ನಗರದ ಉಲ್ಲೂರುಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಅಕ್ಷರ ದಾಸೋಹ ಅಡುಗೆ ಸಿಬ್ಬಂದಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು ಮಾತನಾಡಿದರು.
ಮಹಿಳೆಯರಲ್ಲಿ ಪ್ರೀತಿ ವಾತ್ಸಲ್ಯ ಹೆಚ್ಚಾಗಿರುವ ಕಾರಣಕ್ಕೆ ಅಕ್ಷರ ದಾಸೋಹ ಯೋಜನೆಗೆ ಮಹಿಳೆಯರನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರ ಹಿಂದೆ ಮಹಿಳೆಯರು ಸ್ವಾವಲಂಬಿಯಾಗಿಸುವ ಉದ್ದೇಶವಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಅಡುಗೆ ಸಿಬ್ಬಂದಿ ಪಾತ್ರ ಮುಖ್ಯ ಎಂದು ಅವರು ತಿಳಿಸಿದರು.
ಅಡುಗೆ ಗುಣಮಟ್ಟದ ಬಗ್ಗೆ ಸಿಬ್ಬಂದಿ ಹೆಚ್ಚು ಕಾಳಜಿವಹಿಸಬೇಕು. ಅಡುಗೆ ಕೊಠಡಿ ಸೇರಿದಂತೆ ಪರಿಕರಗಳು ಸ್ವಚ್ಛವಾಗಿರಬೇಕು. ಅಶುದ್ಧತೆಯಿಂದ ನಾನಾ ಕಾಯಿಲೆಗಳು ಹರಡುತ್ತವೆ. ಬಿಸಿಯೂಟವನ್ನು ಮಕ್ಕಳಿಗಾಗಿ ತಯಾರಿಸುವುದರಿಂದ ಹೆಚ್ಚು ಕಾಳಜಿಯ ಅಗತ್ಯ ಇದೆ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಚಂದ್ರಶೇಖರ್, ಪ್ರಭಾಕರ್ ಮತ್ತು ಕಲ್ಪನಾ ಅಡುಗೆಯ ಗುಣಮಟ್ಟ, ಶುಚಿತ್ವದ ಕುರಿತಂತೆ ಸಲಹೆ, ಸೂಚನೆಗಳು, ಅಡುಗೆ ಗುಣಮಟ್ಟ ಪರೀಕ್ಷೆ ಹಾಗೂ ವಿವರಗಳನ್ನು ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಸಿಬ್ಬಂದಿಗೆ ಅಡುಗೆ ಸಿಲಿಂಡರ್ ಬಳಕೆ ಬಗ್ಗೆ ಇಂಡೇನ್ ಗ್ಯಾಸ್ ಸಿಬ್ಬಂದಿ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ಅವಘಡವಾದಗ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಕ್ವಿಜ್ ನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆಂಜನೇಯ, ಶ್ರೀನಿವಾಸ್, ಅಕ್ಷರ ದಾಸೋಹ ನೌಕರರ ಸಂಘದ ಅಧ್ಯಕ್ಷೆ ಮುನಿಲಕ್ಷ್ಮಮ್ಮ, ಕಾರ್ಯದರ್ಶಿ ಶ್ವೇತಾ, ಖಜಾಂಚಿ ಮಂಜುಳಾ, ಇಂಡೇನ್ ಗ್ಯಾಸ್ ನ ಪ್ರಕಾಶ್, ಅಣ್ಣಪ್ಪ, ಕುಮಾರ್, ಭರತ್, ಮಂಜುನಾಥ್ ಹಾಜರಿದ್ದರು.
- Advertisement -
- Advertisement -
- Advertisement -