ಸರ್ಕಾರ ನೀಡುವ ಸಹಾಯಧನ ದುರುಪಯೋಗವಾಗಬಾರದು ಮತ್ತು ನೇರವಾಗಿ ಗ್ರಾಹಕರಿಗೇ ತಲುಪಬೇಕು ಎಂದು ನೇರ ನಗದು (ಡಿ.ಬಿ.ಟಿ.ಎಲ್) ಯೋಜನೆಯನ್ನು ಜಾರಿಗೊಳಿಸಿದೆ ಎಂದು ತಹಶಿಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ನಗರೇಶ್ವರ ಕಲ್ಯಾಣಮಂಟಪದಲ್ಲಿ ಮಂಗಳವಾರ ನೇರ ನಗದು (ಡಿ.ಬಿ.ಟಿ.ಎಲ್) ಯೋಜನೆಯ ಬಗ್ಗೆ ಇಂಡೇನ್ ಗ್ಯಾಸ್ ಏಜನ್ಸೀಸ್ ವತಿಯಿಂದ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ 16,458 ಅನಿಲ ಸಿಲಿಂಡರ್ ಗ್ರಾಹಕರಿದ್ದು, 9 ಸಾವಿರ ಗ್ರಾಹಕರು ಮಾತ್ರ ಇದುವರೆಗೂ ಡಿ.ಬಿ.ಟಿ.ಎಲ್ ಯೋಜನೆಯ ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ಯೋಜನೆಗೆ ಒಳಪಡಬೇಕು. ಈ ಯೋಜನೆಯು ಪಾರದರ್ಶಕವಾದುದು. ಗೃಹ ಬಳಕೆ ಅನಿಲ ಸಿಲಿಂಡರ್ ಸಹಾಯಧನ ಪಡೆಯುವ ಪರಿಷ್ಕೃತವಾದ ಈ ಪದ್ಧತಿಯು ಪ್ರಾರಂಭವಾದ ಮೇಲೆ ಗ್ರಾಹಕರು ಮಾರುಕಟ್ಟೆ ದರವನ್ನೇ ಪಾವತಿಸಿ ಸಿಲಿಂಡರ್ ಪಡೆಯಬೇಕು. ಸಹಾಯಧನವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಪದ್ಧತಿಯಿಂದ ಸಬ್ಸಿಡಿ ಸಿಲಿಂಡರುಗಳನ್ನು ದುಪ್ಪಟ್ಟು ದರಕ್ಕೆ ಮಾರಾಟ ಮಾಡುವುದು ನಿಲ್ಲುತ್ತದೆ. ಈ ತಕ್ಷಣಕ್ಕೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿಲ್ಲ. ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಯೋಜನೆಗೂ ಆಧಾರ್ ಕಾರ್ಡ್ ಆದರಿಸಿಯೇ ನಡೆಯುವುದರಿಂದ ಎಲ್ಲರೂ ವಿಳಂಬ ಮಾಡದೆ ಆಧಾರ್ ಕಾರ್ಡ್ದಾರರಾಗಬೇಕು ಎಂದು ಹೇಳಿದರು.
ಆಧಾರ್ ಕಾರ್ಡ್ ನೋಂದಣಿ ಪಟ್ಟಣ ಪ್ರದೇಶದಲ್ಲಿ ಈಗ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಹೋಬಳಿ ಹಾಗೂ ಗ್ರಾಮಾಂತರ ಪ್ರದೇಶಗಳಿಗೂ ವಿಸ್ತರಿಸಲಾಗುತ್ತದೆ. ಡಿ.ಬಿ.ಟಿ.ಎಲ್ ಯೋಜನೆಗೆ ಒಳಪಡಲು ಸಿಲಿಂಡರ್ ಗ್ರಾಹಕರು ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಸಿಲಿಂಡರ್ ಖರೀದಿಯ ರಸೀದಿ, ಆಧಾರ್ ಗುರುತಿನ ಚೀಟಿಯ ಪ್ರತಿ(ಕಡ್ಡಾಯವಲ್ಲ) ನೀಡಬೇಕು ಎಂದು ವಿವರಿಸಿದರು.
ಆಹಾರ ಶಿರಸ್ತೆದಾರ ಪರಶಿವಮೂರ್ತಿ, ಶ್ರೀಧರ್, ಪ್ರಕಾಶ್, ಭಕ್ತರಹಳ್ಳಿ ಬೈರೇಗೌಡ, ಇಂಡೇನ್ ಗ್ಯಾಸ್ ಏಜನ್ಸಿ ಮಾಲೀಕ ನಾಗರಾಜ್, ಡಾ.ವೆಂಕಟೇಶಮೂರ್ತಿ, ಗೋಪಿನಾಥ್, ಮುರಳಿ, ಅಣ್ಣಯ್ಯಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಡಿ.ಬಿ.ಟಿ.ಎಲ್ ಯೋಜನೆಗೆ ಎಲ್ಲರೂ ಒಳಪಡಬೇಕು
ನಿದ್ರೆ
ಆಹಾರ, ನಿದ್ರೆ ಹಾಗೂ ಬ್ರಹ್ಮಚರ್ಯ ಪಾಲನೆ ಇವು ಮೂರು ಮನುಷ್ಯನ ಜೀವನ ನಿರ್ವಹಣೆಯಲ್ಲಿ ಆಧಾರ ಸ್ತಂಭಗಳು. ಇವುಗಳಲ್ಲಿ ನಿದ್ರೆ ಅತಿ ಮುಖ್ಯವಾಗಿ ಬೇಕಾದ ಅಂಶ. ಬದಲಾದ ಜೀವನ ಶೈಲಿ, ಫಾಸ್ಟ್ ಫುಡ್, ಜಂಕ್ ಫುಡ್‍ಗಳ ಸೇವನೆ, ಅತಿಯಾದ ಕೆಲಸದ ಒತ್ತಡ, ಅನಿಯಮಿತ ಕಾಲದಲ್ಲಿ ಆಹಾರ ಸೇವನೆ, ಅನಿಯಮಿತವಾದ ದಿನನಿತ್ಯದ ಚಟುವಟಿಕೆಗಳಿಂದಾಗಿ ನಿದ್ರಾಹೀನತೆ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾಗಿ ಕಂಡು ಬರುವಂಥಹ ಸಮಸ್ಯೆ.
ನಿದ್ರೆಯ ಉತ್ಪತ್ತಿ:
ಯದಾ ತು ಮನಸಿ ಕ್ಲಾಂತೆ ಕರ್ಮಾತ್ಮಾನ: ಕ್ಲಮಾನ್ವಿತ||
ವಿಷಯೇಭ್ಯೋ ನಿವರ್ತಂತೆ ತದಾ ಸ್ವಪಿತಿ ಮಾನವ|| ಚರಕ ಸೂತ್ರ||
ಯಾವಾಗ ಕಾರ್ಯ ನಿರ್ವಹಿಸಿ ಮನಸ್ಸು ದಣಿಯುವುದೋ ಇಂದ್ರಿಯಗಳು (ಕಣ್ಣು, ಕಿವಿ ಮೂಗು, ಬಾಯಿ, ನಾಲಿಗೆ) ದಣಿಯುವುದರಿಂದ ತಮ್ಮ ತಮ್ಮ ವಿಷಯಗಳಿಂದ (ಉದಾ:- ಸ್ಪರ್ಶ, ರೂಪ, ರಸ, ಗಂಧ, ಶ್ರವಣ) ನಿವೃತ್ತವಾಗುತ್ತವೆಯೋ ಅಂದರೆ ಇಂದ್ರಿಯಗಳು ತಮ್ಮ ತಮ್ಮ ವಿಷಯಗಳಿಂದ ಬೇರ್ಪಡುವವೋ ಆಗ ಮನುಷ್ಯನನ್ನು ನಿದ್ರೆ ಆವರಿಸುತ್ತದೆ. ಅಂದರೆ ಮನುಷ್ಯ ನಿದ್ರಿಸುತ್ತಾನೆ.
ನಿದ್ರೆಯ ಲಾಭಗಳು:
ಒಬ್ಬ ಆರೋಗ್ಯವಂತ ಮನುಷ್ಯನಿಗೆ ರಾತ್ರಿ ಸಾಮಾನ್ಯವಾಗಿ 7 ರಿಂದ 8 ತಾಸುಗಳಷ್ಟು ನಿದ್ರೆ ಅತ್ಯಗತ್ಯ. ಈ ಮಾಪನವು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಮಕ್ಕಳಲ್ಲಿ ಯುವಕರಲ್ಲಿ ಹಾಗೂ ವೃದ್ಧಾಪ್ಯದಲ್ಲಿ ವ್ಯತ್ಯಾಸಗೊಳ್ಳುತ್ತದೆ.
1. ಸುಖ ಪೂರ್ವಕವಾಗಿ ನಿದ್ರಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ.
2. ಶರೀರದ ಪೋಷಣೆಯಾಗುತ್ತದೆ.
3. ಶರೀರದ ಬಲ ವೃದ್ಧಿಯಾಗುತ್ತದೆ.
4. ದೀರ್ಘವಾದ ಆಯುಸ್ಸನ್ನು ಒದಗಿಸುತ್ತದೆ.
5. ನಪುಂಸಕತೆಯನ್ನು ಹೋಗಲಾಡಿಸುತ್ತದೆ.
6. ದೇಹದ ಧಾತುಗಳು ಸಮ ಸ್ಥಿತಿಯಲ್ಲಿರುತ್ತವೆ.
ನಿದ್ರೆಯ ಭೇದಗಳು: 6 ವಿಧಗಳು:
1. ತಮೋಭವಾ:- ತಮೋ ಗುಣದ ಪ್ರಧಾನತೆಯಿಂದ ಉಂಟಾಗುವ ನಿದ್ರೆ.
2. ಶ್ಲೇಷ್ಮ ಸಮುದ್ಭವ:- ಕಫ ಪ್ರಧಾನತೆಯಿಂದ ಉತ್ಪತ್ತಿಯಾಗುವ ನಿದ್ರೆ.
3. ಮನ: ಶರೀರ ಶ್ರಮಸಂಭವ:- ಮನಸ್ಸಿನ ಹಾಗೂ ಶರೀರದ ಆಯಾಸದಿಂದ ಉತ್ಪತ್ತಿಯಾಗುವ ನಿದ್ರೆ.
4. ಆಗಂತುಕಿ ನಿದ್ರೆ:- ಇದು ಆಗಂತುಕ ಕಾರಣಗಳಿಂದ (ರೋಗ ಇತ್ಯಾದಿ) ಉತ್ಪತ್ತಿಯಾಗುವ ನಿದ್ರೆ.
5. ವ್ಯಾದ್ಯನುವರ್ತಿನಿ:- ರೋಗಗಳ ಸಂದರ್ಭದಲ್ಲಿ ಉಂಟಾಗುವ ನಿದ್ರೆ ಅಥವಾ ರೋಗ ಶಮನದ ನಂತರ ಅವುಗಳೊಂದಿಗೆ ಉತ್ಪತಿಯಾಗುವ ನಿದ್ರೆ.
6. ರಾತ್ರಿಸ್ವಭಾವ ಪ್ರಭಾವ:- ಇದು ಸ್ವಾಭಾವಿಕವಾಗಿದ್ದು ರಾತ್ರಿಯಲ್ಲಿ ಉತ್ಪತ್ತಿಯಾಗುವ ನಿದ್ರೆ.
ಇವುಗಳಲ್ಲಿ ತಮೋ ಭವ ಹಾಗೂ ರಾತ್ರಿ ಸ್ವಭಾವ ಪ್ರಭವ ವಿಧದ ನಿದ್ರೆಗಳು ಸ್ವಾಭಾವಿಕ. ಉಳಿದವುಗಳೆಲ್ಲವೂ ರೋಗಗಳಲ್ಲಿ ಉತ್ಪತ್ತಿಯಾಗುವಂಥಹವುಗಳು.
ನಿದ್ರಾನಾಶಕ್ಕೆ ಕಾರಣಗಳು:
1. ಕೆಲಸದ ಒತ್ತಡ ಹಾಗೂ ಕೆಲಸದಲ್ಲಿ ನಿರತರಾಗಿರುವುದು.
2. ಅನಿಯಮಿತ ಕಾಲದಲ್ಲಿ ನಿದ್ರೆ ಮಾಡುವಂಥಹುದು.
3. ರೋಗಗಳು (ಉದಾ:- ಜ್ವರ, ಉನ್ಮಾದ, ಬ್ಲಡ್ ಪ್ರೆಷರ್).
4. ವಾತ ಹಾಗೂ ಪಿತ್ತ ಪ್ರಕೃತಿ ವ್ಯಕ್ತಿಗಳಲ್ಲಿ.
6. ವೃದ್ಧಾಪ್ಯದಲ್ಲಿ.
6. ಅತಿಯಾದ ಚಿಂತೆ, ಭಯ, ಶೋಕ, ಸಿಟ್ಟು ಇತ್ಯಾದಿಗಳೂ ಕೂಡ ನಿದ್ರೆಯನ್ನು ನಾಶಮಾಡುತ್ತವೆ.
ನಿದ್ರಾನಾಶದ ಚಿಕಿತ್ಸೆಗಳು:
1. ಅಭ್ಯಂಗ:- ಪ್ರತಿ ನಿತ್ಯವೂ ಮೈಗೆ ಎಣ್ಣೆಯನ್ನು ಹಚ್ಚುವುದು.
2. ಉತ್ಸಾದನ:- ಎಣ್ಣೆ ಹಚ್ಚಿ ಮೈಯನ್ನು ಕ್ರಮಬದ್ಧವಾಗಿ ಉಜ್ಜುವುದು.
3. ಸ್ನಾನ:- ಬಿಸಿ ನೀರಿನಿಂದ ಸ್ನಾನ ಮಾಡುವುದು.
4. ಕೆಂಪು ಅಕ್ಕಿ ಅಥವಾ 60 ದಿನಗಳಲ್ಲಿ ಬೆಳೆದ ಅಕ್ಕಿಯ ಅನ್ನವನ್ನು ಮೊಸರಿನ ಜೊತೆಗೆ ಸೇವನೆ ಮಾಡುವುದು ಹಿತಕರ.
5. ಬಿಸಿಯಾದ ಹಾಲಿಗೆ ತುಪ್ಪ ಮತ್ತು ಕಲ್ಲುಸಕ್ಕರೆಯನ್ನು ಅಥವಾ ಬೆಲ್ಲವನ್ನು ಸೇರಿಸಿ ಸೇವಿಸುವುದು ಉತ್ತಮ
6. ಮನಸ್ಸಿಗೆ ಅನುಕೂಲಕರವಾದ ಸುವಾಸನೆಯನ್ನು ಆಘ್ರಾಣಿಸುವುದು. (ಉದಾ:- ಊದುಬತ್ತಿ ಅಥವಾ ಸೆಂಟ್‍ಗಳು ಸುವಾಸನೆ)
7. ತಲೆ ಮತ್ತು ಮುಖದ ಮೇಲೆ ಶೀತ ದ್ರವ್ಯಗಳ ಲೇಪವನ್ನು ಹಚ್ಚುವುದು.
8. ಪಾದಾಭ್ಯಂಗ (ಮಲಗುವ ಮುನ್ನ ಅಂಗಾಲುಗಳಿಗೆ ಎಣ್ಣೆಯನ್ನು ಹಚ್ಚಿ ಉಜ್ಜುವುದು)
9. ಸುಖವಾದ, ಸ್ವಚ್ಛವಾದ, ಮೃದುವಾದ ಹತ್ತಿಯಿಂದ ತಯಾರಿಸಿದ ಹಾಸಿಗೆಯಲ್ಲಿ ಮಲಗುವುದು.
10. ಮನಸ್ಸಿಗೆ ಹಿತವೆನಿಸುವ ಕತೆಗಳನ್ನು, ಪುಸ್ತಕಗಳನ್ನು ಓದುವುದು ಇತ್ಯಾದಿ.
11. ನಸ್ಯ:- ಎರಡೆರಡು ಹನಿ ಆಕಳ ತುಪ್ಪವನ್ನು ಕರಗಿಸಿ ಎರಡೂ ಮೂಗಿನ ಹೊಳ್ಳೆಗಳಿಗೆ ಹಾಕಿಕೊಳ್ಳುವುದು.
ಶರೀರದ ಧಾರಣೆಗೆ ಹೇಗೆ ನಿಯಮಪೂರ್ವಕವಾದ ಆಹಾರದ ಸೇವನೆಯು ಅವಶ್ಯಕವೋ ಅದೇ ರೀತಿ ನಿಯಮಪೂರ್ವಕವಾದ ನಿದ್ರೆಯು ಅತ್ಯವಶ್ಯಕ.
ಡಾ. ನಾಗಶ್ರೀ ಕೆ.ಎಸ್.
ವಿದ್ಯಾರ್ಥಿಗಳು ನಡೆ–ನುಡಿ–ಲಿಪಿ ಮಾಲಿನ್ಯದಿಂದ ದೂರವಾಗಬೇಕು
ವಿದ್ಯಾರ್ಥಿಗಳು ನಡೆ–ನುಡಿ–ಲಿಪಿ ಮಾಲಿನ್ಯದಿಂದ ದೂರವಾಗಬೇಕು ಎಂದು ಕನ್ನಡ ಸಂಸ್ಕೃತಿ ಸೇವಾ ಭಾರತಿಯ ಅಧ್ಯಕ್ಷ ಓಂಕಾರಪ್ರಿಯ ಬಾಗೇಪಲ್ಲಿ ತಿಳಿಸಿದರು.
ಪಟ್ಟಣದ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ಪದ ಸಂಪತ್ತು’ ಉಪನ್ಯಾಸ ಕಮ್ಮಟದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕೇವಲ ಭಾಷೆಯನ್ನಾಗಿ ಪರಿಗಣಿಸದೆ, ಅದೊಂದು ರೀತಿ, ನೀತಿ, ಖ್ಯಾತಿ, ಗತಿ, ಮತಿ ಮತ್ತು ಪದ್ಧತಿಯನ್ನು ತಿಳಿಸುವ, ಸತ್ಯಗಳನ್ನು ಸಾಕ್ಷಾತ್ಕಾರ ಮಾಡಿಸುವ ಕ್ರಿಯೆಯಾಗಿ, ಸಂಸ್ಕೃತಿಯಾಗಿ, ಅಕ್ಷರ ಅಕ್ಷಯವಾಗಿಸುವ ಶಿಕ್ಷಣವನ್ನು ಲಕ್ಷಣವಾಗಿಸುವಲ್ಲಿ ಅಕ್ಷರದೊಂದಿಗೆ ಆಡುತ್ತಾ ಕಲಿಯಬೇಕು ಎಂದು ಹೇಳಿದರು.
‘ಜನವರಿ’ ಕೇವಲ ವರ್ಷಾರಂಭವಾಗಿರದೆ ಅದೊಂದು ಮಹತ್ತರ ಸಂದೇಶ ಸಾರುವ, ಸರ್ವಧರ್ಮಗಳನ್ನು ಸಾಂಕೇತಿಸುವ, ಸತ್ಯಗಳ ದರ್ಶನ ಮಾಡಿಸುವ ಪದವಾಗಿದೆ ಎಂದು ಹೇಳಿ ಜನವರಿ ಎಂಬ ಪದದ ನೂರೈವತ್ತಕ್ಕೂ ಮೀರಿ ಅರ್ಥಗಳನ್ನು ವ್ಯಾಖ್ಯಾನಿಸಿದರು.
ವಕೀಲ ರವೀಂದ್ರನಾಥ್ ಮಾತನಾಡಿ, ‘ವಿದ್ಯಾರ್ಥಿಗಳಲ್ಲಿ ಭಾಷೆಯ ಬೆಳವಣಿಗೆಯಾಗಬೇಕು, ಓದುವ ಆಸಕ್ತಿ ಹೆಚ್ಚಬೇಕು, ಸ್ಪಷ್ಟ ಉಚ್ಛಾರಣೆ ಕಲಿಯಬೇಕು. ವಿದ್ಯಾರ್ಥಿಗಳು ವ್ಯರ್ಥವಾಗಿ ಸಮಯವನ್ನು ಕಳೆಯುವ ಬದಲಿಗೆ ಅರ್ಥವತ್ತಾದ, ಸೃಜನಾತ್ಮಕ, ಗುಣಾತ್ಮಕ, ಬೌದ್ಧಿಕ ಬೆಳವಣಿಗೆಗೆ ಸಹಾಯಕವಾಗುವಂತೆ ಸರಳ ಕನ್ನಡ ಪದಗಳಲ್ಲಿನ ಅಕ್ಷರದರ್ಥ ಶ್ರೀಮಂತಿಕೆಯನ್ನು ಗುರುತಿಸುವುದನ್ನು ಕಲಿಯಬೇಕು. ವಿವೇಕಾನಂದರ ಚಿಂತನೆ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳು ಪಾಲಿಸಿ ವಿವೇಕವಂತರಾಗಬೇಕು’ ಎಂದು ಹೇಳಿದರು.
ಪ್ರಾಂಶುಪಾಲ ಆನಂದ್, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಉಚಿತ ಸೈಕಲ್ ವಿತರಣೆ
ಸರ್ಕಾರ ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶೈಕ್ಷಣಿಕ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ತರಗತಿಯಲ್ಲಿ ಉತ್ತಮ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಸಮಯದ ಸದುಪಯೋಗ ಮತ್ತು ದೇಹಾರೋಗ ಹೆಚ್ಚಿಸಿಕೊಳ್ಳಲು ಸೈಕಲ್ ಬಳಕೆ ಅತ್ಯುತ್ತಮ ಸಾಧನೆಯಾಗಿದೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಉಚಿತ ಸೈಕಲ್ ವಿತರಣಾ ಯೋಜನೆ ಯಶಸ್ವಿಯಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ ಮಾತನಾಡಿ, ತಾಲ್ಲೂಕಿನಾದ್ಯಂತ ಬಸ್ಪಾಸ್ ಹೊಂದಿರುವ ಮತ್ತು ಹಾಸ್ಟೆಲ್ ಸೌಲಭ್ಯವಿರುವವರನ್ನು ಹೊರತುಪಡಿಸಿ, ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಎಂಟನೇ ತರಗತಿಯ ಗಂಡು ಮಕ್ಕಳಿಗೆ 920 ಸೈಕಲ್ಗಳು ಮತ್ತು ಹೆಣ್ಣು ಮಕ್ಕಳಿಗೆ 930 ಸೈಕಲ್ಗಳು ಸೇರಿದಂತೆ ಒಟ್ಟು 1,850 ಸೈಕಲ್ಗಳನ್ನು ವಿತರಿಸುತ್ತಿದ್ದೇವೆ ಎಂದು ತಿಳಿಸಿದರು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಪುರಸಭಾ ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸದಸ್ಯ ಅಫ್ಸರ್ಪಾಷ, ಲಕ್ಷ್ಮಣ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಪ್ರಾಂಶುಪಾಲ ಆನಂದ್, ಶಿಕ್ಷಣ ಸಂಯೋಜಕ ಮನ್ನಾರಸ್ವಾಮಿ, ಸೂರ್ಯನಾರಾಯಣಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ದೊಡ್ಡ ಸಮಸ್ಯೆಯೇ?
ವಿನಯ್ ಒಂಬತ್ತು ವರ್ಷದ ಬಾಲಕ. ಮೂರನೆ ತರಗತಿಯಲ್ಲಿ ಓದುತ್ತಿರುವ ಅವನೂ ಈಗಲೂ ಸಾಮಾನ್ಯವಾಗಿ ದಿನಾ ರಾತ್ರಿ ಹಾಸಿಗೆಯಲ್ಲಿ ಮೂತ್ರ ಮಾಡುತ್ತಿದ್ದ. ಮಕ್ಕಳ ತಜ್ಞರು ಕೊಟ್ಟ ಯಾವುದೇ ಔಷಧಿ ಅಥವಾ ಸಲಹೆಗಳು ಕೆಲಸಮಾಡಿರಲಿಲ್ಲ. ಯಾವುದೇ ದೈಹಿಕ ತೊಂದರೆಗಳಿಲ್ಲ, ಹಾಗಾಗಿ ಆಪ್ತಸಲಹೆಯ ಮೂಲಕ ಅವನ ಸಮಸ್ಯೆಯ ಪರಿಹಾರಕ್ಕೆ ಪ್ರಯತ್ನಿಸಿ, ಎಂದು ವೈದ್ಯರು ಹೇಳಿದ್ದರು. ಅದರಂತೆ ಪೋಷಕರ ನಮ್ಮ ಸಹಾಯ ಕೋರಿದ್ದರು.
ಮಕ್ಕಳಿಗೆ ಆಪ್ತಸಲಹೆ ನೀಡುವ ವಿಷಯದಲ್ಲಿರುವ ದೊಡ್ಡ ತೊಂದರೆ ಎಂದರೆ ಮಕ್ಕಳನ್ನು ನಾವು ನೇರವಾಗಿ ಪ್ರಶ್ನಿಸಿ, ಅವರಿಗೆ ಒಪ್ಪುವ ಸಲಹೆಗಳನ್ನು ನೀಡಲು ಸಾಧ್ಯವಿಲ್ಲ. ಏಕೆಂದರೆ ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳು ಅಪರಿಚಿತರೊಡನೆ ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ ಮತ್ತು ಅವರಿಗೆ ತಮ್ಮ ಮನಸ್ಸಿನಲ್ಲಿರುವುದನ್ನೆಲ್ಲಾ ಭಾಷೆಯ ಮೂಲಕ ವ್ಯಕ್ತಮಾಡುವುದು ಸಾಧ್ಯವಾಗಲಾರದು. ಹಾಗಾಗಿ ನಿಧಾನವಾಗಿ ಮಕ್ಕಳ ಜೊತೆ ಸ್ನೇಹವನ್ನು ಬೆಳೆಸಿಕೊಳ್ಳುತ್ತಾ ಅವರಲ್ಲಿ ಬದಲಾವಣೆಗೆ ಪ್ರಯತ್ನಿಸಬೇಕಾಗುತ್ತದೆ. ಜೊತೆಗೆ ಪೋಷಕರಿಗೆ ಮಕ್ಕಳ ಜೊತೆ ವರ್ತಿಸಬೇಕಾದ ರೀತಿಯ ಬಗೆಗೆ ತರಬೇತಿ ನೀಡಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಸಂದರ್ಭಗಳಲ್ಲಿ ಇದು ಪೋಷಕರಿಗೇ ಆಪ್ತಸಲಹೆಯಾಗಿರುತ್ತದೆ.
ಯಾವಾಗ ಇದು ಸಮಸ್ಯೆ?
ಮಕ್ಕಳಿಗೆ ಸುಮಾರು ಒಂದು ವರ್ಷವಾದಾಗಿನಿಂದ ಅಮ್ಮಂದಿರು ಶೌಚ ತರಬೇತಿಯನ್ನು ನೀಡಲು ಪ್ರಾರಂಭಿಸಬೇಕು. ಸುಮಾರು ಎರಡು ವರ್ಷದಿಂದ ಮೂರು ವರ್ಷದ ಒಳಗೆ ಮಕ್ಕಳು ಹಗಲು ಹೊತ್ತಿನಲ್ಲಿ ತಮಗೆ ಮಲಮೂತ್ರಗಳ ಒತ್ತಡವುಂಟಾದಾಗ ಇತರರಿಗೆ ಹೇಳುಲು ಸಮರ್ಥರಾಗುತ್ತಾರೆ. ಮೂರು ವರ್ಷದ ನಂತರವೂ ರಾತ್ರಿ ಹೊತ್ತಿನಲ್ಲಿ ಹಾಸಿಗೆಯಲ್ಲೇ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದನ್ನು ಮುಂದುವರೆಸಬಹುದು. ಇದಕ್ಕಾಗಿ ಪೋಷಕರು ಆತಂಕ ಪಡಬೇಕಿಲ್ಲ. ಆದರೆ ಇದೇ ಪ್ರವೃತ್ತಿ ಐದು ವರ್ಷಗಳ ನಂತರವೂ ಮುಂದುವರೆದರೆ ಮಕ್ಕಳಿಗೆ ಇದರಿಂದ ಹೊರಬರಲು ಸಹಾಯ ಬೇಕಾಗುತ್ತದೆ.
ಎಲ್ಲಿದೆ ಇದರ ಮೂಲ?
ಕೆಲವು ದೈಹಿಕ ನ್ಯೂನತೆಗಳಿಂದ ಮಕ್ಕಳಿಗೆ ಈ ಸಮಸ್ಯೆ ಉಂಟಾಗಬಹುದು. ಮೂತ್ರ ಮಾಡುವ ಅಂಗಾಗಗಳಲ್ಲಿ ಇರಬಹುದಾದ ತೊಂದರೆಗಳು, ಮೂತ್ರನಾಳಗಳ ಸೋಂಕು, ಕೆಲವು ನರದೋಷಗಳು ಮತ್ತಿತರ ಕಾರಣಗಳಿಂದ ಮಕ್ಕಳಿಗೆ ಮೂತ್ರ ವಿಸರ್ಜನೆಯ ಮೇಲೆ ಹಿಡಿತ ಸಾಧಿಸಲು ಕಷ್ಟವಾಗಬಹುದು.
ದೈಹಿಕವಾಗಿ ಯಾವುದೇ ತೊಂದರೆ ಇಲ್ಲವೆಂದಾದರೆ ಇದರ ಮೂಲ ಮನಸ್ಸಿನಲ್ಲೆಲ್ಲೋ ಇರುತ್ತದೆ ಎಂದು ತಿಳಿಯಬೇಕು. ಇಷ್ಟು ಚಿಕ್ಕ ಮಕ್ಕಳಿಗೆ ಅದೆಂತಹ ಮಾನಸಿಕ ಸಮಸ್ಯೆ ಎಂದು ಮೂಗು ಮುರಿಯಬೇಡಿ. ವಾಸ್ತವವಾಗಿ ಮಕ್ಕಳಿಗೆ ಬರುವ ಮಾನಸಿಕ ಸಮಸ್ಯೆಗಳೆಲ್ಲಾ ಪೋಷಕರ ಬಳುವಳಿ. ಇವುಗಳು ಈ ಕೆಳಗಿನಂತೆ ಇರಬಹುದು;
1. ಮಕ್ಕಳಿಗೆ ಸೌಹಾರ್ದಯುತ ಕೌಟುಂಬಿಕ ವಾತಾವರಣ ದೊರಕದಿದ್ದಾಗ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ಉದಾಹರಣೆಗೆ ಪೋಷಕರ ಕಲಹ, ವಿಚ್ಛೇದನ, ಕುಡಿತ ಮುಂತಾದ ದುಶ್ಚಟಗಳು, ಪೋಷಕರಿಂದ ದೂರವಿರುವ ಮಕ್ಕಳು, ಪೋಷಕರ ಸಾವು ಮುಂತಾದವು.
2. ಪೋಷಕರಿಂದ ಸೂಕ್ತವಾದ ಶೌಚ ತರಬೇತಿ ದೊರೆಯದಿರುವುದು.
3. ಶಾಲೆಯಲ್ಲಿ ಅಥವಾ ಸ್ನೇಹಿತರೊಡನೆ ಬೆರೆಯುವಾಗ ಮಗುವಿಗೆ ಉಂಟಾಗಬಹುದಾದ ಒತ್ತಡಗಳು.
4. ಮಕ್ಕಳ ಮನಸ್ಸಿನಲ್ಲಿ ಮೂಡಿರಬಹುದಾದ ಆತಂಕ, ಭಯ, ಹಿಂಜರಿತ, ಆತ್ಮವಿಶ್ವಾಸದ ಕೊರತೆ ಮುಂತಾದವು.
ಎಲ್ಲಿಂದ ಚಿಕಿತ್ಸೆಯನ್ನು ಆರಂಭಿಸಬೇಕು?
1. ಚಿಕಿತ್ಸೆಯ ಮೊದಲ ಹಂತವಾಗಿ ಮಕ್ಕಳ ತಜ್ಞರಲ್ಲಿ ಹೋಗಿ ಮಗು ಸಂಪೂರ್ಣ ದೈಹಿಕವಾಗಿ ಆರೋಗ್ಯವಾಗಿ ಇದೆಯೆಂದು ಖಚಿತಪಡಿಸಕೊಳ್ಳಬೇಕು.
2. ದೈಹಿಕ ತೊಂದರೆಗಳಿಲ್ಲವೆಂದು ಖಾತ್ರಿಯಾದಮೇಲೆ ಮನೆಯಲ್ಲಿಯೇ ಕೆಲವು ಸರಳ ನಿಯಮಗಳನ್ನು ಪಾಲಿಸಬಹುದು.
3. ರಾತ್ರಿ ಮಲಗುವುದಕ್ಕೆ ಎರಡು ಗಂಟೆಗೆ ಮೊದಲು ಮಾತ್ರ ನೀರು ಕುಡಿಯಲು ಹೇಳಬೇಕು.
4. ಮಲಗುವಾಗ ಮೂತ್ರವಿಸರ್ಜನೆ ಮಾಡುವ ಅಭ್ಯಾಸ ಮಾಡಿಸಬೇಕು.
5. ರಾತ್ರಿ ಒಮ್ಮೆ ಮಗುವನ್ನು ಎಬ್ಬಿಸಿ ಮೂತ್ರವಿಸರ್ಜನೆ ಮಾಡುವ ಅಭ್ಯಾಸಮಾಡಿಸಬಹುದು.
6. ಈ ಸರಳ ನಿಯಮಗಳು ಪ್ರಯೋಜನಕ್ಕೆ ಬರದಿದ್ದರೆ ತಜ್ಞರಿಂದ ಆಪ್ತಸಲಹೆ ಬೇಕಾಗುತ್ತದೆ. ಹಾಗೆ ಆಪ್ತಸಲಹೆಗೆ ಬರುವ ಮುನ್ನ ಪೋಷಕರು ಕೆಲವು ಎಚ್ಚರಿಕೆಗಳನ್ನು ವಹಿಸಬೇಕು.
7. ಹಾಸಿಗೆಯಲ್ಲಿ ಮೂತ್ರವಿಸರ್ಜನೆ ಮಾಡಿರುವುದಕ್ಕಾಗಿ ಮಗುವನ್ನು ಬೈಯುವುದು, ಹೊಡೆಯುವುದು ಅಥವಾ ಭಯಹುಟ್ಟಿಸುವುದು ಮುಂತಾದವುಗಳನ್ನು ಮಾಡಬಾರದು. ಇದರಿಂದ ಮಗುವಿನ ಆತಂಕ ಮತ್ತು ಅದರ ಮೇಲಿನ ಒತ್ತಡ ಜಾಸ್ತಿಯಾಗಿ ಈ ಅಭ್ಯಾಸದಿಂದ ಹೊರಬರಲು ಹೆಚ್ಚಿನ ಸಮಯ ಬೇಕಾಗಬಹುದು.
8. ಮಗುವಿನ ಅಭ್ಯಾಸವನ್ನು ಎಲ್ಲರೆದುರು ಹೇಳಿ ಅದಕ್ಕೆ ಅವಮಾನ ಮಾಡುವುದರ ಮೂಲಕ ಮಗುವಿನ ಆತ್ಮಗೌರಕ್ಕೆ ಧಕ್ಕೆ ತರಬಾರದು.
9. ಮಗು ಯಾವುದೋ ದೊಡ್ಡ ಕಾಯಲೆಯಿಂದ ನರಳುತ್ತಿದೆ ಎನ್ನವು ಭಾವನೆ ಹುಟ್ಟಿಸಬಾರದು. ಈ ತೊಂದರೆಯಲ್ಲಿ ಮಗುವಿನದು ಏನೂ ತಪ್ಪಿಲ್ಲ, ಅದರ ಸಹಾಯಕ್ಕೆ ನಾವಿದ್ದೇವೆ ಎನ್ನವು ಭರವಸೆಮೂಡಿಸಬೇಕು.
10. ಕೌಟುಂಬಿಕ ವಾತಾವರಣ ಇದಕ್ಕೆ ಕಾರಣವಾಗಿದ್ದರೆ, ಅದರಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಳ್ಳಬೇಕು.
ಹಾಸಿಗೆಯಲ್ಲಿ ಮೂತ್ರ ಮಾಡುವುದು ಹೊರನೋಟಕ್ಕೆ ಭಾರೀ ಸಮಸ್ಯೆಯಾಗಿ ಕಾಣದಿರಬಹುದು. ಆದರೆ ಇದಕ್ಕಾಗಿ ಮಗುವಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಮಗುವಿನ ಆತ್ಮವಿಶ್ವಾಸ ಮತ್ತು ಆತ್ಮಗೌರವಕ್ಕೆ ಪೆಟ್ಟುಬೀಳಬಹುದು. ಮಗು ಹಾಸ್ಟೆಲ್‍ಗಳಿಗೆ ಹೋಗಿರಲು ಅಥವಾ ಸ್ನೇಹಿತರೊಡನೆ ಮುಕ್ತವಾಗಿ ಬೆರೆಯಲು ಹಿಂಜರಿಯಬಹುದು. ಇದರಿಂದ ಮಗುವಿನ ಒಟ್ಟಾರೆ ವ್ಯಕ್ತಿತ್ವ ವಿಕಸನ ಸಮರ್ಪಕವಾಗಿರುವುದಿಲ್ಲ.
ವಸಂತ್ ನಡಹಳ್ಳಿ
ವಾಜಪೇಯಿಯವರ ಜನ್ಮದಿನದ ಅಂಗವಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೆಲಸದ ಒತ್ತಡದಲ್ಲಿರುವ ಕಾರ್ಮಿಕರು ಸೇರಿದಂತೆ ಆರೋಗ್ಯದ ಸಮಸ್ಯೆ ಅನುಭವಿಸುತ್ತಿರುವ ಬಡಜನತೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಜೆಪಿ ತಾಲ್ಲೂಕು ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರಗೌಡ ಹೇಳಿದರು.
ಪಟ್ಟಣದ ಅಶೋಕರಸ್ತೆಯಲ್ಲಿರುವ ಬಸವೇಶ್ವರ ದೇವಾಲಯದ ಆವರಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನದ ಅಂಗವಾಗಿ ಭಾನುವಾರ ತಾಲ್ಲೂಕು ಬಿಜೆಪಿ ಘಟಕ ಹಾಗೂ ಮಾನಸ ಮೆಡಿಕಲ್ ಟ್ರಸ್ಟ್ನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ರೇಷ್ಮೆಗೂಡು ಮಾರುಕಟ್ಟೆಯ ಉಪನಿರ್ದೇಶಕ ನರಸಿಂಹಮೂರ್ತಿ ಮಾತನಾಡಿ, ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಇಂತಹ ಶಿಬಿರಗಳ ಉಪಯೋಗಪಡಿದುಕೊಳ್ಳಬೇಕು. ದುಶ್ಚಟಗಳನ್ನು ಬಿಟ್ಟು ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಗಮನಹರಿಸಬೇಕು ಎಂದರು.
ಸಿ.ವಿ.ಲೋಕೇಶ್ಗೌಡ, ಬಿ.ಸಿ.ನಂದೀಶ್, ದಾಮೋದರ್, ಶ್ರೀಧರ್, ಎ.ಎಂ.ತ್ಯಾಗರಾಜ್, ಶ್ರೀರಾಮರೆಡ್ಡಿ, ಅನಿಲ್, ಚಲಪತಿ, ಸುಜಾತಮ್ಮ, ಶಿವಮ್ಮ, ರತ್ನಮ್ಮ, ಮುನಿರತ್ನಮ್ಮ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ರೇಷ್ಮೆಯ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು
ಅಂತರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆಯ ಖ್ಯಾತಿಯನ್ನು ಹೆಚ್ಚಿಸಬೇಕಾದರೆ ರೈತರು ದ್ವಿತಳಿ ಗೂಡನ್ನು ಬೆಳೆಯುವಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಸೊಣ್ಣೇನಹಳ್ಳಿ ಗ್ರಾಮದ ರೈತ ರಾಮಚಂದ್ರಾಚಾರ್ ಎಂಬುವವರ ತೋಟದಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಶನಿವಾರ ಆಯೋಜನೆ ಮಾಡಲಾಗಿದ್ದ ದ್ವಿತಳಿ ರೇಷ್ಮೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಗುಣಮಟ್ಟದ ರೇಷ್ಮೆಯನ್ನು ಬೆಳೆಯುವಲ್ಲಿ ಹೆಚ್ಚು ಪ್ರಸಿದ್ಧಿಯಾಗಿರುವ ಈ ಭಾಗದ ರೈತರು ನೀರಿನ ಅಭಾವದಿಂದಾಗಿ ಬೆಳೆ ಬೆಳೆಯಲು ಕಷ್ಟಕರವಾದ ಪರಿಸ್ಥಿತಿಯಲ್ಲಿಯೂ ದ್ವಿತಳಿ ಗೂಡು ಬೆಳೆಯಲು ಮುಂದಾಗುತ್ತಿರುವುದು ಸಂತಸದ ವಿಚಾರವೆಂದರು.
ರೇಷ್ಮೆ ಸಹಾಯಕ ನಿರ್ದೇಶಕ ವೃಷಬೇಂದ್ರ ಮಾತನಾಡಿ, ತೋಟಗಳಿಗೆ ಬೇವಿನಹಿಂಡಿ, ಹೊಂಗೆಹಿಂಡಿಯನ್ನು ಕೊಡುವುದು ಸೂಕ್ತ. ಕಳಪೆ ಗುಣಮಟ್ಟದ ರಸಗೊಬ್ಬರಗಳನ್ನು ನೀಡುವುದು, ರಾಸಾಯನಿಕಗಳನ್ನು ಸಿಂಪಡಣೆ ಮಾಡಬಾರದು. ತೋಟಗಳಿಗೆ ಕೊಡುವಂತಹ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರಗಳ ಬಗ್ಗೆ ಸೂಕ್ತ ಗಮನಹರಿಸಬೇಕು, ಹುಳುಗಳು ಹಣ್ಣಾದಾಗ ಚಂದ್ರಿಕೆಗಳಿಗೆ ಸೊಂಕು ನಿವಾರಕ ಔಷಧಿಯನ್ನು ಸಿಂಪಡಣೆ ಮಾಡಬೇಕು ಎಂದರು. ದ್ವಿತಳಿ ಗೂಡಿನ ವಿವಿಧ ಹಂತಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗಿದ್ದು, ರೈತರು ಮತ್ತು ಅಧಿಕಾರಿಗಳು ವೀಕ್ಷಿಸಿದರು.
ರೈತ ರಾಮಚಂದ್ರಾಚಾರ್, ಮೈಸೂರಿನ ಸಿ.ಎಸ್.ಆರ್. ಮತ್ತು ಟಿ.ಐ. ಸಂಸ್ಥೆಯ ನಿರ್ದೇಶಕ ಡಾ.ಶಿವಪ್ರಸಾದ್, ವಿಜ್ಞಾನಿ ಡಾ.ಪಣಿರಾಜ್, ತಾಲ್ಲೂಕು ಪಂಚಾಯತಿ ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಜಿಲ್ಲಾ ಪಂಚಾಯತಿ ಸದಸ್ಯ ಎಸ್.ಎಂ.ನಾರಾಯಣಸ್ವಾಮಿ, ರೇಷ್ಮೆ ಹಿತರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕ ಯಲುವಹಳ್ಳಿ ಸೊಣ್ಣೇಗೌಡ, ಹಸಿರುಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಮಳ್ಳೂರು ಶಿವಣ್ಣ, ರೇಷ್ಮೆ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ಬಾಗೇಪಲ್ಲಿ ರೇಷ್ಮೆ ಸಹಾಯಕ ನಿರ್ದೆಶಕ ಅಮರ್ನಾಥ್. ಕೃಷಿ ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಕುಮಾರ್, ಬಸವರಾಜ್, ರಾಮ್ಕುಮಾರ್, ನಿರಂಜನ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟ
ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಹೊನಲು ಬೆಳಕಿನ ಕಬಡ್ಡಿ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು.
ಕರ್ಣಶ್ರೀ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಶಿವಕುಮಾರಗೌಡ ಮಾತನಾಡಿ,‘ಗ್ರಾಮೀಣ ಭಾಗದ ಜಾನಪದ ಸೊಗಡನ್ನು ಹೊಂದಿರುವ ಕಬಡ್ಡಿ ಪಂದ್ಯವು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಯುವಕರ ಆತ್ಮಸ್ಥೈರ್ಯ, ಸಂಘಟನಾ ಚತುರತೆ, ಒಗ್ಗಟ್ಟು, ದೇಹಧಾಡ್ಯವನ್ನು ಹೆಚ್ಚಿಸುವ ಈ ಕ್ರೀಡೆಗೆ ಪ್ರೋತ್ಸಾಹ ಅತ್ಯಗತ್ಯ. ತಾಲ್ಲೂಕು ಮಟ್ಟದ ಈ ಕ್ರೀಡಾಕೂಟದಿಂದಾಗಿ ಹಲವಾರು ಪ್ರತಿಭಾವಂತರು ಬೆಳಕಿಗೆ ಬರಲಿದ್ದಾರೆ. ‘ವಾಜಪೇಯಿ ಕರ್ಣಶ್ರೀ ಕಪ್’ ವಿಜೇತರಿಗೆ ನೀಡಲಿದ್ದೇವೆ. ಭಾಗವಹಿಸಿದವರೆಲ್ಲರಿಗೂ ಪ್ರೋತ್ಸಾಹ ದಾಯಕವಾಗಿ ನೆನಪಿನ ಕಾಣಿಕೆ ನೀಡಲಾಗುವುದು’ ಎಂದು ಹೇಳಿದರು.
ಚೀಮನಹಳ್ಳಿ, ಶೆಟ್ಟಹಳ್ಳಿ, ದೊಡ್ಡತೇಕಹಳ್ಳಿ, ದೊಡ್ಡಚೊಕ್ಕಂಡಹಳ್ಳಿ, ದೇವರಮಳ್ಳೂರು, ನಾಗಮಂಗಲ, ಭಕ್ತರಹಳ್ಳಿ ಮುಂತಾದ ತಾಲ್ಲೂಕಿನ ವಿವಿಧ ಗ್ರಾಮಗಳ 40ಕ್ಕೂ ಹೆಚ್ಚು ತಂಡಗಳು ಕಬಡ್ಡಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದವು.
ಪ್ರಥಮ ಬಹುಮಾನ 25 ಸಾವಿರ ರೂಗಳು, ದ್ವಿತೀಯ ಬಹುಮಾನ 15 ಸಾವಿರ ರೂಗಳು, ತೃತೀಯ ಬಹುಮಾನ 10 ಸಾವಿರ ರೂಗಳನ್ನು, ನಾಲ್ಕನೆಯ ಬಹುಮಾನವಾಗಿ 5 ಸಾವಿರ ರೂಗಳನ್ನು ನೀಡಲಾಯಿತು.
ಸಬ್ಇನ್ಸ್ಪೆಕ್ಟರ್ ಪುರುಷೋತ್ತಮ್, ದೇವರಾಜ್, ಸೋಮನಾಥ್, ಮಂಜುನಾಥ್, ನಂದೀಶ್, ನಾರಾಯಣಸ್ವಾಮಿ, ನಾಗನರಸಿಂಹ, ಮುನಿನರಸಿಂಹ, ರವಿ, ಮುನಿಯಪ್ಪ, ಛಲಪತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ನಂಬಿಕೆ ಇಲ್ಲದ ಪರೀಕ್ಷೆಗಳು. . . . . ?
ವ್ಯಕ್ತಿಯೊಬ್ಬನ ಯೋಗ್ಯತೆಯನ್ನು ಅಳೆಯಲು ಪರೀಕ್ಷೆ ಅಗತ್ಯ ಪರೀಕ್ಷೆಯ ಮಾನದಂಡಗಳೇನೇ ಇದ್ದರೂ ಪ್ರಾಮುಖ್ಯತೆಯಂತೂ ಅನಾದಿಕಾಲದಿಂದಲೂ ಇದ್ದೇಇದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ‘ಪರೀಕ್ಷೆ’ ಎಂದರೆ ವಿದ್ಯಾರ್ಥಿಗಳಲ್ಲೇನೋ ಸಾಕಷ್ಟು ಭಯ ಭಕ್ತಿ ಇರಬಹುದು. ಆದರೆ ಅವುಗಳನ್ನು ನಡೆಸುವವರಿಗೆ ಮತ್ತು ಮೌಲ್ಯಮಾಪನ ಮಾಡುವವರಿಗೆ ಅದು ಅಷ್ಟೊಂದು ಆಸಕ್ತಿಯ ವಿಷಯವಾಗಿ ಉಳಿದಿಲ್ಲ. ಮಾಡಬೇಕಲ್ಲ ಎಂದು ಮಾಡಿ, ಕೈ ತೊಳೆದುಕೊಂಡರೆ ಸಾಕು ಎಂಬ ಮಟ್ಟಕ್ಕೆ ಶಾಲೆ ಕಾಲೇಜುಗಳಲ್ಲಿನ ಪರೀಕ್ಷಾ ವ್ಯವಸ್ಥೆ ತಲುಪುತ್ತಿರುವುದಕ್ಕೆ ಶಿಕ್ಷಣದಲ್ಲಿ ಗುಣಮಟ್ಟದ ಸುಧಾರಣೆ ಎನ್ನಬೇಕೋ ಕುಸಿತ ಎಂದು ಭಾವಿಸಬೇಕೋ ತಿಳಿಯದ ಗೊಂದಲದಲ್ಲಿ ಇದ್ದೇವೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ಅನೇಕ ಯೋಜನೆಗಳು ಜಾರಿಯಾದದ್ದು ಸಂತೋಷದ ಸಂಗತಿ. ಮಧ್ಯಾಹ್ನದ ಬಿಸಿಯೂಟ ಯೋಜನೆ, ಕ್ಷೀರಭಾಗ್ಯ ಯೋಜನೆ, ಸೈಕಲ್ ಯೋಜನೆ ಇವೆಲ್ಲ ಜಾರಿಗೊಂಡು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಿ ಬರಲು ತಕ್ಕಮಟ್ಟಿನ ಅನುಕೂಲವಾಗಿದ್ದು ನಿಜ. ಆದರೆ ಪ್ರಶ್ನೆ ಇರುವುದು – ವಿದ್ಯಾರ್ಥಿಗಳು ‘ಶಾಲೆ’ ಎಂಬ ಕಟ್ಟಡಕ್ಕೆ ಭೇಟಿ ನೀಡಿ ಬೆಳಗಿನಿಂದ ಸಂಜೆಯವರೆಗೆ ಇದ್ದು ಬರುವುದಕ್ಕೊ ಅಥವಾ ಶಿಕ್ಷಣವನ್ನು ಕಲಿಯಲಿಕ್ಕೋ? ಯಾಕೆಂದರೆ ಶಿಕ್ಷಣ ಕಲಿಸಲು ಅಗತ್ಯವಾದ ಸಂಖ್ಯೆಯಲ್ಲಿ ಶಿಕ್ಷಕರಿಲ್ಲ. ಪಠೈಪುಸ್ತಕಗಳೂ ಸಕಾಲದಲ್ಲಿ ದೊರಕುವುದು ದುಸ್ತರವಾದ ಸಂಗತಿಯೇ. ಇರುವಷ್ಟೇ ಶಿಕ್ಷಕರಿಗೆ ಶಿಕ್ಷಣದ ಕೆಲಸದ ಹೊರೆಯ ಜೊತೆ ಜೊತೆಗೆ –‘ಗಣತ’ ಇತ್ಯಾದಿಗಳ ವಹಿವಾಟು, ಹಾಗಾಗಿ ನಡೆಯಬೇಕಾದ ಪ್ರಮಾಣದಲ್ಲಿ ಪಾಠ ನಡೆಯದಿದ್ದಾಗ ನಡೆಸುವ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳೆಲ್ಲ ಚೆನ್ನಾಗಿ ಬರೆದು ಪಾಸು ಮಾಡಬೇಕೆಂದು ನಿರೀಕ್ಷಿಸುವುದು ಹೇಗೆ? ಅವರೆಲ್ಲ ಹೇಗೆ ಬರೆದರೂ ಪಾಸು ಮಾಡದೇ ಅವರನ್ನು ಅದೇ ಕ್ಲಾಸಿನಲ್ಲಿ ಮತ್ತೊಂದು ವರ್ಷ ಕೂರಿಸಿದರೆ – ಅದಕ್ಕೆ ಅವರು, ಪಾಲಕರು ಒಟ್ಟಾಗಿ ಪ್ರಶ್ನಿಸಬಹುದು. ನೀವು ಸರಿಯಾಗಿ ಪಾಠ ಮಾಡಿಲ್ಲ. ಬಹುತೇಕೆ ಸಂದರ್ಭಗಳಲ್ಲಿ ಹೀಗೆ ಹೇಳುವುದು ಇದಕ್ಕೆ ಅಪವಾದಗಳೂ ಇರಲು ಸಾಧ್ಯ ಅದು ಬೇರೆ ಮಾತು. ಹೀಗಾದಾಗ ಅನಿವಾರ್ಯವಾಗಿ ಎಲ್ಲ ವಿದ್ಯಾರ್ಥಿಗಳೂ ಪಾಸು. ಒಂದರಿಂದ ಹತ್ತರವರೆಗೆ ಯಾರೂ ಫೇಲಿಲ್ಲ ಎಂದರೆ ಒಂದು ರೀತಿಯಲ್ಲಿ ಅವರಿಗೆಲ್ಲ ‘ಪಾಸು ಭಾಗ್ಯ’ ಯೋಜನೆ ಪ್ರಾಪ್ತವಾದಂತೆ. ಹಾಗೆ ಹೇಗೂ ಪಾಸು ಮಾಡುತ್ತಾರೆಂದಾದ ಮೇಲೆ ಯಾರಾದರೂ ಯಾಕೆ ಕಲಿಕೆಗೆ ಪ್ರಯತ್ನಿಸುತ್ತಾರೆ? ಫೇಲಾಗುವ ಭಯವಿದ್ದಾಗ ಮಾತ್ರ ಓದುವ ಹಟ ಹುಟ್ಟಿಕೊಳ್ಳುತ್ತದೆ. ಹಟತೊಟ್ಟು, ಓದದಿದ್ದರೆ ಕಲಿಯುವುದಾದರೂ ಹೇಗೆ? ಇದೊಂದು ರೀತಿಯಲ್ಲಿ ‘ಬೀಜ ವೃಕ್ಷ’ ನ್ಯಾಯದಂತಾಗಿಬಿಟ್ಟಿದೆ. ಒಂದೇ ಬಾರಿ ಎಸ್.ಎಸ್.ಎಲ್.ಸಿ. ಕೇಂದ್ರೀಯ ಪರೀಕ್ಷೆಯಲ್ಲಿ ಇದರ ಪರಿಣಾಮ ತಿಳುಯುತ್ತದೆ. ಪಿಯುಸಿಗೂ ಹಾಗೆ ಪಬ್ಲಿಕ್ ಪರೀಕ್ಷೆ, ಪದವಿಗಳಿಗೂ ಹಾಗೆ ಪ್ರತಿ ಸೆಮಿಸ್ಟರ್ ಪರೀಕ್ಷೆಯೂ ಪಬ್ಲಿಕ್ ಪರೀಕ್ಷೆ ಎಂ.ಎ, ಡಿ.ಎಡ್, ಬಿ.ಎಡ್ ಇತ್ಯಾದಿಗಳಿಗೂ ಹಾಗೆ ಪಬ್ಲಿಕ್ ಪರೀಕ್ಷೆ ಹಾಕಿದ ಮೇಲೆ ಈ ಪರೀಕ್ಷೆಗಳೆಲ್ಲ ವಿದ್ಯಾರ್ಥಿಗಳ ನಿಜವಾದ ಜ್ಞಾನದ ಮಟ್ಟವನ್ನು ಗುರುತಿಸಿ ಅದನ್ನು ಅಂಕಪಟ್ಟಿಯಲ್ಲಿ ದಾಖಲಿಸಬೇಕಲ್ಲ? ನಿಜ, ಅವು ದಾಖಲಿಸುತ್ತವೆ. ಹಾಗಿದ್ದರೆ, ಆಯಾ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನಾಧರಿಸಿ ಮುಂದಿನ ಶಿಕ್ಷಣಕ್ಕೆ ಪ್ರವೇಶ ಅಥವಾ ನೌಕರಿಯನ್ನು ನೀಡಲಾಗುತ್ತಿದೆಯೇ? ಖಂಡಿತ ಇಲ್ಲ. ಯಾಕೆಂದರೆ ಆ ಪರೀಕ್ಷೆಗಳ ಫಲಿತಾಂಶದ ಮೇಲೆ ಬಹುಶಃ ಇಂದು ನಂಬಿಕೆಯೇ ಇಲ್ಲವಾಗಿದೆ.
ದ್ವಿತೀಯ ಪಿಯೂಸಿ ವಿಜ್ಞಾನದ ವಿಷಯದಲ್ಲಿ ವಿದ್ಯಾರ್ಥಿ ಪಡೆದ ಅಂಕಗಳ ಆಧಾರದ ಮೇಲೆ ಆತ/ಆಕೆಗೆ ವೃತ್ತಿ ಶಿಕ್ಷಣ ಪಡೆಯಲು ಅವಕಾಶವಿಲ್ಲ. ಅವರು ಸಿಇಟಿ ಬರೆದು ಅದರ ಆಧಾರದ ಮೇಲೆ ದೊರಕುವ ಕೋರ್ಸುಗಳಿಗೆ ಸಾಗಬೇಕು. ಎಷ್ಟೋ ಸ್ನಾತಕ್ಕೋತ್ತರ ವಿಷಯಗಳಿಗೆ ಸೇರಲು ಕೂಡ ವಿಶ್ವವಿದ್ಯಾಲಯಗಳು ಪ್ರವೇಶ ಪರೀಕ್ಷೆ ನಡೆಸುತ್ತವೆ. ಹಾಗೇ ಡಿಎಡ್, ಮತ್ತು ಬಿಎಡ್ ಆದವರು. ಅವರು ಪದವಿಯಲ್ಲಿನ ಪರೀಕ್ಷೆಗಳಲ್ಲಿ ಪಡೆದುಕೊಂಡ ಅಂಕಗಳ ಆಧಾರದ ಮೇಲೆ ನೌಕರಿಗೆ ಅರ್ಹರಾಗುವುದಿಲ್ಲ. ಅವರಿಗೆ ಅದಕ್ಕೋಸ್ಕರವಾಗಿಯೇ ‘ಟಿಇಟಿ’ ನಡೆಸುತ್ತಾರೆ. ಎಂ.ಎ., ಎಂ.ಎಸ್ಸಿ; ಎಂ.ಕಾಂ ಆದರೆ ಕಾಲೇಜುಗಳಿಗೆ ಶಿಕ್ಷಕರಾಗಲಾಗುವುದಿಲ್ಲ. ಖಾಯಂ ಶಿಕ್ಷಕರಾಗಲು ನೆಟ್ ಸ್ಲೆಟ್ (NET), (SLET) ಪರೀಕ್ಷೆಗಳನ್ನು ನಡೆಸುತ್ತಾರೆ. ಇನ್ನು ಬ್ಯಾಂಕ್ ಇತ್ಯಾದಿ ಕಡೆಗಳಲ್ಲಿ ಕೂಡ ಅವರು ಅವರದ್ದೇ ಆದ ಪರೀಕ್ಷೆಗಳನ್ನು ನಡೆಸುತ್ತಾರೆ.
ಯಾರೂ ಕೂಡ ಕೇವಲ ಶೈಕ್ಷಣಿಕ ಪರೀಕ್ಷೆಗಳಲ್ಲಿ ಪಡೆದ ಅಂಕಗಳನ್ನಷ್ಟೇ ಆಧರಿಸಿ ನೌಕರಿ ನೀಡುವುದಿಲ್ಲ. ಇದಕ್ಕೆ ಖಾಸಗಿ ಕಂಪನಿಗಳೂ ಹೊರತಾಗಿಲ್ಲ. ಅಂದರೆ ಏನು ಅರ್ಥ? ಪಡೆದ ಶಿಕ್ಷಣಕ್ಕೆ, ಸಂಬಂಧಿಸಿದಂತೆ ಸಂಬಂಧಿಸಿದ ಪರೀಕ್ಷಾ ಮಂಡಳಿ, ವಿಶ್ವವಿದ್ಯಾನಿಲಯಗಳ ಪರೀಕ್ಷೆಗಳಲ್ಲಿ ನಂಬಿಕೆ ಇಲ್ಲ ಎಂದು ಅರ್ಥವಾಗುವುದಿಲ್ಲವೇ? ನಂಬಿಕೆ ಇಲ್ಲದ ಪರೀಕ್ಷೆಗಳು ಇವು ಎಂದಾದ ಮೇಲೆ ಇವುಗಳನ್ನು ನಡೆಸುವುದರ ಪ್ರಯೋಜನ ಕೂಡಾ ಕಾಲ ಕ್ರಮೇಣ ಪ್ರಶ್ನಾರ್ಹವಾಗಬಹುದು. ಹೇಗೂ ಅವರವರು ಅವರವರಿಗೆ ಬೇಕಾದಂತಹ ಪರೀಕ್ಷೆಗಳನ್ನು ನಡೆಸಿ ಆಯ್ಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಬೇಕಾದ ‘ಕನಿಷ್ಟ’ ವಿದ್ಯಾರ್ಹತೆಗಾಗಿ ಅಷ್ಟೇ ಈ ಅಂಕಪಟ್ಟಿಗಳು ಎಂದಾದರೆ ಯಾಕೆ ಅಷ್ಟೆಲ್ಲ ತಲೆಕೆಡಿಸಿಕೊಳ್ಳಬೇಕು? ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ಮಕ್ಕಳು ಎಲ್ಲರೂ ಪಾಸು ಎಂಬ ತತ್ವವನ್ನೇ ಮುಂದುವರಿಸಿದರೆ ತಪ್ಪೇನು ಎಂದು ಪ್ರಶ್ನಿಸುವುದಕ್ಕೆ ಸಾಕಷ್ಟು ಅವಕಾಶಗಳಿವೆ. ಹಾಗಾಗಿ ‘ಪಾಸುಭಾಗ್ಯ’ ಯೋಜನೆಯನ್ನು ಸ್ನಾತಕ – ಸ್ನಾತಕೋತ್ತರ ಹಂತದವರೆಗೂ ವಿಸ್ತರಿಸಿದರೆ ಹೇಗೆ? ಕುಹಕದ ಮಾತಾದೀತು ಅಷ್ಟೆ. ಯಾಕೆಂದರೆ, ಉಳಿದವರಿಗೆ ನಂಬಿಕೆ ಇಲ್ಲ ಎಂದಾದರೆ ಓದುವವರಿಗೆ ಮತ್ತು ಕಲಿಸುವವರಿಗೆ ನಂಬಿಕೆ ಇಲ್ಲ ಎಂದು ಅರ್ಥವಾಗುವುದಿಲ್ಲ. ಪರೀಕ್ಷೆಗಳಿವೆ, ಪಾಸಾಗಬೇಕಾದ್ದು ಅವಶ್ಯಕ ಎಂಬ ಕಲ್ಪನೆ ಸ್ಥಿರವಾಗಿದ್ದುದರಿಂದಲೇ ಇಷ್ಟರ ಮಟ್ಟಿಗಾದರೂ ಶಿಸ್ತಿನಿಂದ ಇಂದು ಶೈಕ್ಷಣಿಕ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಒಟ್ಟಾರೆ ಶೈಕ್ಷಣಿಕ ವಾತಾವರಣಕ್ಕೆ ಇದು ಅಗತ್ಯ ಹಾಗಲ್ಲದೆ ಹೋದರೆ ಒಟ್ಟಾರೆ ವ್ಯವಸ್ಥೆ ಭವಿಷ್ಯದಲ್ಲಿ ಸಂಪೂರ್ಣ ಹದಗೆಟ್ಟುಹೋಗುವ ಸಾಧ್ಯತೆಯಿರುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ.
ಪರೀಕ್ಷೆಗಳು ಪ್ರಸ್ತುತ ದಿನಮಾನಗಳಲ್ಲಿ ನಂಬಿಗೆ ಕಳೆದುಕೊಳ್ಳುತ್ತಿರುವುದು ನಿಜ. ಆದರೆ ನಮ್ಮ ಪ್ರಯತ್ನವಿರಬೇಕಾದದ್ದು ನಂಬಿಕೆಯನ್ನು ಉಳಿಸುವ ದಿಕ್ಕಿನಲ್ಲಿ. ಅಂಕಪಟ್ಟಿಗೆ ಅದರದ್ದೇ ಆದ ಮಾನ್ಯತೆ ಮತ್ತು ಯೋಗ್ಯತೆ ಲಭ್ಯವಾಗುವಂತೆ ಒಟ್ಟಾರೆ ವಾತಾವರಣದ ನಿರ್ಮತಿ ಕೂಡ ಇಂದಿನ ಅಗತ್ಯ ಪರೀಕ್ಷಾ ಅಕ್ರಮಗಳು – ಅನಗತ್ಯ ಹಗರಣಗಳು, ಪ್ರಶ್ನೆಪತ್ರಿಕೆಯ ಸೋರಿಕೆ – ಬೇಕಾಬಿಟ್ಟಿ ಮೌಲ್ಯಮಾಪನ ಇಂಥವುಗಳೆಲ್ಲ ನಿಂತ ಪಕ್ಷದಲ್ಲಿ ಪ್ರಾಮಾಣಿಕ ವಿದ್ಯಾರ್ಥಿಗಳಿಗೆ ನೆಮ್ಮದಿ ದೊರಕೀತು. ಹಾಗೆ ಪ್ರಾಮಾಣಿಕ ಶ್ರದ್ಧಾವಂತ ಶಿಕ್ಷಕ ಸಮುದಾಯಕ್ಕೆ ಸಂತಸ ದೊರಕಲು ಸಾಧ್ಯ ನಂಬಿಕೆ ಇಲ್ಲದ ಪರೀಕ್ಷೆಗಳು ಎಂದು ಪರೀಕ್ಷೆಗಳನ್ನೇ ರದ್ದುಗೊಳಿಸಿ ಎಲ್ಲರೂ ಪಾಸೆಂದು ಘೋಷಿಸುವುದು ಯುಕ್ತವಾದ ಕ್ರಮವಲ್ಲ. ಬದಲಿಗೆ ಪರೀಕ್ಷೆಗಳೆಲ್ಲ ನಂಬಿಕೆಗೆ ಅರ್ಹವಾಗುವಂತೆ ನೋಡಿಕೊಳ್ಳುವ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕಾಟಾಚಾರದ ಪರೀಕ್ಷಾ ವ್ಯವಹಾರಗಳಿಗೆ ಕಡಿವಾಣ ಹಾಕುವುದಲ್ಲದೆ ಭ್ರಷ್ಟಾಚಾರ ನುಸುಳದಂತೆ ಜಾಗ್ರತೆ ವಹಿಸಬೇಕಾದದ್ದೂ ಅಗತ್ಯ ಹೇಗೆಂದರೆ ‘ಸೀಸರನ ಹೆಂಡತಿ ಪತಿವ್ರತೆಯಾಗಿದ್ದರಷ್ಟೇ ಸಾಲದು; ಹಾಗಂತ ಲೋಕಕ್ಕೆ ನಿರೂಪಿಸುವುದೂ ಮುಖ್ಯ’ ಎಂಬಂತೆ.
ಇನ್ನು ಈ ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿಗಳೆಲ್ಲ ಜಾರಿಗೆ ಬಂದದ್ದೇ ಪ್ರತಿಭಾವಂತರಿಗೆ ಅನ್ಯಾಯವಾಗದಿರಲಿ ಎಂದು. ಈ ಪರೀಕ್ಷೆಗಳೆಲ್ಲ ಅತ್ಯಂತ ಪಾರದರ್ಶಕವಾಗಿ ಮತ್ತು ವ್ಯವಸ್ಥಿತವಾಗಿ ಜರುಗುತ್ತಿರುವುದರಿಂದ ಜನರಿಗೆ ಇವುಗಳ ಮೇಲೆ ನಂಬಿಕೆ ಹುಟ್ಟಿಕೊಂಡಿದೆ. ಹಾಗೆ ಯಾವುದೇ ವಶೀಲಿ ಬಾಜಿಗೂ ಕೈ ಹಾಕದೆ ಮುಂದಿನ ವ್ಯಾಸಂಗ ಕೈಗೊಳ್ಳಲು ಯಾ ನೌಕರಿಯನ್ನು ಪಡೆದುಕೊಳ್ಳಲು ಇವು ಸಹಾಯ ಮಾಡುತ್ತವೆ ಎಂಬ ತೃಪ್ತಿ ವಿದ್ಯಾರ್ಥಿ ಮತ್ತು ಪಾಲಕರಲ್ಲಿ ಮೂಡಿರುವುದು ಸುಳ್ಳಲ್ಲ. ಹೀಗಾಗಿ ನಾವು ಇಂದು ಇವುಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದೇವೆ. ವಿದ್ಯಾರ್ಥಿಗಳಾದರೂ ಅತ್ಯಂತ ಜವಾಬ್ದಾರಿಯಿಂದ ಈ ಪರೀಕ್ಷೆಗಳಿಗೆ ಮಾತ್ರ ಇನ್ನಿಲ್ಲದ ರೀತಿಯಲ್ಲಿ ತರಬೇತಿ ಪಡೆದುಕೊಳ್ಳುತ್ತ – ಅಧ್ಯಯನ ಮಾಡುತ್ತ ಸಿದ್ಧರಾಗುತ್ತಾರೆ. ಯಾಕೆಂದರೆ ಈ ಪರೀಕ್ಷೆಗಳ ಫಲಿತಾಂಶ ಅವರವರ ಬದುಕಿನ ದಿಕ್ಕನ್ನೇ ಬದಲಿಸುವ ಸಾಮಥ್ರ್ಯ ಹೊಂದಿರುವಂಥದ್ದು. ಹೀಗೆ ಜವಾಬ್ದಾರಿ ಮತ್ತು ಸತತಾಧ್ಯಯನಕ್ಕೆ ಒತ್ತು ನೀಡುವ ಪರೀಕ್ಷೆ ಪದ್ಧತಿ, ಎಲ್ಲ ಹಂತಗಳಲ್ಲೂ ಜಾರಿಯಾದರೆ ಜನ ಅದನ್ನು ಗೌರವಿಸಲು ಸಾಧ್ಯ ಒಬ್ಬ ಟಿಇಟಿ, ನೆಟ್, ಸ್ಲೆಟ್ ಪಾಸಾದರೆ ಅವನನ್ನು ಸಮಾಜ ನೋಡುವ ರೀತಿಗೂ ಯಾವುದೋ ಪದವಿ-ಸ್ನಾತಕೋತ್ತರ ಪದವಿ ಪಡೆದವನನ್ನು ನೋಡುವ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದನ್ನು ನಾವು ಬೇಕಿದ್ದರೆ ಗಮನಿಸಬಹುದು.
ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿ ಪರೀಕ್ಷೆಗಳು ಹುಟ್ಟಿದ್ದರ ಹಿಂದಿರುವ ಕಾರಣಗಳನ್ನು ಅರಿತು-ನಮ್ಮ ಮಾಮೂಲಿ ಶಿಕ್ಷಣ ಪದ್ಧತಿಯಲ್ಲಿ ಸುಧಾರಣೆಗಳನ್ನು ತರುವುದು ಅಂದರೆ ಅಲ್ಲಿನ ಪರೀಕ್ಷೆಗಳು ನಂಬಿಕೆಗೆ ಯೋಗ್ಯ ಎಂದು ನಿರೂಪಿಸುವುದು ಮುಖ್ಯ ಸಧ್ಯದ ಸಿಇಟಿ, ಟಿಇಟಿ, ನೆಟ್, ಸ್ಲೆಟ್ ಇತ್ಯಾದಿಗಳೂ ಉಳಿದ ಮಾಮೂಲಿ ಪರೀಕ್ಷೆಗಳಂತಾದರೆ ಮತ್ತೆ ಬೇರೆ ಬೇರೆ ರೀತಿಯ ಪರೀಕ್ಷಾ ಪದ್ಧತಿಗಳನ್ನು ಜಾರಿಗೆ ತರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಬಹುದು. ಒಟ್ಟಾರೆ ಸುಧಾರಣೆಯತ್ತ ಸಾಗಬೇಕಾದ ಸಂದರ್ಭದಲ್ಲಿ ಇವೆಲ್ಲ ಅನಿವಾರ್ಯವಾಗುತ್ತ ಹೋಗುತ್ತವೆ. ಹಾಗಾಗಿ ಪ್ರಾಥಮಿಕ ಹಂತದಿಂದ ಹಿಡಿದು ಸ್ನಾತಕೋತ್ತರ ಹಂತದ ವರೆಗೆ ವಿದ್ಯಾರ್ಥಿಗಳಿಗೆ., ಬೇಕಾದ ಸೌಲಭ್ಯ ಒದಗಿಸಿಕೊಡುವುದಲ್ಲದೆ, ಶೈಕ್ಷಣಿಕ ಅನುಕೂಲತೆಯನ್ನು ದೊರಕಿಸಿಕೊಡುವುದಲ್ಲದೆ, ಕೊಟ್ಟವುಗಳ ಉಪಯೋಗವೆಷ್ಟಾಯ್ತು? ಎಂದು ಕಾಲಕಾಲಕ್ಕೆ ಪರಿಶೀಲಿಸಿದುವುದು ಕೂಡ ಉಪಯುಕ್ತ ಕ್ರಮವಾದೀತು. ಎಲ್ಲವನ್ನೂ ನೀಡಿದ ಬಳಿಕ ಕೂಡ ಓದದೇ ಅಧ್ಯಯನ ಮಾಡದೆ ಒಟ್ಟಾರೆ ಮುಂದಿನ ತರಗತಿಗೆ ಪ್ರವೇಶ ನೀಡಬೇಕೆಂದು ಬಯಸುವುದು – ಒತ್ತಾಯಿಸುವುದು – ಸೂಕ್ತವಾದದ್ದಲ್ಲ. ಪಾಸಾಗಿಯೇ ಪಾಸಾದರೆ ಮಾತ್ರ ಮುಂದೆ ಹೋಗುವುದಕ್ಕೆ ಅವಕಾಶ. ಹಾಗಲ್ಲದಿದ್ದಲ್ಲಿ ಇದ್ದಲ್ಲೇ ಇದ್ದು ಪುನಃ ಪ್ರಯತ್ನಿಸಿ ಮುಂದೆ ಹೋಗಲಿ ಎಂದು ಖಂಡಿತವಾಗಿ ಹೇಳುವುದು. ಆ ಕುರಿತು ಕಠಿಣ ಕ್ರಮ ಕೈಗೊಳ್ಳುವುದು ಸಾಧ್ಯವಾಗದ ಪಕ್ಷದಲ್ಲಿ ‘ಗುಣಮಟ್ಟ’ ನಿರೀಕ್ಷೆ ಸಾಧ್ಯವಿಲ್ಲ. ಅಷ್ಟೂ ಸೆಮಿಷ್ಟರ್‍ಗಳ ಪರೀಕ್ಷೆಗಳನ್ನು ಕೊನೆಗೆ ಒಟ್ಟಿಗೇ ಬರೆಯಲು ಅವಕಾಶ ಕೊಡಬೇಕೆಂಬ ಬೇಡಿಕೆಗೆ ಯಾವುದೇ ಅರ್ಥವಿಲ್ಲ. ಆಯಾ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಅಷ್ಟಷ್ಟನ್ನೇ ಮುಗಿಸಲಾರೆ ಕೊನೆಗೆ ಅಷ್ಟನ್ನೂ ಪೂರೈಸುತ್ತಾರೆ ಎಂದರೆ – ಅಲ್ಲಿಯವರೆಗೆ ಅವರೇನು ಮಾಡುತ್ತಿರುತ್ತಾರೆ ಎಂದು ಕೂಡ ಪ್ರಶ್ನಿಸಬೇಕಾಗುತ್ತದೆ. ಹಾಗಾಗಿ ನಂಬಿಕೆ ಇಲ್ಲದ ಪರೀಕ್ಷೆಗಳು ನಮಗೆ ಅನಗತ್ಯ ಪರೀಕ್ಷೆಗಳು ನಂಬಿಕೆಗೆ ಯೋಗ್ಯವಾದವುಗಳಾಗಬೇಕೆಂಬುದಷ್ಟೇ ಸದ್ಯದ ಕಳಕಳಿ.
ರವೀಂದ್ರ ಭಟ್ ಕುಳಿಬೀಡು
ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ‘ಕರ್ನಾಟಕ ಭೂಷಣ’ ಪ್ರಶಸ್ತಿ
ಶಿಡ್ಲಘಟ್ಟ ಸೇವಾದಳದ ವೆಂಕಟರೆಡ್ಡಿ ಅವರಿಗೆ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ‘ಕರ್ನಾಟಕ ಭೂಷಣ’ ಪ್ರಶಸ್ತಿಯನ್ನು ಈಚೆಗೆ ಜಸ್ಟಿಸ್ ಎಸ್.ಆರ್.ನಾಯಕ್, ವಕೀಲರ ಸಂಘದ ರಾಜ್ಯಾಧ್ಯಕ್ಷ ಶಿವರಾಮ, ನಟಿ ದೀಪಿಕಾದಾಸ್ ಪ್ರಧಾನ ಮಾಡಿದರು.

