ಸೇನೆಯಲ್ಲಿ ಎಲ್ಲರೂ ಸಮಾನರು, ಅಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲ. ಮಾತೃಭೂಮಿಯ ರಕ್ಷಣೆ ಮಾತ್ರ ಧ್ಯೇಯವಾಗಿರುತ್ತದೆ. ಇದೇ ರೀತಿಯ ಸಮಾನತೆ ಎಲ್ಲರಲ್ಲಿಯೂ ಮೂಡಬೇಕಿದೆ ಎಂದು ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗುರುವಾರ ವಿಜಯಪುರ ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್ ಶಿಬಿರದಲ್ಲಿ “ಸಾಹಿತ್ಯ ಮತ್ತು ವೀರ ಯೋಧರು” ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಜ್ಞಾನದಿಂದ ಬುದ್ದಿವಂತ ನಾಗಬಹುದಾದರೂ, ತಿಳುವಳಿಕೆ ಬರುವುದು ವಿದ್ಯೆಯಿಂದ ಮಾತ್ರ. ಸಾಮಾಜಿಕವಾಗಿ ಹಿತವನ್ನು ಕಾಪಾಡುವ ಏಕೈಕ ಪ್ರಕಾರವೇ ಸಾಹಿತ್ಯ. ಕನ್ನಡ ಭಾಷೆ ಮತ್ತು ವರ್ಣ ಮಾಲೆ ತಾರ್ಕಿಕ ಮತ್ತು ವೈಜ್ಞಾನಿಕವಾಗಿಯೂ ೯೯.೯೯ ಪ್ರತಿಶತ ಪರಿಪೂರ್ಣವಾದುದು ಎಂದು ಸಾಬೀತಾಗಿದೆ. ಕಥೆ, ನಾಟಕ, ಹಾಸ್ಯ, ಪ್ರಬಂಧ, ವೈಜ್ಞಾನಿಕ ಸಾಹಿತ್ಯ, ಮಕ್ಕಳ ಸಾಹಿತ್ಯ, ಜಾನಪದ ಸಾಹಿತ್ಯ, ಜೀವನ ಚರಿತ್ರೆ, ಪ್ರವಾಸ ಸಾಹಿತ್ಯ, ದಾಸ ಸಾಹಿತ್ಯ, ವಚನ ಸಾಹಿತ್ಯ ಇನ್ನೂ ಮುಂತಾದವುಗಳು ಸಾಹಿತ್ಯದ ಪ್ರಕಾರಗಳು ಎಂದು ಗುರುತಿಸಲಾಗಿದೆ.
ಅಮೋಘ ವರ್ಷ ನೃಪತುಂಗ “ ಕವಿರಾಜಮಾರ್ಗ” ರಚಿಸುವಾಗ ಇಂಗ್ಲೀಷ್ ಭಾಷೆ ತೊಟ್ಟಿಲೊಳಗಿನ ಕೂಸಾಗಿತ್ತು. ಹಿಂದಿ ಭಾಷೆ ಹುಟ್ಟಿರಲೇ ಇಲ್ಲವಂತೆ. ಚಾರಿಯಟ್ ಮೈಮ್ ಎಂಬ ೨ ನೇ ಶತಮಾನದ ಗ್ರೀಕ್ ನಾಟಕವೊಂದು ಕನ್ನಡ ಸಾಲನ್ನು ಬಳಸಿದೆ ಎಂದು ಕನ್ನಡ ಸಾಹಿತ್ಯದ ಬಗ್ಗೆ ವಿವರಿಸಿದರು.
ಒಬ್ಬ ಸೈನಿಕ ಒಂದು ಸಂಘಟಿತ ಭೂಮಿ ಮೂಲದ ಸಶಸ್ತ್ರ ಪಡೆಯ ಭಾಗವಾಗಿ ಹೋರಾಡುತ್ತಾನೆ. ಸೈನಿಕ ಸಶಸ್ತ್ರ ಬಳಕೆಯಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ಪಡೆದಿರುತ್ತಾನೆ ಎಂದು ಸೈನಿಕರ ಕುರಿತಾಗಿ ವಿವರಿಸಿದರು.
ಎನ್.ಎಸ್.ಎಸ್.ಅಧಿಕಾರಿ ಮತ್ತು ಕನ್ನಡ ಪ್ರಾದ್ಯಾಪಕ ಶೆಟ್ಟಿ ನಾಯಕ್, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಪ್ರಸಾದ್, ನರಸಿಂಹ ಮೂರ್ತಿ, ಹರೀಶ್ ಮತ್ತು ಪ್ರಗತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಜರಿದ್ದರು.
- Advertisement -
- Advertisement -
- Advertisement -