ್ ತಾಲ್ಲೂಕು ಸಂಚಾಲಕ ಮುರಳಿ, ಅಶ್ವತ್ಥ್, ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಮಶುಪಾಲ ಆನಂದ್, ನರೇಶ್, ಮಂಜುಕಿರಣ್, ಸ್ವಪ್ನಾ, ಅಮೃತಾ, ಶರತ್, ಮಿಥುನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

