ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ “ಪ್ರಥಮ ಚಿಕಿತ್ಸಾ ದಿನ” ದ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿರುವ ಔಷಧಿಗಳು ಹಾಗೂ ಅದರ ಬಳಕೆಯನ್ನು ಬಿದ್ದು ಗಾಯ ಮಾಡಿಕೊಂಡ ಮಗುವಿಗೆ ಬ್ಯಾಂಡೇಜ್ ಮಾಡುವ ಮೂಲಕ ಮುಖ್ಯ ಶಿಕ್ಷಕಿ ಎಂ.ವಿ.ವೆಂಕಟರತ್ನಮ್ಮ ಪ್ರಾತ್ಯಕ್ಷಿಕವಾಗಿ ವಿವರಿಸಿದರು.
ನಮ್ಮ ಸುತ್ತಲ ಪರಿಸರ, ಶಾಲೆ, ಮನೆಗಳಲ್ಲಿ ಹಲವು ಅವಘಡಗಳು ಸಂಭವಿಸುವುದು ಸಾಮಾನ್ಯ. ಇಂಥಹ ಸಂದರ್ಭಗಳಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಅರಿತರೆ ಭಯವೂ ಆಗುವುದಿಲ್ಲ, ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಆಟವಾಡುವಾಗ ಆಯತಪ್ಪಿ ಬಿದ್ದು ಗಾಯ ಮಾಡಿಕೊಳ್ಳುವುದು, ಬಿಸಿ ವಸ್ತುಗಳಿಂದ ಆಗುವ ಚರ್ಮದ ಸುಟ್ಟ ಗಾಯಗಳು ಇವೆಲ್ಲಾ ಆದಾಗ ಹೇಗೆ ಚಿಕಿತ್ಸೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದಿರಬೇಕು. ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಒಳಗಿರುವ ವಸ್ತುಗಳ ಬಗ್ಗೆ, ಅವುಗಳನ್ನು ಬಳಕೆ ಮಾಡುವುದು ಹೇಗೆ ಎನ್ನುವ ಬಗ್ಗೆ ಅರಿತಿದ್ದು ಸಂದರ್ಭ ಬಂದಾಗ ಉಪಯೋಗಿಸಲು ಮುಂದಾಗಬೇಕು. ಕೈಕವಚ (ಗ್ಲೌಸು), ಹತ್ತಿ, ಆಂಟಿ ಬಯಾಟಿಕ್ ಮುಲಾಮು, ಆಂಟಿಸೆಪ್ಟಿಕ್ ದ್ರಾವಣ, ವಿವಿಧ ಗಾತ್ರದ ಬ್ಯಾಂಡೇಜ್ಗಳು, ನೋವು ನಿವಾರಣೆಗಳಿಗೆ ಔಷಧಗಳು ಮುಂತಾದವು ಈ ಪೆಟ್ಟಿಗೆಯ ಒಳಗಿರುತ್ತವೆ ಎಂದು ಎಲ್ಲವನ್ನೂ ತೋರಿಸಿ ವಿವರಿಸಿದರು.
ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್ ಮಾತನಾಡಿ, ಗಾಯ ಅಥವಾ ಅವಘಡಗಳಾದಾಗ ನೀವು ಒದಗಿಸುವ ಪ್ರಾಥಮಿಕ ಆರೈಕೆಗೆ “ಪ್ರಥಮ ಚಿಕಿತ್ಸೆ” ಎನ್ನುತ್ತಾರೆ. ಇವು ಜೀವರಕ್ಷಕ ತಂತ್ರವಾಗಿದ್ದು, ತೊಂದರೆಯಿಂದ ಪಾರು ಮಾಡುವ ಮೊದಲ ಹೆಜ್ಜೆಯಾಗಿದೆ. ಸಾಮಾನ್ಯವಾಗಿ ಶಾಲೆಗಳಲ್ಲಿ, ಸಾರ್ವಜನಿಕ ವಾಹನಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಿರುತ್ತದೆ. ತುರ್ತು ಸಂದರ್ಭ ಬಂದಾಗ ತಜ್ಞರ ಸಹಾಯದೊಂದಿಗೆ ಅದನ್ನು ಉಪಯೋಗಿಸಿ ಚಿಕಿತ್ಸೆಯನ್ನು ಮಾಡಬಹುದು ಎಂದು ಹೇಳಿದರು.
ಶಿಕ್ಷಕಿಯರಾದ ಭಾರತಿ, ಸುಜಾತ, ಸಿಬ್ಬಂದಿ ವೆಂಕಟಮ್ಮ ಹಾಜರಿದ್ದರು.
- Advertisement -
- Advertisement -
- Advertisement -