ಸರ್ಕಾರದಿಂದ ಬರುವಂತಹ ಎಲ್ಲಾ ಸೌಲಭ್ಯಗಳನ್ನು ಫಲಾನುಭವಿಗಳಿಗೆ ನಿಗದಿತ ಸಮಯದಲ್ಲಿ ತಲುಪಿಸುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೇಶವರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಸರ್ಕಾರದ ಎಲ್ಲಾ ಯೋಜನೆಗಳು ಸಕಾಲದಲ್ಲಿ ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಿಸಬೇಕಾದರೆ, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡುವುದರ ಜೊತೆಗೆ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳಬೇಕು. ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಸೌಲಭ್ಯಗಳ ಬಗ್ಗೆ ಮತ್ತು ಫಲಾನುಭವಿಗಳು ಈ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ, ಸಲ್ಲಿಸಬೇಕಾದ ದಾಖಲೆಗಳ ಬಗ್ಗೆ ಆಯಾ ಇಲಾಖೆಯ ಸೂಚನಾಫಲಕಗಳಲ್ಲಿ ನಮೂದು ಮಾಡಬೇಕು.
ಜಿಲ್ಲೆಯಲ್ಲಿನ ಬಹಳಷ್ಟು ಕುಟುಂಬಗಳಲ್ಲಿ ವಾಸಮಾಡುತ್ತಿರುವ ಬಡವರಿಗೆ ಎಸ್.ಎಂ.ಎಸ್.ಮಾಡುವುದು ಬರುವುದಿಲ್ಲ. ಆಧಾರ್ಕಾರ್ಡಿನ ಬಗ್ಗೆ ಗೊತ್ತಿಲ್ಲ. ಚುನಾವಣಾ ಗುರುತಿನ ಚೀಟಿಯನ್ನು ಪಡಿತರ ಚೀಟಿಗೆ ಹೊಂದಾಣಿಕೆ ಮಾಡಿಸಲು ಗೊತ್ತಿಲ್ಲ. ಆದ್ದರಿಂದಲೇ ಇದುವರೆಗೂ ನೂರಾರು ಕುಟುಂಬಗಳು ತಾಲ್ಲೂಕು ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಾಗರಿಕರಿಗೆ ಸ್ಪಷ್ಟವಾದ ಮಾಹಿತಿಯನ್ನು ನೀಡಿ, ಅವರಿಗೆ ನಿಗದಿತ ಸಮಯದಲ್ಲಿ ಪಡಿತರ ಚೀಟಿಗಳು ಲಭಿಸುವಂತೆ ಮಾಡಿಕೊಡಿ. ಸ್ಥಳೀಯ ಗ್ರಾಮ ಪಂಚಾಯತಿಯಲ್ಲೆ ಗುರಿತಿನ ಚೀಟಿಗಳ ಹೊಂದಾಣಿಕೆ ಮಾಡುವಂತಹ ವ್ಯವಸ್ಥೆ ಮಾಡಿ. ಸರ್ಕಾರದಿಂದ ಪಟ್ಟಣದ ಅಂಗನವಾಡಿಗಳಿಗೆ ಬಿಡುಗಡೆಯಾಗುತ್ತಿರುವ ಬಾಡಿಗೆಯ ಹಣ ೩೦೦೦ ರೂಪಾಯಿಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮವಾದ ಕಡೆಗೆ ಅಂಗನವಾಡಿಗಳನ್ನು ಸ್ಥಳೀಯ ವಾರ್ಡಿನ ಸದಸ್ಯರುಗಳ ಸಹಕಾರವನ್ನು ಪಡೆದುಕೊಂಡು ಸ್ಥಳಾಂತರಿಸಿ ಮಕ್ಕಳ ಆರೋಗ್ಯಗಳನ್ನು ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಮಿಕ ಇಲಾಖೆಯ ಮುಖಾಂತರ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದ್ದು, ಇಲಾಖೆಯಿಂದ ಸಿಗುವಂತಹ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ನೇರವಾಗಿ ಸೇರಬೇಕು. ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡುವಂತೆ ಕಾರ್ಮಿಕ ಇಲಾಖಾಧಿಕಾರಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತಿ ಉಪಾಧ್ಯಕ್ಷೆ ವೀಣಾಗಂಗುಲಪ್ಪ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಉಪಾಧ್ಯಕ್ಷ ಡಿ.ಎಸ್.ಎನ್.ರಾಜು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಎಸ್.ಎಂ.ನಾರಾಯಣಸ್ವಾಮಿ, ಸತೀಶ್, ಶಿವಲೀಲಾರಾಜಣ್ಣ, ಸದಸ್ಯರಾದ ನಾರಾಯಣಸ್ವಾಮಿ, ತಾಲ್ಲೂಕು ಪಂಚಾಯತಿ ಇ.ಓ.ಗಣಪತಿ ಸಾಕರೆ, ಶಿವಾನಂದ, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -