16.1 C
Sidlaghatta
Monday, December 29, 2025
Home Blog Page 995

ಇಂದಿನ ಯುವಕರು ನಾಳಿನ ಪ್ರಜೆಗಳು?

0

ಮಕ್ಕಳಿಗೆ ರಜೆ ಬಂತೆಂದರೆ ಖುಷಿಯೋ ಖುಷಿ, ಬೇಗ ಏಳಬೇಕೆಂದಿಲ್ಲ ಹೋಂವರ್ಕ್ ಮಾಡಬೇಕೆಂದಿಲ್ಲ, ಇದೀ ದಿನ ಆಟ ನೆಗೆದಾಡ ಜೊತೆಗೆ ತಿರುಗಾಟ.
ರಜೆಯಲ್ಲಿ ಎಲ್ಲಿಗೆ ತಿರುಗಾಟ ಎಂದು ನಾನು ನನ್ನ ಪತಿ ಸೇರಿ ಯೋಚಿಸಿ ಊಟಿಗೆ ಹೋಗುವುದೆಂದು ನಿರ್ಧರಿಸಿದೆವು. ನಾವಿಬ್ಬರೆ ಮಗಳ ಜೊತೆಗೆ ಹೋದರೆ ಚೆನ್ನಾಗಿರುವುದಿಲ್ಲ ಎಂದು ಯೋಚಿಸಿ ನನ್ನ ತಮ್ಮಂದಿರಿಬ್ಬರ ಕುಟುಂಬದೊಡಗೂಡಿ ಹೋಗುವುದೆಂದು ನಿರ್ಧರಿಸಿದೆವು. ಅಂತೂ ಎಲ್ಲರಿಗೂ ಸರಿಯಾಗುವ ದಿನ ಗೊತ್ತುಮಾಡಿಕೊಂಡು ಊಟಿಯ ಕಡೆ ಪ್ರಯಾಣ ಬೆಳೆಸಿದೆವು.
ಮಕ್ಕಳ ಖುಷಿಗಾಗಿ ಊಟಿಯಿಂದ ಕೂನೂರಿಗೆ ನಾವೆಲ್ಲರೂ ಟ್ರೈನ್ ನಲ್ಲಿ ಹೋದೆವು. ಮಳೆಯಲ್ಲಿಯೇ ಪ್ರಕೃತಿಯನ್ನು ಆಸ್ವಾದಿಸುತ್ತಾ ಟೀ ಎಸ್ಟೇಟ್, ಗುಡ್ಡಗಾಡುಗಳನ್ನು ನೋಡುತ್ತಾ ಮಕ್ಕಳ ಕೇಕೆಯನ್ನು ಕೇಳುತ್ತಾ ಎರಡು ಗಂಟೆಯ ನಂತರ ಅದೇ ಟ್ರೈನ್ ನಲ್ಲಿ ಊಟಿಗೆ ವಾಪಾಸಾದೆವು.
ಮಾರನೆ ದಿನ ಊಟಿಯಲ್ಲಿರು ಸ್ಥಳಗಳನ್ನು ಒಂದೊಂದಾಗಿ ನೋಡುತ್ತಾ ಬಟಾನಿಕಲ್ ಗಾರ್ಡನ್ ಗೆ ಬಂದೆವು. ಆಹಾ! ಅದೆಷ್ಟು ಸುಂದರ ಪುಷ್ಪಗಳು, ಹಸಿರು ಹಸಿರಾಗಿ ಬೆಳೆದಿರುವ ಹುಲ್ಲುಗಳು, (Lawn) ಅದಕ್ಕೆ ಚೆಂದವಾಗಿ ಆಕಾರ ಕೊಟ್ಟ ರೀತಿ ನಯನ ಮನೋಹರ.
ಇಷ್ಟೆಲ್ಲ ಸೌಂದರ್ಯ ಆಸ್ವಾದನೆಯ ಮಧ್ಯೆ ದೃಷ್ಟಿ ಬೊಟ್ಟಿನಂತೆ ಒಂದು ಅಂಗಡಿ ಕಣ್ಣಿಗೆ ಬಿತ್ತು. ತಿನ್ನುವ ವಸ್ತುವಿನ ಅಂಗಡಿ ನೋಡಿದೊಡನೆ ಎಲ್ಲರಿಗೂ ಹೊಟ್ಟೆಯ ನೆನಪಾಯಿತು. ಅಂತ ಚಳಿಯಲ್ಲಿಯೂ ಐಸ್ ಕ್ರೀಮ್ ಪೋತ ನನ್ನ ತಮ್ಮ ಐಸ್ ಕ್ರೀಮ್ ತೆಗೆದುಕೊಂಡು ತಿಂದನು, ಅಲ್ಲದೆ ಯಾರು ಯಾರಿಗೆ ಏನೇನು ಬೇಕೋ ಎಲ್ಲರೂ ತಿಂದೆವು.
ನಮ್ಮಂತೆ ಅನೇಕರು ಅಲ್ಲಿಗೆ ಬಂದಿದ್ದರು. ಅಲ್ಲಿ ಒಬ್ಬ ಹುಡುಗ ಐಸ್ ಕ್ರೀಮ್ ತೆಗೆದುಕೊಂಡು ಅದರ ಕಾಗದವನ್ನು ತೆಗೆದು ಕೆಳಗೆ ಎಸೆದ. ಅಲ್ಲಿಯೇ ಪಕ್ಕದಲ್ಲಿ “USE Me”  ಎಂದು ಫಲಕ ಹೊತ್ತ ಡಬ್ಬ ನಿಂತಿದ್ದರೂ ಅಲ್ಲಿ ಹಾಕದೆ ಕೆಳಗೆ ಬಿಸಾಡಿದ್ದ. ನನಗೆ ಅದನ್ನು ನೋಡಿ ಸುಮ್ಮನಿರಲಾಗಲಿಲ್ಲ. ನಾನು ಆ ಹುಡುಗನಿಗೆ ಹೇಳಿದೆ “ಯಾಕೆ ಹಾಗೆ ಕೆಳಗೆ ಬಿಸಾಡುತ್ತೀರಿ ಇಲ್ಲೆ ಕಸದ ಡಬ್ಬಿ ಇದೆ ಹಾಕಿ” ಎಂದು. ಎಲ್ಲರ ಎದುರಿಗೆ ನಾನು ಹೇಳಿದ್ದಕ್ಕೆ ಸ್ವಲ್ಪ ನಾಚಿಕಯಾಗಿಯೋ ಅಥವಾ ಆತನಿಗೆ ಹೌದು ಅನಿನಿಸಿತೋ ಗೊತ್ತಿಲ್ಲ, ನಗುತ್ತಾ ಅದನ್ನು ಎತ್ತಿ ಡಬ್ಬದೊಳಗೆ ಹಾಕಿ ಸ್ವಲ್ಪ ಮುಂದೆ ಹೋಗಿ ಮರದ ಕೆಳಗೆ ತಿನ್ನುತ್ತಾ ನಿಂತ. ನಾವೂ ಎಲ್ಲರೂ ಅಂಗಡಿಯವನಿಗೆ ದುಡ್ಡು ಕೊಟ್ಟು ಮುಂದೆ ಹೊರಟೆವು.
ಹೀಗೆ ಮುಂದೆ ಹೋಗುತ್ತಿದ್ದಾಗ ಯಾಕೋ ಹಿಂದೆ ನೋಡಬೇಕು ಎನ್ನಿಸಿ ತಿರುಗಿ ನೋಡಿದೆ. ಅದೇ ಹುಡುಗ ಅದೇ ಅಂಗಡಿಯ ಹತ್ತಿರ ಐಸ್ ಕ್ರೀಮ್ ನ ತುದಿಯ ಕಾಗದವನ್ನು ನಾನು ನೋಡುತ್ತಿರುವಾಗಲೇ ನಗುತ್ತಾ ಕೆಳಗೆ ಬಿಸಾಡಿದ. ನಾನು ಹಿಂತಿರುಗಿ ಬರಲಾರದೇ ಹೋದೆ. ದೂರವೂ ಹೋಗಿದ್ದೆ, ಮೇಲಿಂದ ಹಿಂತಿರುಗಿ ಬಂದು ಹೇಳುವಷ್ಟು ಧೈರ್ಯ ಇರಲಿಲ್ಲವೋ ಅಥವಾ ನಾನು ಹೊರಟರೆ ನನ್ನ ಪತಿ, ತಮ್ಮಂದಿರು ಬೈಯುತ್ತಾರೆನೋ ಎನ್ನುವ ಭಯವೋ ಗೊತ್ತಾಗದೆ ತುಂಬಾ ನೋವಿನಿಂದ ಮುಂದೆ ನಡೆದೆ.
ತುಂಬಾ ದು:ಖ ಉದಾಸಿನತೆಯಿಂದ ನಾನು ಆ ಉದ್ಯಾನವನದಿಂದ ಹೊರಬಂದೆ. ಅಲ್ಲೆ ಹತ್ತಿರದಲ್ಲೆ ಇದ್ದಿದ್ದರೆ ಖಂಡಿತವಾಗಿ ನಾನೇ ಅವನ ಎದುರಿಗೇ ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕಿ ಬರುತ್ತಿದೆ. ಆದರೆ ಈಗ ಅನ್ನಿಸುತ್ತದೆ ನನಗೆ ನಾನು ತಿರುಗಿ ಹೋಗಿ ಆತನಿಗೆ ಏನು ಹೇಳದೆ ಆ ಕಾಗದವನ್ನು ಅವನ ಎದುರಿಗೆ ನಾನೇ ತೆಗೆದು ಕಸದ ಬುಟ್ಟಿಗೆ ಹಾಕಿ ಬರಬೇಕಿತ್ತು ಎಂದು. ಆ ಸಮಯದಲ್ಲಿ ಯಾಕೆ ಹಾಗೆ ಹೊಳೆಯಲಿಲ್ಲ ನನಗೆ ತಿಳಿಯದು.
ಯಾಕೆ ಹೀಗೆ? ನಾನು ಹೇಳಿದ್ದಾದರೂ ಏನೂ? ಅಷ್ಟು ಹೇಳಿದ್ದಕ್ಕೆ ಸ್ವಾಭಿಮಾನಕ್ಕೆ ಧಕ್ಕೆ ಬಂತಾ! ಆ ಹುಡುಗನಿಗೆ? ಆ ನಗು! “ನೀನೇನು ಹೇಳೋದು ನನಗೆ” ಎನ್ನುವಂತೆ ಕುಕ್ಕುತ್ತಿತ್ತು!. ಆತನೇ ಒಮ್ಮೆ ಯೋಚಿಸದಾದನಾ? ತಾನು ಮಾಡಿದ್ದು ತಪ್ಪು ಎಂದು. ಯೋಚಿಸುವ ವ್ಯವಧಾನ ಎಲ್ಲಿರಬೇಕು? ಎಲ್ಲರ ಎದುರಿಗೆ ಹಾಗೆ ಹೇಳಿದ್ದೇ ಎನ್ನುವುದೊಂದೇ ಮುಖ್ಯವಾಯಿತು ಆತನಿಗೆ. ಈಗಿನ ಹುಡುಗರ ಯೋಚನೆ “ಯಾರೂ ಏನು ಹೇಳುವ ಅವಶ್ಯಕತೆ ಇಲ್ಲ ತನಗೆಲ್ಲಾ ಗೊತ್ತು” ಎನ್ನುವ ಪೊಳ್ಳು ಅಹಾಂ!! ಗೊತ್ತಿಲ್ಲ!.
“ಇಂದಿನ ಯುವಕರು ನಾಳಿನ ಪ್ರಜೆಗಳು” ಎನ್ನುವುದಕ್ಕೆ ಅರ್ಥವೇ ಇಲ್ಲವಾ! ಎಲ್ಲಿಗೆ ಹೋಗುತ್ತಿದ್ದೇವೆ ನಾವು? ಏನು ಮಾಡುತ್ತಿದ್ದೇವೆ? ಸರಿಯಾ? ತಪ್ಪಾ? ಎನ್ನವು ಪರಿಕಲ್ಪನೆಯೇ ಇಲ್ಲವಾ? ಮೋದಿಯ ಅಲೆ, ದೇಶದ ತುಂಬೆಲ್ಲಾ! ಸ್ವಚ್ಛತೆಯ ಅಭಿಯಾನ!. ಸ್ವಚ್ಛ ಮಾಡುವುದು ಒತ್ತಟ್ಟಿಗಿರಲಿ, ಮಾಡಿಟ್ಟ ಸ್ವಚ್ಛತೆಯನ್ನು ಉಳಿಸಿಕೊಂಡು ಹೋಗುವ ಮನಸ್ಸತ್ವವಾದರೂ ಬೇಡವಾ? ಈ ರೀತಿ ವರ್ತನೆಯಾ ನಾಳಿನ ಪ್ರಜೆಗಳದ್ದು!?.
ದೇಶದೆಡೆಗೆ ನಮ್ಮೆಲ್ಲರಿಗೂ ನಮ್ಮದೇ ಆದ ಕರ್ತವ್ಯ ಇಲ್ಲವಾ? ಯಾವುದೇ ಜವಾಬ್ದಾರಿಯನ್ನು ಹೊರದೆ ಎಲ್ಲವನ್ನೂ ಬೇರೆಯವರ ಅಥವಾ ಸರ್ಕಾರದ ತಲೆಗೆ ಕಟ್ಟಿದರೆ ಹೇಗೆ? ಎಲ್ಲರೂ ಅವರವರ ಕರ್ತವ್ಯವೇನು ಅದನ್ನು ಹೇಗೆ ನಿಭಾಯಿಸಿಕೊಂಡು ಹೋಗಬೇಕು ಎನ್ನುವುದನ್ನೂ ಸರಿಯಾಗಿ ಅರಿತರೆ ಎಲ್ಲವೂ ಸರಿಯಾಗಿರುತ್ತದೇನೋ.
ಯಾರು ಯಾರಿಗೆ ಏನೇನು ಹೇಳುವುದು? ಇದು ಹೇಳಿ ಕೇಳಿ ಬರುವಂತಹದ್ದಲ್ಲ. ಸ್ವತ: ಅವರಿಗೆ ಇದು ತಪ್ಪು ಇದು ಸರಿ ಎಂದು ಮನವರಿಕೆಯಾಗಬೇಕು ಅಥವಾ ಮನವರಿಕೆಯಾಗುವಂತೆ ಮಾಡಬೇಕು. ಅದೇ ಆಗದ ಹೊರತು ಯಾವುದೂ ಬದಲಾವಣೆಯಾಗಲಾರದು. ಆ ದಿನ ಎಂದಿಗೆ ಬರುತ್ತದೋ ಕಾದು ನೋಡಬೇಕು ಅಲ್ಲವೇ?
– ರಚನ

ಆರು ಹಳ್ಳಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

0

ತಾಲ್ಲೂಕಿನ ಹಂಡಿಗನಾಳ ಮತ್ತು ಅಬ್ಲೂಡು ಗ್ರಾಮ ಪಂಚಾಯತಿ ವ್ಯಾಪ್ತಿಯ ಆರು ಹಳ್ಳಿಗಳಲ್ಲಿ ಮಂಗಳವಾರ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ಶಾಸಕ ಎಂ.ರಾಜಣ್ಣ ನೆರವೇರಿಸಿದರು.
ತಾಲ್ಲೂಕಿನ ಹನುಮಂತಪುರ ಗ್ರಾಮದಲ್ಲಿ ಪರಿಶಿಷ್ಠ ಜಾತಿಯವರ ಕಾಲೋನಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು ಆರೂವರೆ ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ, ತಾತಹಳ್ಳಿ ಗ್ರಾಮದಲ್ಲಿ ತಲಾ ಆರು ಲಕ್ಷ ರೂಪಾಯಿಗಳ ಎರಡು ಕಾಮಗಾರಿಗಳು, ಚಾಗೆ ಗ್ರಾಮದಲ್ಲಿ ಆರೂ ಕಾಲು ಲಕ್ಷ ರುಪಾಯಿಗಳ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿ, ಶೆಟ್ಟಹಳ್ಳಿಯಲ್ಲಿ ತಲಾ ಐದು ಲಕ್ಷ ರೂಗಳ ಎರಡು ರಸ್ತೆ ಕಾಮಗಾರಿಗಳ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.
‘ಶೆಟ್ಟಹಳ್ಳಿ ಮತ್ತು ಮಲ್ಲಹಳ್ಳಿ ರಸ್ತೆಯು ಸುಮಾರು ಹದಿನೈದು ವರ್ಷಗಳಿಂದ ಹದಗೆಟ್ಟು ಈ ಭಾಗದ ಜನರು ಈ ಬಗ್ಗೆ ದೂರುತ್ತಿದ್ದರು. ಈ ರಸ್ತೆಯನ್ನು ಅಭಿವೃದ್ಧಿಪಡಿಸಲು ಸುಮಾರು 60 ಲಕ್ಷ, ನೀರಿನ ಟ್ಯಾಂಕ್ ನಿರ್ಮಾಣ ಸೇರಿದಂತೆ ಒಂದು ಕೋಟಿಗೂ ಹೆಚ್ಚಿನ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ವ್ಯಯಿಸುತ್ತಿದ್ದು, ಗುಣಮಟ್ಟದ ಕಾಮಗಾರಿಗೆ ಒತ್ತುನೀಡಬೇಕು’ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ಅಬ್ಲೂಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕನಕಪ್ರಸಾದ್, ಮುನಿವೆಂಕಟಸ್ವಾಮಪ್ಪ, ಎ.ಶ್ರೀರಾಮಪ್ಪ, ಕವಿತಾ ಮಂಜುನಾಥ, ನಾರಾಯಣಸ್ವಾಮಿ, ಸೂರ್ಯನಾರಾಯಣಗೌಡ, ರಮೇಶ್, ಚನ್ನರಾಯಪ್ಪ, ರಾಜಶೇಖರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ದಂತ ಧಾವನ

0

ಪಶ್ಚ್ಯಾತ್ಯೀಕರಣವೇ ಪ್ರಾಧಾನ್ಯವಾಗಿರುವ ಇಂದಿನ ದಿನಗಳಲ್ಲಿ ಮುಂಜಾನೆ ಏಳುವುದರಿಂದ ರಾತ್ರಿ ಮಲಗುವವರೆಗೆ ನಿತ್ಯ ಬಳಕೆಯಲ್ಲಿ ಉಪಯೋಗಿಸುವ ಪ್ರತಿಯೊಂದು ವಸ್ತುವೂ ಕೂಡ ವಿದೇಶೀಮಯವಾದುದಾಗಿದೆ. ಮುಂಜಾನೆ ಹಲ್ಲುಜ್ಜಲು ಬಳಸುವ ಬ್ರಷ್, ಪೇಸ್ಟ್‍ಗಳಿಂದ ರಾತ್ರಿ ಮಲಗುವಾಗ ಸೊಳ್ಳೆಗಳನ್ನು ದೂರವಿಡಲು ಬಳಸುವ ಗುಡ್‍ನೈಟ್ ಮ್ಯಾಟ್‍ಗಳವರೆಗೆ ಎಲ್ಲವೂ ಪಾಶ್ಚ್ಯಾತ್ಯ ವಸ್ತುಗಳು. ಸುಂದರ ದಂತಪಂಕ್ತಿಗಳನ್ನೊಳಗೊಂಡ ಸ್ತ್ರೀ, ಪುರುಷರನ್ನು ದೃಶ್ಯ ಮಾಧ್ಯಮಗಳಲ್ಲಿ, ಜಾಹೀರಾತುಗಳಲ್ಲಿ ನೋಡಿದ ತಕ್ಷಣ ಮಾರನೆಯ ದಿನವೇ ಅವರು ಆ ಜಾಹೀರಾತುಗಳಲ್ಲಿ ಬಳಸಿದ ಬ್ರಷ್‍ಗಳು ನಮ್ಮ ಮನೆಯನ್ನು ಅಲಂಕರಿಸುತ್ತವೆ.
ಆಯುರ್ವೇದ ಗ್ರಂಥಗಳಲ್ಲಿ ಹಲ್ಲುಜ್ಜುವುದರ ಬಗ್ಗೆ, ಅದಕ್ಕಾಗಿ ಬಳಸುವ ಬ್ರಷ್, ಪೇಸ್ಟ್ ಗಳ ಬಗ್ಗೆ ಆಚಾರ್ಯರು ಏನನ್ನು ವಿವರಿಸಿದ್ದಾರೆ ಎನ್ನುವುದನ್ನು ತಿಳಿಯೋಣ.
ಬ್ರಷ್ ಹೇಗಿರಬೇಕು?
ಮುಂಜಾನೆ ಎದ್ದ ನಂತರ ಶೌಚ ಕಾರ್ಯಗಳನ್ನು ಮುಗಿಸಿ ಹಲ್ಲುಜ್ಜುವುದು ಒಂದು ಕ್ರಿಯೆ. ಆಯುರ್ವೇದದಲ್ಲಿ ಆಚಾರ್ಯರು ದಂತ ಧಾವನಕ್ಕೆ ಸಿಹಿ, ಒಗರು, ಖಾರ ಹಾಗೂ ಕಹಿರಸ ಪ್ರಾಧಾನ್ಯತೆಯುಳ್ಳ ವೃಕ್ಷಗಳ ಕಾಂಡಗಳನ್ನು ಬಳಸಲು ಹೇಳಿರುತ್ತಾರೆ. ಬೇವು, ಅಣಲೆವೃಕ್ಷ, ಉತ್ತರಾಣಿ, ಹೊಂಗೆ, ಅರಳೀವೃಕ್ಷ, ಮತ್ತಿ, ಕರವೀರ, ಎಕ್ಕೆ ಇತ್ಯಾದಿ ವೃಕ್ಷಗಳ ಕಾಂಡಗಳು ಅಥವಾ ದಂಟುಗಳನ್ನು ದಂತ ಧಾವನಕ್ಕೆ ಬಳಸಬಹುದಾಗಿದೆ. ಈ ದಂಟುಗಳು 12 ಅಂಗುಲಗಳಷ್ಟು ಉದ್ದವಿರಬೇಕು. ಕಿರು ಬೆರಳಿನಷ್ಟು ದಪ್ಪವಾಗಿರಬೇಕು, ನೇರವಾಗಿರಬೇಕು. ಗಂಟುಗಳಿಂದ ಹಾಗೂ ವ್ರಣಗಳಿಂದ ಕೂಡಿರಬಾರದು. ತುಸು ಮೃದುವಾಗಿರಬೇಕು. ತುದಿಗಳನ್ನು ಹಲ್ಲುಗಳಿಂದ ಅಗಿದು ಬ್ರಷ್‍ನ ಆಕಾರದಲ್ಲಿ ಮಾಡಿಕೊಳ್ಳಬೇಕು.
ಹಲ್ಲುಜ್ಜುವ ವಿಧಾನ
ವಸಡುಗಳಿಗೆ ನೋವಾಗದ ರೀತಿಯಲ್ಲಿ ಉಜ್ಜಬೇಕು. ಒಂದೊಂದೇ ಹಲ್ಲುಗಳನ್ನು ಉಜ್ಜುವುದು, ಕೆಳಗಿನ ದಂತ ಪಂಕ್ತಿಗಳನ್ನು ಮೊದಲು ಉಜ್ಜಬೇಕು.
ಹಲ್ಲುಜ್ಜಲು ಬಳಸುವ ಪದಾರ್ಥಗಳು
ಜೇನುತುಪ್ಪ, ಹಿಪ್ಪಲಿ, ಕಾಳುಮೆಣಸು, ಶುಂಠಿ, ಅಣಲೆಕಾಯಿ, ತಾರೆಕಾಯಿ, ನೆಲ್ಲಿಕಾಯಿ, ಎಣ್ಣೆ, ಸೈಂಧವ ಲವಣ, ತೇಜೋಮತಿ ಚೂರ್ಣದಿಂದ ಕೂಡ ಹಲ್ಲುಗಳನ್ನು ಉಜ್ಜಬಹುದು.
ದಂತ ಧಾವನದ ಉಪಯೋಗಗಳು
ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವುದು, ಹಲ್ಲುಗಳ ಮೇಲೆ, ಸಂದುಗಳಲ್ಲಿ ಶೇಖರವಾಗಿರುವ ಕಿಟ್ಟ ಪದಾರ್ಥಗಳನ್ನು ಶುಚಿಗೊಳಿಸುವುದು, ಬಾಯಿಯಲ್ಲಿ ಗಂಟಲಿನಲ್ಲಿ ಸಂಗ್ರಹವಾಗಿರುವ ಕಫವನ್ನು ನಿರ್ಹರಣ ಮಾಡುವುದು, ಬಾಯಿಯನ್ನು ಸ್ವಚ್ಛಗೊಳಿಸುವುದು, ಬಾಯಿಯ ರುಚಿಯನ್ನು ಹೆಚ್ಚಿಸುವುದು, ಮನಸ್ಸಿಗೆ ಆಹ್ಲಾದವನ್ನುಂಟುಮಾಡುವುದು. ಕಹಿಬೇವು, ಅಣಲೆಕಾಯಿ ಈ ವೃಕ್ಷಗಳ ದಂಟುಗಳನ್ನು ಬಳಸುವುದರಿಂದ ಈ ವೃಕ್ಷಗಳು ಕ್ರಿಮಿನಾಶಕಗಳಾದುದರಿಂದ ಗಂಟಲಿನ ಸಂಬಂಧಿ ಹಲವು ರೋಗಗಳ ಶಮನಕ್ಕೆ ಸಹಾಯಕ.
ಗ್ರೀಷ್ಮ ಹಾಗೂ ಶರದ್ ಋತುಗಳಲ್ಲಿ ಶೀತ ಜಲದಿಂದ ಬಾಯಿ ಮುಕ್ಕಳಿಸಬೇಕು. ಇತರೆ ಋತುಗಳಲ್ಲಿ (ವರ್ಷಾ, ಹೇಮಂತ, ಶಿಶಿರ, ವಸಂತ) ಉಷ್ಣಜಲದಿಂದ ಬಾಯಿ ಮುಕ್ಕಳಿಸಬೇಕು.
ಡಿ.ವಿ.ಜಿ ಯವರು ತಮ್ಮ “ಮಂಕು ತಿಮ್ಮನ ಕಗ್ಗ”ದಲ್ಲಿ ಈ ರೀತಿ ಹೇಳಿದ್ದಾರೆ.
ಸೊಗಸು ಬೇಡದ ನರಪ್ರಾಣಿಯೆಲ್ಲಿಹುದಯ್ಯ?
ಮಗುವೆ, ಮುದುಕನೆ, ಪುರಾಣಿಕ, ಪುರೋಹಿತರೇ?
ಜಗದ ಕಣ್ಣಿಣಿಕದೆಡೆ ಮುಕುರದೆದುರೊಳು ನಿಂತು
ಮೊಗವ ತದ್ದುವರಲ್ಲ ಮಂಕುತಿಮ್ಮ.
ಸೌಂದರ್ಯವನ್ನು ಬೇಡ ಎನ್ನುವವರು ಸೌಂದರ್ಯದ ಆರಾಧಕರಲ್ಲದವರು ಯಾರೂ ಜಗತ್ತಿನಲ್ಲಿ ಕಾಣ ಸಿಗುವುದಿಲ್ಲ ಚಿಕ್ಕ ಮಕ್ಕಳಿಂದ, ಮುದುಕರವರೆಗೂ ಎಲ್ಲರಿಗೂ ಸೌಂದರ್ಯ ಒಂದು ಆಸ್ವಾದನೆಯ ವಿಷಯ. ಆಯುರ್ವೇದದಲ್ಲಿ ವಿವರಿಸಿರುವ ಕೆಲವೊಂದು ನೀತಿಗಳನ್ನು ನಮ್ಮಲ್ಲಿ ಅನುಷ್ಠಾನಗೊಳಿಸುವುದರಿಂದ ನಾವೂ ಸುಂದರ ಹಾಗೂ ಸುದೃಢ ದೇಹವನ್ನು ಹೊಂದಬಹುದು, ಮೇಲೆ ವಿವರಿಸಿದ ದಂತ ಧಾವನದ ವಸ್ತುಗಳನ್ನು ಬಳಸಿ ಸುಂದರ ದಂತ ಪಂಕ್ತಿಗಳ ಒಡೆಯರಾಗೋಣ ಅಲ್ಲವೇ?
ಡಾ. ನಾಗಶ್ರೀ.ಕೆ.ಎಸ್.

ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ

0

ಗ್ರಾಮೀಣ ಪ್ರದೇಶಗಳಲ್ಲಿ ಮಾಡಲಾಗುತ್ತಿರುವ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ನಾಗರೀಕರು ಯಾವುದೇ ಕಾರಣಕ್ಕೂ ಕಾಮಗಾರಿಗಳ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರ ಅನುದಾನ ಹಾಗು ಶಾಸಕರ ಅನುದಾನದಲ್ಲಿ ಕೈಗೊಳ್ಳಲಾಗಿದ್ದ ರಸ್ತೆ ಕಾಮಗಾರಿಗೆ ಭಾನುವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಧೀನದಲ್ಲಿ ತಾಲೂಕಿನಾದ್ಯಂತ ಸುಮಾರು ೯೦ ಗ್ರಾಮಗಳಲ್ಲಿ ಆರ್ಸಿಸಿ ರಸ್ತೆಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಿದ್ದು ಅದೇ ನಿಟ್ಟಿನಲ್ಲಿ ವೈ.ಹುಣಸೇನಹಳ್ಳಿ ಗ್ರಾಮದಲ್ಲಿ ರಸ್ತೆ ಡಾಂಬರೀಕರಣ ಮಾಡಲು ಸುಮಾರು ೪.೫ ಲಕ್ಷ ರೂ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದೆ ಎಂದರು.
ರಕ್ತದಾನ ಶಿಬಿರದಲ್ಲಿ 210 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾರಾಜಣ್ಣ, ಕೋಚಿಮುಲ್ ನಿರ್ದೇಶಕ ಬಂಕ್ಮುನಿಯಪ್ಪ, ಪಿಎಲ್ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಸೂರ್ಯನಾರಾಯಣಗೌಡ, ರಮೇಶ್, ಲಕ್ಮೀಪತಿ, ಕೊತ್ತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್, ಸಿ.ನಾರಾಯಣಸ್ವಾಮಿ, ಸುಬ್ರಮಣಿ, ರಾಘವೇಂದ್ರ, ಮುನಿಯಪ್ಪ, ರಾಜಪ್ಪ, ಆಂಜಿನಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಮುಸ್ಲಿಂ ಜನಾಂಗದ ಯುವಕರು ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘನೀಯ

0

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಸೋಮವಾರ ಭಾರತೀಯ ರೆಡ್ಕ್ರಾಸ್ ಸೊಸೈಟಿ, ಹಾಗೂ ಯೂನಿಟಿ ಸಿಲ್ಸಿಲಾ ಕಮಿಟಿಯಿಂದ ಮಹಮದ್ ಪೈಗಂಭರ್ ಅವರ ಜನ್ಮದಿನದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಉಚಿತ ರಕ್ತದಾನ ಶಿಬಿರವನ್ನು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ,‘ಪಟ್ಟಣದಲ್ಲಿ ಮೊದಲ ಬಾರಿಗೆ ಮುಸ್ಲಿಂ ಜನಾಂಗದ ಯುವಕರು ರಕ್ತದಾನಕ್ಕೆ ಮುಂದಾಗಿರುವುದು ಶ್ಲಾಘನೀಯ. ನಾಗರೀಕರು ೫೦೦ ರೂಪಾಯಿಗಳನ್ನು ಸಂದಾಯ ಮಾಡಿ ರೆಡ್ಕ್ರಾಸ್ ಸೊಸೈಟಿಯ ಅಜೀವ ಸದಸ್ಯತ್ವವನ್ನು ಪಡೆದು ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಪ್ರತಿವರ್ಷವೂ ಈದ್-ಮೀಲಾದ್ ಹಬ್ಬದ ಸಂದರ್ಭದಲ್ಲಿ ಸ್ವಯಂ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ನೆರವಾಗಬೇಕು’ ಎಂದು ಯುವಕರಿಗೆ ಕರೆ ನೀಡಿದರು.
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗಣಪತಿ ಸಾಕರೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗುರುರಾಜ್, ಕಾರ್ಯದರ್ಶಿ ಅಕ್ಕಲರೆಡ್ಡಿ, ಮಹಮದ್ಖಾಸಿಂ, ಮುನಿಕೃಷ್ಣ, ಮಹಮದ್ಅಸದ್, ಸಮೀರ್, ಅಕ್ರಮ್ಪಾಷಾ, ಷಂಷದ್, ರೆಹಮತ್, ತೌಫಿರ್, ಅಮೀರ್, ಅನ್ಸರ್, ಸೈಯದ್ಮುಸೀರ್, ಇಂತಿಯಾಜ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತನೆ ಮಾಡಿ – ಎಂ.ರಾಜಣ್ಣ

0

ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಹನೆಯಿಂದ ವರ್ತನೆ ಮಾಡಿ ಅವರ ಕೆಲಸ ಕಾರ್ಯಗಳನ್ನು ನಿಗದಿತ ಸಮಯದಲ್ಲಿ ಮಾಡಿಕೊಡುವಂತೆ ಶಾಸಕ ಎಂ.ರಾಜಣ್ಣ ಸೂಚಿಸಿದರು.
ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ಅವರು ನಡೆಸಿ ಮಾತನಾಡಿದರು. ಅಧಿಕಾರಿಗಳು ನಾಗರಿಕರೊಂದಿಗೆ ಸೌಜನ್ಯದಿಂದ ವರ್ತನೆ ಮಾಡುತ್ತಿಲ್ಲ. ವಿನಾಕಾರಣ ತಾಲ್ಲೂಕು ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಕೆಲಸಗಳಾಗುತ್ತಿಲ್ಲವೆಂಬ ದೂರುಗಳು ಸಾರ್ವಜನಿಕರಿಂದ ಬರಬಾರದು ಎಂದು ಹೇಳಿದರು.
ತಾಲ್ಲೂಕಿನಲ್ಲಿ ಬಹಳಷ್ಟು ಮಂದಿ ವೃದ್ದರು ವೃದ್ದಾಪ್ಯ ವೇತನ, ಸಂದ್ಯಾ ಸುರಕ್ಷಾ ವೇತನಗಳು ಸ್ಥಗಿತವಾಗಿದ್ದು, ಬಹಳಷ್ಟು ಪರದಾಡುತ್ತಿದ್ದಾರೆ, ಸ್ಥಗಿತವಾಗಿರುವ ಫಲಾನುಭವಿಗಳನ್ನು ಪಟ್ಟಿಗಳನ್ನು ಗ್ರಾಮಲೆಕ್ಕಾಧಿಕಾರಿಗಳ ಮುಖಾಂತರ ತಯಾರಿಸಿ ವೃದ್ಧರಿಗೆ ಅನುಕೂಲ ಮಾಡಿಕೊಡುವಂತೆ ತಹಶೀಲ್ದಾರರಿಗೆ ತಿಳಿಸಿದರು.
ಕಂಪ್ಯೂಟರ್ ಕೊಠಡಿಯಲ್ಲಿ ಅಕ್ರಮವಾಗಿ ಫಹಣಿಗಳಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಲಾಗುತ್ತಿದೆ ಎನ್ನುವ ದೂರುಗಳು ಬರುತ್ತಿವೆ. ಇಂತಹ ವಿಚಾರಗಳಲ್ಲಿ ಸಂಬಂಧಪಟ್ಟ ರಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಗಮನಹರಿಸಬೇಕು. ನ್ಯಾಯಾಲಯಗಳಲ್ಲಿದ್ದರೆ, ವಿಳಂಬವಾಗುವ ಬಗ್ಗೆ ನಾಗರೀಕರಿಗೆ ಮನವರಿಕೆ ಮಾಡಿಕೊಡಿ, ಭೂ ಮಾಪನ ಇಲಾಖೆಯಲ್ಲಿಯೂ ಕೂಡಾ ಅರ್ಜಿಗಳು ಬಂದಾಗ ಅರ್ಜಿದಾರರಿಗೆ ಯಾವಾಗ ಭೂಮಿಯನ್ನು ಅಳತೆ ಮಾಡಲಾಗುತ್ತದೆ ಎನ್ನುವ ಬಗ್ಗೆಯೂ ಸ್ಪಷ್ಟವಾಗಿ ತಿಳುವಳಿಕೆ ಹೇಳಿ ವಿನಾಕಾರಣ ಅಲೆದಾಡಿಸಬೇಡಿ ಎಂದರು.
ರೆಕಾರ್ಡ್ ವಿಭಾಗದಲ್ಲಿ ರಾತ್ರಿಯ ವೇಳೆಯಲ್ಲಿ ಪ್ರಭಾವಿಗಳು, ಅನಾಮಧೇಯ ವ್ಯಕ್ತಿಗಳು ಬಂದು ಕಡತಗಳನ್ನು ಹುಡುಕಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ, ಬಡವರ ಮೂಲ ಕಡತಗಳನ್ನು ಕಬಳಿಸಿಕೊಂಡು ಹೋದರೆ ಯಾರು ಹೋಣೆ ಎಂದು ಶಾಸಕರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಭೂ ಮಾಪನ ಇಲಾಖೆಯ ಪರಿವೀಕ್ಷಕರು ಮಾತನಾಡಿ, ಅಳತೆ ಕಾರ್ಯದ ಬಗ್ಗೆ ಬಂದಿರುವ ಎಲ್ಲಾ ಅರ್ಜಿಗಳು ಆನ್ಲೈನ್ನಲ್ಲಿ ಬಂದಿವೆ. ಸುಮಾರು ೭ ವರ್ಷಗಳಲ್ಲಿ ೭೦೦೦ ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿವೆ. ಎಲ್ಲಾ ಅರ್ಜಿಗಳು ಆನ್ಲೈನ್ ಆಗಿರುವುದರಿಂದ ಪ್ರತಿಯೊಂದು ಅರ್ಜಿಯ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡಬೇಕಾಗಿರುವುದರಿಂದ ಸೀರಿಯಲ್ ಪ್ರಕಾರವೇ ಅಳತೆ ಮಾಡಬೇಕು, ಮುಂದಿನ ಮೂರು ತಿಂಗಳಲ್ಲಿ ಎಲ್ಲಾ ಕಡತಗಳನ್ನು ವಿಲೇವಾರಿಗೊಳಿಸಲಾಗುತ್ತದೆ ಎಂದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ರಾಜಸ್ವ ನಿರೀಕ್ಷಕ ಸುಭ್ರಮಣಿ, ಆಹಾರ ಇಲಾಖೆಯ ನಿರೀಕ್ಷಕ ಶ್ರೀಧರ್, ಕಂದಾಯ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಮಕ್ಕಳಿಗೆ ಬೆಂಬಲವೇ?, ಮಕ್ಕಳೊಡನೆ ಪಾಲುದಾರಿಕೆಯೇ?

0

ಇವನಿಗೆ ಏನೆಲ್ಲಾ ಸೌಲಭ್ಯ ಮಾಡಿಕೊಟ್ಟಿದ್ದೇವೆ. ಆದರೂ ಸರಿಯಾಗಿ ಓದಿ ಅಂಕ ತೆಗೆಯಲ್ಲ ನೋಡಿ.
ಇವಳನ್ನು ಇಪ್ಪತ್ತೈದು ವರ್ಷ ಗಿಣಿ ಸಾಕಿದ ಹಾಗೆ ಸಾಕಿ, ಇವಳು ಕೇಳಿದ್ದನ್ನೆಲ್ಲಾ ಕೊಡಿಸಿ, ಇವಳು ಹೇಳಿದ ಹಾಗೆ ಕುಣಿದಿದ್ದಕ್ಕೆ, ಈಗ ನೋಡಿ ಎಂತಹ ಉಪಕಾರ ಮಾಡಿದಾಳೆ. ನಮ್ಮನ್ನು ಕೇಳದೆ ನಮಗೆ ಗೊತ್ತಿಲ್ಲದ ಹಾಗೆ ಅದ್ಯಾವನ್ನೋ ಕಟ್ಟಿಕೊಂಡು ಹೋಗಿದ್ದಾಳೆ.
ನೋಡಿ ಇವನಿಗೆ ದೊಡ್ಡ ಕೆಲಸ ಸಿಗೋವರೆಗೆ ನಾವು ಎಂತಹಾ ತ್ಯಾಗ ಮಾಡಿ ಇವನನ್ನು ಬೆಳೆಸಿದ್ದೇವೆ, ಈಗ ಅಪ್ಪ ಅಮ್ಮ ಅಂದ್ರೆ ಲೆಕ್ಕಕ್ಕೇ ಇಲ್ಲದ ಹಾಗಿ ವರ್ತಿಸುತ್ತಾನೆ. ನಾವು ಕೇಳೆದ್ದೆಲ್ಲಾ ತಂದುಕೊಡ್ತಾನೆ ಸರಿ, ಆದರೆ ಹಾಸಿಗೆ ಹಿಡಿದಿರುವ ನಮ್ಮ ಜೊತೆಗೆ ದಿನಕ್ಕೆ ಹತ್ತು ನಿಮಿಷನಾದ್ರೂ ಪ್ರೀತಿ, ಸಮಾಧಾನದಿಂದ ಮಾತಾಡೋದು ಬೇಡ್ವಾ? ಹೆಂಡತಿ ಮಕ್ಕಳ ಜೊತೆ ಮನೆಯಲ್ಲಿ ಯಾವಾಗ್ಲೂ ಲಲ್ಲೆಗರೆಯುತ್ತಾ ಇರುತ್ತಾನೆ, ನಾವು ಮಾತನಾಡಿಸಿದರೆ ಮಾತ್ರ ಸಿಡುಕುತ್ತಾನೆ.
ಇಂತಹ ಮಾತುಗಳನ್ನು ಸಾಕಷ್ಟು ಪೋಷಕರ ಬಾಯಲ್ಲಿ ಕೇಳುತ್ತೇವೆ. ತಂದೆ ತಾಯಿಗಳನ್ನು ಕಡೆಗಣಿಸಿದ ಇಂತಹ ಕೃತಘ್ನ ಮಕ್ಕಳ ಬಗೆಗೆ ಎಲ್ಲಾ ಭಾಷೆಯಲ್ಲಿ ಸಾವಿರಾರು ಕಾದಂಬರಿಗಳು ಬಂದಿವೆ, ನೂರಾರು ಸಿನಿಮಾಗಳು ಬಂದಿವೆ. ಸಾಹಿತ್ಯ ಸಿನಿಮಾಗಳಲ್ಲಿ ಬಿಡಿ, ಮಕ್ಕಳಿಗೆ ಕೊನೆಗೆ-ಕೆಲವೊಮ್ಮೆ ಅಪ್ಪ ಅಮ್ಮ ಸತ್ತ ಮೇಲಾದರೂ – ಜ್ಞಾನೋದಯ ಆಗುತ್ತದೆ. ಆದರೆ ವಾಸ್ತವದಲ್ಲಿ ಹಾಗೆ ಆಗುವುದು ಬಹಳ ಕಡಿಮೆ. ಹಾಗಿದ್ದರೆ ಸಾಹಿತ್ಯ ಸಿನಿಮಾಗಳಲ್ಲಿ ತೋರಿಸಿರುವಂತೆ ಇಂತಹ ಮಕ್ಕಳೆಲ್ಲಾ ದುಷ್ಟರೇ, ಸ್ವಾರ್ಥಿಗಳೇ? ಅಥವಾ ಇದಕ್ಕಿಂತ ಹೆಚ್ಚಿನ ಆಯಾಮವೇನಾದರೂ ಇದೆಯೇ?
ಪ್ರೀತಿ ಹುಟ್ಟುವುದು ಹೇಗೆ?
ಮಕ್ಕಳ ವರ್ತನೆಯ ಬಗೆಗೆ ಬಹಳ ಬೇಸರದಲ್ಲಿದ್ದ ತಂದೆತಾಯಿಗಳು ಆಪ್ತಸಲಹೆಗೆ ಬಂದಿದ್ದರು. ಅವರ ಕಥೆಯನ್ನು ತಾಳ್ಮೆಯಿಂದ ಆಲಿಸಿದ ನಂತರ ಕೇಳಿದೆ, “ಸಾರ್ ನಿಮ್ಮ ಮಕ್ಕಳು ನಿಮ್ಮ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು, ಸಾಧ್ಯವಿದ್ದರೆ ನಡೆಸಿಕೊಡಬೇಕು ಅಂತ ನಿಮಗೆ ಏಕೆ ಅನಿಸುತ್ತದೆ?”
ಇಬ್ಬರೂ ಒಕ್ಕೊರಲಿನಲ್ಲಿ ಹೇಳಿದರು, “ಏನ್ಸಾರ್ ಹೀಗೆ ಕೇಳ್ತೀರಾ. ಮಕ್ಕಳನ್ನು ಹೊತ್ತು, ಹೆತ್ತು ಇಷ್ಟೆಲ್ಲಾ ವರ್ಷ ಅವರು ಕೇಳಿದ್ದನ್ನೆಲ್ಲಾ ಕೊಡಿಸಿ ಪ್ರೀತಿಯಿಂದ ಸಾಕಿದೀವಿ. ಈಗ ಅವರು ನಮ್ಮನ್ನು ಸರಿಯಾಗಿ ನೋಡಿಕೊಳ್ಳಲೇ ಬೇಕಲ್ವಾ?”
“ನೋಡಿ ಸಾರ್ ಹೊರುವುದು ಹೆರುವುದು ಪ್ರಾಕೃತಿಕ ಕ್ರಿಯೆ. ಇದರಿಂದ ನಮಗೆ ಮಕ್ಕಳ ಮೇಲೆ ಮಮಕಾರ ಹುಟ್ಟುತ್ತದೆ. ಆದರೆ ಮಕ್ಕಳಿಗೆ ಇವರು ತಂದೆತಾಯಿಗಳು ಅನ್ನುವ ಕಲ್ಪನೆ ಒಡನಾಟದಿಂದ ಮಾತ್ರ ಬರುತ್ತದೆ. ತಂದೆತಾಯಿಗಳಿಂದ ದೂರವಿದ್ದ ಮಕ್ಕಳು ತಮ್ಮನ್ನು ಬೆಳೆಸಿದ ಅಜ್ಜಿ, ಮಾವ ಮುಂತಾದವರನ್ನೇ ಹೆಚ್ಚಾಗಿ ಹಚ್ಚಿಕೊಳ್ಳೋದನ್ನು ನಾವು ನೋಡಿರುತ್ತೇವೆ. ಅಂದರೆ ಹೆಚ್ಚು ಒಡನಾಡಿದವರೊಡನೆ ಆತ್ಮೀಯತೆ ಹೆಚ್ಚಾಗಿರುತ್ತದೆ. ಇನ್ನು ಅವರು ಕೇಳಿದ್ದನ್ನೇಲ್ಲಾ ಕೊಡಿಸಿದ್ದೇವೆ ಅಂತ ಹೇಳಿದಿರಿ. ಅಂದರೆ ಹಣದಿಂದ ಕೊಳ್ಳಬಹುದಾದ್ದನ್ನು ನೀವು ಅವರಿಗೆ ಕೊಡಿಸಿ ಅದನ್ನೇ ಪ್ರೀತಿ ಅಂದುಕೊಂಡಿರಿ. ಅಥವಾ ಮಕ್ಕಳಿಗೆ ಖಾಯಿಲೆಯಾದಾಗ ನರ್ಸಗಳಂತೆ ಕರ್ತವ್ಯದ ರೀತಿಯಲ್ಲಿ ಅವರಿಗೆ ಶುಶ್ರೂಷೆ ಮಾಡಿದ್ದನ್ನೇ ಕಾಳಜಿ ಅಂದುಕೊಂಡಿರಿ. ಅಲ್ಲವೇ?”
“ಇದಕ್ಕಿಂತ ಹೆಚ್ಚಿಗೆ ನಾವು ಏನು ಮಾಡಬೇಕಾಗಿತ್ತು ಅಂತ ನಿಮ್ಮ ಅನಿಸಿಕೆ ಸಾರ್?” ನನ್ನ ಚಿಂತನೆಯ ಧಾಟಿ ಅರ್ಥವಾಗದ ದಂಪತಿಗಳು ನನ್ನನ್ನೇ ಪ್ರಶ್ನಿಸಿದರು. ಈ ಪ್ರಶ್ನೆ ನಿಮ್ಮಲ್ಲಿ ಹೆಚ್ಚಿನವರ ಮನಸ್ಸಿನಲ್ಲಿ ಈಗಾಗಲೇ ಬಂದಿರುತ್ತದೆ. ಹಾಗಾಗಿ ಆಪ್ತಸಲಹೆಯ ಮುಂದಿನ ಭಾಗವನ್ನು ಮರೆತು ಈ ಪ್ರಶ್ನೆಯ ಬಗೆಗೆ ಮಾತ್ರ ನೋಡೋಣ.
ಬೆಂಬಲವೋ? ಒಳಗೊಳ್ಳುವಿಕೆಯೋ?
ನಾವೆಲ್ಲಾ ಹೆಚ್ಚಿನ ಸಮಯ ಮಕ್ಕಳಿಗೆ ಕೊಡುತ್ತಿರುವುದು ಬರಿಯ ಬೆಂಬಲ ಮಾತ್ರ, ಇಂತಹ ಬೆಂಬಲವನ್ನೇ ನಾವು ಪ್ರೀತಿ ಅಂದುಕೊಳ್ಳುವ ತಪ್ಪು ಮಾಡುತ್ತೇವೆ. ಆದರೆ ನಿಜವಾದ ಪ್ರೀತಿ, ಆತ್ಮೀಯತೆ, ಅಂಟಿಕೊಳ್ಳುವಿಕೆ (ಅಟ್ಯಾಚ್‍ಮೆಂಟ್) ಹುಟ್ಟುವುದು ಮತ್ತು ದೀರ್ಘಕಾಲ ಉಳಿಯುವುದು ಬರಿಯ ಬೆಂಬಲ ಅಥವಾ ಕರ್ತವ್ಯದಿಂದ ಸಾಧ್ಯವಿಲ್ಲ. ಇದಕ್ಕಾಗಿ ಇಬ್ಬರು ವ್ಯಕ್ತಿಗಳ ನಡುವೆ ಒಂದು ರೀತಿಯ ಒಳಗೊಳ್ಳುವಿಕೆಯ (ಇನ್‍ವಾಲ್ವ್‍ಮೆಂಟ್) ಅಗತ್ಯವಿರುತ್ತದೆ. ಹಾಗೆ ನೋಡಿದರೆ ಈ ಇನ್‍ವಾಲ್ವ್‍ಮೆಂಟ್ ಎಲ್ಲಾ ಸಂಬಂಧಗಳಲ್ಲಿಯೂ ಇರಬೇಕಾಗುತ್ತದೆ. ಆದರೆ ಸ್ವರೂಪಗಳಲ್ಲಿ ಭಿನ್ನತೆ ಇರುತ್ತದೆ. ಪತಿಪತ್ನಿಯರ ಸಂಬಂಧಗಳಲ್ಲಂತೂ ಇದು ಅತ್ಯಗತ್ಯ ಇನ್‍ವಾಲ್ವ್‍ಮೆಂಟ್ ಇಲ್ಲದ ದಂಪತಿಗಳು ಒಟ್ಟಾಗಿ ಬದುಕುತಿದ್ದರೂ ಅಪರಿಚಿತರಂತೆಯೇ ಇರುತ್ತಾರೆ.
ಸಧ್ಯಕ್ಕೆ ಮಕ್ಕಳ ವಿಚಾರದಲ್ಲಿ ಬೆಂಬಲಕ್ಕೂ ಒಳಗೊಳ್ಳುವಿಕೆಗೂ ಇರುವ ವ್ಯತ್ಯಾಸವನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ;
1. ಮಕ್ಕಳಿಗೆ ಕೇಳಿದ ಆಟಿಕೆಗಳನ್ನು ಕೊಡಿಸುವುದು ಬೆಂಬಲ. ಅಂತಹ ಆಟಿಕೆಗಳನ್ನು ಉಪಯೋಗಿಸಿ ಅಥವಾ ಅವು ಇಲ್ಲದಿದ್ದಾಗಲೂ ಮಕ್ಕಳ ಜೊತೆ ಸೇರಿ ಮನದಣಿಯೆ ಆಟವಾಡಿ ಖುಷಿಪಡುವುದು ಒಳಗೊಳ್ಳುವಿಕೆ.
2. ಖಾಯಿಲೆಯಾದಾಗ ಮಕ್ಕಳಿಗೆ ಔಷಧಿ ಕೊಡಿಸುವುದು ಬೆಂಬಲ. ಆದರೆ ಅವರ ಜೊತೆ ಇದ್ದು ಅವರ ನೋವು ಆತಂಕಗಳಿಗೆ ಸ್ಪಂದಿಸುವುದು, ಅವರ ಅಗತ್ಯಗಳನ್ನು ಪುರೈಸುವುದು ಇನ್‍ವಾಲ್ವ್‍ಮೆಂಟ್.
3. ಮಕ್ಕಳಿಗೆ ಒಳ್ಳೆಯ ಶಾಲೆಗೆ ಸೇರಿಸುವುದು, ಪುಸ್ತಕ ಮತ್ತಿತರ ಓದುವ ಪರಿಕರಗಳನ್ನು ಕೊಡಿಸುವುದು ಬೆಂಬಲ. ಆದರೆ ಅವರ ಜೊತೆ ಕುಳಿತು, ನಾವೂ ಅವರ ಪಠ್ಯಗಳನ್ನು ಜೊತೆಗೆ ಓದುತ್ತಾ ಅವರಿಗೆ ಸಹಾಯ ಮಾಡುವುದು ಒಳಗೊಳ್ಳುವಿಕೆ.
4. ಮಕ್ಕಳಿಗೆ ಕಥೆ ಪುಸ್ತಕಗಳನ್ನು ಕೊಡಿಸುವುದು ಬೆಂಬಲ. ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಕಥೆ ಹೇಳುವುದು, ಅವರು ಬೆಳೆದ ಮೇಲೆ ಕೂಡ ನಾವು ಅವರ ಜೊತೆ ಓದುತ್ತಾ ಸಂತೋಷವನ್ನು ಹಂಚಿಕೊಳ್ಳುವುದು ಒಳಗೊಳ್ಳುವಿಕೆ.
5. ಮಕ್ಕಳ ಸಮಸ್ಯೆಗಳನ್ನು ನಾವಾಗಿಯೇ ಪರಿಹರಿಸುವುದು ಬೆಂಬಲ. ಆದರೆ ಮಕ್ಕಳಿಗೆ ಹೆಚ್ಚು ಮಾತನಾಡಲು ಉತ್ತೇಜಿಸುವುದು, ಅವರ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ಕೊಡುವುದು, ಅವರ ಅಭೀಪ್ರಾಯಗಳನ್ನು ಗೌರವಿಸುವುದು, ನಂತರ ಇಬ್ಬರೂ ಸೇರಿ ಪರಿಹಾರ ಹುಡುಕುವುದು ಇನ್‍ವಾಲ್ವ್‍ಮಂಟ್.
6. ಕೇಳಿದಷ್ಟು ಹಣ ನೀಡಿ ಮಕ್ಕಳನ್ನು ಪ್ರವಾಸಕ್ಕೆ ಕಳಿಸುವುದು ಬೆಂಬಲ. ಅವಕಾಶವಿದ್ದಲ್ಲಿ ನಾವೂ ಅವರ ಜೊತೆ ಹೋಗಿ ಜೊತೆಗಿದ್ದು ಸಂತೋಷಿಸುವುದು ಒಳಗೊಳ್ಳುವಿಕೆ.
ಅಂದರೆ ಮಕ್ಕಳಿಗೆ ‘ಧನ’ ಬೆಂಬಲಕ್ಕಿಂತ ಹೆಚ್ಚಾಗಿ ‘ತನು ಮನ’ಗಳಿಂದ ಬೆಂಬಲ ನೀಡಿದಾಗ ಅದು ಒಳಗೊಳ್ಳುವಿಕೆಯ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ಹೆಚ್ಚಿನ ಪೋಷಕರು ಇದರ ಕಡೆ ಗಮನ ನೀಡದೆ ಧನ ಬೆಂಬಲವನ್ನೇ ತಮ್ಮ ಪ್ರೀತಿ ಮತ್ತು ಕಾಳಜಿ ಎಂದು ಭ್ರಮಿಸಿ, ಅದರಿಂದಲೇ ಆತ್ಮೀಯತೆ ಹುಟ್ಟಬಲ್ಲದು ಅಂದುಕೊಳ್ಳುವ ಸಾಧ್ಯತೆಗಳಿವೆ. ಇಂತಹ ಸಂದರ್ಭಗಳಲ್ಲಿ ಮಕ್ಕಳು ಪೋಷಕರಿಗೆ ವಿಧೇಯರಾಗಿದ್ದರೂ ಅವರ ಜೊತೆ ಅಟ್ಯಾಚ್‍ಮೆಂಟ್ ಬೆಳೆಸಿಕೊಳ್ಳದೆ ಹೋದಾಗ ಸಂಬಂಧಗಳ ಕೊಂಡಿ ಬಿಗಿಯಾಗಿರುವುದಿಲ್ಲ.
ಈ ಹಿನ್ನೆಲೆಯಲ್ಲಿ ನಮ್ಮ ಮತ್ತು ಮಕ್ಕಳ ಸಂಬಂಧಗಳನ್ನು ಪುನರಾವಲೋಕಿಸಿದಾಗ ನಮಗೆ ಉತ್ತಮ ಒಳನೋಟಗಳು ಸಿಗುತ್ತವೆ. ನಮಗೆ ಈಗಾಗಲೇ ಇರುವ ಯಾವುದಾದರೂ ಒಂದು ಉತ್ತಮ ಸಂಬಂಧ ರೂಪಗೊಂಡ ರೀತಿಯನ್ನು ಗಮನಿಸಿದರೆ ಅದೂ ಕೂಡ ಇನ್‍ವಾಲ್ವ್‍ಮೆಂಟ್‍ನಿಂದಾಗಿಯೇ ಈ ಸ್ಥಿತಿಗೆ ಬಂದಿರುವುದು ಎನ್ನುವುದರ ಅರಿವಾಗುತ್ತದೆ. ಮಕ್ಕಳು ನಮ್ಮ ರಕ್ತ ಮಾಂಸಗಳನ್ನು ಹಂಚಿಕೊಂಡಿದ್ದಾರೆ ಎನ್ನುವ ಒಂದೇ ಕಾರಣಕ್ಕಾಗಿ ಅವರು ನಮ್ಮನ್ನು ಪ್ರೀತಿಸಲೇಬೇಕು ಎನ್ನುವ ನಿಯಮವೇನೂ ಇರುವುದಿಲ್ಲ. ಆತ್ಮೀಯ ಸಂಬಂಧವೊಂದನ್ನು ಮಕ್ಕಳ ಬಾಲ್ಯದಿಂದಲೇ ಪೋಷಕರು ರೂಪಿಸಿಕೊಳ್ಳಬೇಕಾಗುತ್ತದೆ.
ಮಕ್ಕಳು ಮತ್ತು ಪೋಷಕರ ಮಧ್ಯೆ ಅಟ್ಯಾಚ್‍ಮೆಂಟ್ ಇದ್ದರೆ ಮಕ್ಕಳು ಪೋಷಕರು ಹೇಳಿದ್ದನೆಲ್ಲಾ ನಡೆಸಿಕೊಡುತ್ತಾರೆ ಅಂತ ತಿಳಿಯಬೇಕಿಲ್ಲ. ಇಬ್ಬರಿಗೂ ಮತ್ತೊಬ್ಬರನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವ ಪರಿಪಾಠ ಬೆಳೆಯುತ್ತದೆ. ಇದರಿಂದ ಇಬ್ಬರ ಸಂಬಂಧಗಳು ಸೌಹಾರ್ಧಯುತವಾಗಿದ್ದು ಅನಗತ್ಯ ಮನಸ್ತಾಪಗಳಿರುವುದಿಲ್ಲ. ಇರುವ ಭಿನ್ನಾಭಿಪ್ರಾಯಗಳನ್ನು ಸಮಾಧಾನದಿಂದ ಚರ್ಚಿಸಿ ಪರಿಹರಿಸಿಕೊಳ್ಳಬಹುದು. ಪೋಷಕರು ಮತ್ತು ಮಕ್ಕಳ ನಡುವಿನ ಸಂಬಂಧದಲ್ಲಿ ಉತ್ತಮ ಸ್ನೇಹದ ಅಂಶಗಳಿದ್ದು ಇದು ಇಳಿ ವಯಸ್ಸಿನಲ್ಲಿ ಪೋಷಕರಿಗೆ ಮಾನಸಿಕ ಆಧಾರವಾಗುತ್ತದೆ.
ವಸಂತ್, ನಡಹಳ್ಳಿ

ಹೋರಾಟಗಳನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ಶಾಸಕರು ಮುಂದಾಗಿದ್ದಾರೆ – ಡಿ.ವೈ.ಎಫ್.ಐ

0

ಹೋರಾಟಗಳನ್ನು ಹತ್ತಿಕ್ಕುವಂತಹ ಪ್ರಯತ್ನಕ್ಕೆ ಶಾಸಕ ಎಂ.ರಾಜಣ್ಣ ಮುಂದಾಗುತ್ತಿದ್ದಾರೆ ಎಂದು ಡಿ.ವೈ.ಎಫ್.ಐ.ಸಂಘಟನೆಯ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ ಆರೋಪಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಳೆದ ಒಂದೂವರೆ ವರ್ಷದ ಹಿಂದೆ ಶಾಸಕರಾದ ನಂತರ ಎಂ.ರಾಜಣ್ಣ ಅವರಿಗೆ ನಗರದ ಪದವಿ ಪೂರ್ವ ಕಾಲೇಜಿನಲ್ಲಿನ ಹಲವಾರು ಮೂಲಭೂತಸೌಕರ್ಯಗಳ ಕೊರತೆಯ ಬಗ್ಗೆ ಗಮನಕ್ಕೆ ತಂದಿದ್ದೆವು, ಈ ಬಗ್ಗೆ ಹಲವು ಬಾರಿ ಪ್ರತಿಭಟನೆಗಳನ್ನೂ ಮಾಡಿದ್ದೇವೆ, ಪ್ರತಿನಿತ್ಯ ಗ್ರಾಮೀಣ ಪ್ರದೇಶಗಳಿಂದ ಬರುವಂತಹ ನೂರಾರು ಮಂದಿ ಹೆಣ್ಣು ಮಕ್ಕಳು ಕಾಲೇಜಿನಲ್ಲಿ ಶೌಚಾಲಯಗಳ ಕೊರತೆಯಿಂದ ನೀರು ಕುಡಿಯುವುದನ್ನು ಬಿಟ್ಟಿದ್ದಾರೆ, ಪುಂಡಪೋಕರಿಗಳು ಕಾಲೇಜಿನ ಸಮೀಪದಲ್ಲಿ ಬಂದು ಹೆಣ್ಣು ಮಕ್ಕಳನ್ನು ಚುಡಾಯಿಸುವಂತಹ ಪ್ರಕರಣಗಳು ನಡೆದಿರುವ ಬಗ್ಗೆಯೂ ಶಾಸಕರ ಗಮನಕ್ಕೆ ತಂದಿದ್ದೇವೆ, ಒಂದು ತಿಂಗಳ ಅವಧಿಯಲ್ಲಿ ಕಾಲೇಜಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡುವ ಭರವಸೆ ನೀಡಿದ್ದ ಶಾಸಕರು, ಒಂದೂವರೆ ವರ್ಷವಾದರೂ ಈ ಬಗ್ಗೆ ಗಮನಕ್ಕೆ ತೆಗೆದುಕೊಂಡಿರಲಿಲ್ಲ, ಹಾಗಾಗಿ ಶಾಸಕರ ಮನೆಯ ಮುಂದೆ ಎಸ್.ಎಫ್.ಐ.ಸಂಘಟನೆಯ ನೇತೃತ್ವದಲ್ಲಿ ವಿಧ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಆದರೆ ಶಾಸಕರು ನನ್ನ ಸ್ವಾಭಿಮಾನಕ್ಕೆ ದಕ್ಕೆ ತಂದಿದ್ದಾರೆಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ, ವಿಧ್ಯಾರ್ಥಿಗಳು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರನ್ನು ಕರೆದು ಸಂಘಟನೆಗಳಿಗೆ ಬೆಂಬಲ ನೀಡದಂತೆ ಎಚ್ಚರಿಕೆಯನ್ನು ನೀಡಿದ್ದಾರೆ. ಮುಂದಿನ ಪರೀಕ್ಷೆಗಳಲ್ಲಿ ನಿಮ್ಮ ಅನುತ್ತೀರ್ಣ ಮಾಡುವುದಾಗಿ ವಿದ್ಯಾರ್ಥಿಗಳಲ್ಲಿ ಭಯವನ್ನು ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯ ಪೂರ್ವದಲ್ಲಿ ತಾಲ್ಲೂಕಿನ ಪ್ರತಿಯೊಂದು ಮನೆಯ ಬಾಗಿಲಿಗೆ ಬಂದು ಮತ ನೀಡುವಂತೆ ಕೇಳುವ ಹಕ್ಕು ಅವರಿಗಿರುವುದಾದರೆ, ಅವರ ಮನೆಯ ಮುಂದೆ ಕುಳಿತು ಸಂವಿಧಾನ ಬದ್ಧವಾಗಿ ನಮ್ಮ ಹಕ್ಕುಗಳನ್ನು ಕೇಳುವ ಹಕ್ಕು ನಮಗಿಲ್ಲವೆ. ನಮ್ಮಲ್ಲಿ ಭಯವನ್ನು ಹುಟ್ಟಿಸುವಂತಹ ತಂತ್ರಗಾರಿಕೆಯನ್ನು ಶಾಸಕರು ಮಾಡುತ್ತಿದ್ದಾರೆ. ರಾಜಕೀಯ ಪಿತೂರಿ ಎಂದಿದ್ದಾರೆ. ನಾವು ಯಾವುದೇ ಪಕ್ಷದ ಕಾರ್ಯಕರ್ತರಲ್ಲ. ರಾಜಕೀಯ ಮಾಡುವವರು ರಾಜಕಾರಣಿಗಳು, ನಮ್ಮ ಸಂಘಟನೆ ಪ್ರಾಮಾಣಿಕವಾಗಿ ವಿದ್ಯಾರ್ಥಿಗಳ ಪರವಾಗಿ ಹೋರಾಟ ಮಾಡುತ್ತದೆ. ಕಾಲೇಜಿಗೆ ಅಗತ್ಯವಾಗಿರುವ ಮೂಲಸೌಕರ್ಯಗಳನ್ನು ಒದಗಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಎಸ್.ಎಫ್.ಐ ಜಿಲ್ಲಾ ಮುಖಂಡ ರಾಜಶೇಖರ್ ಮಾತನಾಡಿ, ಸಂವಿಧಾನಬದ್ಧವಾಗಿ ಸಂಘಟನೆಗಳನ್ನು ರೂಪಿಸುವಂತಹ ಹಕ್ಕು ಪ್ರತಿಯೊಬ್ಬರಿಗೂ ಇದೆ, ಕಳೆದ ಒಂದೂವರೆ ವರ್ಷದ ಹಿಂದೆ ಅಧಿಕಾರಕ್ಕೆ ಅವರು, ಕ್ಷೇತ್ರದ ಜ್ವಲಂತ ಸಮಸ್ಯೆಗಳ ಬಗ್ಗೆ ಒಂದು ದಿನವೂ ಗಮನಹರಿಸಿಲ್ಲ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿದ್್ಯಾರ್ಥಿಗಳ ಸಮಸ್ಯೆಗಳ ಬಗ್ಗೆ ಮಾತನಾಡಲಿಲ್ಲ, ರಸ್ತೆಯ ಅವ್ಯವಸ್ಥೆಗಳ ಬಗ್ಗೆ ಪ್ರತಿಭಟನೆ ನಡೆಸಿ, ಶಾಸಕರಿಗೆ ಮನವಿ ನೀಡಲು ಕರೆದರೆ, ನಾನು ಬರುವುದಿಲ್ಲವೆಂಬ ಉತ್ತರವನ್ನು ನೀಡಿದ್ದಾರೆ. ನಮ್ಮ ಹಕ್ಕುಗಳನ್ನು ಕೇಳುವ ಅಧಿಕಾರ ನಮಗಿದೆ, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು, ನೇರವಾಗಿ ಜಿಲ್ಲಾಧಿಕಾರಿಗಳ ಮುಖಾಂತರ ನಮ್ಮ ಮೇಲೆ ಕೇಸುಗಳನ್ನು ದಾಖಲಿಸುವಂತಹ ಪ್ರಯತ್ನ ಮಾಡಲಾಗುತ್ತಿದೆ, ನಮ್ಮ ಹೋರಾಟದ ಹಕ್ಕನ್ನು ಕಸಿಯಲಾಗುತ್ತಿದೆ, ಶಾಸಕರ ಯಾವುದೇ ಬೆದರಿಕೆಗಳಿಗೆ ನಾವು ಜಗ್ಗಲ್ಲ, ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದರು.

ಶಿಡ್ಲಘಟ್ಟದಲ್ಲಿ ಈದ್-ಮಿಲಾದ್ ಆಚರಣೆ

0

ಪಟ್ಟಣದಲ್ಲಿ ಭಾನುವಾರ ಈದ್-ಮಿಲಾದ್ ಅಂಗವಾಗಿ ಮುಸ್ಲಿಂ ಭಾಂದವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮಹಮದ್ ಪೈಗಂಬರರ ಹುಟ್ಟಿದ ದಿನವನ್ನು ಈದ್-ಮಿಲಾದ್ ಎಂದು ಆಚರಿಸಲಾಗುತ್ತಿದ್ದು, ಪಟ್ಟಣದಲ್ಲಿ ಮಂಗಳವಾರ ಮುಸ್ಲಿಂ ಬಾಂಧವರು ದಿಬ್ಬೂರಹಳ್ಳಿ ರಸ್ತೆಯಿಂದ ವಾಹನ ಮತ್ತು ಕಾಲ್ನಡಿಗೆಯ ಮೂಲಕ ಮೆರವಣಿಗೆ ಆರಂಭಿಸಿ, ನಂತರ ಮುಖ್ಯರಸ್ತೆ ಟಿ.ಬಿ.ರಸ್ತೆಯ ಮೂಲಕ ಕೋಟೆ ವೃತ್ತಕ್ಕೆ ಬಂದು, ಅಲ್ಲಿಂದ ಬೈಪಾಸ್ ರಸ್ತೆಯಲ್ಲಿರುವ ಈದ್ಗಾ ಮೈದಾನದವರೆಗೂ ಮೆರವಣಿಗೆ ನಡೆಸಿದರು. ಮೊಹಮ್ಮದ್ ಫೈಗಂಬರ್ ಜನ್ಮದಿನವಾದ ಇಂದು ಅಲ್ಲಾಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮನುಕುಲದ ಏಳಿಗೆಗಾಗಿ ಜನ್ಮ ತಾಳಿದ ಫೈಗಂಬರರ ತತ್ವ ಅಳವಡಿಸಿಕೊಂಡರೆ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಮುಸ್ಲಿಂ ಧರ್ಮಗಳು ಬೋಧಿಸಿದರು.
ಮಸೀದಿ ಹಾಗೂ ಕೆಲವಾರು ಮನೆಗಳಿಗೆ ವಿದ್ಯುತ್ ದೀಪಗಳಿಂದ ಶೃಂಗರಿಸಲಾಗಿತ್ತು. ಈದ್-ಮಿಲಾದ್ನಂದು ವಿವಿಧ ಭೋಜನ ತಯಾರಿಸಿ ನೆರೆಹೊರೆಯವರಿಗೆ ಪರಸ್ಪರ ವಿನಿಮಯ ಮಾಡಿಕೊಂಡರು.
ಪಟ್ಟಣದ ಕೋಟೆ ವೃತ್ತದ ಬಳಿ ಮುಸ್ಲಿಂ ಯುವಕರು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಿದ್ದರು. ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಹಣ್ಣು, ಸಿಹಿತಿಂಡಿ ಮತ್ತು ಬ್ರೆಡ್ ವಿತರಿಸಿದರು. ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಹೆ ಹಣ್ಣು ಮತ್ತು ಬ್ರೆಡ್ ವಿತರಿಸುವ ಮೂಲಕ ಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ವಾಸವಿ ಶಾಲೆಯಲ್ಲಿ ಭಾವಗೀತೆ, ಜನಪದ ಗೀತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮ

0

ಸ್ಪರ್ಧೆಗಳು ವಿದ್ಯಾರ್ಥಿಗಳ ಆಲೋಚನಾ ಶಕ್ತಿಯನ್ನು ಹೆಚ್ಚಿಸಿ ಸೃಜನಶೀಲತೆಯ ಬೆಳವಣಿಗೆಗೆ ಕಾರಣವಾಗುತ್ತವೆ ಎಂದು ಕ್ಷೇತ್ರ ಶಿಕ್ಷ್ಷಣಾಕಾರಿ ಎಸ್.ರಘುನಾಥರೆಡ್ಡಿ ಅಭಿಪ್ರಾಯಪಟ್ಟರು.
ನಗರದ ವಾಸವಿ ಶಾಲೆಯಲ್ಲಿ ಈಚೆಗೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಹಮ್ಮಿಕೊಂಡಿದ್ದ ಜನಪದ ಗೀತೆ, ಬಾವಗೀತೆ ಹಾಗೂ ರಸಪ್ರಶ್ನೆ ಕಾರ್ಯಕ್ರಮದ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸಾಹಿತ್ಯಾತ್ಮಕ ಸ್ಪರ್ಧೆಗಳನ್ನು ನಡೆಸುವುದರಿಂದ ಮಕ್ಕಳು ಆಲೋಚನೆಗೆ ಬೀಳುತ್ತಾರೆ. ಆಲೋಚನೆಗಳಿಂದ ಹೊಸ ಹೊಸ ಚಿಂತನೆಗಳಿಗೆ ಅವರ ಮನಸು ತೆರೆದುಕೊಂಡು ಮಾನಸಿಕ ವಿಕಸನಕ್ಕೆ ದಾರಿಯಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಸ್.ವಿ.ನಾಗರಾಜ್ರಾವ್, ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ಮೂರ್ತಿ, ಮಂಜುನಾಥ್, ನಾರಾಯಣಸ್ವಾಮಿ, ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಲ್.ವಿ.ವಿ.ಗುಪ್ತ, ಸತ್ಯನಾರಾಯಣಶೆಟ್ಟಿ, ಮುಖ್ಯ ಶಿಕ್ಷಕ ಎಂ.ಆರ್.ಗೋಪಿನಾಥ್, ಕೆಂಪಣ್ಣ, ವಿನಾಯಕ, ಟಿ.ಎನ್.ವಿಜಯ್ಕುಮಾರ್, ಎಸ್.ವಿ.ಮಾಲತಿ, ಎಂ.ಆರ್.ಶಂಕರ್ನಾರಾಯಣರಾವ್, ಅನಂತಲಕ್ಷ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವಿಜೇತರು:
ಜನಪದಗೀತೆ ವಿಭಾಗದಲ್ಲಿ ಆಶಾಕಿರಣ ಅಂಧಮಕ್ಕಳ ಶಾಲೆಯ ಮೋನಿಕಾ(ಪ್ರಥಮ), ವಾಸವಿ ಶಾಲೆಯ ವಿದ್ಯಾಶ್ರೀ(ದ್ವಿತೀಯ), ಚೀಮಂಗಲ ಸರ್ಕಾರಿ ಪ್ರೌಢಶಾಲೆಯ ಮೋನಿಕಾ(ತೃತೀಯ) ಸ್ಥಾನಪಡೆದಿದ್ದಾರೆ.
ಭಾವಗೀತೆ ವಿಭಾಗದಲ್ಲಿ ವಾಸವಿ ಶಾಲೆಯ ಎಸ್.ಅನುಷಾ(ಪ್ರಥಮ), ಸರಸ್ವತಿ ಕಾನ್ವೆಂಟ್ನ ಮೋನಿಕಾಯಾದವ್(ದ್ವಿತೀಯ), ಆಶಾಕಿರಣ ಅಂಧಮಕ್ಕಳ ಶಾಲೆಯ ಜಾಸ್ಮಿನ್ ತಾಜ್(ತೃತೀಯ) ಬಹುಮಾನವನ್ನು ತನ್ನದಾಗಿಸಿಕೊಂಡರು.
ರಸಪ್ರಶ್ನೆ ವಿಭಾಗದಲ್ಲಿ ಜಂಗಮಕೋಟೆಯ ಕಾರ್ತಿಕ್ಕುಮಾರ್ ಮತ್ತು ತಂಡ(ಪ್ರಥಮ), ವಾಸವಿ ಶಾಲೆಯ ಕೆ.ಎಂ.ಮಧು ಮತ್ತು ತಂಡ(ದ್ವಿತೀಯ) ಹಾಗೂ ಡಾಲಿನ್ ಶಾಲೆಯ ಕೈಲಾಸ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

error: Content is protected !!