ಪಟ್ಟಣದ ತಾಲ್ಲೂಕು ಕಚೇರಿಯ ಮುಂದೆ ಸೋಮವಾರ ದಲಿತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಸದಸ್ಯರು ಧರಣಿಯನ್ನು ನಡೆಸಿದರು.
ತಾಲ್ಲೂಕಿನಾದ್ಯಂತ ಎಲ್ಲಾ ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಬೇಕು. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಬೇಕು. ತಾಲ್ಲೂಕಿನಾದ್ಯಂತ ಎಲ್ಲಾ ದಲಿತರ ಸ್ಮಶಾನಗಳನ್ನು ಗುರುತಿಸಿ ಬೇಲಿ ನಿರ್ಮಿಸಿಕೊಡಬೇಕು. ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಮತ್ತು ಮರಳು ಮಾಫಿಯಾವನ್ನು ನಿಯಂತ್ರಿಸಬೇಕು. ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಬೇಕು, ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಮುಖಂಡ ಮುನಯ್ಯ,‘ಸುಮಾರು ವರ್ಷಗಳಿಂದಲೂ ದಲಿತರ ನ್ಯಾಯಬದ್ಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹಲವಾರು ರೀತಿಯ ಹೋರಾಟ, ಪ್ರತಿಭಟನೆ, ಧರಣಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಇಂದಲ್ಲ ನಾಳೆ ನ್ಯಾಯ ಸಿಗಬಹುದು ಎಂಬ ಆಶಾಭಾವದಿಂದ ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ತಹಶೀಲ್ದಾರರು ದಲಿತರ ನ್ಯಾಯಬದ್ಧ ಹಾಗೂ ಕಾನೂನುಬದ್ಧ ಬೇಡಿಕೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಆರೋಪಿಸಿದರು.
ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಸಂಚಾಲಕ ಎನ್.ಎ.ವೆಂಕಟೇಶ್, ಸಂಘಟನಾ ಸಂಚಾಲಕ ಟಿ.ಎ.ಚಲಪತಿ, ಸಿ.ಎಂ.ಲಕ್ಷ್ಮೀನಾರಾಯಣ, ವೆಂಕಟೇಶ್, ನರಸಿಂಹಪ್ಪ, ಮಟ್ಟಿನಾರಾಯಣಸ್ವಾಮಿಡಿ. ಎಂ.ವೆಂಕಟೇಶ್, ಲಕ್ಕೇನಹಳ್ಳಿ ವೆಮಕಟೇಶ್, ಲಕ್ಷ್ಮಣ್ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ದಲಿತ ಸಂಘರ್ಷ ಸಮಿತಿಯ ಸದಸ್ಯರ ಧರಣಿ
ಮಕ್ಕಳ ಹೋಂವರ್ಕ್ ಎಂಬ ನಿತ್ಯದ ಹೋರಾಟ
ಸಂಜೆ ಆರಕ್ಕೆ “ಅಯ್ಯೋ ಮಕ್ಕಳಿಗೆ ಹೋಂವರ್ಕ್ ಮಾಡಿಸ್ಬೇಕ್ರೀ” ಎಂದೆನ್ನುತ್ತಾ ಹರಟೆ ಕಟ್ಟೆಯಿಂದ ಓಡಿ ಮನೆಸೇರುವ ತಾಯಂದಿರು ಮುಂದಿನ ಮೂರ್ನಾಲ್ಕು ಗಂಟೆಗಳ ಕಾಲ ಮಗು ಮಲಗುವವರೆಗೂ ಇದೇ ತರಾತುರಿಯಲ್ಲಿರುತ್ತಾರೆ. ಉದ್ಯೋಗಸ್ಥ ಮಹಿಳೆಯರಾದರಂತೂ ಬಿಡಿ, ಕಛೇರಿಯಿಂದ ಸಂಜೆ ಮನೆಗೆ ಬಂದೊಡನೆ ಮನೆಕೆಲಸದ ಜೊತೆಗೆ ನಿತ್ಯವೂ ಈ ಹೋಂವರ್ಕ್‍ನ ಗೋಳು ಇದ್ದಿದ್ದೇ. ಪ್ರಾಥಮಿಕ ಶಾಲೆಯ ಮಕ್ಕಳಾದರೆ ಅವರ ಹೋಂವರ್ಕ್‍ಗೆ ಪೋಷಕರ ನೆರವು ಅಗತ್ಯ ಎನ್ನುವುದನ್ನು ಒಪ್ಪಬಹುದು. ಇದೇ ಅಭ್ಯಾಸ ಪ್ರೌಢಶಾಲೆ ಮತ್ತು ಕಾಲೇಜು ಸೇರಿದರೂ ಮುಂದುವರೆಯುತ್ತಿದೆ ಎಂದರೆ ನಾವು ಮಕ್ಕಳನ್ನು ಬೆಳೆಸಿರುವ ರೀತಿಯಲ್ಲಿ ಏನೋ ತಪ್ಪಾಗಿದೆ ಅಂತ ನಿಮಗನ್ನಿಸೋದಿಲ್ಲವಾ?
ಹೀಗೆ ಹೋಂವರ್ಕ್ ಮಾಡಿಸುವುದಾದರೂ ಎಂತಹ ತರಲೆ ವಿಷಯ ಅಂತ ಸಾಕಷ್ಟು ಜನ ಅಪ್ಪಂದಿರಿಗೆ ಗೊತ್ತಿಲ್ಲ. ಒಬ್ಬ ಮಿಸ್‍ಗೆ ಇರುವ ವಿದ್ಯಾರ್ಹತೆಯೆಲ್ಲ ಇದಕ್ಕೆ ಬೇಕು. ಆದರೆ ಶಾಲೆಯಲ್ಲಿ ಮಿಸ್‍ಗೆ ಇರುವ ಮಕ್ಕಳ ಮೇಲಿನ ಹಿಡಿತ ತಾಯಂದಿರಿಗೆ ಇರುವುದಿಲ್ಲ. ತಾಯಿಯನ್ನು ಕಂಡಕೂಡಲೇ ಮಕ್ಕಳು ಏನೆಲ್ಲಾ ಮಂಗಾಟಗಳನ್ನು ಶುರುಮಾಡುತ್ತವೆ. ಆಟವಾಡುವಾಗ ಕಂಡಿರದ ಏನೆಲ್ಲಾ ನೋವು, ಗಾಯಗಳು ಹೊರಬರುತ್ತವೆ; ಹಸಿವು, ಬಾಯಾರಿಕೆಗಳಾಗುತ್ತವೆ; ಜೊತೆಗೆ ಶಾಲೆಯಲ್ಲಿ ನಡೆದ ಏನೆಲ್ಲಾ ಸಮಾಚಾರಗಳನ್ನು ಅಮ್ಮನಿಗೆ ಹೇಳಬೇಕಾಗಿರುತ್ತದೆ! ಇವುಗಳ ಮಧ್ಯೆ ಹೋಂವರ್ಕ್‍ಗೆ ಸಿಗುವ ವೇಳೆ ಅತ್ಯಲ್ಪ. ಮನಸ್ಸನ್ನು ಕಲ್ಲು ಮಾಡಿಕೊಂಡು ಮಗುವಿಗೆ ಬೈಯ್ಯುವುದೋ ಅಥವಾ ಹೊಡೆಯುವುದೋ ಮಾಡಿದರೆ ಕಣ್ಣೀರ ಧಾರೆ ಹರಿಯಬಹುದು. ಆಗ ಮಕ್ಕಳಿಗೆ ಮನೆಯ ಹಿರಿಯರದ್ದೋ ಅಥವಾ ಅಪ್ಪಂದಿರದ್ದೋ ಅನುಕಂಪ ಸಿಕ್ಕಿಬಿಟ್ಟರೆ, ಬಿಡಿ ತಾಯಂದಿರದು ನಾಯಿಪಾಡು. ಹಾಗೂ ಹೀಗೂ ಊಟಮಾಡಿ ತೂಕಡಿಕೆ ಬರುವವರೆಗೂ ಎಳೆದಾಡಿ, ಕೆಲವೊಮ್ಮೆ ಬೆಳಿಗ್ಗೆಗೂ ಸ್ವಲ್ಪ ಉಳಿಸಿಕೊಂಡು ಮಗು ಮಲಗುವಷ್ಟರಲ್ಲಿ ಅಮ್ಮಂದಿರು ಅರ್ಧ ಹೆಣವಾಗಿರುತ್ತಾರೆ. ಇದು ಒಂದು ಮಗುವಿನ ಕಥೆಯಾದರೆ, ಇಬ್ಬರಿದ್ದರಂತೂ ಬಿಡಿ, ಅವರ ಜಗಳಗಳನ್ನೂ ಬಗೆಹರಿಸುತ್ತಾ ಹೋಂವರ್ಕ್ ಮಾಡಿಸುವುದು ನಿತ್ಯದ ಮಹಾಸಾಧನೆಯಾಗುತ್ತದೆ.
ಇದು ಪ್ರಾಥಮಿಕ ಶಾಲಾ ಹಂತದಲ್ಲೇನೋ ಸರಿ. ಮಗು ಬೆಳೆಯುತ್ತಾ ಬಂದಂತೆ, ತನ್ನೆಲ್ಲಾ ಕೆಲಸಗಳನ್ನು ತಾನೇ ಮಾಡಿಕೊಳ್ಳುವ ಜವಾಬ್ದಾರಿಯನ್ನು ಮೂಡಿಸಬೇಕಲ್ಲವೇ? ಹಾಗೆ ಮಾಡದೆ ತಾವೇ ಕೈ ಹಿಡಿದು ನಡೆಸುವ ತಾಯಂದಿರು, ತಾತ್ಕಾಲಿಕವಾಗಿ ಭಾರೀ ಜವಾಬ್ದಾರಿಯುತ ಪೋಷಕರಂತೆ ಕಂಡರೂ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಅವರಿಗೆ ನ್ಯಾಯವೆಸುಗುತ್ತಿರುವುದಿಲ್ಲ.
ಮಕ್ಕಳಿಗೆ ಜವಾಬ್ದಾರಿಯನ್ನು ಕಲಿಸುವ ವಿಚಾರದಲ್ಲಿ ದೊಡ್ಡ ತೊಂದರೆ ಇರುವುದು ಮಕ್ಕಳಲ್ಲಲ್ಲ, ಪೋಷಕರಲ್ಲೇ ಎಂದು ಯಾರಾದರೂ ಹೇಳಿದರೆ ನೀವು ಮೂಗು ಮುರಿಯಬಹುದು. ಆದರೆ ಇದು ವಸ್ತುಸ್ಥಿತಿ. ಮಕ್ಕಳಿಗೆ ತಮ್ಮ ಕೆಲಸ ಸ್ವಂತವಾಗಿ ಮಾಡಿಕೊಳ್ಳುವ ಅವಕಾಶ ಕೊಡದಿದ್ದರೆ ಅವರಿಗೆ ತಮ್ಮ ಹೊಣೆಗಾರಿಕೆಯ ಅರಿವಾಗುವುದಿಲ್ಲ. ಹಾಗೆ ಅವರನ್ನು ಅವರಷ್ಟಕ್ಕೆ ಬಿಟ್ಟರೆ, ಅವರು ಹೋಂವರ್ಕ್ ಮಾಡದೆ ಹೋಗಬಹುದು ಅಥವಾ ತಪ್ಪಾಗಿ ಮಾಡಬಹುದು; ಮಿಸ್ ದಿನಚರಿ ಪುಸ್ತಕದಲ್ಲಿ ಕೆಟ್ಟ ಅಭೀಪ್ರಾಯ ಕೊಡಬಹುದು; ಮಗುವಿಗೆ ಬರಬೇಕಾದ ರ್ಯಾಂಕ್ ಇನ್ನಾರದೋ ಪಾಲಾಗಬಹುದು- ಎನ್ನುವ ರೀತಿಯ ಅನಗತ್ಯ ಅನುಮಾನ, ಆತಂಕಗಳೇ ಪೋಷಕರನ್ನು ಕಾಡಿ, ಬೇಡಿ ಬೆದರಿಸಿ ನಂಬಿಸಿ, ಅಂತೂ ಹೇಗಾದರೂ ಮಕ್ಕಳಿಂದ ಹೋಂವರ್ಕ್ ಮಾಡಿಸುವುದಕ್ಕೆ ಪ್ರೇರೇಪಿಸುತ್ತದೆ. ಅಮ್ಮ ಹೇಗೂ ಮಾಡಿಸುತ್ತಾಳೆ ಎಂದು ಮಗು ಮಾನಸಿಕವಾಗಿ ಸೋಮಾರಿಯಾಗಿ ಹೇಳಿದಾಗ, ಹೇಳಿದಷ್ಟನ್ನು ಮಾತ್ರ ಮಾಡುತ್ತದೆ. ಪೋಷಕರು ಎಲ್ಲಾ ಜವಾಬ್ದಾರಿಯನ್ನು ಹೊತ್ತು ತಮ್ಮ ಮಕ್ಕಳಿಗಾಗಿ ತಾವು ಏನೆಲ್ಲಾ ತ್ಯಾಗ ಮಾಡುತ್ತಿದ್ದೇವೆಂಬ ಭ್ರಮೆಯಲ್ಲಿರುತ್ತಾರೆ, ಆದರು ನಿಜವಾಗಿ ಅವರು ಮಕ್ಕಳಿಗೆ ತ್ಯಾಗಕ್ಕಿಂತ ಹೆಚ್ಚಾಗಿ ಅನ್ಯಾಯವನ್ನೇ ಮಾಡುತ್ತಿರುತ್ತಾರೆ.
ಹಾಗಾಗಿ ಕಡೆಯ ಪಕ್ಷ ಮಗು ಮಾಧ್ಯಮಿಕ ಶಾಲೆಗೆ ಬರುವಷ್ಟರಲ್ಲಿ ತನ್ನ ಕೆಲಸಗಳನ್ನು ಸ್ವತಂತ್ರವಾಗಿ ನಿಭಾಯಿಸಬಲ್ಲ ಹೊಣೆಗಾರಿಕೆ ಅದಕ್ಕೆ ಬರಬೇಕು. ಇದಕ್ಕಾಗಿ ಪೋಷಕರು ಪ್ರಾಥಮಿಕ ಶಾಲಾ ಹಂತದಿಂದಲೇ ಮಗುವನ್ನು ತಯಾರು ಮಾಡುತ್ತಾ ಬರಬೇಕು. “ನಿನಗೆ ತಿಳಿಯದ ವಿಷಯದಲ್ಲಿ ನಾನು ಸಹಾಯ ಮಾಡುತ್ತೇನೆ, ಆದರೆ ದಿನಚರಿ ನೋಡುವುದು, ಸಮಯಕ್ಕೆ ಸರಿಯಾಗಿ ಬರೆಯಲು ಪ್ರಾರಂಭಿಸಿವುದು ನಿಮ್ಮ ಜವಾಬ್ದಾರಿ” ಎಂದು ತಿಳಿಸಿ. ಅವರು ಕಡೆಗಣಿಸಿದರೆ ಕೆಲವೊಮ್ಮೆ ಶಾಲೆಯಲ್ಲಿ ಶಿಕ್ಷೆ ಅನುಭವಿಸಲಿ ಬಿಡಿ. ಅದೇನು ಭಾರೀ ಅವಮಾನದ ವಿಚಾರ ಅನ್ನೋತರ ಎಲ್ಲಾ ನಿಮ್ಮ ತಲೆಯ ಮೇಲೆ ಎಳೆದುಕೊಳ್ಳಬೇಡಿ. ತಪ್ಪು ಮಾಡುವುದನ್ನೇ ತಪ್ಪಿಸಿದರೆ ಸರಿ ಮಾಡುವುದನ್ನು ಕಲಿಸಿದಂತಾಗುವುದಿಲ್ಲ. ಶಿಕ್ಷೆ ಅನುಭವಿಸಿದ ಮೇಲೆ ಹಂಗಿಸಬೇಡಿ. “ನಾನು ಮೊದಲೇ ಹೇಳಿದ್ದೆ, ನಾನು ಹೇಳಿದ ಹಾಗೆ ಕೇಳಿದ್ದರೆ ಹೀಗಾಗುತ್ತಿತ್ತಾ? ಈಗ ಅನುಭವಿಸು” ಎನ್ನುವ ಪ್ರತೀಕಾರದ ರೀತಿಯ ಮಾತುಗಳಿಂದ ಮಕ್ಕಳನ್ನು ಚುಚ್ಚಬೇಡಿ. ಮತ್ತೊಮ್ಮೆ ಇಂತಹ ತಪ್ಪು ಆಗುವುದಕ್ಕೆ ಅವಕಾಶ ಕೊಡಬಾರದೆಂದು ಪ್ರೀತಿಯಿಂದ ಎಚ್ಚರಿಸಿ. ಯಾವುದೇ ವಯಸ್ಸಿನ ಮಗುವಿಗೂ ನೀವು ಬರೆದುಕೊಡಬೇಡಿ. ಹೋಂವರ್ಕ್ ತೀರಾ ಹೆಚ್ಚಾಗಿರುತ್ತದೆ ಅನ್ನಿಸಿದರೆ ಶಾಲೆಯವರೊಡನೆ ಇದರ ಬಗೆಗೆ ಚರ್ಚಿಸಿ.
ಹೋಂವರ್ಕ್ ಮಾಡಲು ಒಂದು ಸ್ಥಳ, ಸಮಯ ನಿಗದಿಪಡಿಸಿ. ಆ ಸಮಯದಲ್ಲಿ ಮನೆಯಲ್ಲಿ ಯಾರೂ ಟೀವಿ ನೋಡಬಾರದೆಂದು ಕಡ್ಡಾಯ ಮಾಡಿ. ಇಲ್ಲದಿದ್ದರೆ ಒಂದು ತಾಸಿನ ಕೆಲಸ ನಾಲ್ಕು ತಾಸಾದರೂ ಮುಗಿಯುವುದಿಲ್ಲ ಮತ್ತು ಮಾಡಿದ ಕೆಲಸ ಸಮರ್ಪಕವಾಗಿಯೂ ಇರುವುದಿಲ್ಲ. ತಪ್ಪಿಲ್ಲದ ಕ್ರಮಬದ್ಧ ಕೆಲಸಕ್ಕೆ ವಾರಾಂತ್ಯದಲ್ಲಿ ಸಣ್ಣ ಪುಟ್ಟ ಬಹುಮಾನ ಕೊಡಿ. ಇದನ್ನು ಅತಿಯಾಗಿ ಬಳಸಿದರೆ ಅದು ಬೆಲೆ ಕಳೆದುಕೊಳ್ಳುತ್ತದೆ. ಮಕ್ಕಳು ತಮ್ಮ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮಾಡಿದಾಗ ಎಲ್ಲರೆದುರು ಮುಕ್ತವಾಗಿ ಹೊಗಳಿ, ಅವರ ಆತ್ಮಗೌರವಕ್ಕೆ ಇಂಬು ಕೊಡಿ.
ಹೀಗೆ ಹಂತಹಂತವಾಗಿ ಪ್ರಯತ್ನ ಮಾಡುತ್ತಾ ಹೋದರೆ ಮಾಧ್ಯಮಿಕ ಶಾಲೆಗೆ ಬರುವ ಹೊತ್ತಿಗೆ ಮಕ್ಕಳು ಸ್ವತಂತ್ರರಾಗಿರುತ್ತಾರೆ. ನಂತರ ಆಗಾಗ ಮೇಲ್ವಿಚಾರಣೆ ಮಾಡಿಕೊಂಡರೆ ಸಾಕು. ನಿಮ್ಮ ಇತರ ಕೆಲಸಗಳಿಗೆ ಸಾಕಷ್ಟು ಸಮಯ ಸಿಗುತ್ತದೆ. ಆದರೆ ಎಚ್ಚರವಿರಲಿ, ಮಕ್ಕಳನ್ನು ಬರೆಯಲು ಕೂರಿಸಿ ನೀವು ಟೀವಿ ಮುಂದೆ ಸ್ಥಾಪಿತರಾದಿರೋ, ಮತ್ತೆ ಹಳೆಯ ಚಾಳಿಗಳು ಶುರುವಾಗಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಕೆಲವು ವಿಷಯಗಳ ಶಿಸ್ತನ್ನು ಮನೆಯವರೆಲ್ಲಾ ಖಾಯಂ ಆಗಿ ಪಾಲಿಸದಿದ್ದರೆ, ಮಕ್ಕಳಿಗೆ ನಾವು ಮಾಡುವುದು ಬರೀ ಉಪದೇಶವಾಗಿ ಉಳಿಯುತ್ತದೆ. ನಿತ್ಯದ ಹೋರಾಟ ತಪ್ಪುವುದೇ ಇಲ್ಲ.
ನನ್ನ ಅನುಭವದಲ್ಲಿ ಹೆಚ್ಚಿನ ತಾಯಂದಿರ ಆತಂಕ ಮಗು ಎಲ್ಲಿ ತಪ್ಪು ಮಾಡಿಬಿಡಬಹುದೋ ಎನ್ನುವುದು. ಅದರಿಂದ ಹೊರಬಂದು ಮಗುವಿಗೆ ಹಂತಹಂತವಾಗಿ ಸ್ವಾತಂತ್ರ ನೀಡುತ್ತಾ ಹೋಗಿ. ಅಂತಹ ಸ್ವಾತಂತ್ರವನ್ನು ಸದುಪಯೋಗಪಡಿಸಿಕೊಳ್ಳುವುದನ್ನು ಕಲಿಸಿ. ತಪ್ಪು ಮಾಡುವುದು ತಪ್ಪಲ್ಲ, ತಪ್ಪುಗಳಿಂದ ಬದಲಾಗದೇ ಇರುವುದು ತಪ್ಪು ಎನ್ನುವ ಮನೋಭಾವ ಬೆಳಿಸಿ. ಆಗ ಮಕ್ಕಳ ವ್ಯಕ್ತಿತ್ವ ಅರಳುವುದನ್ನು ನೋಡುವ ಖುಷಿ ನಿಮ್ಮದಾಗುತ್ತದೆ.
ವಸಂತ್ ನಡಹಳ್ಳಿ
ಶಿಡ್ಲಘಟ್ಟ ಬೈಪಾಸ್ ರಸ್ತೆಯ ಡಾಂಬರೀಕರಣ
ಶಿಡ್ಲಘಟ್ಟ ಚಿಕ್ಕಬಳ್ಳಾಪುರದ ರಸ್ತೆಯಿಂದ ಪೂಜಮ್ಮ ದೇವಸ್ಥಾನದ ವರೆಗಿನ ಬೈಪಾಸ್ ರಸ್ತೆಯ ಡಾಂಬರೀಕರಣಕ್ಕೆ ಭಾನುವಾರ ಶಾಸಕ ಎಂ.ರಾಜಣ್ಣ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ರಾಜಣ್ಣ, ‘ಲೋಕೋಪಯೋಗಿ ಇಲಾಖೆಯಿಂದ ವಿಶೇಷ ಅನುದಾನದ ಅಡಿಯಲ್ಲಿ ಸುಮಾರು 12 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣವನ್ನು ನಡೆಸಲಾಗುತ್ತಿದೆ. ಸಾಕಷ್ಟು ಹದಗೆಟ್ಟಿದ್ದ ಈ ಬೈಪಾಸ್ ರಸ್ತೆಯಲ್ಲಿ ಮಳೆಗಾಲದಲ್ಲಿ ಸಂಚರಿಸುವುದು ದುಸ್ತರವಾಗಿತ್ತು. ಈ ರಸ್ತೆಯು ಸರಿಯಾಗಿದ್ದಲ್ಲಿ ಮುಖ್ಯ ರಸ್ತೆಯ ವಾಹನದ ಒತ್ತಡ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿಯನ್ನು ನಡೆಸಲು ಸೂಚಿಸಿದ್ದೇನೆ’ ಎಂದು ತಿಳಿಸಿದರು.
ಸೂರ್ಯನಾರಾಯಣಗೌಡ, ಶ್ರೀನಿವಾಸ್, ಅಫ್ಸರ್ಪಾಷ, ಷಫೀ, ಹಸೇನ್ಖಾನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಕರಾಟೆಯು ವ್ಯಕ್ತಿತ್ವವನ್ನು ರೂಪಿಸುತ್ತದೆ – ವಿ.ಮುನಿಯಪ್ಪ
ಕರಾಟೆ ಕಲೆಯನ್ನು ಕಲಿಯುವ ಎಲ್ಲರಿಗೂ ಆರೋಗ್ಯ, ಧೈರ್ಯ, ಶಿಸ್ತನ್ನು ಮೈಗೂಡಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಒತ್ತಡದ ಜೀವನವನ್ನು ಎದುರಿಸಲು ಸಹಕಾರಿ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ಪಟ್ಟಣದ ವಾಸವಿ ಕಲ್ಯಾಣಮಂಟಪದಲ್ಲಿ ಭಾನುವಾರ ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವತಿಯಿಂದ ನಡೆದ ಎರಡನೇ ವರ್ಷದ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರಾಟೆ ಕಲೆಯು ಒಂದು ಆತ್ಮರಕ್ಷಣೆಯ ವಿಧಾನವಾಗಿದೆ. ವ್ಯಾಯಾಮ ಎಂಬುದು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಗರಡಿ ಮನೆಯಿಂದ ಕರಾಟೆ ವರೆಗೂ ಸಾಗಿರುವ ಈ ದೇಹ ದಂಡಿಸುವ ಕಲೆಗಳಿಂದ ವ್ಯಕ್ತಿತ್ವವೂ ಕೂಡ ರೂಪುಗೊಳ್ಳುತ್ತದೆ. ಮಕ್ಕಳು ಪ್ರದರ್ಶನ ನೀಡಿದ್ದನ್ನು ಕಂಡು ನಮ್ಮ ಊರಿನಲ್ಲೂ ಈ ಪ್ರತಿಭೆಗಳಿವೆಯೇ ಎಂದು ಹೆಮ್ಮೆ ಪಡುವಂತಾಗಿದೆ ಎಂದು ಹೇಳಿದರು.
ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ವಿದ್ಯಾರ್ಥಿಗಳು ಕತಾ, ಪಿರಮಿಡ್ ಹಾಗೂ ವಿವಿಧ ಕಲಾಟೆಯ ಕೌಶಲ್ಯಗಳನ್ನು ಪ್ರದರ್ಶಿಸಿದರು.
ಗೋಜು ರಿಯೊ ಕರಾಟೆ ಡೊ ಸೇವಾ ಕಾಯ್ ಬಾಂಬೆ ಮುಖ್ಯಸ್ಥ ಶಿಹಾನ್ ಸಂದೀಪ್ ಸಾಲ್ವಿ, ಜಿಲ್ಲಾ ಮುಖ್ಯಸ್ಥ ಜಬೀವುಲ್ಲಾ, ದಿವ್ಯಭಾರತ್ ಕರಾಟೆ ಡೋ ಅಸೋಸಿಯೇಷನ್ ಮುಖ್ಯಸ್ಥ ಅರುಣ್ ಕುಮಾರ್, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸುಬ್ರಮಣಿ, ಪುರಸಭಾ ಸದಸ್ಯ ಕೇಶವಮೂರ್ತಿ, ರಾಜ್ಕುಮಾರ್, ಛಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಬೇಕೆಂಬ ಬೇಡಿಕೆ – ಇಲ್ಲ ಸಾಕೆಂಬ ಹೇಳಿಕೆ
ಇತ್ತೀಚಿನ ದಿನಗಳಲ್ಲಿ ಏರುತ್ತಿರುವ ಅಡಿಕೆ ಬೆಲೆ ಎಲ್ಲಿಗೆ ಹೋಗಿ ಮುಟ್ಟುತ್ತದೆಂಬುದನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ಹಿಂದೆ ಬೆಲೆ ಇಳಿದಾಗಲೂ ಯಾವ ಮಟ್ಟಕ್ಕೆ ಇಳಿಯಬಹುದೆಂದು ಯಾರೂ ಊಹಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗೇ ಉಳಿದ ಆಹಾರ ಪದಾರ್ಥಗಳ – ತರಕಾರಿಗಳ ಬೆಲೆ ಏರುತ್ತಿದ್ದಂತೆ ಪೆಟ್ರೋಲ್ ಡೀಸೆಲ್‍ಗಳ ಬೆಲೆ ಕೂಡ ಏರುತ್ತಿದೆ. ಬೆಲೆ ಏರಿಕೆ ಮಾತ್ರ ಕಾಣುತ್ತಿದೆ. ಇಳಿಕೆಯ ಯಾವ ಲಕ್ಷಣವೂ ಗೋಚರಿಸುತ್ತಿಲ್ಲ. ಬೆಳೆಗೆ ಬೆಲೆ ಬಂದಾಗ ಬೆಳೆಗಾರರಿಗೆ ಖುಷಿಯಾಗುವುದು ಸಹಜ. ಸರಕಾರಿ ಯಾ ಖಾಸಗಿ ಕಂಪನಿಗಳ ನೌಕರರಿಗೆ ಸಂಬಳ ಏರಿದಾಗಲೂ ಹೀಗೆ. ಹಿಂದೆ ಕಾಲೇಜು ಶಿಕ್ಷಕರಿಗೆ ಯು.ಜಿ.ಸಿ. ವೇತನ ಶ್ರೇಣಿ ನೀಡಿದಾಗ ಉಳಿದ ನೌಕರಿಯವರು ಉದ್ಗಾರವೆತ್ತಿದ್ದರು. ತಮಗೂ ಹಾಗೇ ಇದ್ದರೆ ಎಂದು ಹಳಹಳಿಸಿದ್ದರು. ಈಗಿನ ಅಡಿಕೆ ಬೆಲೆಯ ಕುರಿತು ಅಡಿಕೆ ಬೆಳೆಗಾರರಲ್ಲದ ಬೇರೆ ಬೆಳೆಗಾರರೂ ಹಾಗೇ ಈಗ ಉದ್ಗರಿಸುತ್ತಿದ್ದಾರೆ. ಯಾವುದಾದರೂ ಇದ್ದಕ್ಕಿದ್ದಂತೆ ‘ಅತಿ’ ಎನ್ನಿಸಿದಾಗ ಹೀಗನ್ನಿಸುತ್ತದೆ. ಆದರೆ ಬಳಕೆದಾರ ಕಥೆಯನ್ನು ಕೇಳುವವರಿಲ್ಲ. ಟೊಮೊಟೋ ಕಬ್ಬಿಗೆ ಅಡಿಕೆಗೆ ಹೀಗೆ ಬೆಳೆಗಳ ಬೆಲೆ ಕುಸಿದಾಗಲೇ ಸರಕಾರದಿಂದ ಬೆಂಬಲ ಬೆಲೆ ಘೋಷಿಸುವಂತೆ ಹಕ್ಕೊತ್ತಾಯ ಮಾಡುತ್ತಿದ್ದುದು ನಮ್ಮ ಗಮನಕ್ಕೆ ಬಂದ ಸಂಗತಿಯೇ ಹೌದು.
ಬೆಲೆ-ಸಂಬಳ ಅಧಿಕವಾಗುವುದರಿಂದ, ಆ ಬೆಲೆ ಬೆಳೆದ ಆ ಉದ್ಯೋಗದಲ್ಲಿರುವವರಿಗೆ ಅನುಕೂಲವಾಗುತ್ತದೆ. ಬಳಕೆದಾರರಿಗೆ ಕಷ್ಟವಾಗುತ್ತದೆ. ಕೂಲಿ-ನಾಲಿ ಮಾಡುವವರು ಈ ಪ್ರಮಾಣದಲ್ಲಿ ಅಡಿಕೆ ದರ ಏರಿದ್ದರಿಂದ ಎಲೆ ಅಡಿಕೆ ಹಾಕುವುದಕ್ಕೆ ಪಡುವ ಕಷ್ಟ ಪರಮಾತ್ಮನಿಗೇ ಪ್ರೀತಿ. ಹಾಗೇ ಉಳಿದವರು ಆರ್ಥಿಕವಾಗಿ ಎಷ್ಟೇ ಉತ್ತಮ ಸ್ಥಿತಿಯಲ್ಲಿದ್ದರೂ ಅವರ ಬಳಕೆಯ ವಸ್ತುಗಳ ಬೆಲೆ ಏರಿದಾಗ ಸಹಜವಾಗಿ ಗೊಣಗುತ್ತಾರೆ. ಉಳಿದವರನ್ನು ಸರಕಾರವನ್ನು ಸೇರಿಸಿ ದೂಷಿಸುತ್ತಾರೆ. ಅಂದರೆ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ನಮ್ಮ ಬೆಳೆಗೆ ಹೆಚ್ಚು ಹೆಚ್ಚು ಬೆಲೆ ಬರಬೇಕು ಅದೇ ಉಳಿದ ನಮ್ಮ ಬಳಕೆಯ ವಸ್ತುಗಳ ಬೆಲೆ ಇಳಿಯಬೇಕು. ಯಾರೂ ಕೂಡ ಸಾಕೆಂಬ ಹೇಳಿಕೆಯನ್ನು ಮುಂದಿಡುವುದಿಲ್ಲ.
ಬೆಲೆಗಳು ಏರಿದಾಗ ನಮ್ಮ ಬೆಳೆಗೆ ಇಷ್ಟು ಬೆಲೆ ಸಾಕೆಂದು ಯಾರೂ ಹೇಳುವುದಿಲ್ಲ. ಹೀಗೆ ಯಾವ ನೌಕರನೂ ಕೂಡ ತಮ್ಮ ನೌಕರಿಗೆ ಇಷ್ಟು ಸಂಬಳ ಸಾಕೆಂದು ಹೇಳುವುದಿಲ್ಲ. ಅಂದರೆ ಪ್ರತಿಯೊಂದನ್ನು ವ್ಯಷ್ಟಿಯ ನೆಲೆಯಲ್ಲೇ ನೋಡಲಾಗುತ್ತಿದೆಯೇ ವಿನಃ ಸಮಷ್ಟಿಯ ನೆಲೆಯಲ್ಲಿ ನೋಡುತ್ತಿಲ್ಲ. ಯಾರೂ ಅಕ್ಕ ಪಕ್ಕ ನೋಡುವುದಿಲ್ಲ, ಕೇವಲ ತಮ್ಮದನ್ನಷ್ಟೇ ನೋಡಿಕೊಳ್ಳುವ ಸಂಕುಚಿತವಾದ ಮನೋಭಾವಕ್ಕೆ ಅಥವಾ ಮನೋವ್ಯಾಧಿಗೆ ತುತ್ತಾಗುತ್ತಿದ್ದಾರೆ.
ನಮ್ಮಲ್ಲಿ ಒಂದು ಮಾತಿದೆ – ‘ಮನುಷ್ಯ ಸಾಕೆನ್ನುವುದು ದೊಣ್ಣೆ ಪೆಟ್ಟು ಮಾತ್ರ’ ಅಂತ. ಅದು ಕೇವಲ ದೈಹಿಕ ನೋವಾಯಿತು. ಮನುಷ್ಯನಿಗೆ ದೈಹಿಕ ನೋವು ಅಥವಾ ಮಾನಸಿಕ ವೇದನೆ ಉಂಟಾದಾಗ ಸಾಕು ಸಾಕು ಎನ್ನುತ್ತಾನೆಯೇ ವಿನಃ ಉಳಿದ ಸಂದರ್ಭಗಳಲ್ಲಿ ಅಲ್ಲ. ಇಂದು ನಾವು ತುರ್ತಾಗಿ ಗಮನ ಹರಿಸಬೇಕಾದದ್ದು ಹೇಗೆ ಬೆಳೆಯನ್ನು ಬೆಳೆಯುವ ರೈತನನ್ನು ಕುರಿತು ಮತ್ತು ಅಷ್ಟೇ ತುರ್ತಾಗಿ ಗಮನ ಹರಿಸಬೇಕಾದ್ದು ಆ ಬೆಳೆಯನ್ನು ಬಳಸುವ ಬಳಕೆದಾರರನ್ನು. ಯಾರೊಬ್ಬರಿಗೂ ಅನ್ಯಾಯವಾಗುವುದು ಬೇಡ ಹಾಗೇ ಸಮತೋಲನ ತಪ್ಪಿ ಸಾಮಾಜಿಕ ಸ್ವಾಸ್ಥ್ಯ ಕೆಡುವುದೂ ಬೇಡ. ಹೀಗಾಗಬೇಕೆಂದಾದರೆ ಪ್ರತಿ ಬೆಳೆಗೂ ವೈಜ್ಞಾನಿಕವಾಗಿ ಬೆಲೆ ನಿಗದಿಯಾಗಬೇಕು. ಹೇಗೆ ಬಿಸ್ಕೆಟ್, ಚಾಕೊಲೇಟ್, ಇನ್ನಿತರ ಉತ್ಪನ್ನಗಳ ಮೇಲೆ ಬೆಲೆಯನ್ನು ಮತ್ತು ತಯಾರಿಕಾ ವರ್ಷವನ್ನು ನಿರ್ದಿಷ್ಟವಾಗಿ ನಮೂದಿಸಿರುತ್ತಾರೆ. ಅದೇ ರೀತಿಯಲ್ಲಿ ಉಳಿದ ಉತ್ಪನ್ನಗಳಿಗೂ ನಿರ್ದಿಷ್ಟ ಬೆಲೆ ನಿಗದಿಯಾದರೆ ಬೆಳೆಯುವವರಲ್ಲಿ ಮತ್ತು ಬಳಕೆದಾರರಲ್ಲಿ ಭರವಸೆಯಿದ್ದಿರುತ್ತದೆ. ಯಾವ ಹೊತ್ತಿಗೆ ಹೇಗೋ ಎಂಬ ಆತಂಕದಿಂದ ಇಬ್ಬರೂ ಮುಕ್ತವಾಗಿರಲು ಸಾಧ್ಯ ಬೇಕಿದ್ದರೆ ಸರಕಾರ ತನ್ನ ಬಜೆಟ್ ಮಂಡನೆಯಲ್ಲೇ ಅದನ್ನುಷ್ಟು ಪ್ರಸ್ತಾಪಿಸಿ; ಅದಕ್ಕೆ ತಕ್ಕಂತೆ ಎಲ್ಲವೂ ಇರುವಂತೆ ನೋಡಿಕೊಳ್ಳುವುದೂ ಸೂಕ್ತವಾದ ಕ್ರಮವೇ ಆಗಬಹುದು.
ಪ್ರತಿ ವರ್ಷವೂ ಸರಕಾರಿ ನೌಕರರ ಸಂಬಳ ಶೇಕಡವಾರು ಹೆಚ್ಚಳವಾಗುತ್ತಲೇ ಇರುತ್ತದೆ. ವರ್ಷಕ್ಕೆ ಎರಡು ಬಾರಿ ‘ತುಟ್ಟಿಭತ್ಯೆ’ಕೂಡ ನಿಗದಿಯಾಗಿ ನೀಡಲ್ಪಡುತ್ತದೆ. ಪ್ರತಿ ಐದು ಅಥವಾ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗದ ತೀರ್ಮಾನಕ್ಕನುಗುಣವಾಗಿ ಸಂಬಳದ ಪರಿಷ್ಕರಣೆಯಾಗುತ್ತದೆ. ಅದನ್ನು ‘ವೈಜ್ಞಾನಿಕ’ವೆಂದೇ ಪರಿಗಣಿಸಲಾಗುತ್ತದೆ. ದಿನೇ ದಿನೇ ಏರುತ್ತಿರುವ ಬೆಲೆಗಳನ್ನು ಆಧರಿಸಿ ಇದು ನಿರ್ಧರಿತವಾಗುತ್ತಿರುವುದು ನಿಜ. ಆದರೆ ಬೆಲೆಗಳೆಲ್ಲ ಒಂದು ಹತೋಟಿಯಲ್ಲಿದ್ದರೆ ಇಂಥ ಏರಿಕೆಯನ್ನು ಹತೋಟಿಯಲ್ಲಿ ಇಡಬಹುದು. ಹಾಗೇ ‘ತುಟ್ಟಿಭತ್ಯೆ’ಯನ್ನು ಕೂಡ. ಒಟ್ಟಾರೆ ದೇಶದ ಹಿತದ ದೃಷ್ಟಿಯಿಂದ ಆರ್ಥಿಕ ಶಿಸ್ತನ್ನು ಕಠಿಣವಾಗಿ ಜಾರಿಗೆ ತಾರದಿದ್ದ ಪಕ್ಷದಲ್ಲಿ ಭವಿಷ್ಯದಲ್ಲಿ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಬೆಳೆಯ ಬೆಲೆಯ ವೈಜ್ಞಾನಿಕ ನಿರ್ಧಾರ ಮತ್ತು ತನ್ಮೂಲಕವಾಗಿ ಬೆಳೆಗಾರನ ಹಿತ ಕಾಯುವುದು ಸರಕಾರದ ಜವಾಬ್ದಾರಿಯಾದಂತೆ ಬಳಕೆದಾರನಿಗೆ ಆಗುವ ಅನುಕೂಲಗಳತ್ತಲೂ ಗಮನ ಹರಿಸಬೇಕಾಗುತ್ತದೆ. ಅವುಗಳ ಮಧ್ಯೆ ಒಂದು ಹೊಂದಾಣಿಕೆ ಮತ್ತು ಹದವನ್ನು ಕಾಪಾಡುವುದು ಸೂಕ್ತ. ಯಾರು ಎಷ್ಟೇ ಸಿಕ್ಕರೂ ಸಾಕೆಂದು ಹೇಳುವುದಿಲ್ಲ. ನಮಗಿಷ್ಟು ಸಾಕು, ನಮ್ಮ ಕುಟುಂಬದ ನಿರ್ವಹಣೆಗೆ ಇಷ್ಟು ಸಾಕು. ಆಪತ್ಕಾಲೀನ ಪರಿಸ್ಥಿತಿಯಲ್ಲಿ ಅನುಕೂಲವಾಗುವಂತೆ ಬೇಕಿದ್ದರೆ ಪ್ರತಿ ಕುಟುಂಬಕ್ಕೂ ಅನ್ವಯವಾಗುವಂತೆ ಬೇಕಿದ್ದರೆ ಆಪತ್ಕಾಲೀನ ನಿಧಿ ಸ್ಥಾಪಿಸಿ, ತತ್ ಕ್ಷಣದಲ್ಲಿ ದೊರಕುವಂತೆ ಕೂಡ ಮಾಡಬಹುದು. ಆದರೆ ಇದು ಕಾರ್ಯಸಾಧುವಲ್ಲವೆನ್ನಿಸಿದರೆ ಅವರವರ ಖಾತೆಯಲ್ಲಿ ಇಷ್ಟು ಹಣ (ಕನಿಷ್ಟ ಮತ್ತು ಗರಿಷ್ಟ) ಇರಬೇಕೆಂದು ತಿಳಿಸಿ ಅದನ್ನಷ್ಟು ಖಾತ್ರಿಗೊಳಿಸಿಕೊಳ್ಳುವುದು ಅಗತ್ಯ ಅನೇಕರಿಗೆÉ ವಿಶೇಷವಾದ ಸವಲತ್ತುಗಳು ಬೇಕಾಗುವುದು ಮಕ್ಕಳ ವಿದ್ಯಾಭ್ಯಾಸ ಮತ್ತು ಆರೋಗ್ಯಕ್ಕೆ. ಈ ಎರಡು ಖಾತೆಗಳು ಜನಸಾಮಾನ್ಯರಿಗೆ ಸದಾ ಕೈಗೆಟಕುವಂತಿದ್ದರೆ, ಬಹುತೇಕ ಜನರಲ್ಲಿ ಬೇಕು ಬೇಕೆಂಬ ಹಪಹಪಿಕೆ ಅಷ್ಟಾಗಿ ಇರದು.
ಇಂದು ರಾಜ್ಯದಾದ್ಯಂತ ನಡೆದ ಲೋಕಾಯುಕ್ತರ ದಾಳಿಯನ್ನು ನೋಡಿ. ಎಲ್ಲವೂ ಸಾಕಷ್ಟು ಸಂಬಳ ಪಡೆಯುವ – ಉಳ್ಳವರ ಮನೆಗಳ ಮೇಲೆಯೇ ನಡೆದದ್ದು. ಆದರೆ ಅವರುಗಳು ಪಡೆದ ಒಟ್ಟಾರೆ ಸಂಬಳಕ್ಕೂ – ಅವರು ಒಟ್ಟು ಹಾಕಿರುವ ಆಸ್ತಿಗೂ ತಾಳೆಯಾಗದ್ದು ಲೋಕಾಯುಕ್ತ ದಾಳಿಯಿಂದ ಪತ್ತೆಯಾಗಿದೆ ಎಂದಾದರೆ ಈ ಜನರ ಬೇಕು ಬೇಕೆಂಬ ಬೇಡಿಕೆಗೆ ಮಿತಿಯಿಲ್ಲವೆಂದೇ ಅರ್ಥ. ಇಂಥವರ ಆಸ್ತಿಯನ್ನು ಸರಕಾರ ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಿಟ್ಟರೆ ಅವರು ಅತ್ಯಲ್ಪ ಕಾಲದಲ್ಲೇ ಇನ್ನಷ್ಟನ್ನು ಗಳಿಸಿ ಮೆರೆದಾಡಬಹುದು. ಹಾಗಾಗದಂತೆ ತಡೆಗಟ್ಟಲು ಅವರನ್ನು ಆಯಾ ಹುದ್ದೆಯಿಂದಲೇ ವಜಾಗೊಳಿಸಿ ಅವರ ಅಪ್ರಾಮಾಣಿಕತನಕ್ಕೆ ಶಿಕ್ಷೆಯಾಗಿ ಅವರನ್ನು ಮನೆಗೆ ಕಳಿಸುವುದು ಸೂಕ್ತ. ದೇಶದ ಜನಸಾಮಾನ್ಯರ ಆರ್ಥಿಕ ಸ್ಥಿತಿಗತಿಗಳನ್ನು ಕನಿಷ್ಟಪಕ್ಷ ತೆರೆದ ಕಣ್ಣಿಂದ ವಿಶಾಲ ಹೃದಯದಿಂದ ಅವಲೋಕಿಸದಿದ್ದರೆ ಅವರ ಬದುಕು ಅವರೆಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕೂಡ ವ್ಯರ್ಥವೆನ್ನಬಹುದು.
ಕೇವಲ ಬೆಳೆಗಳ ಬೆಲೆಗಳಿಗಾಗಲೀ, ವಸ್ತುಗಳ ಬೆಲೆಗಳಾಗಲಿ ಕೈಗೆಟಕುವಂತಿದ್ದರೆ ಅವುಗಳ ಪ್ರಯೋಜನ ಕೇವಲ ಉಳ್ಳವರ ಸ್ವತ್ತಾಗಬಹುದು! ‘ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಎಂಬ ಬಸವಣ್ಣನವರ ವಚನದ ವಾಕ್ಯಗಳು ಸಾರ್ವಕಾಲಿಕ ಸತ್ಯ ಆದರೆ ಅದರಲ್ಲಿ ನಮ್ಮ ಪಾಲೂ ಇದ್ದರಾಗದೆ: ಎಂದು ಯೋಚಿಸುವುದು ಒಳ್ಳೆಯದು. ಉಳಿದವರಿಗೆ ಹೋಲಿಸದಾಗ ನಮ್ಮ ಸಂಬಳದಲ್ಲಿ (ಅದೆಷ್ಟೇ ಇರಲಿ ಸರಕಾರ ಊಟಕ್ಕೆ ತತ್ವಾರವಾಗುವಷ್ಟನ್ನಂತೂ ನೀಡುತ್ತಿಲ್ಲ) ನಾವು ನಿಜಕ್ಕೂ ಸಾಕಷ್ಟು ಸಮಾಧಾನ – ಶಾಂತಿಯಲ್ಲಿ ಜೀವಿಸುತ್ತಿದ್ದೇವೆಂಬ ಅರಿವು ನೌಕರಿಯೊಂದಿಗೆ ಇದ್ದು ಅವರಿಂದ ಜನರ ಕೆಲಸ ಕಾರ್ಯಗಳು ಲಂಚ-ರಿಷುವತ್ತುಗಳಿಂದ ಮುಕ್ತವಾಗಿ ನಡೆಯುವುದು ಅಪೇಕ್ಷಣೀಯ. ಹಾಗೆ, ಅವರಿಗೆ ಅವರ ಸ್ಥಿತಿ ಅರಿವಾಗದಿದ್ದಲ್ಲಿ – ಬೇರೆಯವರ ಸ್ಥಿತಿಯನ್ನು ಕೂಡ ಅರಿವಾಗಿಸಿಕೊಳ್ಳುವಲ್ಲಿ ಪ್ರಯತ್ನಿಸುವುದಿಲ್ಲ. ಯಾಕೆ ಇದನ್ನಷ್ಟು ಒತ್ತಿ ಹೇಳುವುದೆಂದರೆ ಇಂದು ಸರಕಾರ ಹೊಂದುವ ತೆರಿಗೆ ಹಣದಲ್ಲಿ ಬಹುತೇಕ ಹಣ ನೌಕರರ ಸಂಬಳಕ್ಕೆ ಹೋಗುತ್ತಿದೆ. ಹಾಗಾಗಿ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಎನ್ನುವುದು ಹೇಗೆ ಗಮನಿಸಬೇಕಾದ ಸಂಗತಿಯೋ ಹಾಗೇ ನಡೆಯುವ ಕಾರ್ಯದಲ್ಲಿ ‘ಮಾಮೂಲಿ’ ಎಂದು ಶೇಕಡಾವಾರಿಗೆ ಕೈಯೊಡ್ಡುವ ಅನಧಿಕೃತ – ಅವ್ಯವಹಾರ ಕೂಡ ಕಾರಣವಾಗುತ್ತದೆ. ಕೊನೆಯದಾಗಿ ಹೇಳಲೇಬೇಕಾದ ಮಾತೆಂದರೆ ನಮ್ಮೆಲ್ಲ ಅಭಿವೃದ್ಧಿ ಕಾರ್ಯಗಳು ನಡೆಯುವುದು, ನೌಕರರಿಗೆ ಸಂಬಳ ಸೌಲಭ್ಯ ನೀಡುವುದು ಸಂಗ್ರಹಿತವಾದ ‘ತೆರಿಗೆ’ಯಿಂದ. ತೆರಿಗೆಯನ್ನು ಪ್ರಾಮಾಣಿಕವಾಗಿ ಪಾವತಿಸುವುದು ನಮ್ಮ ಹೆಮ್ಮೆಯಾಗಬೇಕೇ ವಿನಃ ಅದನ್ನು ತಪ್ಪಿಸಿಕೊಳ್ಳುವುದೇ ದೊಡ್ಡ ಹೆಮ್ಮೆ ಎಂದು ಭಾವಿಸುತ್ತಿರುವುದು ವರ್ತಮಾನದ ದುರಂತ. ಬಹಳಷ್ಟು ಜನರು ಅದನ್ನು ತಪ್ಪಿಸುವುದರತ್ತಲೇ ಲಕ್ಷ್ಯವಿರಿಸುತ್ತಾರೆ. ತೆರಿಗೆ ತಪ್ಪಿಸುವುದು ಅಪರಾಧ ಎಂಬ ಪ್ರಜ್ಞೆ ನಮ್ಮನ್ನು ಸದಾ ಕಾಡುತ್ತಿರಬೇಕಲ್ಲದೆ, ನಾವು ಪಡೆದದ್ದರಲ್ಲೇ ನೀಡುವ ಪಾಲು ಅದೇ ವಿನಃ ನಾವು ಹುಟ್ಟುತ್ತಲೇ ತಂದದ್ದೇನೂ ಇಲ್ಲ ಎಂಬುದು ಅನುಭಾವದ ಮಾತಾದರೂ ಒಂದು ರೀತಿಯ ‘ಅನುಭಾವ ತತ್ವ’ ಬದುಕಿಗೆ ಪ್ರಾಪ್ತವಾಗದೆ ‘ಹದ’ ಪ್ರಾಪ್ತವಾಗುವುದಿಲ್ಲ.
ರವೀಂದ್ರ ಭಟ್ ಕುಳಿಬೀಡು
ಬೈವೋಲ್ಟೀನ್ ತಳಿಯ ಗೂಡುಗಳನ್ನು ಗರಿಷ್ಠ ದರಕ್ಕೆ ಮಾರಾಟ ಮಾಡಿದ ರೈತ
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ ಉತ್ಪಾದನೆಯಲ್ಲಿ ಅವಿಭಜಿತ ಕೋಲಾರ ಜಿಲ್ಲೆ ಅಗ್ರಸ್ಥಾನವನ್ನು ಹೊಂದಿದ್ದರೂ ಸಹ ಬೈವೋಲ್ಟೀನ್ ತಳಿಯನ್ನು ಬೆಳೆಯಲು ರೈತರಿಗೆ ಸರ್ಕಾರ ಪ್ರೋತ್ಸಾಹಿಸಬೇಕೆಂದು ರೇಷ್ಮೆ ಬೆಳೆಗಾರರು ಹಾಗೂ ಬಿಜೆಪಿ ಮುಖಂಡ ಸಿ.ವಿ.ಲೋಕೇಶ್ಗೌಡ ಒತ್ತಾಯಿಸಿದರು.
ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಬೈವೋಲ್ಟೀನ್ ತಳಿಯ ಗೂಡುಗಳನ್ನು ಗರಿಷ್ಠ ೩೩೦ ರೂಗಳಿಗೆ ಮಾರಾಟ ಮಾಡಿ ಪ್ರಮಾಣಮತ್ರ ಸ್ವೀಕರಿಸಿ ಅವರು ಮಾತನಾಡಿದರು. ರೇಷ್ಮೆ ಉದ್ಯಮವನ್ನು ಅಭಿವೃದ್ಧಿಪಡಿಸಲು ಸರ್ಕಾರ ಮತ್ತು ರೇಷ್ಮೆ ಅಧಿಕಾರಿಗಳು ಬೈವೋಲ್ಟೀನ್ ತಳಿಯ ಗೂಡುಗಳನ್ನು ಬೆಳೆಸಬೇಕೆಂದು ಪ್ರೇರೇಪಿಸುತ್ತಿದ್ದಾರೆ. ಪ್ರತಿ ಕೆಜಿ ಗೂಡಿಗೆ ೫೦ ರೂಗಳು ಪ್ರೋತ್ಸಾಹ ದನವನ್ನು ಸರ್ಕಾರ ನೀಡುತ್ತಿದ್ದು ಅದನ್ನು ೧೦೦ ರೂಗಳಿಗೆ ಏರಿಸಬೇಕೆಂದು ಅವರು ಒತ್ತಾಯಿಸಿದರು.
ಮಿಶ್ರ ತಳಿಯ ಗೂಡು ಬೆಳೆಯಲು ಹಾಗೂ ಬೈವೋಲ್ಟೀನ್ ತಳಿಯ ಗೂಡುಗಳನ್ನು ಬೆಳೆಯಲು ತೀರಾ ವ್ಯತ್ಯಾಸವಿದೆ. ಹಾಗಾಗಿ ಶ್ರಮಕ್ಕೆ ತಕ್ಕಂತೆ ಬೈವೋಲ್ಟೀನ್ ತಳಿಯ ಗೂಡುಗಳನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹ ದೊರೆಯುತ್ತಿಲ್ಲ. ಸರ್ಕಾರ ಬಯಲು ಸೀಮೆಯ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಹಾಯಧನವನ್ನು ಹೆಚ್ಚಿಸಬೇಕೆಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೇಷ್ಮೆ ಸಹಾಯಕ ನಿರ್ದೇಶಕ ರತ್ನಯ್ಯಶೆಟ್ಟಿ,ಎಸ್.ಇ.ಓ ಆಂಜಿನೇಯರೆಡ್ಡಿ ಹಾಜರಿದ್ದರು.
ಜಂಗಮಕೋಟೆ ಪ್ರೌಢಶಾಲಾ ಆವರಣದಲ್ಲಿ ಜನಪದ ಉತ್ಸವ
ಜನಪದಕ್ಕೆ ಅಪಾರ ಶಕ್ತಿಯಿದ್ದು, ಬದುಕಿಗೆ ನಿರಂತರ ದಾರಿ ದೀಪವಾಗಿದೆ. ಜನಪದಕ್ಕೆ ಜನಮನ್ನಣೆಯೂ ಸಿಗುತ್ತಿದೆ. ಕಲಾವಿದರು ಆಳವಾಗಿ ತೊಡಗಿಸಿಕೊಂಡು ಕಲೆಯನ್ನು ಕರಗತ ಮಾಡಿಕೊಳ್ಳಬೇಕು ಎಂದು ನಾಡೋಜ ಪ್ರಶಸ್ತಿ ಪುರಸ್ಕೃತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಜಂಗಮಕೋಟೆ ಪ್ರೌಢಶಾಲಾ ಆವರಣದಲ್ಲಿ ಈಚೆಗೆ ನಡೆದ ‘ಜನಪದ ಉತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನಪದಕ್ಕೆ ಆದಿ ಮತ್ತು ಅಂತ್ಯವಿಲ್ಲ. ಜನಪದ ಸಾಮೂಹಿಕ ಬದುಕಿನ ಸೊಗಡನ್ನು ಬಿಂಬಿಸುತ್ತದೆ. ಜನಪದ ದೇಸಿಯ ಕಲೆಗಳು ಜೀವಂತವಾಗಿರಲು ಪ್ರೋತ್ಸಾಹ ಅತ್ಯಗತ್ಯ ಎಂದು ನುಡಿದರು.
ತಾಲ್ಲೂಕಿನ ಕಾಳನಾಯಕನಹಳ್ಳಿಯ ರತ್ನಾವಳಿ ನಾಟ್ಯ, ಕ್ರೀಡಾ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ಕೋಲಾಟ ಪ್ರದರ್ಶನ ಮತ್ತು ‘ಮಾಧ್ಯಮ ವ್ಯಾಯೋಗ’ ಪೌರಾಣಿಕ ನಾಟಕ ಪ್ರದರ್ಶಿಸಲಾಯಿತು. ವಿಶ್ವ ಸಾಂಸ್ಕೃತಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ‘ಜಾನಪದ ಗೀತೆಗಳ ಗಾಯನ’ ನಡೆಸಿಕೊಟ್ಟರೆ, ಪರಿವರ್ತನ ಪ್ರತಿಷ್ಠಾನ ಸಂಸ್ಥೆ ‘ಜಾನಪದ ನೃತ್ಯ’ವನ್ನು ಪ್ರದರ್ಶಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನಾರಾಯಣಮ್ಮ, ಎಂ.ಎಸ್.ಈರಯ್ಯ, ಜೆ.ಕೆ.ಮಂಜುನಾಥ್ ಮತ್ತಿತರರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಬಿಜೆಪಿ ಪಕ್ಷದ ಎಲ್.ಇ.ಡಿ. ವಾಹನಕ್ಕೆ ತಾಲ್ಲೂಕು ಬಿಜೆಪಿ ಮುಖಂಡರ ಸ್ವಾಗತ
ಶಿಡ್ಲಘಟ್ಟಕ್ಕೆ ಶುಕ್ರವಾರ ಆಗಮಿಸಿದ್ದ ಬಿಜೆಪಿ ಪಕ್ಷದ ಎಲ್.ಇ.ಡಿ. ವಾಹನವನ್ನು ತಾಲ್ಲೂಕು ಬಿಜೆಪಿ ಮುಖಂಡರು ಸ್ವಾಗತಿಸಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಂದ್ರಗೌಡ, ಜಿಲ್ಲಾ ಕಾರ್ಯದರ್ಶಿ ಬಳುವನಳ್ಳಿ ಲೋಕೇಶ್, ಉಪಾಧ್ಯಕ್ಷ ದಾಮೋದರ್, ಎ.ಎಂ.ತ್ಯಾಗರಾಜು, ನಂದೀಶ್, ಸುಜಾತಮ್ಮ, ಮಂಜುಳಮ್ಮ ಹಾಜರಿದ್ದರು.
ಜಂಗಮಕೋಟೆ ಸರ್ಕಾರಿ ಶಾಲೆಯಲ್ಲಿ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ
ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆಗ್ರಾಮದ ಸರ್ಕಾರಿ ಶಾಲೆಯಲ್ಲಿ ಈಚೆಗೆ ಆಯೋಜನೆ ಮಾಡಲಾಗಿದ್ದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸೈಕಲ್ಗಳನ್ನು ಶಾಸಕ ಎಂ.ರಾಜಣ್ಣ ವಿತರಣೆ ಮಾಡಿದರು. ಕ್ಷೇತ್ರದ ಶಿಕ್ಷಣಾಧಿಕಾರಿ ಎಸ್. ರಘುನಾಥರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷೆ ನಾರಾಯಣಮ್ಮ, ಉಪಾಧ್ಯಕ್ಷ ಜೆ.ಎಂ.ವೆಂಕಟೇಶ್, ಮಾಜಿ ಅಧ್ಯಕ್ಷ ಎಸ್.ನಜೀರ್ಅಹ್ಮದ್ ಹಾಜರಿದ್ದರು.
ಆಲೂಗಡ್ಡೆ ಜಂಪ್
ಬೇಕಾಗುವ ಸಾಮಗ್ರಿ:
2 ಆಲೂಗಡ್ಡೆ
2 ಎಸಳು ಬೆಳ್ಳುಳ್ಳಿ
1 ಟೀ ಸ್ಪೂನ್ ಓಂ ಕಾಳು
2 ಕಪ್ಪು ತೆಂಗಿನ ತುರಿ
4-6 ಒಣಮೆಣಸು
ಉಪ್ಪು
ಮಾಡುವ ವಿಧಾನ:
ಆಲೂಗೆಡ್ಡೆಯನ್ನು ಬೇಯಿಸಿ ಸಣ್ಣಕ್ಕೆ ನುರಿದು ಇಟ್ಟುಕೊಳ್ಳಿ.
ತೆಂಗಿನ ತುರಿ, ಬೆಳ್ಳುಳ್ಳಿ, ಓಂ ಕಾಳು, ಒಣಮೆಣಸು, ಉಪ್ಪು ಎಲ್ಲವನ್ನು ನುಣ್ಣಗೆ ರುಬ್ಬಿಕೊಳ್ಳಿ. ನಂತರ ಬಾಣಲೆಯಲ್ಲಿ 6 ಸ್ಪೂನ್ ಎಣ್ಣೆ ಹಾಕಿ ಅದು ಕಾದನಂತರ ಅದಕ್ಕೆ ರುಬ್ಬಿಟ್ಟ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ, ಇದಕ್ಕೆ ನುರಿದಿಟ್ಟ ಆಲೂವನ್ನು ಹಾಕಿ ನೀರು ಹಾಕಿ ಚೆನ್ನಾಗಿ ಕುದಿಸಿ. ಇದು ಇಡ್ಲಿ ಹಿಟ್ಟಿನ ಹದದಲ್ಲಿರಬೇಕು. ಇದನ್ನು ಅನ್ನಕ್ಕೆ ಹಾಕಿ ಕಲಸಿ ತಿನ್ನಬಹುದು ಅಲ್ಲದೇ ಚಪಾತಿಗೂ ಹಚ್ಚಿ ತಿನ್ನಬಹುದು.

