ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬರೂ ಇದರ ಸದುಪಯೋಗ ಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲೂಕಿನ ಹಂಡಿಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪೇಗೌಡನಹಳ್ಳಿ ಗ್ರಾಮದಲ್ಲಿ ಜಿ.ಪಂ, ತಾ.ಪಂ ಹಾಗು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡ ಹಾಗು ಶುದ್ದ ಕುಡಿಯುವ ನೀರಿನ ಘಟಕದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರತಿಯೊಂದು ಮಗುವಿಗೂ ಉಚಿತ ಪುಸ್ತಕ, ಸಮವಸ್ತ್ರ, ಸೇರಿದಂತೆ ಬಿಸಿಯೂಟ ಹಾಗು ಉಚಿತ ಸೈಕಲ್ ವಿತರಣೆಯಂತಹ ಯೋಜನೆಗಳನ್ನು ಜಾರಿಗೆ ತಂದಿದ್ದು ಇವೆಲ್ಲದರ ಉದ್ದೇಶ ಒಂದೇ ಗ್ರಾಮೀಣ ಪ್ರದೇಶದ ಜನತೆ ಸೇರಿದಂತೆ ಆರ್ಥಿಕವಾಗಿ ತೀರಾ ಹಿಂದುಳಿದವರ ಮಕ್ಕಳಿಗೂ ಸರ್ಕಾರ ಉತ್ತಮ ಶಿಕ್ಷಣ ನೀಡಬೇಕು ಎನ್ನುವುದು.
ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ತಮಗೆ ಎಷ್ಟೇ ಕಷ್ಟ ಇರಲಿ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳಿಸುವ ಮೂಲಕ ಉತ್ತಮ ಶಿಕ್ಷಣ ಕೊಡಿಸಿದಲ್ಲಿ ಅವರು ಸಮಾಜದ ಉತ್ತಮ ಪ್ರಜೆಗಳಾಗಿ ರೂಪಗೊಳ್ಳುತ್ತಾರೆ ಎಂದರು.
ಗ್ರಾಮೀಣ ಭಾಗದ ಜನರ ಆರೋಗ್ಯ ದೃಷ್ಟಿಯಿಂದ ತಾಲೂಕಿನಾಧ್ಯಂತ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು ತಾಲೂಕಿನ ಬಹುತೇಕ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಈಗಾಗಲೇ ಶುದ್ದ ಕುಡಿಯುವ ನೀರಿನ ಘಟಕಗಳ ಉದ್ಘಾಟನೆಯಾಗಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿಯೂ ಶುದ್ದ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು.
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಾಪಿಸಲಾಗಿರುವ ಶುದ್ದ ನೀರಿನ ಘಟಕ ಸಾರ್ವಜನಿಕರ ಸ್ವತ್ತಾಗಿದ್ದು ಇದರ ನಿರ್ವಹಣೆ ಸೇರಿದಂತೆ ಘಟಕದ ಸುತ್ತಲೂ ನೈರ್ಮಲ್ಯ ಕಾಪಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಗ್ರಾಮಸ್ಥರು ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಾಲೆ ಶುರುವಾದ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗು ಪುಸ್ತಕ ವಿತರಣೆಯನ್ನು ಗಣ್ಯರಿಂದ ನೆರವೇರಿಸಲಾಯಿತು.
ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ, ತಾ.ಪಂ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣರೆಡ್ಡಿ, ಸಿಡಿಪಿಓ ಲಕ್ಷ್ಮಿದೇವಮ್ಮ, ಗ್ರಾ.ಪಂ ಸದಸ್ಯರಾದ ಎ.ಎಂ.ತ್ಯಾಗರಾಜು, ನೇತ್ರಾವತಿ, ಮಾಜಿ ಸದಸ್ಯರಾದ ಎ.ಎನ್.ಮುನಿನಾರಾಯಣಪ್ಪ, ವೆಂಕಟನಾರಾಯಣಪ್ಪ, ಹನುಮಪ್ಪ, ಭಾಗ್ಯಮ್ಮ, ಮುಖಂಡರಾದ ಹನುಮಂತಪ್ಪ, ಗೋವಿಂದರಾಜು, ಗುತ್ತಿಗೆದಾರ ಎಸ್.ಮಂಜುನಾಥ್, ಆನಂದ್, ನರಸಿಂಹಮೂರ್ತಿ, ಜಗದೀಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -