30.2 C
Sidlaghatta
Saturday, April 20, 2024

ಬಾಹ್ಯಾಕಾಶವನ್ನು ಬಗೆದು ನೋಡುವ ಕಣ್ಣುಗಳಿವು

- Advertisement -
- Advertisement -

ಗ್ರಹ, ತಾರೆ, ತಾರಾಗುಚ್ಛಗಳು ಮತ್ತಿತರ ಆಕಾಶಕಾಯಗಳ ಸ್ಪಷ್ಟ ಸುಂದರ ಹಾಗೂ ವರ್ಣಮಯ ಚಿತ್ರಗಳು ಇಂದು ಲಭ್ಯವಿದೆ. ಲಕ್ಷಗಟ್ಟಲೆ ಕಿಮೀ ದೂರದಲ್ಲಿರುವ ಮಾನವರಹಿತ ಗಗನನೌಕೆಗಳು ಕಳುಹಿಸಿದ ಚಿತ್ರಗಳು ಅಷ್ಟೊಂದು ಸ್ಫುಟವಾಗಿ ನಮ್ಮ ಕಂಪ್ಯೂಟರ್ ಪರದೆಯ ಮೇಲೆ ಮೂಡುವುದು ಹೇಗೆ? ದೂರದ ಬಾನನೌಕೆ ಇಷ್ಟೇ ದೂರದಲ್ಲಿದೆ, ಅದರ ಪಥ ಬದಲಾಯಿಸಲಾಯಿತು ಇತ್ಯಾದಿ ಮಾಹಿತಿಗಳನ್ನು ಓದುತ್ತೇವೆ. ತನ್ನನ್ನೂ, ಸೂರ್ಯನನ್ನೂ ಸುತ್ತುವರೆಯುತ್ತ ಓಡುತ್ತಿರುವ ಭೂಮಿ ದೂರದಲ್ಲಿ ವಿವಿಧ ದಿಕ್ಕುಗಳಲ್ಲಿ ಸಾಗುತ್ತಿರುವ ನೌಕೆಗಳಿಂದ 24 ಗಂಟೆಯೂ ಸಂಪರ್ಕದಲ್ಲಿದ್ದು ಕರಾರುವಾಕ್ ಮಾಹಿತಿಗಳನ್ನು ಪಡೆಯುವುದು ಸಾಧ್ಯವೆ?
ಬಾಹ್ಯಾಕಾಶ ಸಂಪರ್ಕ ಜಾಲ
ಇದಕ್ಕೆ ಉತ್ತರವೇ ಬೃಹದ್ ಅಂಟೆನಾಗಳನ್ನೊಳಗೊಂಡ ಮೂರು ಸರಣಿಗಳ ‘ಬಾಹ್ಯಾಕಾಶ ಸಂಪರ್ಕ ಜಾಲ’ ಅಥವಾ ಡೀಪ್ ಸ್ಪೇಸ್ ನೆಟ್‍ವರ್ಕ್. 120 ಡಿಗ್ರಿ ಕೋನದ ಅಂತರದಲ್ಲಿ ಭೂಮಿಯ ಮೂರು ಸ್ಥಳಗಳಲ್ಲಿ ಈ ಅಂಟೆನಾಗಳನ್ನು ಅಳವಡಿಸಲಾಗಿದೆ. ಗುಂಡಾಗಿರುವ ಭೂಮಿ ತನ್ನ ಅಕ್ಷದ ಮೇಲೆ ತಿರುಗುತ್ತಾ, ಸೂರ್ಯನ ಸುತ್ತೂ ಕೂಡ ತಿರುಗುತ್ತಿರುವುದರಿಂದ ಯಾವುದೇ ಕ್ಷಣದಲ್ಲಿಯೂ ದೂರದ ಉಪಕರಣಗಳಿಂದ ಬರುವ ಸಂದೇಶಗಳು ಕೈತಪ್ಪಿ ಹೋಗಬಾರದೆಂಬುದು ಇದರ ಉದ್ದೇಶ.
ಇದರಿಂದಾಗಿ ಬಾಹ್ಯಾಕಾಶದ ದೂರದೂರದಿಂದ ಬರುವ ಯಾವ ಸಂಕೇತವೂ ಈ ಅಂಟೆನಾಗಳ ಹದ್ದುಗಣ್ಣುಗಳಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. ಭೂಮಿ ತನ್ನ ಅಕ್ಷದ ಸುತ್ತ ಸುತ್ತುತ್ತಿರುವಾಗ ಈ ಮೂರೂ ಅಂಟೆನಾ ಜಾಲ ಕುತ್ತಿಗೆ ತಿರುಗಿಸುತ್ತ ಬಾನಿಗೆ ತಮ್ಮ ನಿಡುದೃಷ್ಟಿಯನ್ನು ಬೀರುತ್ತಲೇ ಇರುತ್ತವೆ. ಒಂದಲ್ಲ ಒಂದು ಅಂಟೆನಾ ಭೂಮಿಯತ್ತ ಬರುವ ಸಂಕೇತಗಳನ್ನು ಗ್ರಹಿಸಿಯೇ ಗ್ರಹಿಸುತ್ತದೆ.
ಡಿಎಸೆನ್‍ನ ದೃಷ್ಟಿಯಿಂದ ಯಾರೂ ತಪ್ಪಿಸಿಕೊಳ್ಳಲಾರರು, ಅಂಟೆನಾಗಳಿರುವ ವಲಯಗಳಲ್ಲಿ ಮೊದಲನೆಯದು ಅಮೆರಿಕದ ಬಾರ್‍ಸ್ಟೋವ್ ನಗರದಿಂದ ಎಪ್ಪತ್ತೆರಡು ಕಿಮೀ ದೂರದಲ್ಲಿದ್ದರೆ, ಎರಡನೆಯದು, ಸ್ಪೇನಿನ ಮ್ಯಾಡ್ರಿಡ್ ನಿಂದ ಅರವತ್ತು ಕಿಮೀ ದೂರದಲ್ಲಿ ಹಾಗೂ ಮೂರನೆಯದು ಆಸ್ಟ್ರೇಲಿಯಾದ ಕ್ಯಾನ್‍ಬೆರಾ ನಗರದಿಂದ ನಲವತ್ತು ಕಿಮೀ ದೂರದಲ್ಲಿದೆ. ಈ ವಲಯಗಳಲ್ಲೊಂದೊಂದೂ ಹೆಚ್ಚು ಎತ್ತರವಲ್ಲದ, ಇತರ ಭೂ ತರಂಗಗಳ ಕಿರಿಕಿರಿ ಇಲ್ಲದಿರುವ ಬುಟ್ಟಿಯಾಕಾರದ ಪ್ರದೇಶಗಳÀಲ್ಲಿ ಸ್ಥಾಪಿತವಾಗಿದೆ.
ತರಂಗದೂರ ಹೊಂದಿರುವ ಅಲೆಗಳು

ಭೂಸುತ್ತ ಹರಡಿದ ಜಾಲ
ಭೂಸುತ್ತ ಹರಡಿದ ಜಾಲ

ಸಂಕೇತ ಎಂದೆವು. ಅದು ಯಾವ ರೂಪದ್ದು? ಬೆಳಕೇ, ಶಬ್ದವೇ? ಚಿತ್ರದಲ್ಲಿ ತೋರಿಸಿರುವಂತೆ ವಿದ್ಯುತ್ಕಾಂತೀಯ ರೋಹಿತ ಪಟ್ಟಿಯಲ್ಲಿ ರೇಡಿಯೋ ಅಲೆಗಳು ಅತಿ ಹೆಚ್ಚು ತರಂಗದೂರ ಹೊಂದಿರುವ ಅಲೆಗಳು. ಇವುಗಳ ತರಂಗಾಂತರ 1 ಮಿಮೀ – 300 ಕಿಮೀ. ಚಿಕ್ಕ ಅಲೆಗಳೆಂದರೆ ಪರಮಾಣುವಿನಷ್ಟಗಲವಿದ್ದರೆ, ದೊಡ್ಡವು ಫುಟ್‍ಬಾಲ್ ಮೈದಾನದಷ್ಟು ಹರವು ಹೊಂದಿರುವವು. ಇವುಗಳ ವೇಗ ಬೆಳಕಿನಷ್ಟೇ ಅಂದರೆ ಸೆಕೆಂಡಿಗೆ ಮೂರು ಲಕ್ಷ ಕಿಮೀ ದೂರ ಸಾಗುವ ವೇಗ. ಆಕಾಶಕಾಯಗಳಿಂದಲೂ ಇವು ಸತತವಾಗಿ ತೂರಿ ಬರುತ್ತಿರುತ್ತವೆ. ಭೂವಾತಾವರಣವನ್ನು ಪ್ರವೇಶಿಸಿದಾಗ ಇಲ್ಲಿಯ ಬಿಸಿಲು, ಅನಿಲ, ದೂಳು ಯಾವುದೂ ರೇಡಿಯೋ ಅಲೆಗಳ ಮೇಲೆ ಪರಿಣಾಮ ಬೀರವು. ನಾವು ನಿತ್ಯ ಬಳಸುವ ಸೆಲ್ ಫೋನುಗಳು, ಟೆಲಿವಿಷನ್ ಚಿತ್ರಗಳು ಹಾಗೂ ರೇಡಿಯೋ ಇವು ರೇಡಿಯೋ ಅಲೆಗಳನ್ನು (ಇವು ಮಾನವ ನಿರ್ಮಿತ ಅಥವಾ ಕೃತಕ ರೇಡಿಯೋ ಅಲೆಗಳು) ಪ್ರಸಾರ ಮಾಡುತ್ತವೆ.
ವಿದ್ಯುತ್ಕಾಂತೀಯ ಅಲೆಗಳು
ವಿದ್ಯುತ್ಕಾಂತೀಯ ಅಲೆಗಳು

ಹೀಗೆ ವಿದ್ಯುತ್ ಕಾಂತೀಯ ಅಲೆಗಳ ರೋಹಿತಪಟ್ಟಿಯಲ್ಲಿ ರೇಡಿಯೋ ಅಲೆಗಳದ್ದು ವಿಶಿಷ್ಟ ಸ್ಥಾನ. ಮಾಹಿತಿಯನ್ನು ಆಕಾಶದಲ್ಲಿ ದೂರದೂರದವರೆಗೆ ಪಸರಿಸಲು ಕಡಿಮೆ ಆವರ್ತತರಂಗಗಳು ಇವು ತುಂಬ ಉಪಯೋಗಿ.
ಬೃಹತ್ ಅಂಟೆನಾಗಳು
2 ಲಕ್ಷ ಕಿಮೀ ಆಚೆಯಿಂದ ಬರುವ ಸಂದೇಶಗಳನ್ನು ಗ್ರಹಿಸಲು ಉಪಕರಣಗಳು ಅತಿ ದಕ್ಷವಾಗಿರಬೇಕಾಗುತ್ತದೆ. ಅಂದರೆ ಬೃಹತ್ ಅಂಟೆನಾಗಳು, ಅವುಗಳಲ್ಲಿ ಅಡಕವಾದ ಸೂಕ್ಷ್ಮ ರಿಸಿವರುಗಳು ಹಾಗೂ ಶಕ್ತಿಯುತವಾದ ಟ್ರಾನ್ಸ್‍ಮೀಟರುಗಳು ಈ ಸಂಪರ್ಕಜಾಲದಲ್ಲಿ ಬಳಕೆಯಾಗುತ್ತಿವೆ.
ಅಂಟೆನಾಗಳೆಂದೆವಲ್ಲ, ಇವು ಆಗಸದತ್ತ ಮುಖ ಮಾಡಿ ಗ್ರಹ, ನಕ್ಷತ್ರಗಳು, ಅನಿಲಗಳು, ಧೂಮಕೇತು, ಕ್ಷುದ್ರಗ್ರಹಗಳು, ಮಾನವ ಹಾರಿಸಿದ ಬಾನನೌಕೆಗಳು ಈ ಎಲ್ಲವುಗಳನ್ನೂ ಸದಾ ನಿರುಕಿಸುತ್ತಿರುವ ಅಗಲವಾದ ತಟ್ಟೆಗಳು. ಬಿಡುಬೀಸಾಗಿ, ಆಕಾಶಕ್ಕೆ ಮುಖವೊಡ್ಡಿ ಮಾನವ ಮತ್ತು ಬಾಹ್ಯಬ್ರಹ್ಮಾಂಡದ ನಡುವಿನ ಸಂಪರ್ಕಸೇತುಗಳಾಗಿ ನಿಂತ ಈ ಅಂಟೆನಾ ತಟ್ಟೆಯ ಮೇಲ್ಮೈನಲ್ಲಿ ಬಿದ್ದ ರೇಡಿಯೋ ಅಲೆಗಳೆಲ್ಲವೂ ಒಂದಾಗಿ ಕೇಂದ್ರಭಾಗಕ್ಕೆ ಸಮೀಕರಿಸಲ್ಪಡುತ್ತವೆ. ದುರ್ಬಲವಾದ ಅಲೆಗಳು ಒಂದರ ಮೇಲೊಂದು ಹೇರಲ್ಪಟ್ಟು ಸಶಕ್ತವಾಗಿ ಅರ್ಥವತ್ತಾದ ಬಿಂಬವನ್ನು ಪಡೆಯಲು ಸಾಧ್ಯವಾಗುತ್ತದೆ. ಸರಣಿಯಲ್ಲಿ ಜೋಡಿಸಿಟ್ಟ ಡಿಶ್ ತಟ್ಟೆಗಳೆಲ್ಲವೂ ಸಂಕೇತಗಳನ್ನು ಹೀರುತ್ತವಾದರೂ ಆ ಸಂಕೇತಗಳು ಪ್ರತಿ ತಟ್ಟೆಯ ಮೇಲೆ ಬೀಳುವ ವೇಳೆಯಲ್ಲಿ ವ್ಯತ್ಯಾಸವಿರುತ್ತದೆ. ಮೂರೂ ಸ್ಥಳಗಳಲ್ಲಿರುವ ಅಣು ಗಡಿಯಾರಗಳು ಇವನ್ನು ದಾಖಲುಮಾಡಿಕೊಂಡಿರುತ್ತವೆ. ಬಿತ್ತರಿಸುವಾಗ ಹೊತ್ತಿಗನುಗುಣವಾಗಿ ಮಾಹಿತಿಗಳನ್ನು ಜೋಡಿಸಲಾಗುತ್ತದೆ.
ಬಿತ್ತರಿಸಲಿರುವ ಸಂಕೇತಗಳು
ಅಮೆರಿಕದ ಮೊಝಾವ್ ಮರುಭೂಮಿಯಲ್ಲಿರುವ ಅಂಟೆನಾ.
ಅಮೆರಿಕದ ಮೊಝಾವ್ ಮರುಭೂಮಿಯಲ್ಲಿರುವ ಅಂಟೆನಾ.

ನಮ್ಮ ಟಿವಿ ಅಥವಾ ರೇಡಿಯೋ ಪ್ರಸಾರಗಳನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ಸುಮಾರು 100 ಕಿಮೀ ವ್ಯಾಪ್ತಿಯ ಪ್ರದೇಶವನ್ನು ತಲುಪಲು ಅವು 50 ಸಾವಿರ ವ್ಯಾಟ್ ವಿದ್ಯುತ್ತನ್ನು ನುಂಗುತ್ತಿರುತ್ತವೆ. ಉಪಗ್ರಹಗಳ ಟ್ರಾನ್ಸ್‍ಮೀಟರುಗಳ ಬರೀ 20 ವ್ಯಾಟ್ ಶಕ್ತಿಯನ್ನು ಬಳಸಿ ಸಂಕೇತಗಳು ಲಕ್ಷಗಟ್ಟಲೆ ಕಿಮೀ ದೂರ ಕ್ರಮಿಸಿಯೂ ಹೇಗೆ ಮೂಲರೂಪವನ್ನು ಉಳಿಸಿಕೊಳ್ಳುತ್ತವೆ? ಇಲ್ಲಿ ಎರಡು ವಿಷಯಗಳಿವೆ. ಮೊದಲನೆಯದು ಆ ಟ್ರಾನ್ಸ್‍ಮೀಟರ್ ತಾನು ಬಿತ್ತರಿಸಲಿರುವ ಸಂಕೇತಗಳನ್ನು ಒಗ್ಗೂಡಿಸಿ ಬಲಿಷ್ಠವಾದ ಕಿರಣವೊಂದಾಗಿ ಮಾಡಿ ಭೂಮಿಗೆ ಕಳಿಸುತ್ತದೆ. ಅಪಾರ ಅಂತರದ ನಂತರ ಬಸವಳಿದ ಆ ಕಿರಣವನ್ನು ಸೆರೆಹಿಡಿದ ಡಿಎಸ್‍ಎನ್ ವಿಶೇಷವಾದ ತಂತ್ರಗಳನ್ನು ಬಳಸಿ ಹಿನ್ನೆಲೆಯ ಬಾಹ್ಯಾಕಾಶ ಸದ್ದುಗಳನ್ನು ತೆಗೆದುಹಾಕಿ ಅತ್ಯಮೂಲ್ಯವಾದ ವೈಜ್ಞಾನಿಕ ಮಾಹಿತಿಗಳನ್ನು ಆ ಸಂಕೇತ ಕಿರಣದಿಂದ ಹೊರತೆಗೆಯುತ್ತದೆ.
ಪ್ರತಿ ಕೇಂದ್ರದಲ್ಲಿಯೂ ಒಂದು 230 ಅಡಿ, ಒಂದು 85 ಅಡಿ ಹಾಗೂ ಮೂರು 112 ಅಡಿ ವ್ಯಾಸದ ಅಂಟೆನಾಗಳಿವೆ. 1988 ರಲ್ಲಿ ವಾಯೇಜರ್ ನೌಕೆಗಳು ಯುರೇನಸ್ ಮತ್ತು ನೆಪ್ಚೂನು ಗ್ರಹಗಳನ್ನು ದಾಟಿ ಮುಂದೆ ಹೋದಾಗ ದುರ್ಬಲವಾಗುತ್ತ ಹೋದ ಅದರ ಸಂದೇಶಗಳನ್ನು ಆಲಿಸಲೆಂದು ಮೊದಲ ಅಂಟೆನಾದ ಅಗಲವನ್ನು 190 ರಿಂದ 230 ಅಡಿಗಳಿಗೆ ಹೆಚ್ಚಿಸಲಾಯಿತು. ವಾರದಲ್ಲಿ ಎಂಟು ತಾಸು ಇವುಗಳ ನಿರ್ವಹಣಾ ಕಾರ್ಯ ನಡೆಯುತ್ತದೆ. ಆಗ ದೈತ್ಯ ಆಕಾರದ ಇವು ಸರಿಯಾಗಿ ತಿರುಗುತ್ತಿವೆಯೆ, ಬುಡದಲ್ಲಿರುವ ಎಣ್ಣೆಹಾಸು ಆರಿದೆಯೆ ಇತ್ಯಾದಿಗಳನ್ನು ಪರೀಕ್ಷಿಸಲಾಗುತ್ತದೆ.
ಈ ಜಾಲದಲ್ಲಿ ವಿಶೇಷವಾದ ಒಂದು ಟ್ರಾನ್ಸ್‍ಮೀಟರನ್ನು ಹೊತ್ತ ಅಂಟೆನಾ ರಾಡಾರ್ ಕಿರಣಗಳಿಗೆಂದೇ ಮೀಸಲಾಗಿದೆ. ಮಾನವ ನಿರ್ಮಿತ ಬಾನಕಸ, ಕ್ಷುದ್ರಗ್ರಹ ಅಥವಾ ಹೊಸಗ್ರಹ ಹೀಗೆ ಗೊತ್ತಿರದ ವಸ್ತುವೊಂದು ಈ ಕಿರಣಕ್ಕೆ ದೊರೆತರೆ, ಅದರಿಂದ ದೊರೆಯುವ ಮಾಹಿತಿ ಆ ವಸ್ತುವಿನ ಪತ್ತೆಗೆ ನೆರವಾಗುತ್ತದೆ.
ಅರ್ಥವತ್ತಾದ ಚಿತ್ರಗಳು
ದೂರಕ್ಕೆ ಹಾರುವ ನೌಕೆಗಳೆಲ್ಲವೂ ಈ ಬಾಹ್ಯಾಕಾಶ ಸಂಪರ್ಕ ಜಾಲದೊಂದಿಗೆ ಸದಾ ಸಂಪರ್ಕದಲ್ಲಿರುತ್ತವೆ. ನೌಕೆಗಳಲ್ಲಿನ ಕ್ಯಾಮೆರಾಗಳು ತೆಗೆದ ಚಿತ್ರಗಳೆಲ್ಲವೂ ಸಂಕೇತ ರೂಪದಲ್ಲಿ ಮೊದಲು ಬಂದು ತಲುಪುವುದು ಈ ಅಂಟೆನಾಗಳನ್ನು. ಈ ಮೂಲಕ ಸಂಗ್ರಹವಾದ ಚಿತ್ರಗಳ ಸಂಕೇತರೂಪಗಳೆಲ್ಲವೂ ಬಳಿಯ ಕೇಂದ್ರ ಸ್ಥಳವೊಂದರಲ್ಲಿ ಸಂಸ್ಕರಣೆಗೊಂಡಾದ ಮೇಲೆ ನಾಸಾದ ಜೆಟ್ ಪ್ರೊಪಲ್ಶನ್ ಪ್ರಯೋಗಾಲಯದ (ಜೆಪಿಎಲ್) ಕೇಂದ್ರ ಕಛೇರಿಗೆ ಸಂಪರ್ಕ ಉಪಗ್ರಹಗಳು, ಟೆಲಿಫೋನುಗಳು ಹಾಗೂ ಜಲಾಂತರ್ಗಾಮಿ ಕೇಬಲ್ಲುಗಳ ಮೂಲಕ ತಲುಪುತ್ತವೆ. ಅಲ್ಲಿ, ಸಂಕೇತಗಳನ್ನು ಸಂಸ್ಕರಿಸಿ ಚಿತ್ರರೂಪಕ್ಕೆ ಬದಲಾಯಿಸಲಾಗುತ್ತದೆ. ಈ ಮಾಹಿತಿಗಳ ಕಂತೆಯನ್ನು ವಿಜ್ಞಾನಿಗಳು, ವಿಶ್ಲೇಷಕರಿಗೂ, ಆಯ್ದ ಕೆಲವು ಭಾಗಗಳನ್ನು ಅಂತರ್ಜಾಲದ ಮೂಲಕ ಸಾರ್ವಜನಿಕರಿಗೂ ದೀರ್ಘಾವಧಿಯ ಸಂಗ್ರಹಣೆಗೂ ಹಂಚಿ ಕಳುಹಿಸಲಾಗುತ್ತದೆ. ಮತ್ತೊಮ್ಮೆ ಅವುಗಳನ್ನು ಸಂಸ್ಕರಿಸಿ ಅರ್ಥವತ್ತಾದ ಚಿತ್ರಗಳನ್ನು ಮೂಡಿಸಿ ಎಲ್ಲರಿಗೆ ಹಂಚುವುದು ಜೆಪಿಎಲ್ ಡ್ಯೂಟಿ.
ಪ್ರತಿಯೊಂದು ಗಗನನೌಕೆಯಲ್ಲಿಯೂ ಅತ್ಯಾಧುನಿಕವಾದ ರೇಡಿಯೋ ಟ್ರಾನ್ಸ್‍ಮೀಟರ್ ಮತ್ತು ರಿಸಿವರುಗಳನ್ನು ಅಳವಡಿಸಿಡಲಾಗುತ್ತದೆ. ಡೀಪ್ ಸ್ಪೇಸಿನ ಅಂಟೆನಾಗಳು ಈ ನೌಕೆಗಳು ಕಳುಹುವ ಸಂದೇಶಗಳನ್ನಷ್ಟೇ ಅಲ್ಲ, ಸೂರ್ಯ ಮತ್ತಿತರ ತಾರೆಗಳು, ಅನಿಲ ಭರಿತವಾದ ಗ್ರಹಗಳು ಹೊರಸೂಸುವ ನೈಸರ್ಗಿಕವಾದ ವಿದ್ಯುತ್ಕಾಂತೀಯ ತರಂಗಗಳನ್ನೂ ಸಂಗ್ರಹಿಸುತ್ತವೆ. (ಇಂಥ ರೇಡಿಯೋ ಸಂಕೇತಗಳು ಶಬ್ದರೂಪದಲ್ಲಿರುತ್ತವೆ. ಅವುಗಳ ಅಧ್ಯಯನವು ‘ರೇಡಿಯೋ ಆಸ್ಟ್ರಾನಮಿ’ ಎಂಬ ಹೊಸ ಶಾಖೆಯನ್ನೇ ಹುಟ್ಟುಹಾಕಿದೆ.) ಭೂವಾತಾವರಣವನ್ನು ಪ್ರವೇಶಿಸ ಹೊರಟ ಧೂಮಕೇತು, ಕ್ಷುದ್ರಗ್ರಹಗಳೂ ಇವುಗಳ ದೃಷ್ಟಿಯಿಂದ ತಪ್ಪಿಸಿಕೊಳ್ಳುವಂತಿಲ್ಲ.
ಡಿಎಸೆನ್ ಹಾಗೂ ಬಾನನೌಕೆಯೊಂದರ ಪಥ, ಕಲಾವಿದನ ಕಲ್ಪನೆಯಲ್ಲಿ
ಡಿಎಸೆನ್ ಹಾಗೂ ಬಾನನೌಕೆಯೊಂದರ ಪಥ, ಕಲಾವಿದನ ಕಲ್ಪನೆಯಲ್ಲಿ

ಈ ಅಂಟೆನಾಗಳು ಮಾನವರಹಿತ ಎಲ್ಲಾ ಗಗನನೌಕೆಗಳಿಗೆ ಆದೇಶಗಳನ್ನು ಕಳುಹಿಸುತ್ತವೆ, ಅವುಗಳ ತಂತ್ರಾಂಶಗಳನ್ನು ಬದಲಾಯಿಸುತ್ತವೆ, ನೌಕೆಯ ಪಥ ಮತ್ತು ವೇಗವನ್ನು ಲೆಕ್ಕ ಇಟ್ಟಿರುತ್ತವೆ, ನೌಕೆಗಳಲ್ಲಿ ನಡೆಯುವ ಪ್ರಯೋಗಗಳ ಮಾಹಿತಿ ಪಡೆಯುತ್ತವೆ, ಹಾಗೂ ಇನ್ನೂ ಹತ್ತು ಹಲವಾರು ಕಾರ್ಯಗಳನ್ನು ನಡೆಸುತ್ತಿರುತ್ತವೆ.
ತುರ್ತುಪರಿಸ್ಥಿತಿಯಲ್ಲಿ ದೊಡ್ಡದಾದ 230 ಅಡಿ ವ್ಯಾಸದ ಅಂಟೆನಾಗಳನ್ನು ಬಳಸಲಾಗುತ್ತದೆ. ಭೂಕೇಂದ್ರದಿಂದ ಸಂಪರ್ಕ ಕಡಿದುಕೊಂಡ ಬಾನನೌಕೆಯಿಂದ ಬರುವ ಒಂದೊಂದೂ ಮಾಹಿತಿ ತುಣುಕೂ ಸಹ ತುಂಬಾ ಮಹತ್ವದ್ದಾಗಿರುತ್ತದೆ. ಅಂಥ ಮಾಹಿತಿಗಳ ಆಧಾರದ ಮೇಲೆ ಇವು ಗಗನನೌಕೆಗಳನ್ನು ಉಳಿಸಿದ ಉದಾಹರಣೆಗಳಿವೆ. ಸೊಹೋ ಎಂಬ ಐರೋಪ್ಯ ಸಂಘಟನೆಯ ವೇಧಶಾಲೆ ಹಾಗೂ ಅಪೋಲೋ 13 ನೌಕೆಗಳನ್ನು ಉಳಿಸಿದ್ದೇ ಈ ದೊಡ್ಡ ಅಂಟೆನಾಗಳು. ಅಪೋಲೋ ನೌಕೆಯ ಬ್ಯಾಟರಿಯ ಶಕ್ತಿಗುಂದಿ ಭೂಸಂಪರ್ಕ ಕಡಿಯುವಂತಾದಾಗ ಆಸ್ಟ್ರೇಲಿಯಾದ ಡೀಪ್ ಸ್ಪೇಸ್‍ನ ದೈತ್ಯ ಅಂಟೆನಾದ ಮೂಲಕ ಗಗನಯಾತ್ರಿಗಳನ್ನು ಉಳಿಸಲು ಸಾಧ್ಯವಾಯಿತು. ಹಾಗೆಯೇ, ಒಂದು ಬಾನನೌಕೆಯ ಯಂತ್ರಗಳು ಸಮರ್ಥವಾಗಿ ಕಾರ್ಯನಿರ್ವಹಿಸದೆ ತೊಂದರೆಗೊಳಗಾಗಿದೆ ಎಂದಿಟ್ಟುಕೊಳ್ಳಿ, ಆಗ ನೌಕೆಯಿಂದ ಬರುವ ಸಂದೇಶಗಳು ಅತಿ ಕ್ಷೀಣವಾಗಿರಬಹುದು, ಅವುಗಳನ್ನು ಸಂಗ್ರಹಿಸುವ ಕಾರ್ಯ ಈ ದೊಡ್ಡ ಅಂಟೆನಾಗಳದ್ದು.
ಈ ಸಂಪರ್ಕಜಾಲವನ್ನು ಸ್ವತಂತ್ರವಾದ ಕಾರ್ಯಪಡೆಯೊಂದು ನಿರ್ವಹಿಸುತ್ತಿದೆ. ಮೂರೂ ಕೇಂದ್ರಗಳಲ್ಲಿ ಸಂಶೋಧನೆ, ಡಿಸೈನ್, ನಿರ್ವಹಣೆ ಇತ್ಯಾದಿ ಅದರ ಪ್ರತಿಯೊಂದು ಕಾರ್ಯಕ್ಕೂ ಪ್ರತ್ಯೇಕ ಸಿಬ್ಬಂದಿಗಳಿದ್ದಾರೆ. ಹಾಗಾಗಿ ಕಳೆದ ನಲವತ್ತು ವರ್ಷಗಳ ಅವಧಿಯಲ್ಲಿ ಡಿಎಸ್‍ಎನ್ ನ ಈ ಸಾಮಥ್ರ್ಯವೂ ಬಹಳೇ ಉತ್ತಮಗೊಂಡಿದೆ. ಡಿಶ್‍ಗಳ ಮೇಲ್ವಿಚಾರಕರು, ನಿರ್ವಹಣಾ ಸಿಬ್ಬಂದಿ, ಪ್ರತಿಯೊಂದು ನೌಕೆಗೆ ಸಂಬಂಧಿಸಿದ ಆವರ್ತತರಂಗಗಳ ನಿರ್ದೇಶಕರು, ತಂತ್ರಾಂಶ ಬರೆಯುವವರು ಹೀಗೆ ನೌಕೆಗೆ ಸಂಬಂಧಿಸಿದ ಒಂದು ಆದೇಶದ ಹಿಂದೆ ಕನಿಷ್ಠ 30-40 ಜನರು ಕಾರ್ಯನಿರ್ವಹಿಸುತ್ತಿದ್ದಾರೆ!
ಅಂದ ಹಾಗೆ ಭಾರತ, ಚೀನಾ, ಯುರೋಪು ಮತ್ತು ರಷ್ಯಾಗಳಿಗೆ ಅವರದ್ದೇ ಆದ ಬಾಹ್ಯಾಕಾಶ ಸಂಪರ್ಕಜಾಲ ಇವೆ. ಆದರೆ ಇವೆಲ್ಲವೂ ಗಾತ್ರ ಮತ್ತು ಸಾಮಥ್ರ್ಯದಲ್ಲಿ ಅಮೆರಿಕದ ಜಾಲಕ್ಕಿಂತ ಬಹಳೇ ಕಡಿಮೆಯವು. ಬೆಂಗಳೂರು ಸಮೀಪದ ಬ್ಯಾಲಾಲು ತಾಣದಲ್ಲಿ ನಮ್ಮ ಇಸ್ರೋ ನಿರ್ಮಿಸಿದ ಜಾಲಕೇಂದ್ರ ಇದೆ. ಚಂದ್ರಯಾನ 1 ನೌಕೆಯ ನಿರ್ವಹಣೆ ಬ್ಯಾಲಾಲು ಕೇಂದ್ರದಿಂದಲೇ ನಡೆದಿತ್ತು.
ಮೊಝಾವ್ ಮರುಭೂಮಿಯಲ್ಲಿರುವ ಡಿಎಸೆನ್ ಸರಣಿ ಅಂಟೆನಾಗಳ ವಿಹಂಗಮ ನೋಟ
ಮೊಝಾವ್ ಮರುಭೂಮಿಯಲ್ಲಿರುವ ಡಿಎಸೆನ್ ಸರಣಿ ಅಂಟೆನಾಗಳ ವಿಹಂಗಮ ನೋಟ

ಬಿಸಿಲು, ಗಾಳಿ, ಮಳೆಗಳಿಗೆ ಸದಾಕಾಲ ಸಿಲುಕುತ್ತಿರುವ ಈ ಅಂಟೆನಾಗಳೀಗ ಸಾಕಷ್ಟು ನಲುಗಿವೆ. ಹೊಸ ಅಂಟೆನಾಗಳನ್ನು ಹೂಡಬೇಕು, ಬಿಡಿಭಾಗಗಳನ್ನು ಬದಲಿಸಬೇಕು. ಮಾನವನ ಸಂಶೋಧನಾ ಚಟುವಟಿಕೆಗಳು ಹೆಚ್ಚಿದಂತೆ, ದಿನದಿಂದ ದಿನಕ್ಕೆ ಬಾಹ್ಯಾಕಾಶಕ್ಕೆ ಧಾವಿಸುತ್ತಿರುವ ಗಗನನೌಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ, ಅಂದರೆ ಈ ಅಂಟೆನಾಗಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಇಂಥ ಅಂಟೆನಾಗಳ ಬದಲಾಗಿ ಹೊಸ ಉಪಕರಣಗಳ ಕುರಿತಾಗಿಯೂ ಸಂಶೋಧನೆಗಳು ನಡೆಯುತ್ತಿವೆ.
ಸೂರ್ಯಗೋಲದ ಆಚೆ ಇಣುಕುತ್ತಿರುವ ವಾಯೇಜರ್ ನೌಕೆಗಳು (ಗಂಟೆಗೆ 91 ಸಾವಿರ ಮೈಲು ವೇಗದಲ್ಲಿ ನಮ್ಮಿಂದ ದೂರ ಓಡುತ್ತಿರುವ ವಾಯೇಜರ್‍ನ ಸಂದೇಶಗಳು ಇಲ್ಲಿಗೆ ತಲುಪಲು 32 ಗಂಟೆಗಳು ಬೇಕು), ಕ್ಷುದ್ರಗ್ರಹಗಳ ಬೆನ್ನಟ್ಟಿ ಹೊರಟಿರುವ ಡಾನ್, ಶನಿಯನ್ನು ಗಸ್ತು ಹೊಡೆಯುತ್ತಿರುವ ಕ್ಯಾಸಿನಿ, ಮಂಗಳನ ಅಂಗಳದಲ್ಲಿ ಓಡಾಡುತ್ತಿರುವ ಸ್ಪಿರಿಟ್, ಅಪಾರ್ಚುನಿಟಿ ರೋವರ್‍ಗಳು, ಹತ್ತಾರು ವೇಧಶಾಲೆಗಳು ಇವೆಲ್ಲವೂ ಮಾನವ ಬಾಹ್ಯಾಕಾಶವನ್ನು ಬಗೆದು ನೋಡಲು ಮಾಡುತ್ತಿರುವ ಪ್ರಯತ್ನಗಳಷ್ಟೆ. ಬಾಹ್ಯಾಕಾಶ ಸಂಪರ್ಕ ಜಾಲದ ಸಮರ್ಥ ಕಾರ್ಯದಿಂದಾಗಿ ಇದು ಸಾಧ್ಯವಾಗಿದೆ, ಅಲ್ಲವೆ?
ಎಲ್ಲಿಂದ ಬಾಹ್ಯಾಕಾಶ (deepspace) ಆರಂಭ?
ಅಪೋಲೋ ಮಿಶನ್ ಕಾಲದಲ್ಲಿ ಬಾಹ್ಯಾಕಾಶವೆಂದರೆ ಭೂಮಿಯ ಹೊರಗಣ ಸುಮಾರು 20-30 ಸಾವಿರ ಕಿಮೀ ಆಚಿನ ಪ್ರದೇಶ ಎಂದು ಅಂದಾಜಿಸಲಾಗಿತ್ತು. ಆದರಿಂದು ದಾಪುಗಾಲಿನ ತಂತ್ರಜ್ಞಾನದಿಂದಾಗಿ ಮಾನವ ದೂರದೂರದವರೆಗೆ ಗ್ರಹಿಸಬಲ್ಲವನಾಗಿದ್ದಾನೆ, ಅಂತರಿಕ್ಷದ ಅಗಾಧತೆ ಆತನಿಗೆ ಪರಿಚಯವಾಗಿದೆ. ಭೂಮಿಯಿಂದ 20 ಲಕ್ಷ ಕಿಮೀ ಆಚಿನ ನಿರ್ವಾತ ಪ್ರದೇಶವನ್ನು ಬಾಹ್ಯಾಂತರಿಕ್ಷ ಎಂದು ಕರೆಯಲಾಗುತ್ತಿದೆ. ಹಾಗಾಗಿ ಮೂರು ಲಕ್ಷ ಕಿಮೀ ದೂರದ ಚಂದ್ರÀನಿರುವ ಪ್ರದೇಶ ನಮಗೆ ಬಾಹ್ಯಾಕಾಶ ಅಲ್ಲ!
ಬಾಹ್ಯಾಕಾಶ ಸಂಪರ್ಕ ಜಾಲದ ಹಿನ್ನೆಲೆ
ಅದು 1958, ಅಮೆರಿಕದ ಎಕ್ಸ್‍ಪ್ಲೋರರ್ ಉಪಗ್ರಹ ಬಾನಿಗೆ ಹಾರಿದ ವರ್ಷ. ಭೂಮಿಯನ್ನು ಗಸ್ತು ಹೊಡೆಯುವ ಈ ನೌಕೆಯ ಪಥನಿರೀಕ್ಷಣೆಗೆಂದು ಅಮೆರಿಕದ ಸೇನೆ ನೈಜೀರಿಯಾ, ಸಿಂಗಾಪೂರ್ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿ ದೂರದರ್ಶಕಗಳನ್ನು ಅಳವಡಿಸಿತ್ತು.
ಮುಂದೆ ಅಮೆರಿಕದ ಗಗನಯೋಜನೆಗಳೆಲ್ಲವೂ ನಾಸಾ ಸಂಸ್ಥೆಯ ಕೈಸೇರಿತು. ಮೊದಮೊದಲು ಪ್ರತಿ ಬಾಹ್ಯಾಕಾಶ ಯೋಜನೆಗೂ ಪ್ರತ್ಯೇಕ ಸಂಪರ್ಕ ವ್ಯವಸ್ಥೆಯನ್ನು ಸಿದ್ಧಪಡಿಸಬೇಕಾಗಿತ್ತು. ಅಂತರಿಕ್ಷದಿಂದ ಬರುವ ಸಂಕೇತಗಳೆಲ್ಲವನ್ನೂ ಒಂದೆಡೆ ಕಲೆಹಾಕುವ ಸಲುವಾಗಿ ಬಾಹ್ಯಾಕಾಶ ಸಂಪರ್ಕ ಜಾಲವನ್ನೇ ಹುಟ್ಟುಹಾಕಲಾಯಿತು. ಸಾಕಷ್ಟು ಸಂಶೋಧನೆಗಳ ನಂತರ ಮೇಲೆ ತಿಳಿಸಿದ ಮೂರು ಸ್ಥಳಗಳನ್ನು ಸೂಕ್ತವೆಂದು ಆಯ್ಕೆ ಮಾಡಲಾಯಿತು.
ಸರೋಜ ಪ್ರಕಾಶ್

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!