23.1 C
Sidlaghatta
Sunday, December 28, 2025
Home Blog Page 998

ಕ್ರಿಮಿನಾಶಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ನಶಿಸುತ್ತಿದೆ

0

ತೀವ್ರ ಬರಗಾಲಕ್ಕೆ ತುತ್ತಾಗಿರುವ ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರು ಬೆಳೆಗಳನ್ನು ಬೆಳೆಯಬೇಕಾದರೆ ಅನಿವಾರ್ಯವಾಗಿ ಕ್ರಿಮಿನಾಶಕಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗ ಮಾಡಬೇಕಾಗಿದ್ದು ಕ್ರಿಮಿನಾಶಕಗಳನ್ನು ಉಪಯೋಗಿಸುವಾಗ ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಹೇಳಿದರು.
ಪಟ್ಟಣದ ವೇಣುಗೋಪಾಲಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಕೃಷಿ ಇಲಾಖೆಯಿಂದ ರೈತರ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಸುರಕ್ಷಿತ ಕೀಟನಾಶಕ ಬಳಕೆ ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ವ್ಯವಸಾಯ ಮಾಡಲು ಪ್ರತಿನಿತ್ಯ ಸಂಕಷ್ಟಗಳನ್ನು ಅನುಭವಿಸುತ್ತಿರುವ ಈ ಭಾಗದ ರೈತರು ಯಾವುದೇ ಬೆಳೆ ಬೆಳೆಯಬೇಕಾದರೆ ಕ್ರಿಮಿನಾಶಕಗಳ ಮೊರೆಹೋಗುವುದರಿಂದ ಭೂಮಿಯ ಮೇಲೆ ದುಷ್ಪರಿಣಾಮ ಬೀರುವುದರಿಂದ ಭೂಮಿಯ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಾಗಾಗಿ ರೈತರು ರಾಸಾಯನಿಕ ರಸಗೊಬ್ಬರಗಳನ್ನು ಉಪಯೋಗ ಮಾಡುವುದಕ್ಕಿಂತ ಹೆಚ್ಚಾಗಿ ಸಾವಯವ ಕೃಷಿಯತ್ತ ಗಮನಹರಿಸುವುದು ಸೂಕ್ತ ಎಂದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ದೇವೆಗೌಡ ಮಾತನಾಡಿ, ರೈತರು ಕ್ರಿಮಿನಾಶಕಗಳನ್ನು ಹೆಚ್ಚಾಗಿ ಬಳಕೆ ಮಾಡುವುದಕ್ಕಿಂತ ಸರ್ಕಾರದಿಂದ ಆಯೋಜನೆ ಮಾಡುವಂತಹ ತರಬೇತಿಗಳಲ್ಲಿ ಭಾಗವಹಿಸಿ ತಜ್ಞರಿಂದ ಸೂಕ್ತ ಸಲಹೆ ಸೂಚನೆಗಳನ್ನು ಪಡೆದುಕೊಂಡು ಗುಣಮಟ್ಟದ ಇಳುವರಿಯ ಬೆಳೆ ಬೆಳೆಯಬೇಕು. ಇಲಾಖೆಯ ಮುಖಾಂತರ ಸಿಗುವಂತಹ ಎಲ್ಲಾ ಸವಲತ್ತುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ತಾದೂರು ಮಂಜುನಾಥ್, ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ, ಬೋದಗೂರು ವೆಂಕಟಸ್ವಾಮಿರೆಡ್ಡಿ, ರಾಮಚಂದ್ರಪ್ಪ, ಶಿವಮೂರ್ತಿ, ಆನಂದ್ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕರ್ನಾಟಕ ರಕ್ಷಣಾ ಸೇನೆಯ ಕಂಬದಹಳ್ಳಿ ಶಾಖೆ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ

0

ಸಂಘಟನೆಗಳು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ನಾಡಿನ ನೆಲ, ಜಲ, ಭಾಷೆಗೆ ಧಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುವುದರೊಂದಿಗೆ ನಾಡಿನ ರಕ್ಷಣೆಗೆ ಮುಂದಾಗಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂಬದಹಳ್ಳಿ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕರ್ನಾಟಕ ರಕ್ಷಣಾ ಸೇನೆಯ ಕಂಬದಹಳ್ಳಿ ಶಾಖೆ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಘಟನೆಗಳು ಸಮಾಜಮುಖಿಯಾಗಿ ಕೆಲಸ ಮಾಡುವುದರೊಂದಿಗೆ ವೈಯಕ್ತಿಕವಾಗಿ ಯಾರಿಗೂ ನೋವು ಉಂಟಾಗುವ ಹಾಗೆ ನಡೆದುಕೊಳ್ಳದೇ ಪ್ರಾಮಾಣಿಕವಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು.
ಅನ್ಯ ಭಾಷೆಗಳ ಪ್ರಭಾವದಿಂದಾಗಿ ಕನ್ನಡ ಭಾಷೆಯು ಇತ್ತೀಚೆಗೆ ಅಲ್ಪಸಂಖ್ಯಾತ ಭಾಷೆಯಾಗುತ್ತಿದ್ದು ಕನ್ನಡ ಭಾಷೆಯ ಉಳಿವಿಗಾಗಿ ಎಲ್ಲಾ ಸಂಘಟನೆಗಳು ಪ್ರಾಮಾಣಿಕವಾಗಿ ಹೋರಾಟಗಳನ್ನು ಮಾಡುವಂತಹ ಕೆಲಸವನ್ನು ಮಾಡಬೇಕು. ಯುವಜನತೆ ಮುಂದಿನ ಪೀಳಿಗೆಗೆ ಮಾದರಿಯಾಗಿ ಸಂಘಟಿತರಾಗುವುದರೊಂದಿಗೆ ಪ್ರತಿಯೊಂದು ಗ್ರಾಮದಲ್ಲೂ ಈ ರೀತಿಯಾದ ಸಂಘಟನೆಗಳು ಬೆಳೆಯಬೇಕು ಎಂದರು.
ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಟಿ.ರಮೇಶ್ಗೌಡ ಮಾತನಾಡಿ ರಾಜ್ಯದ ಗಡಿಭಾಗಗಳಲ್ಲಿ ಕನ್ನಡಿಗರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯದ ವಿರುದ್ದ ಹೋರಾಟ ನಡೆಸುವುದರೊಂದಿಗೆ ನಾಡಿನ ಜನತೆಗೆ ರಕ್ಷಣೆ ನೀಡಬೇಕಾದಂತಹ ಅನಿವಾರ್ಯತೆ ಎದುರಾಗಿದ್ದು ಇತ್ತೀಚೆಗೆ ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರ ಮೇಲೆ ಹೆಚ್ಚಾಗುತ್ತಿರುವ ದೌರ್ಜನ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಸಂಘಟನೆ ಹೋರಾಟ ಮಾಡಲಿದೆ ಎಂದರು.
ಇಡೀ ದೇಶಕ್ಕೆ ಹಣ್ಣು, ಹಾಲು, ತರಕಾರಿ ಉತ್ಪಾದಿಸಿ ನೀಡಿದಂತಹ ಈ ಭಾಗದ ರೈತರು ಕುಡಿಯುವ ನೀರಿಗೂ ಪರಿತಪಿಸುತ್ತಿದ್ದು ಸರ್ಕಾರ ಕೂಡಲೇ ಈ ಭಾಗದ ರೈತರಿಗೆ ೧೦೦ ಟಿಎಂಸಿ ಯಷ್ಟು ನೀರು ತರಬೇಕು. ಅದು ಶಾಶ್ವತ ನೀರಾವರಿಯಾಗಬಹುದು ಅಥವ ಎತ್ತಿನಹೊಳೆ ಯೋಜನೆಯಾಗಬಹುದು ಒಟ್ಟಾರೆ ಈ ಭಾಗದ ರೈತರು ವ್ಯವಸಾಯ ಮಾಡಲು ೧೦೦ ಟಿಎಂಸಿ ಯಷ್ಟು ನೀರು ಬೇಕು. ಹಾಗಾಗಿ ಕರ್ನಾಟಕ ರಕ್ಷಣಾ ಸೇನೆಯಿಂದ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ರಾಜ್ಯೋತ್ಸವದ ಅಂಗವಾಗಿ ದ್ವಜಾರೋಹಣ ನೆರವೇರಿಸಿದ ನಂತರ ಭುವನೇಶ್ವರಿ ದೇವಿಯ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಲಾಯಿತು.
ಮೇಲೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಮಂಜುನಾಥ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುರೇಂದ್ರಗೌಡ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ತನುಜಾ, ರಾಜ್ಯ ಸಂಚಾಲಕ ಎಸ್.ಪಿ.ರಾಜು, ತಾಲ್ಲೂಕು ಅಧ್ಯಕ್ಷ ವಿ.ವಿಶ್ವನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಯ ಕಾಮಗಾರಿಗೆ ಚಾಲನೆ

0

ತಾಲ್ಲೂಕಿನ ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಪ್ರಾರಂಭಗೊಂಡ ಸುಮಾರು 19 ಲಕ್ಷ ರೂಪಾಯಿಗಳ ಕಾಂಕ್ರೀಟ್ ರಸ್ತೆಯ ಕಾಮಗಾರಿಗಳನ್ನು ಶಾಸಕ ಎಂ.ರಾಜಣ್ಣ ಶನಿವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.
ತಾಲ್ಲೂಕಿನ ಜಪ್ತಿಹೊಸಹಳ್ಳಿ, ಬೋದಗೂರು ಮತ್ತು ಹಿತ್ತಲಹಳ್ಳಿಗಳ ಹರಿಜನ ಕಾಲೋನಿಗಳಲ್ಲಿ ತಲಾ ಆರೂ ಕಾಲು ಲಕ್ಷ ರೂಪಾಯಿಗಳ ಸಿಮೆಂಟ್ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಎಂ.ರಾಜಣ್ಣ,‘ಆನೂರು ಗ್ರಾಮ ಪಂಚಾಯತಿಯ ಆರು ಗ್ರಾಮಗಳಾದ ಆನೂರು, ಜಪ್ತಿಹೊಸಹಳ್ಳಿ, ಬೋದಗೂರು, ಹಿತ್ತಲಹಳ್ಳಿ, ದಬರಗಾನಹಳ್ಳಿ, ಬೈರನಾಯಕನಹಳ್ಳಿಗಳಲ್ಲಿ ಮೂರು ಇಲಾಖೆಗಳಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಗಳು ವಾಸಿಸುವ ಪ್ರದೇಶಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ. ನನ್ನ ಕ್ಷೇತ್ರದ 90 ಹಳ್ಳಿಗಳಲ್ಲಿ ಕಾಮಗಾರಿಗಳು ನಡೆಯಲಿವೆ. ಸಣ್ಣ ನೀರಾವರಿ ಇಲಾಖೆ , ಸಮಾಜ ಕಲ್ಯಾಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಅನುದಾನಗಳು ಬಿಡುಗಡೆಯಾಗಿದ್ದು ಮೂಲಭೂತ ಸೌಕರ್ಯಗಳು ವೃದ್ಧಿಸಲಿವೆ’ ಎಂದು ಹೇಳಿದರು.
ಕೋಚಿಮುಲ್ ನಿರ್ದೇಶಕ ಮುನಿಯಪ್ಪ, ಪಿ.ವಿ.ನಾಗರಾಜ್, ಆನೂರು ಗ್ರಾಮ ಪಂಚಾಯತಿ ಅಧ್ಯಕ್ಷ ನಂಜುಂಡಪ್ಪ, ಲಕ್ಷ್ಮೀಪತಿ, ಸೂರ್ಯನಾರಾಯಣಗೌಡ, ಗುತ್ತಿಗೆದಾರ ಚನ್ನಕೇಶವ, ಎ.ಇ.ಇ ಜಮೀರ್ ಅಹಮದ್, ಮಳ್ಳೂರಯ್ಯ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ

0

ಕ್ರೀಡೆಗಳು ವ್ಯಕ್ತಿಯ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಾನಸಿಕ ಮತ್ತು ದೈಹಿಕ ಆರೋಗ್ಯ ಕ್ರೀಡೆಯಿಂದ ಲಭಿಸುತ್ತದೆ. ಕ್ರೀಡೆಗಳು ಸ್ಪರ್ಧಾ ಮನೋಭಾವ ಬೆಳೆಸುತ್ತವೆ. ಪರಸ್ಪರ ಪ್ರೀತಿ, ಭಾತೃತ್ವತೆ, ಸ್ನೇಹ ವೃದ್ಧಿಯಾಗಲೂ ಕ್ರೀಡೆಗಳು ಸಹಕಾರಿ ಎಂದು ಶಾಸಕ ಎಂ.ರಾಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಶನಿವಾರ ತಾಲ್ಲೂಕು ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅವರವರ ಇಷ್ಟದ ಕ್ರೀಡೆಗಳಲ್ಲಿ ಪ್ರತಿಯೊಬ್ಬರು ತಪ್ಪದೆ ಭಾಗವಹಿಸಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆಟದಲ್ಲಿ ಕ್ರೀಡಾ ಮನೋಭಾವನೆ ಮುಖ್ಯ. ಒತ್ತಡದ ನಡುವೆ ಕೆಲಸ ಮಾಡುವುದರಿಂದ ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆ ಸಾಮಾನ್ಯವಾಗಿದೆ. ದೈಹಿಕ ವ್ಯಾಯಾಮ ಮತ್ತು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಖಾಯಿಲೆಗಳಿಂದ ದೂರ ಉಳಿಯಲು ಸಾಧ್ಯ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಾವೂ ಕ್ರೀಡಾಕೂಟದಲ್ಲಿ ಭಾಗವಹಿಸಿ ಮಾತನಾಡಿ, ಕ್ರೀಡೆಗಳು ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡುತ್ತದೆ. ಸರ್ಕಾರಿ ನೌಕರರು ದಿನದಲ್ಲಿ ಅರ್ಧ ಗಂಟೆಯಾದರೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು.
ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ರಾಮಚಂದ್ರಪ್ಪ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ವಿಜಯಕುಮಾರ್, ಅಧ್ಯಕ್ಷ ಎನ್.ಕೆ.ಗುರುರಾಜರಾವ್, ಉಪಾಧ್ಯಕ್ಷ ಎನ್.ಶಶಿಕುಮಾರ್, ಎನ್.ರಾಮಚಂದ್ರ, ಆರ್.ಕೇಶವರೆಡ್ಡಿ, ಬಿ.ವಿ.ಶ್ರೀರಾಮಪ್ಪ, ಅಗಜಾನನಮೂರ್ತಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಕಾಶೀವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಅಯ್ಯಪ್ಪಸ್ವಾಮಿಗೆ ದೀಪಾರಾಧನೆ, ಹಾಲಿನ ಅಭಿಷೇಕ

0

ಪಟ್ಟಣದ ಅಶೋಕ ರಸ್ತೆಯಲ್ಲಿರುವ ಕಾಶೀವಿಶ್ವೇಶ್ವರಸ್ವಾಮಿ ದೇವಾಲಯದಲ್ಲಿ ಶನಿವಾರ ಅಯ್ಯಪ್ಪಸ್ವಾಮಿ ಭಕ್ತ ಮಂಡಳಿಯವರಿಂದ 44ನೇ ವರ್ಷದ ದೀಪಾರಾಧನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಶನಿವಾರ ಬೆಳಿಗ್ಗೆ ಅಯ್ಯಪ್ಪಸ್ವಾಮಿಗೆ 101 ಲೀಟರ್ ಹಾಲಿನ ಅಭಿಷೇಕ, ಹೂವಿನ ಅಲಂಕಾರ, ಭಜನೆ, ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.
‘ಹಲವಾರು ವರ್ಷಗಳಿಂದ ಸತತವಾಗಿ ಪ್ರತಿ ವರ್ಷವೂ ವಿಜೃಂಭಣೆಯಿಂದ ದೀಪಾರಾಧನೆ, ಹಾಲಿನ ಅಭಿಷೇಕ ಮತ್ತು ವಿಶೇಷ ಅಲಂಕಾರದೊಂದಿಗೆ ಅಯ್ಯಪ್ಪ ಭಕ್ತರು ಅಯ್ಯಪ್ಪಸ್ವಾಮಿಯ ಪೂಜಾ ಮಹೋತ್ಸವವನ್ನು ನೆರವೇರಿಸುತ್ತಾ ಬಂದಿದ್ದೇವೆ. ಈ ಬಾರಿ ಹಾಲಿನ ಅಭಿಷೇಕ, ತುಪ್ಪದ ಅಭಿಷೇಕ ಮತ್ತು 101 ಕಲಶ ಸ್ಥಾಪಿಸಿ ಹೋಮವನ್ನು ಸಹ ನಡೆಸಿದ್ದೇವೆ. ಮಧ್ಯಾಹ್ನ ಭಜನೆ ಕಾರ್ಯಕ್ರಮ ಹಾಗೂ ಸಂಜೆ ಪುಟ್ಟ ಮಕ್ಕಳು ದೀಪಗಳೊಂದಿಗೆ ಮುನ್ನಡೆಸುತ್ತಾ ಊರಿನ ಪ್ರಮುಖ ಬೀದಿಗಳಲ್ಲಿ ಹೂವಿನ ಪಲ್ಲಕ್ಕಿಯಲ್ಲಿ ಅಯ್ಯಪ್ಪಸ್ವಾಮಿಯ ಉತ್ಸವವನ್ನು ಮಂಗಳ ವಾದ್ಯಗಳೊಂದಿಗೆ ಏರ್ಪಡಿಸಲಾಗಿದೆ’ ಎಂದು ಎಂ.ಎಂ.ಕೃಷ್ಣಪ್ಪ ತಿಳಿಸಿದರು.

ಮಳಮಾಚನಹಳ್ಳಿಯಲ್ಲಿ ಕನ್ನಡ ರಕ್ಷಣಾ ವೇದಿಕೆ ಘಟಕದ ಉದ್ಘಾಟನೆ

0

ಶಿಡ್ಲಘಟ್ಟ ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಈಚೆಗೆ ನೂತನ ಕನ್ನಡ ರಕ್ಷಣಾ ವೇದಿಕೆ ಘಟಕದ ಉದ್ಘಾಟನಾ ಸಮಾರಂಭವನ್ನು ಶಿವರಾಮಗೌಡರ ನೇತೃತ್ವದಲ್ಲಿ ನಡೆಸಲಾಯಿತು. ಜಿಲ್ಲಾಧ್ಯಕ್ಷ ಛಲಪತಿ, ತಾಲ್ಲೂಕು ಅಧ್ಯಕ್ಷ ಶ್ರೀಧರ್, ಚಂದ್ರಣ್ಣ, ಲಕ್ಷ್ಮಯ್ಯ, ಕೃಷ್ಣಯ್ಯ, ಜಗದೀಶ್ ಹಾಜರಿದ್ದರು.

ನಡಿಪಿನಾಯಕನಹಳ್ಳಿ ಗ್ರಾಮದ ಯುವಕರಿಂದ ರಕ್ತದಾನ

0

ಗ್ರಾಮಾಂತರ ಪ್ರದೇಶದ ಶಿಕ್ಷಣ ಸಂಸ್ಥೆಗಳು ಗ್ರಾಮದ ಯುವಕರನ್ನು ರಕ್ತದಾನದಂಥಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಬೇಕು ಎಂದು ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ತಿಳಿಸಿದರು.
ತಾಲ್ಲೂಕಿನ ನಡಿಪಿನಾಯಕನಹಳ್ಳಿಯ ಕಪಿಲಮ್ಮ ಕಾಲೇಜು ಆವರಣದಲ್ಲಿ ರೆಡ್ಕ್ರಾಸ್ ಸೊಸೈಟಿ ಮತ್ತು ಲೋಕಮಾತಾ ಎಜುಕೇಷನಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ನಾವು ಸ್ವಯಂಪ್ರೇರಿತವಾಗಿ ನೀಡುವ ಒಂದು ಯೂನಿಟ್ ರಕ್ತ ಮೂರು ಜೀವಗಳನ್ನು ಉಳಿಸಬಲ್ಲದು. ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಿ, ಹೊಸ ಜೀವ ನೀಡಬಲ್ಲದು. ರಕ್ತದಾನ ಮಾಡುವುದರಿಂದ ಕೇವಲ ರಕ್ತ ತೆಗೆದುಕೊಂಡವರಿಗೆ ಮಾತ್ರವಲ್ಲ ರಕ್ತದಾನ ಮಾಡಿದವರಿಗೂ ಕೂಡ ಅನುಕೂಲವಾಗಲಿದೆ. ರಕ್ತದಿಂದ ವಿವಿಧ ರೋಗಿಗಳ ಗಾಯಗಳ ಚಿಕಿತ್ಸೆಗೆ ಬೇಕಾಗುವ ಮತ್ತು ಜೀವ ಉಳಿಸಲು ಅಗತ್ಯವಿರುವ ರಕ್ತ ದೊರಕುವುದರಿಂದ ಸಾಕಷ್ಟು ಅನುಕೂಲವಾಗುತ್ತದೆ. ಸಾಕಷ್ಟು ಜನರಿಗೆ ರಕ್ತ ದಾನ ಮಾಡಿದವರು ದೇವರಿದ್ದಂತೆ. ಒಂದು ಜೀವವನ್ನು ಉಳಿಸುವ ಈ ಕಾರ್ಯದಿಂದ ಆಗುವ ಸಂತೋಷವನ್ನು ಅನುಭವಿಸಿಯೇ ತಿಳಿಯಬೇಕು ಎಂದು ಹೇಳಿದರು. ರಕ್ತದಾನ ಶಿಬಿರದಲ್ಲಿ 52 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಆರ್.ಕೃಷ್ಣಮೂರ್ತಿ, ರೆಡ್ಕ್ರಾಸ್ ಸೊಸೈಟಿಯ ಗುರುರಾಜರಾವ್, ನಾರಾಯಣಾಚಾರ್, ಪ್ರಾಂಶುಪಾಲ ಸತ್ಯನಾರಾಯಣ, ಸುದರ್ಶನ್, ಸುಮಾ, ರೂಪಾ, ಪ್ರಕಾಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ರೂಪಾ, ಅಭಿವೃದ್ಧಿ ಅಧಿಕಾರಿ ಗೋಪಿನಾಥ್, ಸದಸ್ಯ ರಾಮಕೃಷ್ಣಪ್ಪ, ರವಿ ಲಂಬಾಣಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸರ್ಕಾರಿ ಗುಂಡು ತೋಪಿನ ತೆರವು ಕಾರ್ಯಾಚರಣೆ

0

ತಾಲ್ಲೂಕಿನ ಜಪ್ತಿಹೊಸಹಳ್ಳಿ ಗ್ರಾಮದಲ್ಲಿ ಶುಕ್ರವಾರ ಒತ್ತುವರಿಯಾಗಿರುವ ಸರ್ಕಾರಿ ಗುಂಡು ತೋಪನ್ನು ತಾಲ್ಲೂಕು ಆಡಳಿತದ ವತಿಯಿಂದ ತೆರವುಗೊಳಿಸುವ ಕಾರ್ಯ ನಡೆಯಿತು.
ಜಪ್ತಿಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 3 ರಲ್ಲಿ 38 ಗುಂಟೆ, ಸರ್ವೆ ನಂಬರ್ 4 ರಲ್ಲಿ 7 ಎಕರೆ 32 ಗುಂಟೆ ಜಮೀನು ಸರ್ಕಾರಿ ಗುಂಡು ತೋಪಿದ್ದು, ಕೆಲ ಭಾಗ ಹಲವಾರು ವರ್ಷಗಳಿಂದ ಖಾಸಗಿಯರ ಅನುಭವದಲ್ಲಿತ್ತು. ಈ ಬಗ್ಗೆ ಗ್ರಾಮಸ್ಥರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಹಿಂದೆ ತಾಲ್ಲೂಕು ಆಡಳಿತದ ವತಿಯಿಂದ ಸರ್ವೆ ನಡೆಸಿದ್ದರು. ಗುಂಡುತೋಪಿನಲ್ಲಿ ಉಳುಮೆ ಮಾಡುತ್ತಿದ್ದವರಿಗೆ ನೋಟಿಸ್ ನೀಡಿದ್ದರು. ಶುಕ್ರವಾರ ಗುಂಡು ತೋಪಿನ ಸುತ್ತ ಜೆಸಿಬಿ ಮೂಲಕ ಕಾಲುವೆ ತೆಗೆಸುವ ಮೂಲಕ ತೆರವು ಕಾರ್ಯಾಚರಣೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಸಹ ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ‘ಯಾವುದೇ ತಕರಾರಿಲ್ಲದೆ ತೆರವು ಕಾರ್ಯಾಚರಣೆಯನ್ನು ನಡೆಸಿದ್ದೇವೆ. ಈ ಗುಂಡುತೋಪಿನ ಜಾಗದಲ್ಲಿ ಮೂರು ದೇವಾಲಯಗಳು, ಶಾಲಾ ಕಟ್ಟಡ ಹಾಗೂ ಆರು ಮನೆಗಳಿವೆ. ಸಾರ್ವಜನಿಕರ ಅನುಕೂಲಕ್ಕಾಗಿ ದೇವಾಲಯ ಮತ್ತು ಶಾಲಾ ಕಟ್ಟಡವನ್ನು ತೆರವುಗೊಳಿಸುವುದಿಲ್ಲ. ಉಳಿದಂತೆ ಆರು ಮನೆಗಳನ್ನು ತೆರವುಗೊಳಿಸಲಾಗುವುದು’ ಎಂದು ತಿಳಿಸಿದರು.
ರಜಸ್ವ ನಿರೀಕ್ಷಕ ಸುಬ್ರಮಣಿ, ರೆವಿನ್ಯೂ ಇಲಾಖೆಯ ಲಾರೆನ್ಸ್, ನಾಗರಾಜು, ಜಂಗಮಕೋಟೆ ಎ.ಎಸ್.ಐ ಈರಪ್ಪ, ಸನಾವುಲ್ಲಾ, ಗ್ರಾಮಸ್ಥರು ಈ ಸಂದರ್ಭದಲ್ಲಿ ಹಾಜರಿದ್ದರು.

ತೊಂಡೆಕಾಯಿ ಗೊಜ್ಜು

0

ಬೇಕಾಗುವ ಸಾಮಗ್ರಿ:
5-6 ತೊಂಡೆಕಾಯಿ
2 ಹಸಿಮೆಣಸು
1 ಈರುಳ್ಳಿ
ಸಣ್ಣ ಚೂರು ಹುಣಿಸೆಹಣ್ಣು
ಉಪ್ಪು
1 ಕಪ್ಪು ತೆಂಗಿನ ತುರಿ
ಮಾಡುವ ವಿಧಾನ:
ತೊಂಡೆಕಾಯಿ, ಹಸಿಮೆಣಸು, ಹುಣಸೆಹಣ್ಣನ್ನು ಒಟ್ಟಿಗೆ ಬೇಯಿಸಿಕೊಳ್ಳಿ.
ಮೊದಲಿಗೆ ತೆಂಗಿನತುರಿಯನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ, ಅದಕ್ಕೆ ಬೇಯಿಸಿದ ಮಿಶ್ರಣವನ್ನು ಹಾಕಿ ತರಿ ತರಿಯಾಗಿ ರುಬ್ಬಿ.
ಅದಕ್ಕೆ ಕೊಬ್ಬರಿ ಎಣ್ಣೆಯಲ್ಲಿ ಉದ್ದಿನಬೇಳೆ, ಸಾಸಿವೆ, ಒಂದು ಒಣಮೆಣಸು ಹಾಕಿ ಒಗ್ಗರಣೆ ಕೊಡಿ. ಇದಕ್ಕೆ ಒಂದು ಈರುಳ್ಳಿಯನ್ನು ಸಣ್ಣಕೆ ಕೊಚ್ಚಿ ಹಾಕಿ. ಇದನ್ನು ಅನ್ನಕ್ಕೆ ಹಾಕಿ ಕಲಸಿ ಊಟಮಾಡಿ.
ಇದೇ ವಿಧಾನದಲ್ಲಿ ಬೀನ್ಸ್, ಬೀಟ್‍ರೂಟ್, ಹೀರೇಕಾಯಿಯಲ್ಲಿಯೂ ಮಾಡಬಹುದು.

ಭಕ್ತರಹಳ್ಳಿ ಗೇಟ್ ಸಮೀಪ ಅಪಘಾತ, ವ್ಯಕ್ತಿಯೊಬ್ಬ ಮೃತ

0

ತಾಲ್ಲೂಕಿನ ಜಂಗಮಕೋಟೆ ರಸ್ತೆಯಲ್ಲಿರುವ ಭಕ್ತರಹಳ್ಳಿ ಗೇಟ್ ಸಮೀಪ ಗುರುವಾರ ಬೆಳಗಿನ ಜಾವ ಅಪಘಾತ ನಡೆದಿದ್ದು, ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.
ಗಂಗರಾಜು(26) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಈತ ಆಂಧ್ರದ ರಾಮಸಮುದ್ರದ ನಿವಾಸಿಯಾಗಿದ್ದು, ಭಕ್ತರಹಳ್ಳಿ ಗ್ರಾಮದ ಭವ್ಯಾ ಎಂಬುವವರನ್ನು ಆರು ತಿಂಗಳ ಹಿಂದೆ ವಿವಾಹವಾಗಿದ್ದರು. ಕಳೆದ ಹತ್ತು ದಿನಗಳಿಂದ ಭಕ್ತರಹಳ್ಳಿ ಗ್ರಾಮದಿಂದ ಬೆಂಗಳೂರಿಗೆ ಬೈಕಿನಲ್ಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಗುರುವಾರ ಬೆಳಗಿನ ಜಾವ ಅತಿಹೆಚ್ಚು ಮಂಜು ಕವಿದಿದ್ದು, ದ್ವಿಚಕ್ರ ವಾಹನದಲ್ಲಿ ತೆರಳಿದ್ದ ಗಂಗರಾಜು ತಲೆಗೆ ಹೆಲ್ಮೆಟ್ ಧರಿಸಿದ್ದರೂ ತೀವ್ರವಾಗಿ ತಲೆಗೆ ಹೊಡೆತ ಬಿದ್ದು ರಸ್ತೆ ಬದಿಯಲ್ಲಿ ಶವವಾಗಿ ಕಂಡುಬಂದಿದ್ದಾರೆ. ಯಾವ ರೀತಿಯ ಅಪಘಾತ ಸಮಭವಿಸಿದೆ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಸ್ಥಳಕ್ಕೆ ಜಂಗಮಕೋಟೆ ಹೊರಠಾಣೆಯ ಎ.ಎಸ್.ಐ ಈರಪ್ಪ ಭೇಟಿ ನೀಡಿದ್ದರು. ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.

error: Content is protected !!