ಪ್ರತಿಭಾವಂತರು ಮತ್ತು ಸಾಧಕರು ಪ್ರತಿಯೊಂದು ಜಾತಿ–ಧರ್ಮದಲ್ಲಿದ್ದು, ಪ್ರತಿಭೆ ಎಂಬುದು ಯಾರೊಬ್ಬರ ಅಥವಾ ಜಾತಿಯೊಂದರ ಸ್ವತ್ತಲ್ಲ. ವಿಪ್ರ ಸಮುದಾಯದ ಪ್ರತಿಭಾವಂತರನ್ನು ಮಾತ್ರವನ್ನು ಪರಿಗಣಿಸದೇ ಎಲ್ಲಾ ಜಾತಿ–ಧರ್ಮದಲ್ಲಿನ ಪ್ರತಿಭಾವಂತರು ಮತ್ತು ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸಿ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಬೇಕು ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿಯವರ ಪತ್ನಿ ಮತ್ತು ಸಾಹಿತಿ ಸುಧಾಮೂರ್ತಿ ತಿಳಿಸಿದರು.
ಪಟ್ಟಣದಲ್ಲಿ ಭಾನುವಾರ ನಡೆದ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಅಭಿನಂದನಾ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಅವರು, ಪ್ರತಿಭಾವಂತರನ್ನು ಹೊಂದಿರುವ ವಿಪ್ರ ಸಮುದಾಯವೊಂದೇ ಶ್ರೇಷ್ಠ ಎಂಬ ಭಾವನೆಯಿಂದ ಹೊರಬರಬೇಕು. ಯಾವುದೇ ಜಾತಿ ಅಥವಾ ಸಮುದಾಯದಲ್ಲಿ ಪ್ರತಿಭಾವಂತರಿದ್ದರೂ ಅವರನ್ನು ಸಹ ಕರೆದು ಪ್ರತಿಭಾ ಪುರಸ್ಕಾರ ಪ್ರದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಎಲ್ಲಾ ಜಾತಿ–ಧರ್ಮದವರನ್ನು ಪ್ರತಿಭಾ ಪುರಸ್ಕಾರ ಮಾಡಲೆಂದೇ ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್‌ಗೆ ₨ 10 ಲಕ್ಷ ನೀಡುತ್ತೇವೆ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಕಾರ್ಯ ನಿರಾತಂಕವಾಗಿ ಮುಂದುವರೆಯಲಿ ಎಂದು ಅವರು ತಿಳಿಸಿದರು.
ಶಾಲೆಗಳಿಗೆ ಕೊಠಡಿ, ಶೌಚಾಲಯ ಸೌಲಭ್ಯ
ತಾಲ್ಲೂಕಿನ ನಡಿಪಿನಾಯಕನಹಳ್ಳಿಯಲ್ಲಿನ ಅನುದಾನಿತ ಶಾಲೆಗೆ 8 ಕೊಠಡಿಗಳನ್ನು ಇನ್ಫೊಸಿಸ್ ಪ್ರತಿಷ್ಠಾನದ ವತಿಯಿಂದ ನಿರ್ಮಿಸಲಾಗುವುದು ಮತ್ತು ಅಗತ್ಯ ಸೌಕರ್ಯ ಕಲ್ಪಿಸಲಾಗುವುದು ಎಂದು ಇನ್ಫೊಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ ತಿಳಿಸಿದರು.
ತಮ್ಮ ತಾಯಿಯ ಸ್ವಗ್ರಾಮವಾದ ನಡಿಪಿನಾಯಕನಹಳ್ಳಿಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸಂಬಂಧಿ ಎನ್.ಕೆ.ಗುರುರಾಜರಾವ್‌ಗೆ ಈ ವಿಷಯ ತಿಳಿಸಿದ ಅವರು, ಇನ್ಫೊಸಿಸ್ ಪ್ರತಿಷ್ಠಾನದಿಂದ ಹಣ ನೀಡುವುದರ ಬದಲು ಕೊಠಡಿಯನ್ನೇ ನಿರ್ಮಿಸಿಕೊಡುತ್ತೇವೆ ಎಂದರು.
ನಂತರ ಶಾಸಕ ಎಂ.ರಾಜಣ್ಣ ಜೊತೆಗೆ ಮಾತನಾಡಿದ ನಾರಾಯಣಮೂರ್ತಿಯವರು ಶೌಚಾಲಯದ ಕೊರತೆ ಎದುರಿಸುತ್ತಿರುವ ತಾಲ್ಲೂಕಿನ ಸರ್ಕಾರಿ ಶಾಲೆಗಳ ಪಟ್ಟಿ ನೀಡಲು ಹೇಳಿದರು. ಕೊರತೆಯನ್ನು ಪರಿಶೀಸಿಲಿ, ಶೌಚಾಲಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ಅವರು ತಿಳಿಸಿದರು.
- Advertisement -
- Advertisement -
- Advertisement -
- Advertisement -