23.1 C
Sidlaghatta
Sunday, December 28, 2025
Home Blog Page 999

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಯಿಬಾಬಾಗೆ ಸಂತಾಕ್ಲಾಸ್ ಅಲಂಕಾರ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಗುರುವಾರ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಸಾಯಿಬಾಬಾಗೆ ಸಂತಾಕ್ಲಾಸ್ ಅಲಂಕಾರವನ್ನು ಮಾಡಲಾಗಿತ್ತು.

ಎಬೆನೆಜರ್ ಮಾರ್ತೋಮ ಚರ್ಚ್ನಲ್ಲಿ ಕ್ರಿಸ್ಮಸ್ ಆಚರಣೆ

0

ಪಟ್ಟಣದ ಎಬೆನೆಜರ್ ಮಾರ್ತೋಮ ಚರ್ಚ್ನಲ್ಲಿ ಗುರುವಾರ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಅಲಂಕಾರ ಮಾಡಲಾಗಿತ್ತು. ಮೇಣದ ಬತ್ತಿಗಳನ್ನು ಬೆಳಗುವ ಮೂಲಕ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಜಾತಿ ಬೇಧವಿಲ್ಲದೆ ನೂರಾರು ಮಂದಿ ಚರ್ಚ್ಗೆ ಆಗಮಿಸಿ ಮೇಣದ ಬತ್ತಿಗಳನ್ನು ಬೆಳಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಚರ್ಚ್ನಲ್ಲಿ ಕೇಕನ್ನು ಹಂಚಿದರು.
‘ವರ್ಷಕ್ಕೊಮ್ಮೆ ಬರುವ ಏಸುಕ್ರಿಸ್ತನ ಜಯಂತಿಯನ್ನು ಸಡಗರದಿಂದ, ಭಕ್ತಿ ಭಾವದಿಂದ ಕ್ರಿಶ್ಚಿಯನ್ನರು ಆಚರಿಸುತ್ತಾರೆ. ಕ್ರೈಸ್ತರಿಗೆ ಪವಿತ್ರ ಹಬ್ಬವಾಗಿರುವ ಕ್ರಿಸ್ಮಸ್ ಅಥವಾ ಕ್ರಿಸ್ತ ಜಯಂತಿಯನ್ನು ಪ್ರತಿವರ್ಷ ವಿಶ್ವದಾಧ್ಯಂತ ಸಂಭ್ರಮ ಸಡಗರಗಳಿಂದ ಆಚರಣೆ ಮಾಡಲಾಗುತ್ತದೆ. ಡಿಸೆಂಬರ್9 ರಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಚರ್ಚುಗಳಲ್ಲಿ ವಿವಿಧ ರೀತಿಗಳಲ್ಲಿ ಆಚರಣೆ ಮಾಡುತ್ತಾ ಬಂದಿದ್ದು, ಏಸುವಿನ ಸಂದೇಶವನ್ನು ಜನರಿಗೆ ತಿಳಿಸಲಾಗುತ್ತಿದೆ.
ಕ್ರಿಸ್ಮಸ್ ಸಮಯದಲ್ಲಿ ಕ್ರೈಸ್ತ ಕುಟುಂಬಗಳ ಮೇಲೆ ನಕ್ಷತ್ರಗಳನ್ನು ಕಟ್ಟುವುದು ವಾಡಿಕೆ. ಕ್ರೈಸ್ತರು ನಮಗಾಗಿ ಜನಿಸಿದ ರಕ್ಷಕನು ಏಸು ಎಂಬ ನಂಬಿಕೆಯಿಂದ ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾಭಕ್ತಿಗಳಿಂದ ತಮ್ಮ ಮನೆಗಳನ್ನು ವಿವಿಧ ಬಣ್ಣದ ಕಾಗದಗಳಿಂದ ಅಲಂಕಾರ ಮಾಡಿ, ಸ್ನೇಹಿತರು, ಬಂಧುಗಳು, ಸೇರಿದಂತೆ ಎಲ್ಲರೊಂದಿಗೂ ಶುಭಾಶಯಗಳನ್ನು ಹಂಚಿಕೊಂಡು ಎಲ್ಲರ ಒಳಿತಾಗಿ ಪ್ರಾರ್ಥನೆ ಮಾಡುವುದು ವಾಡಿಕೆಯಾಗಿದೆ. ಚರ್ಚ್ನಲ್ಲಿಯೂ ಏಸುವಿನ ಜನ್ಮವೃತ್ತಾಂತವನ್ನು ಪ್ರತಿನಿಧಿಸುವಂತೆ ಪ್ರತಿಕೃತಿಗಳ ಮೂಲಕ ಅಲಂಕಾರವನ್ನು ಮಾಡಿದ್ದೇವೆ’ ಎಂದು ಎಬೆನೆಜರ್ ಮಾರ್ತೋಮ ಚರ್ಚ್ನ ಫಾದರ್ ರೆನಿನ್ ವರ್ಗೀಸ್ ತಿಳಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಹಣ್ಣು ಮತ್ತು ಬ್ರೆಡ್ ವಿತರಣೆ

0

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಬಿಜೆಪಿಯ ತಾಲ್ಲೂಕು ಘಟಕ ಮತ್ತು ರೈತ ಮೋರ್ಚಾದ ವತಿಯಿಂದ ಗುರುವಾರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಸುರೇಂದ್ರಗೌಡ, ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ದೇಶ ಕಂಡ ಅಪ್ರತಿಮ ನಾಯಕರು. ಅವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳು ಇಂದಿಗೂ ಜನಪ್ರಿಯವಾಗಿವೆ. ವಾಜಪೇಯಿ ಅವರ ಕನಸಾಗಿರುವ ನದಿಗಳ ಜೋಡಣೆ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ’ ಎಂದು ಹೇಳಿದರು.
ಬಿಜೆಪಿ ಕಾರ್ಯಕರ್ತರು ಜಿಲ್ಲಾ ಪಂಚಾಯತಿ ಕಟ್ಟಡದ ಅಕ್ಕಪಕ್ಕ ಸ್ವಚ್ಛತಾ ಕಾರ್ಯವನ್ನು ನಡೆಸಿದರು.
ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಿ.ಮಂಜುಳಾ ಸುರೇಶ್, ರಮೇಶ್ ಬಾಯಿರಿ, ಶ್ರೀರಾಮರೆಡ್ಡಿ, ದಾಮೋದರ್, ಶಿವಕುಮಾರಗೌಡ, ನಂದೀಶ್, ರಾಘವೇಂದ್ರ, ಶ್ರೀಧರ್, ಸುಜಾತಮ್ಮ, ಮುನಿರತ್ನಮ್ಮ, ರತ್ನಮ್ಮ, ಶಿವಮ್ಮ, ಸುಶೀಲಮ್ಮ, ತ್ಯಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಂಗವಿಕಲ ಫಲಾನುಭವಿಗಳಿಗೆ ಚೆಕ್ ವಿತರಣೆ

0

ಶಿಡ್ಲಘಟ್ಟ ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಅಂಗವಿಕಲರಿಗಾಗಿ ಮೀಸಲಿಟ್ಟ ಅನುದಾನವನ್ನು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 45 ಜನ ಅಂಗವಿಕಲರಿಗೆ ಚೆಕ್ಗಳನ್ನು ಗ್ರಾಮ ಪಂಚಾಯತಿ ಅಧ್ಯಕ್ಷೆ ತುಳಿಸಮ್ಮ ವೆಂಕಟಪ್ಪ, ಅಭಿವೃದ್ಧಿ ಅಧಿಕಾರಿ ರಾಮಚಂದ್ರಪ್ಪ ವಿತರಿಸಿದರು. ಉಪಾಧ್ಯಕ್ಷ ಮುನಿಯಪ್ಪ, ಸದಸ್ಯರಾದ ಬಚ್ಚರೆಡ್ಡಿ, ದ್ಯಾವಪ್ಪ, ನಾರಾಯಣಸ್ವಾಮಿ, ನಾಗರಾಜರೆಡ್ಡಿ, ರತ್ನಮ್ಮ, ನಾರಾಯಣಮ್ಮ, ಲಕ್ಷ್ಮೀದೇವಮ್ಮ ಹಾಜರಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ರೈತರಿಗೆ ಪ್ರಶಸ್ತಿ

0

ಶಿಡ್ಲಘಟ್ಟ ತಾಲ್ಲೂಕಿನ ರೈತರಾದ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ಅವರಿಗೆ ಶ್ರೇಷ್ಠ ಕೃಷಿಕ ರೈತ ಪ್ರಶಸ್ತಿ, ಸೊಣ್ಣೇನಹಳ್ಳಿ ಎಸ್.ಎಂ.ನಾರಾಯಣಸ್ವಾಮಿ, ಕೊತ್ತನೂರು ಪಿ.ನೇತ್ರಾ, ಬೆಳ್ಳೂಟಿ ಎಸ್.ಎಂ.ಮಾರೇಗೌಡ, ಕಾಚಹಳ್ಳಿ ಶೈಲಜ, ಮೇಲೂರು ಟಿ.ಎಂ.ನವೀನ್, ತಾದೂರು ಟಿ.ಬಿ.ನಾಗರಾಜ್ ಅವರಿಗೆ ಕೃಷಿ ರತ್ನ ಪ್ರಶಸ್ತಿಯನ್ನು, ಅತ್ಯುತ್ತಮ ರೈತಕೂಟವೆಂದು ಮೇಲೂರಿನ ಗಂಗಾದೇವಿ ದ್ರಾಕ್ಷಿ ಬೆಳೆಗಾರರ ರೈತಕೂಟಕ್ಕೆ ಅಂತರರಾಷ್ಟ್ರೀಯ ರೈತರ ದಿನದ ಅಂಗವಾಗಿ ಬೆಂಗಳೂರಿನ ಕೃಷಿ ಭವನದಲ್ಲಿ ಪ್ರಶಸ್ತಿಗಳನ್ನು ನೀಡಲಾಯಿತು. ಕೃಷಿಕ ಸಮಾಜದ ಆಡಳಿತ ಅಧ್ಯಕ್ಷ ಮಂಜುನಾಥಗೌಡ , ಮಾಜಿ ಸಚಿವ ಎಂ.ವಿ.ರಾಜಶೇಖರನ್, ಕೃಷಿ ಇಲಾಖೆಯ ನಿರ್ದೇಶಕ ಧರ್ಮರಾಜನ್, ಯುವಕ ರೈತ ಸಮಾಜದ ಅಧ್ಯಕ್ಷ ಬಿ.ವಿ.ಮಂಜುನಾಥಗೌಡ, ಕೆನರಾಬ್ಯಾಂಕಿನ ಮಹಾಪ್ರಬಂಧಕ ರವೀಂದ್ರಭಂಡಾರಿ, ದ್ರಾಕ್ಷಿ ವೈನ್ ಬೋರ್ಡ್ ನಿರ್ದೇಶಕ ಕೃಷ್ಣ ಹಾಜರಿದ್ದರು.

ಶಾಸಕರ ಮನೆಯ ಮುಂದೆ ವಿದ್ಯಾರ್ಥಿಗಳ ಪ್ರತಿಭಟನೆ

0

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕಾಂಪೋಂಡ್, ನೀರಿನ ಸಮಸ್ಯೆ ಬಗೆಹರಿಸದಿರುವುದಕ್ಕೆ ಎಸ್.ಎಫ್.ಐ ಮತ್ತು ಡಿ.ವೈ.ಎಫ್.ಐ ನೇತೃತ್ವದಲ್ಲಿ ಕಾಲೇಜು ಬಹಿಷ್ಕರಿಸಿದ ವಿದ್ಯಾರ್ಥಿಗಳು ಶಾಸಕ ಎಂ.ರಾಜಣ್ಣ ಅವರ ಮನೆಗೆ ಮುತ್ತಿಗೆ ಹಾಕಿ ಬುಧವಾರ ಪ್ರತಿಭಟಿಸಿದರು.
ಕಳೆದ ನಾಲ್ಕು ತಿಂಗಳ ಹಿಂದೆ ವಿದ್ಯಾರ್ಥಿಗಳೆಲ್ಲಾ ಸೇರಿ ಕಾಲೇಜಿನಲ್ಲಿ ಮೂಲಭೂತ ಸೌಕರ್ಯ ನೀಡುವಂತೆ ಪ್ರತಿಭಟಿಸಿದ್ದೆವು. ಕಾಲೇಜಿನಲ್ಲಿ ಸೂಕ್ತ ಬಂದೋಬಸ್ತ್ ಇಲ್ಲದ ಕಾರಣ ಅಪರಿಚಿತರು ಕಾಲೇಜಿನೊಳಕ್ಕೆ ಬರುತ್ತಿರುತ್ತಾರೆ. ಗೋಡೆಗಳ ಮೇಲೆ ಅಶ್ಲೀಲ ಬರಹಗಳನ್ನು ಬರೆದು ಹೋಗುತ್ತಾರೆ. ಸಂಜೆ ವೇಳೆ ಕಾಲೇಜು ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಖಾಲಿಯಾದ ಮದ್ಯದ ಬಾಟಲುಗಳನ್ನು ಕೊಠಡಿಯೊಳಗೆ ಬಿಸಾಡಿರುತ್ತಾರೆ. ಶೌಚಾಲಯದಲ್ಲಿ ಸಿಂಕ್, ಬೇಸನ್ ಮುಂತಾದವುಗಳನ್ನು ಮುರಿದು ಹೋಗಿರುತ್ತಾರೆ. ಈ ಬಗ್ಗೆ ಶಾಸಕರಿಗೆ ಹಲವು ಬಾರಿ ಮನವಿ ಪತ್ರ ಸಲ್ಲಿಸಿದ್ದೆವು. ನಾಲ್ಕು ತಿಂಗಳ ಹಿಂದೆ ಶಾಸಕರು ಕಾಲೇಜಿಗೆ ಭೇಟಿ ನೀಡಿ ಒಂದು ತಿಂಗಳ ಒಳಗೆ ಕಾಂಪೋಂಡ್ ನಿರ್ಮಾಣ ಮತ್ತು ಪೊಲೀಸರಿಂದ ಸೂಕ್ತ ಬಂದೋಬಸ್ತ್ ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಸಮಸ್ಯೆ ಬಗೆಹರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ, ‘ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂಲಭೂತ ಸೌಲಭ್ಯಗಳು ಕಲ್ಪಿಸಬೇಕೆಂದು ಹಲವು ಬಾರಿ ಪ್ರತಿಭಟನೆ ಮಾಡಿ ಶಾಸಕರ ಗಮನಕ್ಕೆ ತಂದಿದ್ದರೂ ಸಹ ಇದುವರೆಗೂ ಸಮಸ್ಯೆ ಬಗೆಹರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ. ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸಾವಿರಾರು ಮಂದಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಬರುತ್ತಾರೆ. ಆದರೆ ವಿದ್ಯಾರ್ಥಿನಿಯರಿಗೆ ಶೌಚಾಲಯ, ನೀರಿನ ಸಮಸ್ಯೆ ಮತ್ತು ಸೂಕ್ತ ಭದ್ರತೆಯಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ದಿನದಿಂದ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆಯಿಲ್ಲದ ಪರಿಸ್ಥಿತಿಯಿದೆ’ ಎಂದು ತಿಳಿಸಿದರು.
ಅನುಮತಿ ಪಡೆಯದೆ ಪ್ರತಿಭಟಿಸಬಾರದು ಎಂದ ಪೊಲೀಸರೊಂದಿಗೆ ಶಾಸಕರ ಮನೆಯ ಮುಂದೆ ಪ್ರತಿಭಟನಾ ನಿರತರು ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಶಾಸಕರ ಅನುಪಸ್ಥಿತಿಯಲ್ಲಿ ಶಾಸಕರ ಪತ್ನಿ ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾ ರಾಜಣ್ಣ ಅವರು ಮನವಿ ಸ್ವೀಕರಿಸಿ ಮಾತನಾಡಿ,‘ಒಂದು ವಾರದೊಳಗೆ ಕಾಂಪೋಂಡ್ ನಿರ್ಮಾಣ ಮಾಡಲು ಶಾಸಕರು ಬದ್ಧರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ’ ಎಂದು ಹೇಳಿದರು.
ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ರೀತಿಯಾಗಿ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಪ್ರತಿಭಟನಾ ನಿರತರು ಎಚ್ಚರಿಕೆ ನೀಡಿದರು.
ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷ ಸದಾನಂದ, ಫೈಯಾಜುಲ್ಲಾ, ನಾಗರಾಜ, ವೆಂಕಟೇಶ, ನರಸಿಂಹಮೂರ್ತಿ, ಕಾವ್ಯಶ್ರೀ, ಲಲಿತಾ, ಪವಿತ್ರಾ, ಭಾಗ್ಯ, ಮಂಜು, ಸಾವಿತ್ರಿ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಳ್ಳೂರಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ದ್ವೀತಿಯ ಸ್ಥಾನ

0

ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗ್ರಾಮದ ಸ್ವಾಮಿ ವಿವೇಕಾನಂದ ಶಾಲೆಯ ವಿದ್ಯಾರ್ಥಿಗಳಾದ ಬಿ.ಎಂ.ಸೌರವ್, ಎಂ. ನಿಹಾರಿಕಾ, ಎಂ.ವಿ. ಚಾರಿಷ್ಮಾ ಮತ್ತು ಎಂ.ಡಿ.ತೇಜಸ್ ದಾರವಾಡದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸಿ ಶಕ್ತಿಯ ಮೂಲಗಳು ಮತ್ತು ಸಂರಕ್ಷಣೆ ವಿಭಾಗದ ವೈಯಕ್ತಿಕ ವಿಭಾಗದಲ್ಲಿ ದ್ವೀತಿಯ ಸ್ಥಾನಗಳಿಸಿಕೊಂಡಿದ್ದಾರೆ.

ಹುಜುಗೂರು ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

0

ಕ್ರಿಸ್ತ ಯೇಸುವಿನ ಭೋದನೆಗಳು ಸಾರ್ವಕಾಲಿಕವಾಗಿದ್ದು, ಎಲ್ಲಾ ಕಾಲಘಟ್ಟಗಳಿಗೂ ಅನ್ವಯಿಸುವಂತಹ ಸತ್ಯ ಬೋದನೆಗಳನ್ನು ಅನುಸರಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ ಹೇಳಿದರು.
ತಾಲ್ಲೂಕಿನ ಹುಜುಗೂರು ಗ್ರಾಮದಲ್ಲಿ ಇಮ್ಮಾನುವೆಲ್ ಚಾರಿಟೆಬಲ್ ಟ್ರಸ್ಟಿನಿಂದ ಮಂಗಳವಾರ ಆಯೋಜನೆ ಮಾಡಲಾಗಿದ್ದ ಕ್ರಿಸ್ಮಸ್ ಹಬ್ಬದ ಆಚರಣೆಯಲ್ಲಿ ಅವರು ಮಾತನಾಡಿದರು.
ಧಾರ್ಮಿಕವಾದ ಕಾರ್ಯಕ್ರಮಗಳನ್ನು ಮಾಡುವುದರಿಂದ ಪ್ರತಿಯೊಂದು ಹಳ್ಳಿಗಳಲ್ಲಿಯೂ ಶಾಂತಿ, ಐಕ್ಯತೆ, ನೆಲೆಸಲು ಸಾಧ್ಯವಾಗುತ್ತದೆ, ಪ್ರತಿಯೊಬ್ಬ ಮುನುಷ್ಯನೂ ಕೂಡಾ ಯಾವುದೇ ಧರ್ಮದಲ್ಲಿದ್ದರೂ ಸಮಾಜದಲ್ಲಿನ ಬಡವರ್ಗದ ಜನತೆಯ ಹಿತವನ್ನು ಬಯಸಬೇಕು, ಅವರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಬೇಕು, ದೀನರನ್ನು ಪ್ರೀತಿಸುವಂತಹ ಕೆಲಸ ಮಾಡಬೇಕು, ಎಲ್ಲಾ ವರ್ಗದ ಜನತೆಗೂ ಕೂಡಾ ಗುಣಮಟ್ಟದ ಶಿಕ್ಷಣವನ್ನು ನೀಡಿ ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ದಿ ಕಾಣುವಂತೆ ಪ್ರೋತ್ಸಾಹ ಮಾಡಿದಾಗ ಮಾತ್ರ ಹಬ್ಬದ ಆಚರಣೆಗಳು ಅರ್ಥಪೂರ್ಣವಾಗುತ್ತವೆ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯೆ ಶಿವಲೀಲಾರಾಜಣ್ಣ ಮಾತನಾಡಿ, ಯೇಸುಕ್ರಿಸ್ತನು ಮಾನವಕುಲಕ್ಕೆ ನೀಡಿದಂತಹ ಶಾಂತಿಯ ಸಂದೇಶಗಳನ್ನು ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಪಾಪರಹಿತವಾದ ಜೀವಿತವನ್ನು ಜೀವಿಸಿದಾಗ ಮಾನವನಿಗೆ ಮುಕ್ತಿದೊರೆಯುತ್ತದೆ ಈ ನಿಟ್ಟಿನಲ್ಲಿ ಒತ್ತಡದ ಜೀವನದ ನಡುವೆಯೂ ಇಂತಹ ಧಾರ್ಮಿಕವಾದ ಕಾರ್ಯಗಳಿಂದ ರೋಗಮುಕ್ತ ಜೀವನ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಈ ಸಂಧರ್ಭದಲ್ಲಿ ಟ್ರಸ್ಟಿನ ವತಿಯಿಂದ ಬಡವರಿಗೆ ಬಟ್ಟೆಗಳನ್ನು ದಾನಮಾಡಲಾಯಿತು.
ಬೆಂಗಳೂರು ಉತ್ತರ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಹೂಡಿ ನಾಗರಾಜ್,
ಜಿಲ್ಲಾ ಯೂನಿಯನ್ ನಿರ್ದೇಶಕ ತಾದೂರು ರಮೇಶ್, ಹುಜುಗೂರು ಗ್ರಾಮದ ರಾಮಚಂದ್ರಪ್ಪ, ರಾಮಪ್ಪ, ಎಚ್.ಸಿ.ಸಿದ್ದಪ್ಪ, ಮುನಿರೆಡ್ಡಿ, ಸೋಮಶೇಖರ್, ಟ್ರಸ್ಟಿನ ಕಾರ್ಯದರ್ಶಿ ಮಂಜುನಾಥ್, ಸಹಕಾರ್ಯದರ್ಶಿ ಎನ್.ನಾರಾಯಣಸ್ವಾಮಿ, ಖಜಾಂಚಿ ಶಾಮಣ್ಣ, ನಿರ್ದೇಶಕರಾದ ಗೋವಿಂದಪ್ಪ, ಹರೀಶ್, ಎಚ್.ಎನ್.ಮುನಿನಾರಾಯಣ, ಮುನೀಂದ್ರ, ಮುನಿಕೃಷ್ಣಪ್ಪ, ಮುನಿನಾರಾಯಣ, ಜಿ.ಎನ್.ಚೌಡಪ್ಪ, ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

ದಿನಚರಿಯಲ್ಲಿ ಸಾಮಾನ್ಯ ಜ್ಞಾನ

0

ಮನುಷ್ಯ ಬುದ್ಧಿಜೀವಿ ದಿನ ದಿನ ಹೊಸ ಹೊಸದನ್ನು ಕಲಿಯುತ್ತಾ ನೋಡುತ್ತಾ ಬದುಕುತ್ತಾನೆ. ಕಲಿಕೆ ಇಲ್ಲದಿದ್ದರೆ ಜೀವನ ನಿಂತನೀರಿನಂತೆ ಕೊಳೆಯುತ್ತದೆ. ಕೆಲವೊಮ್ಮೆ ನಮಗೆ ತೀರಾ ಸಣ್ಣ ಸಣ್ಣ ವಿಷಯಗಳ ಬಗ್ಗೆ ಸಾಮಾನ್ಯ ಜ್ಞಾನ ಕೂಡ ಇರುವುದಿಲ್ಲ. ಮನೆಯಲ್ಲಿ ಇರುವ ಗೃಹಿಣಿಯಿಂದ ಹಿಡಿದು ಹೊರಗೆ ಹೋಗಿ ದುಡಿಯುವ ಗಂಡಸಿನವರೆಗೆ ಯಾರೂ ಹೊರತಲ್ಲ.
ನಾನು ನಮ್ಮದೇ ಆದ ಗ್ಯಾಸ್ ಏಜನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಕಾಲವದು. ಹೊಸದಾಗಿ ಪ್ರಾರಂಭವಾಗಿದ್ದ ಕಾರಣ ಯಾವುದೇ ಗ್ರಾಹಕರಿರಲಿಲ್ಲ. ಬೇರೆ ಊರಿನಲ್ಲಿ ಕನೆಕ್ಷನ್ ಹೊಂದಿದ ಗ್ರಾಹಕರನ್ನು ಅವರದೇ ಊರಿನಲ್ಲಿ ಪ್ರಾರಂಭವಾಗಿದ್ದ ನಮ್ಮ ಏಜನ್ಸಿಗೆ ವರ್ಗಾವಣೆ ಮಾಡಿಕೊಳ್ಳಬೇಕಾಗಿತ್ತು. ಹೀಗೆ ವರ್ಗಾವಣೆ ಮಾಡಿದಾಗ ಆ ಏಜನ್ಸಿಯವರು ಠೇವಣಿ ಹಣವನ್ನು ಚೆಕ್ ಮೂಲಕ ಅಥವಾ ಹಣದ ಮುಖಾಂತರ ವಾಪಾಸು ಕೊಡುತ್ತಾರೆ, ಆ ಹಣವನ್ನು ನಮ್ಮ ಏಜನ್ಸಿಗೆ ಕೊಟ್ಟು ಸಿಲಿಂಡರ್ ಪಡೆದು ಗ್ರಾಹಕರಾಗಬೇಕು.
ಇಂಥ ಒಂದು ಪ್ರಸಂಗದಲ್ಲಿ ಒಬ್ಬ ವ್ಯಕ್ತಿ ಆತ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದವರು, ಬಂದು ಒಂದು ಚೆಕ್ ಅನ್ನು ತೋರಿಸಿ “ಇದು ಚೆಕ್ ಇದನ್ನು ಏನು ಮಾಡಬೇಕು” ಎಂದು ಕೇಳಿದರು. ನಾನು ನನ್ನ ತಮ್ಮ ಇಬ್ಬರೂ ಮುಖ ಮುಖ ನೋಡಿಕೊಳ್ಳುವಂತಾಯಿತು. ಅಂದರೆ ಆ ಚೆಕ್ ಅನ್ನು ಬ್ಯಾಂಕ್‍ಗೆ ಕೊಟ್ಟು ದುಡ್ಡು ತಂದು ನಮಗೆ ಕೊಡಬೇಕು ಎನ್ನುವುದು ತಿಳಿಯದೇ ಹಾಗೆ ಕೇಳಿದರೋ ಅಥವಾ ಒಮ್ಮೆ ಕೇಳಿ ಮುಂದುವರೆಯೋಣ ಎಂದು ಭಾವಿಸಿದರೋ ನಮಗೆ ತಿಳಿಯದು. ಇದರಲ್ಲಿ ಇನ್ನೊಂದು ವಿಪರ್ಯಾಸದ ಸಂಗತಿಯೆಂದರೆ ಯಾವುದೇ ರಾಜಕೀಯ ವ್ಯಕ್ತಿಗೆ ಯಾವುದೇ ಪದವಿಯ ಅವಶ್ಯಕತೆ ಇಲ್ಲದೆ ಅಧಿಕಾರಕ್ಕೆ ಬರುವುದು ನಮ್ಮ ದೇಶದ ದುರಂತ.
ಅದೇ ರೀತಿಯಲ್ಲಿ ತೀರ ಹತ್ತಿರದ ನನ್ನ ಸಂಬಂಧಿಯೊಬ್ಬರು ದೂರವಾಣಿ (ಲ್ಯಾಂಡ್ ಲೈನ್) ಕರೆಯ ಬಗ್ಗೆಯೂ ಇದೇ ರೀತಿಯ ಅಜ್ಞಾನವನ್ನು ತೋರ್ಪಡಿಸಿದರು. ನಮಗೆ ಯಾರದ್ದಾದರೂ ದೂರವಾಣಿ ಕರೆ ಬಂದಾಗ (ಇನ್ ಕಮಿಂಗ್ ಕಾಲ್) ಆ ಕರೆ ಕಡಿದು ಹೋದರೆ, ಪುನ: ಕರೆ (ರೀ ಡಯಲ್) ಮಾಡಿದರೆ ಯಾರಿಂದ ಕರೆ ಬಂದಿತ್ತೋ ಅವರಿಗೆ ವಾಪಾಸು ಹೋಗುತ್ತದೆ ಎನ್ನುವುದು. ಆದರೆ ಆದು ಹಾಗೆ ಅಲ್ಲ, ಒಳಕರೆ (ಇನ್ ಕಮಿಂಗ್ ಕಾಲ್) ಬಂದಾಗ ನಾವು ಪುನ: ಕರೆ ಮಾಡಿದರೆ ಅದು ಒಳಕರೆ ಮಾಡಿದವರಿಗೆ ಹೋಗುವುದಿಲ್ಲ, ಬದಲಾಗಿ ನಾವು ಮೊದಲೆ ಯಾರಿಗೆ ಫೋನ್ ಮಾಡಿ ಮಾತನಾಡಿ ಇಟ್ಟಿರುತ್ತೆವೆಯೋ ಅವರಿಗೆ ಹೋಗುತ್ತದೆ.
ಹೀಗೆ ಇಂಥ ಸಣ್ಣ ಪುಟ್ಟ ವಿಷಯಗಳ ಬಗ್ಗೆ, ತೀರಾ ದಿನಚರಿಗೆ ಬೇಕಾದ್ದನ್ನು ನಾವು ಕೇಳಿಯಾದರೂ ತಿಳಿದುಕೊಳ್ಳಬೇಕಾದ್ದು ಅತೀ ಅವಶ್ಯ. ಇಲ್ಲದಿದ್ದರೆ ಕೆಲವೊಮ್ಮೆ ಹಾಸ್ಯಕ್ಕೆ ಈಡಾಗುವ ಪರಿಸ್ಥಿತಿ ಒದಗಿಬರುತ್ತದೆ.
– ರಚನ

ನಾಟಕದ ತಯಾರಿ ಹಿಂದಿನ ಕಥೆ

0

ನಾಟಕವೊಂದು ಪ್ರದರ್ಶಿತವಾದಾಗ ಗ್ರಾಮಗಳಲ್ಲಿ ನೂರಾರು ಮಂದಿ ಸೇರುತ್ತಾರೆ. ಚಪ್ಪಾಳೆ, ಸಿಳ್ಳೆ ಹೊಡೆದು ನಟರನ್ನು ಪ್ರೋತ್ಸಾಹಿಸುತ್ತಾ ನಾಟಕವನ್ನು ಆಸ್ವಾದಿಸುತ್ತಾರೆ.
ಈ ರೀತಿಯ ನಾಟಕವನ್ನು ಪ್ರದರ್ಶಿಸುವುದರ ಹಿಂದೆ ಹಲವು ತಿಂಗಳುಗಳ ಪರಿಶ್ರಮವಿರುತ್ತದೆ. ಸಾಮಾನ್ಯವಾಗಿ ನಟರು ಸ್ಥಳೀಯರೇ ಆಗಿದ್ದು, ನಾಟಕವನ್ನು ಕಲಿಸುವ ಗುರುವನ್ನು ಹೊರಗಿನಿಂದ ಕರೆತಂದು ಅವರಿಂದ ಹಾವ ಭಾವ, ಅಭಿನಯ, ಸಂಗೀತ, ಸಂಭಾಷಣೆಯನ್ನು ಕಲಿಯುತ್ತಾರೆ.
ತಾಲ್ಲೂಕಿನ ಎಚ್.ಕ್ರಾಸ್ನಲ್ಲಿ ಸುತ್ತ ಮುತ್ತ ಗ್ರಾಮಗಳಲ್ಲಿ ವ್ಯವಸಾಯ, ರೇಷ್ಮೆ ಕಸುಬು, ಅಂಗಡಿ ಮುಂತಾದ ಕಸುಬುಗಳ ಹಿನ್ನೆಲೆಯಿರುವ ಸ್ನೇಹಿತರು ಒಂದೆಡೆ ಸೇರಿಕೊಂಡು ಪೌರಾಣಿಕ ನಾಟಕದ ತಯಾರಿ ನಡೆಸಿದ್ದಾರೆ. ಜೀವನ ನಿರ್ವಹಣೆಗೆ ಹಗಲಿನಲ್ಲಿ ದುಡಿದು ರಾತ್ರಿಯ ವೇಳೆಯಲ್ಲಿ ನಾಟಕಕ್ಕೆ ತಾಲೀಮು ನಡೆಸಿದ್ದಾರೆ.

ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ನಲ್ಲಿ ಮುಂದಿನ ವರ್ಷ ಏಪ್ರಿಲ್ ತಿಂಗಳಿನಲ್ಲಿ ದಾನವೀರಶೂರಕರ್ಣ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಲು ಗ್ರಾಮದ ಸಮಾನಮನಸ್ಕರು ರಾತ್ರಿಯ ವೇಳೆ ತಾಲೀಮಿನಲ್ಲಿ ತೊಡಗಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಎಚ್.ಕ್ರಾಸ್ನಲ್ಲಿ ಮುಂದಿನ ವರ್ಷ ಏಪ್ರಿಲ್ ತಿಂಗಳಿನಲ್ಲಿ ದಾನವೀರಶೂರಕರ್ಣ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಲು ಗ್ರಾಮದ ಸಮಾನಮನಸ್ಕರು ರಾತ್ರಿಯ ವೇಳೆ ತಾಲೀಮಿನಲ್ಲಿ ತೊಡಗಿದ್ದಾರೆ.
‘ಸೀತಾರಾಮಾಂಜನೇಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ’ ಎಂಬ ಹೆಸರನ್ನಿಟ್ಟುಕೊಂಡು ಕಲಾಸಕ್ತ ಸಮಾನಮನಸ್ಕ ಸ್ನೇಹಿತರ ತಂಡವು ವರ್ಷಕ್ಕೊಮ್ಮೆ ನಾಟಕವೊಂದನ್ನು ಎಚ್.ಕ್ರಾಸ್ನಲ್ಲಿ ಪ್ರದರ್ಶಿಸುತ್ತಿದೆ. ಈ ಬಾರಿ ದಾನವೀರಶೂರಕರ್ಣ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಲು ಕಳೆದ ಇಪ್ಪತ್ತು ರಾತ್ರಿಗಳಿಂದ ಕಲಿಯುತ್ತಿದ್ದಾರೆ. ಮುಂದಿನ ವರ್ಷ ಏಪ್ರಿಲ್ 9ನೇ ತಾರೀಖು ಪ್ರದರ್ಶಿಸಲು ಉದ್ದೇಶಿಸಿರುವ ಈ ಪೌರಾಣಿಕ ನಾಟಕಕ್ಕೆ ಗುರುಗಳ ಉಪಸ್ಥಿತಿಯನ್ನು ನೋಡಿಕೊಂಡು ನಿದ್ರೆ ಕೆಟ್ಟು ಅಪರಾತ್ರಿಯವರೆಗೂ ಕೆಲವೊಮ್ಮೆ ಬೆಳಗಿನ ಜಾವದವರೆಗೂ ತಾಲೀಮು ನಡೆಸಿದ್ದಾರೆ.
‘ಹೊಸಕೋಟೆ ತಾಲ್ಲೂಕು ದೊಡ್ಡನೆಲ್ಲೂರಹಳ್ಳಿ ಮುತ್ತಪ್ಪನವರಿಂದ ಈ ನಾಟಕವನ್ನು ಕಲಿಯುತ್ತಿದ್ದೇವೆ. ನಮಗೆಲ್ಲಾ ಬೇರೆ ಬೇರೆ ಉದ್ಯೋಗಗಳಿದ್ದರೂ ರಂಗಭೂಮಿಯು ನಮ್ಮನ್ನು ಒಂದೆಡೆ ಸೇರಿಸಿದೆ. ನಾವೇನೂ ವೃತ್ತ ಕಲಾವಿದರಲ್ಲ. ಕಲಾಸಕ್ತಿಯಿಂದಾಗಿ ನಾವು ಗುರುವನ್ನು ಕರೆದುಕೊಂಡು ಬಂದು ಕಲಿಯುತ್ತಿದ್ದೇವೆ. ಸಾಕಷ್ಟು ಸಂಭಾಷಣೆ, ರಾಗ, ಹಾಡು, ಅಭಿನಯವನ್ನು ನೆನಪಲ್ಲಿಟ್ಟುಕೊಂಡು ಕೊಂಚವೂ ತಪ್ಪಿಲ್ಲದೆ ನಟಿಸಬೇಕಿರುವುದರಿಂದ ನಿದ್ರೆಕೆಟ್ಟು ಕಲಿಯುತ್ತಿದ್ದೇವೆ. ಈ ಪೌರಾಣಿಕ ನಾಟಕದ ತಯಾರಿಯಿಂದ ಪ್ರಾರಂಭವಾಗಿ ಪ್ರದರ್ಶನದವರೆಗೂ ಸುಮಾರು ಒಂದೂವರೆ ಲಕ್ಷ ರೂಗಳು ವೆಚ್ಚವಾಗಲಿದ್ದು ನಾವೇ ನಟರು ಭರಿಸುತ್ತೇವೆ. ಕಲೆಯ ಪೋಷಣೆಗಾಗಿ ವೆಚ್ಚ ಮಾಡುವ ಹಣ ಮತ್ತು ಪರಿಶ್ರಮ ನಮಗೆ ಸಿಗುವ ಮನಸ್ಸಂತೋಷದ ಮುಂದೆ ಹೆಚ್ಚಿನದ್ದಲ್ಲ’ ಎನ್ನುತ್ತಾರೆ ದುರ್ಯೋಧನ ಪಾತ್ರದಾರಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಅಯ್ಯಪ್ಪ.
error: Content is protected !!