22.1 C
Sidlaghatta
Tuesday, October 14, 2025

ಅಮೃತ ಬಳ್ಳಿ

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ಮನೆ ಮಾತಾದ ಹಂದಿಜ್ವರ (H.N.) ಹಾಗೂ ಚಿಕುನ್ ಗೂನ್ಯಾ ಜ್ವರಗಳು ಬೇರೆ ಬೇರೆ ವೈದ್ಯಕೀಯ ಚಿಕಿತ್ಸಾ ಪದ್ಧತಿಗಳಿಂದ ಗುಣಪಡಿಸಲಾರದಾದಾಗ ಜನರು ಮೊರೆ ಹೋಗಿದ್ದು ಆಯುರ್ವೇದ ಚಿಕಿತ್ಸಾ ಪದ್ಧತಿಯ ಗಿಡಮೂಲಿಕೆಗಳನ್ನು “ತಲೆಗೊಂದೇ ಮಂತ್ರ” ವೆಂಬಂತೆ ಅಮೃತ ಬಳ್ಳಿಯ ಕಾಂಡಗಳನ್ನು ಉಪಯೋಗಿಸಿ ಕಷಾಯಗಳನ್ನು ತಯಾರಿಸಿ ಉಪಯೋಗಿಸಿದರು. ಆದರೆ “ಅತಿಯಾದರೆ ಅಮೃತವೂ ವಿಷ’ ರೋಗಗಳ ಕಾರಣಗಳನ್ನು ಅರಿತು ಲಕ್ಷಣಗಳನ್ನು ನೋಡಿ ವೈದ್ಯರ ಸಲಹೆಯ ಮೇರೆಗೆ ಔಷಧ ಸಸ್ಯಗಳನ್ನು ಬಳಸುವುದು ಆರೋಗ್ಯಕರ.
ಹೆಸರೇ ಸೂಚಿಸುವಂತೆ ಅಮೃತಕ್ಕೆ ಸಮಾನವಾದಂಥಹ “ಅಮೃತ ಬಳ್ಳಿ”ಯ ಪರಿಚಯ ಹಾಗೂ ಅದರ ಗುಣ ಲಕ್ಷಣಗಳು ಹಾಗೂ ರೋಗಗಳಲ್ಲಿ ಬಳಕೆಯ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.
ಅಮೃತ ಬಳ್ಳಿಯು (menispermaceae)  ಮೆನಿಸ್ಪರ್ಮೇಶಿಯೆ ಎಂಬ ಸಸ್ಯ ಶಾಸ್ತ್ರೀಯ ಕುಟುಂಬ ವರ್ಗಕ್ಕೆ ಸೇರಿರುತ್ತದೆ. ಸಾಮಾನ್ಯವಾಗಿ ಈ ಕುಟುಂಬ ವರ್ಗಕ್ಕೆ ಸೇರಿದ ಸಸ್ಯಗಳು ಬಳ್ಳಿಗಳ ರೂಪದಲ್ಲಿ ಇರುತ್ತವೆ. ಯಾವುದೇ ವೃಕ್ಷಗಳಿಗೆ ಹಮ್ಮಿಕೊಂಡು ಬೆಳೆಯುತ್ತವೆ. ಈ ಬಳ್ಳಿಯ ಕಾಂಡವನ್ನು ಕತ್ತರಿಸಿ ನೋಡಿದಾಗ ಚಕ್ರಾಕಾರವಾಗಿ ಕಾಣುತ್ತದೆ. ಎಲೆಗಳು ಏಕಾಂತರವಾಗಿದ್ದು, ಹೃದಯದ ಆಕಾರದಲ್ಲಿ ಇದ್ದು, ಉಪಪತ್ರಗಳಿರುವುದಿಲ್ಲ. ಹೂವುಗಳು ಆಕಾರದಲ್ಲಿ ಸಣ್ಣದಾಗಿದ್ದು, ಹಳದಿ ಬಣ್ಣದ ಗುಚ್ಛಗಳ ರೂಪದಲ್ಲಿ ಇರುತ್ತವೆ. ಹಣ್ಣು ಕೆಂಪು ಬಣ್ಣದ್ದಾಗಿರುತ್ತದೆ. ಕಾಂಡವನ್ನು ಕತ್ತರಿಸಿ ನೆಟ್ಟಾಗ ಬಳ್ಳಿಗಳು ಹುಟ್ಟಿಕೊಳ್ಳುತ್ತವೆ. ಕಹಿ ಬೇವಿನ ವೃಕ್ಷಕ್ಕೆ ಹಮ್ಮಿಕೊಂಡ ಅಮೃತ ಬಳ್ಳಿಯು ಔಷಧಾರ್ಥವಾಗಿ ಉಪಯೋಗಿಸುವುದಕ್ಕೆ ಪ್ರಶಸ್ತವಾದುದಾಗಿದೆ.
ಅಮೃತ ಬಳ್ಳಿಯ ಸಮಾನಾರ್ಥಕ ಸಂಸ್ಕøತ ಹೆಸರುಗಳು
ವತ್ಸಾದನಿ: ಗೋವುಗಳು ಇವುಗಳನ್ನು ತಿನ್ನುವ ಕಾರಣಕ್ಕೆ ಈ ಹೆಸರು.
ಛಿನ್ನರೂಹಾ: ಈ ಬಳ್ಳಿಯ ಕಾಂಡಗಳನ್ನು ಕತ್ತರಿಸಿ ನೆಡುವುದರಿಂದ ಬಳ್ಳಿಗಳು ಹುಟ್ಟುತ್ತವೆ. ಆದ್ದರಿಂದ ಈ ಹೆಸರು.
ಗುಡೂಚಿ: ರೋಗಗಳಿಂದ ಜನರನ್ನು ರಕ್ಷಿಸುವುದರಿಂದ ಈ ಹೆಸರು.
ತಂತ್ರಿಕಾ: ಕುಟುಂಬದ ಸದಸ್ಯರನ್ನು ರಕ್ಷಣೆ ಮಾಡಿ, ರೋಗಗಳಿಂದ ದೂರವಿಡುವುದಕ್ಕೋಸ್ಕರ ಈ ಹೆಸರು.
ಅಮೃತಾ: ಇದರ ಸೇವನೆಯಿಂದ ಮರಣವನ್ನು ದೂರವಿಡಬಹುದು.
ಮಧುಪರ್ಣಿ: ಇವುಗಳ ಎಲೆಗಳು ಸಿಹಿಯಾಗಿರುವುದರಿಂದ ಈ ಹೆಸರು.
ಉಪಯುಕ್ತ ಅಂಗ: ಕಾಂಡ ಮತ್ತು ಎಲೆಗಳು.
ಗುಣ ಲಕ್ಷಣಗಳು
ಅಮೃತ ಬಳ್ಳಿಯು ಕಹಿ, ಒಗರು ರಸಗಳನ್ನು ಒಳಗೊಂಡಿದೆ. ವಾತ ಹಾಗು ಕಫ ದೋಷಗಳನ್ನು ಶಮನ ಮಾಡುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಶರೀರದ ಧಾತುಗಳ ವರ್ಧನೆಗೆ ಹಾಗೂ ಪೋಷಣೆಗೆ ಸಹಾಯಕ.
ಮಧುಮೇಹ, ಚರ್ಮರೋಗ, ಕೆಲವು ಸಂಧಿಗಳ ರೋಗಗಳು, ಕ್ರಿಮಿ, ಜ್ವರ, ಕೆಮ್ಮು ಇತ್ಯಾದಿ ರೋಗಗಳನ್ನು ಶಮನ ಮಾಡುತ್ತದೆ.
ಉಪಯೋಗ
1. ಎಲ್ಲ ರೀತಿಯ ಪ್ರಮೇಹದಲ್ಲಿ ಅಮೃತ ಬಳ್ಳಿಯ ರಸವನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸುವುದು ಉತ್ತಮ.
2. ಅಮೃತ ಬಳ್ಳಿಯ ರಸವನ್ನು ದಿನನಿತ್ಯವೂ ಸೇವಿಸುವುದರಿಂದ ಶರೀರದ ಧಾತುಗಳ ವೃದ್ಧಿಯಾಗಿ ಶರೀರಕ್ಕೆ ಪೋಷಣೆ ಸಿಗುವುದು.
3. ವಾತ ದೋಷ ಪ್ರಧಾನವಾಗಿರುವ ಜ್ವರದಲ್ಲಿ ಅಮೃತ ಬಳ್ಳಿಯ ಕಾಂಡಗಳನ್ನು ಜಜ್ಜಿ ನೀರನ್ನು ಸೇರಿಸಿ ಕುದಿಸಿ ಅರ್ಧದಷ್ಟು ಇಳಿಸಿ ಕಷಾಯ ತಯಾರಿಸಿ ಸೋಸಿ ಕುಡಿಯುವುದು ಉತ್ತಮ.
4. ಸಂಧಿಗತ ರೋಗಗಳಲ್ಲಿ (gouty arthritis)  ಅಮೃತ ಬಳ್ಳಿಯಿಂದ ಸಿದ್ಧಪಡಿಸಿದ ತುಪ್ಪವು ಉತ್ತಮ.
5. ತುಂಬಾ ದಿನಗಳಿಂದ ಜ್ವರದಿಂದ ಬಳಲುತ್ತಿರುವವರು ಅಮೃತ ಬಳ್ಳಿ ಹಾಗೂ ಪಿಪ್ಪಲಿಯನ್ನು (ಹಿಪ್ಪಲಿ) ಸೇರಿಸಿ ಕಷಾಯವನ್ನು ತಯಾರಿಸಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದು ಉತ್ತಮ.
6. ಬಾಣಂತಿಯರು ಅಮೃತಬಳ್ಳಿ ಹಾಗೂ ಶುಂಠಿಯಿಂದ ತಯಾರಿಸಿದ ಕಷಾಯವನ್ನು ಸೇವಿಸುವುದರಿಂದ ಸ್ತನ್ಯ (ಎದೆಹಾಲು) ಶುದ್ಧಿಯಾಗುವುದು.
7. ಕಾಮಾಲೆಯಲ್ಲಿ ನಿತ್ಯವೂ ಬೆಳಿಗ್ಗೆ ಅಮೃತ ಬಳ್ಳಿ ಕಷಾಯವನ್ನು ಜೇನುತುಪ್ಪದೊಂದಿಗೆ ಸೇವಿಸುವುದು ಹಿತಕರ.
ಅಮೃತಾರಿಷ್ಠ, ಸಂಶಮನಿ ವಟಿ, ಅಮೃತಾ ಘೃತ, ಅಮೃತಾಷ್ಟಕ ಕ್ವಾಥ, ಅಮೃತಾ ಸತ್ವ ಇತ್ಯಾದಿಗಳು ಅಮೃತ ಬಳ್ಳಿಯಿಂದ ಸಿದ್ಧಪಡಿಸಿದ ಕೆಲವು ಔಷಧಗಳ ಹೆಸರುಗಳು.
ಡಾ. ನಾಗಶ್ರೀ ಕೆ.ಎಸ್.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!