ಗ್ರಾಮ ಠಾಣೆ ಮತ್ತು ಸರ್ವೆ ನಂಬರುಗಳ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಮಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಕತಟ್ಟಿ ಗ್ರಾಮಕ್ಕೆ ಮಂಗಳವಾರ ತಹಶೀಲ್ದಾರ್ ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯ್ತಿ ಇ ಓ ವೆಂಕಟೇಶ್ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸರ್ವೆ ಕಾರ್ಯವನ್ನು ನಡೆಸಿದರು.
ಕಳೆದ ಮಾರ್ಚ್ ತಿಂಗಳಿನಲ್ಲಿ ಗ್ರಾಮ ಪಂಚಾಯ್ತಿ ಕಚೇರಿಯ ಮುಂದೆ ಗ್ರಾಮಸ್ಥರು ಹಾಗೂ ರೈತ ಸಂಘದ ಮುಖಂಡರು ಗ್ರಾಮ ಠಾಣೆಯ ಜಮೀನನ್ನು ಅಕ್ರಮವಾಗಿ ಕೆಲ ಪ್ರಭಾವಿಗಳು ವಶಪಡಿಸಿಕೊಂಡಿದ್ದಾರೆ ಅವನ್ನು ತೆರವುಗೊಳಿಸಬೇಕೆಂದು ಪ್ರತಿಭಟಿಸಿದ್ದರು. ಇದೇ ವಿಷಯವಾಗಿ ಕಳೆದ ಹದಿನೈದು ದಿನಗಳ ಹಿಂದೆ ಘರ್ಷಣೆ ಕೂಡ ನಡೆದು ಕೆಲವರ ಬಂಧನವೂ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತಿನಲ್ಲಿ ತೆರಳಿದ ತಹಶೀಲ್ದಾರ್ ಅಜಿತ್‌ಕುಮಾರ್ ರೈ, ತಾಲ್ಲೂಕು ಪಂಚಾಯ್ತಿ ಇ ಓ ವೆಂಕಟೇಶ್ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯ್ತಿ ಇ ಓ ವೆಂಕಟೇಶ್, ‘ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಗ್ರಾಮ ಠಾಣೆಗೆ ಸೇರಿದ ಜಮೀನನ್ನು ಸರ್ವೆ ಕಾರ್ಯ ನಡೆಸಿದ್ದೇವೆ. ಅಕ್ರಮ ಖಾತೆದಾರರಿಗೆ ನೋಟಿಸ್ ನೀಡಲಾಗುವುದು. ಅವರು ತರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗುವುದು. ಸರ್ಕಾರಿ ಜಮೀನನ್ನು ಯಾವುದೇ ಕಾರಣಕ್ಕೂ ಬಿಡಲಾಗದು’ ಎಂದು ತಿಳಿಸಿದರು.
‘ಈ ಹಿಂದೆಯೂ ಎರಡು ಬಾರಿ ಅಕ್ರಮ ಖಾತೆದಾರರನ್ನು ತೆರವುಗೊಳಿಸಲಾಗುವುದು ಎಂದು ಹೇಳಿ ತಾಲ್ಲೂಕು ಪಂಚಾಯ್ತಿ ಇ ಓ ಬಂದಿದ್ದರು. ಈ ದಿನವೂ ಅದೇ ರೀತಿಯಾಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಬಂದಿದ್ದು, ಕೇವಲ ಸರ್ವೆ ಮಾಡಿರುವ ಜಾಗಗಳನ್ನು ನೋಡಿ, ಅಕ್ರಮ ಖಾತೆದಾರರಿಗೆ ನೋಟಿಸ್ ನೀಡುವುದಾಗಿ ತಿಳಿಸಿ ತೆರಳಿದ್ದಾರೆ. ಅವರ ಕ್ರಮವು ಅನುಮಾನಾಸ್ಪದವಾಗಿದೆ. ಹದಿನೈದು ದಿನಗಳು ಕಾಯುತ್ತೇವೆ. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ತಾಲ್ಲೂಕು ಪಂಚಾಯ್ತಿ ಕಚೇರಿಗೆ ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಗ್ರಾಮಸ್ಥರು ತಿಳಿಸಿದರು.
- Advertisement -
- Advertisement -
- Advertisement -
- Advertisement -