ಕಣ್ಣಿನ ಬಳಿ ಕಾಡಿಗೆ ತೀಡಿದಂತೆ ಇರುವ ಗುರುತಿನಿಂದಾಗಿ ಈ ಹಾವನ್ನು ಸುಂದರಿ ಎಂದು ಕರೆಯುವರು.
ಆಕ್ರಮಣಕಾರಿ ಪ್ರವೃತ್ತಿಯದಾದರೂ ವಿಷಪೂರಿತ ಹಾವಲ್ಲ.
ಚಿತ್ತಾರದ ‘ಸುಂದರಿ’ಯ ಆಕ್ರಮಣಕಾರಿ ಪ್ರವೃತ್ತಿ
ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದ ಬಳಿ ವಿಶೇಷವಾದ ಹಾವೊಂದು ಕಂಡು ಬಂದಿದೆ. ಅದುವೇ ಟ್ರಿಂಕೆಟ್ ಹಾವು. ಕನ್ನಡದಲ್ಲಿ ಇದನ್ನು ಚಿತ್ತಾರದ ಹಾವು ಎಂದರೆ, ಗುಜರಾತಿನಲ್ಲಿ ಸುಂದರಿ ಎಂದೇ ಇದನ್ನು ಕರೆಯುವರು. ಕೊತ್ತನೂರಿನಿಂದ ಬಚ್ಚಹಳ್ಳಿ ರಸ್ತೆಯಲ್ಲಿರುವ ಆಂಜಿನಪ್ಪನವರ ಸೀಬೆ ತೋಟದಲ್ಲಿ ಕೊಳವೆ ಬಾವಿಯ ಬಳಿ ಬಟ್ಟೆ ಒಗೆಯುವ ಕಲ್ಲಿನ ಅಡಿಯಲ್ಲಿ ಸೇರಿಕೊಂಡಿದ್ದ ಈ ಹಾವನ್ನು ಕೊತ್ತನೂರಿನ ಸ್ನೇಕ್ ನಾಗರಾಜ್ ಹಿಡಿದು ರಕ್ಷಿಸಿ ಕಾಡಿಗೆ ಬಿಟ್ಟರು.
ಈ ಟ್ರಂಕೆಟ್ ಹಾವು ನುಣುಪಾದ ಹೊಳೆಯುವ ಹುರುಪೆಗಳ ಹೊದಿಕೆಯನ್ನು ಹೊಂದಿದ್ದು, ಇದರ ಬಾಲ ದಟ್ಟ ಬಣ್ಣವಿರುತ್ತದೆ. ದೇಹ ಕಂದಿದ ಚಾಕಲೇಟ್ ಕಂದು ಬಣ್ಣವಿದ್ದರೆ, ಆರೀರದ ಮುಂಭಾಗದಲ್ಲಿ ಲಘುವಾದ ಪಟ್ಟೆಗಳು ಹಾಗೂ ಚೌಕಳಿಗಳಿವೆ.ಉದ್ದವಾದ ತಲೆಯಲ್ಲಿ ಕಣ್ಣುಗಳು ಎದ್ದು ಕಾಣುವಂತಿದ್ದು, ದುಂಡನೆಯ ಪಾಪೆ ಹೊಂದಿದೆ. ಕುತ್ತಿಗೆಯ ಎರಡೂ ಪಕ್ಕ, ಚಿಕ್ಕದಾದ ಕಪ್ಪು ವರ್ಣರೇಖೆಯಿದ್ದು, ಅವು ಮಧ್ಯಭಾಗದಲ್ಲಿ ಕೂಡಿಕೊಂಡು ತಲೆಕೆಳಗಾದ ಇಂಗ್ಲೀಷ್ ವಿ ಗುರುತನ್ನು ರಚಿಸಬಹುದು. ಶರೀರದ ತಳಭಾಗವು ಮುತ್ತಿನ ಹರಳಂತೆ ಬಿಳುಪಾಗಿರುತ್ತದೆ. ಹುರುಪೆಗಳು ನಯವಾಗಿ ಹೊಳೆಯುತ್ತವೆ.
ಭಾರತದಲ್ಲಿ ಟ್ರಂಕೆಟ್ ಹಾವುಗಳ 9 ಪ್ರಭೇದಗಳಿವೆ. ರಾಜ್ಯದ ಬಯಲು ಪ್ರದೇಶ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸಮುದ್ರ ಮಟ್ಟದಿಂದ ೧೦೦೦ ಮೀಟರ್ ಎತ್ತರದವರೆಗೆ ಕಂಡುಬರುತ್ತವೆ. ಬೆಟ್ಟ ಹಾಗೂ ಮೈದಾನ ಪ್ರದೇಶದಲ್ಲಿ ತಂಪು ವಾತಾವರಣವಿರುವಲ್ಲಿ ಇವು ಇರುತ್ತವೆ. ಅಪರೂಪವಾಗಿ ಮನುಷ್ಯನ ವಸತಿಗಳ ಬಳಿ ಕಂಡುಬರಬಹುದು. ಸಾಮಾನ್ಯವಾಗಿ ಈ ಹಾವು ೪ ಅಡಿ ಉದ್ದವಿರುತ್ತವೆ. ಹೆಣ್ಣು ಗಂಡಿಗಿಂತ ಹೆಚ್ಚು ಉದ್ದವಿರುತ್ತದೆ. ದಂಶಕ ಪ್ರಾಣಿಗಳು ಇದರ ಮುಖ್ಯ ಆಹಾರ. ಅಪರೂಪವಾಗಿ ಹಕ್ಕಿಗಳನ್ನು ಮತ್ತು ಹಕ್ಕಿಗಳ ಮೊಟ್ಟೆಗಳನ್ನು ತಿನ್ನುತ್ತವೆ. ಹಾವಿನ ಮರಿಗಳು, ಕೀಟಗಳು ಮತ್ತು ಸಣ್ಣ ಹಲ್ಲಿಗಳನ್ನು ಹಾಗೂ ಹಾವುರಾಣಿಗಳನ್ನು ತಿನ್ನುತ್ತವೆ.
‘ಈ ಚಿತ್ತಾರದ ಹಾವು ಗೊಂದಲವಾದಾಗ ಉದ್ರೇಕಗೊಂಡು ರೇಗುತ್ತದೆ. ದೇಹವನ್ನು ನೆಲದಿಂದ ಮೇಲೆತ್ತಿ ಬಡಿಯುತ್ತದೆ. ಕುತ್ತಿಗೆಯನ್ನು ಹಿಗ್ಗಿ, ತಲೆಯೆತ್ತಿ ಬಾಯಿ ತೆರೆದು, ಶರೀರ ಮೇಲಕ್ಕೆತ್ತಿ ಕಚ್ಚಲು ಬರುತ್ತದೆ. ಇವುಗಳ ಆಕ್ರಮಣಕಾರಿ ಪ್ರವೃತ್ತಿಯಿಂದ ಇದನ್ನು ವಿಷಯುಕ್ತ ಹಾವೆಂದು ತಪ್ಪಾಗಿ ಭಾವಿಸುತ್ತಾರೆ. ಇದು ವಿಷಪೂರಿತ ಹಾವಲ್ಲ. ಹಾಗಾಗಿ ಕಚ್ಚಿದರೂ ಅಪಾಯವಾಗದು. ನಾನು ಇದುವರೆಗೂ ನೂರಾರು ಹಾವುಗಳನ್ನು ರಕ್ಷಿಸಿದ್ದೇನೆ. ಈ ರೀತಿಯ ಹಾವು ನಮ್ಮ ಪ್ರದೇಶದಲ್ಲಿ ಬಲು ಅಪರೂಪ’ ಎಂದು ಸ್ನೇಕ್ ನಾಗರಾಜ್ ತಿಳಿಸಿದರು.