ಶಿಡ್ಲಘಟ್ಟ : ಎ.ಪಿ.ಎಂ.ಸಿ ಕಾಯ್ದೆ ಸುಗ್ರೀವಾಜ್ಞೆ ವಾಪಸ್ ಪಡೆಯುವುದು ಹಾಗೂ ಮತ್ತಿತರ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಸದಸ್ಯರು ಮಂಗಳವಾರ ಸ್ಥಾನಿಕ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರ ಕಾರ್ಪೊರೇಟ್ ಕಂಪೆನಿಗಳ ಲೂಟಿಗೆ ಕೃಷಿ ಉತ್ಪನ್ನಗಳ ಮಾರುಕಟ್ಟೆಯನ್ನು ಮುಕ್ತಿಗೊಳಿಸಲು ಜನ ವಿರೋಧದ ನಡುವೆಯೂ ಎ.ಪಿ.ಎಂ.ಸಿ ಕಾಯ್ದೆಗೆ ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸಿದೆ. ಈ ಬಗ್ಗೆ ತೀವ್ರ ವಿರೋಧವನ್ನು ಈಗಾಗಲೇ ರೈತರು ಮತ್ತು ಕೃಷಿ ಕೂಲಿಕಾರರು ದಾಖಲಿಸಿದ್ದರೂ ಅದಕ್ಕೆ ಕಿಂಚಿತ್ತು ಬೆಲೆ ನೀಡದೇ ಹಾಗೂ ಯಾವುದೇ ಚರ್ಚೆ ನಡೆಸದೇ ಏಕಾಏಕೀ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಕಾಯ್ದೆಗೆ ತಿದ್ದುಪಡಿ ಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಬಲವಾಗಿ ವಿರೋಧಿಸುತ್ತದೆ.
ರಾಜ್ಯ ಸರ್ಕಾರ ಈ ಕೂಡಲೇ ಕಾರ್ಪೊರೇಟ್ ಪರವಾದ ಈ ಸುಗ್ರೀವಾಜ್ಞೆಯನ್ನು ವಾಪಸ್ಸು ಪಡೆಯಬೇಕು. ಬಡತನ, ಹಸಿವು, ನಿರುದ್ಯೋಗ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಬಿ.ಪಿ.ಎಲ್ ಎ.ಪಿ.ಎಲ್ ಎನ್ನುವ ತಾರತಮ್ಯವಿಲ್ಲದೆ ಕನಿಷ್ಟ ಒಂದು ವರ್ಷ ರೇಷನ್ ನೀಡಬೇಕು. ರೈತರು, ಕೃಷಿ ಕೂಲಿಕಾರ್ಮಿಕರು, ಕಸುಬುದಾರರು ಮತ್ತು ಸ್ತ್ರೀಶಕ್ತಿ ಗುಂಪುಗಳ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಸಾಲಗಳ ವಸೂಲಾತಿಯನ್ನು ನಿಲ್ಲಿಸಬೇಕು ಹಾಗೂ ಮುಂಗಾರು ಹಿನ್ನೆಲೆಯಲ್ಲಿ ಹೊಸ ಸಾಲಗಳನ್ನು ಕೂಡಲೇ ನೀಡಬೇಕು ಇನ್ನೂ ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಸ್ಥಾನಿಕ ತಹಶೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಕೆ.ಎಸ್.ಪುಟ್ಟಣ್ಣಯ್ಯ ಬಣ) ಜಿಲ್ಲಾ ಉಪಾಧ್ಯಕ್ಷ ಟಿ.ಕೆ.ಅರುಣ್ ಕುಮಾರ್, ತಾಲ್ಲೂಕು ಅಧ್ಯಕ್ಷ ರವಿಪ್ರಸಾದ್, ಅನಿತಾ, ಚಿಕ್ಕವೆಂಕಟರಾಯಪ್ಪ, ಶ್ರೀಧರ್, ಕೋಟೆ ಚನ್ನೇಗೌಡ, ಸೊಣ್ಣೇಗೌಡ, ಸತೀಶ್ ಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -