ತಾಲ್ಲೂಕಿನ ಸುಗಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ೮ ನೇ ತರಗತಿಯ ನಾಲ್ಕು ಮಂದಿ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಕ್ಕಳ ಬಾಲ ಆನಂದ ಮಹೋತ್ಸವ ಮನೆವಾಸ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ.
ನವದೆಹಲಿಯ ರಾಷ್ಟ್ರೀಯ ಯುವಯೋಜನೆ, ಯುವಸಬಲೀಕರಣ ಮತ್ತು ಕ್ರೀಡಾ ಸಚಿವಾಲಯವು ಮಕ್ಕಳದಿನಾಚರಣೆ ಅಂಗವಾಗಿ ನವೆಂಬರ್-೫ ರಿಂದ ೧೨ ರವರೆಗೆ ಮಧ್ಯಪ್ರದೇಶದ ವಿದಿಶಾ ಪಟ್ಟಣದ ಸಾಮ್ರಾಟ್ ಅಶೋಕ ಟೆಕ್ನಾಲಾಜಿಕಲ್ ಕಾಲೇಜಿನಲ್ಲಿ ಶಿಬಿರವನ್ನು ಹಮ್ಮಿಕೊಂಡಿದೆ.
ಈ ಶಾಲೆಯ ನಾಲ್ಕು ವಿದ್ಯಾರ್ಥಿಗಳೊಂದಿಗೆ ಸುಮಾರು ೩೦ ಮಂದಿ ವಿವಿಧ ಭಾಗಗಳ ಮಕ್ಕಳು ಕರ್ನಾಟಕವನ್ನು ಪ್ರತಿನಿಧಿಸಲಿದ್ದು, ವಿಶ್ವದ ಎಲ್ಲಾ ಭಾಗಗಳ ಮಕ್ಕಳೊಂದಿಗೆ ಸಾಂಸ್ಕೃತಿಕ ವಿನಿಮಯ, ಶ್ರಮದಾನ, ಉಪನ್ಯಾಸ, ಸರ್ವಧರ್ಮ ವಿಚಾರಸಂಕಿರಣ, ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ಶಿಬಿರದಲ್ಲಿ ವಿದ್ಯಾರ್ಥಿಗಳಾದ ಎಸ್.ಜೆ.ನಿಖಿಲ್, ಎಸ್.ಎಸ್.ದೀಪಿಕಾ, ಎಸ್.ಎನ್.ನವ್ಯಶ್ರೀ, ಎಸ್.ಎಚ್.ನಂದಿನಿ ಪಾಲ್ಗೊಳ್ಳಲಿದ್ದಾರೆ.
ಅಭಿನಂದನಾ ಕಾರ್ಯಕ್ರಮ :
ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಬಿರಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಜೆ.ವೆಂಕಟಾಪುರ ಗ್ರಾಮಪಂಚಾಯಿತಿ ಅಧ್ಯಕ್ಷ ಬಿ.ಎಂ.ರಘುನಾಥ್ ಮಾತನಾಡಿ, ಸಂಸ್ಕಾರದಿಂದ ಬದುಕಿ, ಬಾಳಲು ಪೂರಕವಾದ ಶಿಕ್ಷಣವನ್ನು ಒದಗಿಸಬೇಕು. ಕೇವಲ ಹಣ, ಅಧಿಕಾರ ಗಳಿಕೆಗಾಗಿ ಮಾತ್ರ ಶಿಕ್ಷಣವಾಗುವುದಕ್ಕಿಂತ ಮಾನವನಾಗಿ ಬದುಕಲು ಪೂರಕವಾದ ಗುರಿಯನ್ನು ಶಿಕ್ಷಣ ಕ್ಷೇತ್ರ ಹೊಂದಬೇಕು. ಜೀವನಯಾತ್ರೆಯು ಜೀತವಾಗದಂತೆ ಕಾಪಾಡುವ ಸಜ್ಜನರ ಮನೋಭೂಮಿಕೆಯು ಪಕ್ವ ಮತ್ತು ದೃಢಗೊಳ್ಳಬೇಕು, ವೆಂಕಟಾಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಶಾಲಾಮಕ್ಕಳು ಅಂತರಾಷ್ಟ್ರೀಯ ಮಟ್ಟದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆ ತಂದಿದೆ ಎಂದರು.
ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಮಾತನಾಡಿ, ಆತುರವಾಗಿ ಪೂರ್ವಾಪರ ಚಿಂತಿಸದೇ ಕೈಗೊಳ್ಳುವ ಚಟುವಟಿಕೆಗಳಿಂದ ಸತ್ಫಲಕ್ಕಿಂತ ಹಾನಿಯೇ ಹೆಚ್ಚಾಗಿರುತ್ತದೆ. ಪ್ರತಿ ಹೆಜ್ಜೆ ಇಡುವ ಮುನ್ನ ಚಿಂತನೆಗೊಳಪಡಿಸಿ ತಾಳ್ಮೆಯಿಂದ ಕಾರ್ಯ ಸಾಧಿಸಿ ಜೀವನವನ್ನು ಹಸನುಮಾಡಿಕೊಳ್ಳಬೇಕು. ಔಪಚಾರಿಕ ಶಿಕ್ಷಣದೊಂದಿಗೆ ಅನೌಪಚಾರಿಕ ಶಿಕ್ಷಣ ಚಟುವಟಿಕೆಗಳಿಗೂ ಪೋಷಕರು, ಶಿಕ್ಷಕರು ಆದ್ಯತೆ ನೀಡಬೇಕು ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ಎಂ.ಶಂಕರಪ್ಪ, ಗ್ರಾಮಪಂಚಾಯಿತಿ ಸದಸ್ಯ ಎನ್.ಅಶ್ವತ್ಥಪ್ಪ, ತಾಲ್ಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬೈರಾರೆಡ್ಡಿ, ಗ್ರಾಮಪಂಚಾಯಿತಿ ಸದಸ್ಯೆ ಭಾಗ್ಯಮ್ಮ ಅರುಣ್‌ಕುಮಾರ್, ಸದಸ್ಯ ಷಣ್ಮುಗಪ್ಪ, ಎಸ್.ಡಿ.ದೇವರಾಜು, ಎಸ್‌ಡಿಎಂಸಿ ಉಪಾಧ್ಯಕ್ಷ ಜಗದೀಶ್, ಸದಸ್ಯೆ ನರಸಮ್ಮ, ದೊಡ್ಡಮುನಿವೆಂಕಟಶೆಟ್ಟಿ, ಹಾಲು ಉತ್ಪಾದಕರ ಸಹಕಾರಸಂಘದ ಅಧ್ಯಕ್ಷ ಮಂಜುನಾಥ್, ಸುರೇಶ್, ಕೃಷ್ಣಪ್ಪ, ಮುಖ್ಯಶಿಕ್ಷಕಿ ಉಮಾದೇವಿ, ಶಿಕ್ಷಕ ಬಿ.ನಾಗರಾಜು, ಎ.ಬಿ.ನಾಗರಾಜು, ಎಂ.ವೈ.ಲಕ್ಷ್ಮಯ್ಯ, ಶಿಕ್ಷಕಿ ತಾಜೂನ್ ಹಾಜರಿದ್ದರು.
- Advertisement -
- Advertisement -
- Advertisement -







