ತಾಲ್ಲೂಕಿನಲ್ಲಿ ಹಸಿರು ಪರಿಸರವನ್ನು ಸೃಷ್ಟಿಸುವ ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಪ್ರಾರಂಭಿಕವಾಗಿ ಒಂದು ಲಕ್ಷ ಸಸಿಗಳನ್ನು ನೆಡುವ ಕೆಲಸಕ್ಕೆ ಜೂನ್ 11 ರಂದು ಚಾಲನೆ ನೀಡುವುದಾಗಿ ಆರ್.ಚಂದ್ರು ಅಭಿಮಾನಿ ಬಳಗದ ಅಧ್ಯಕ್ಷ ವಿಜಯ್ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಮಳೆ ಬಿದ್ದು ನೆಲ ಹದವಾಗಿರುವುದರಿಂದ ಗಿಡ ನೆಡಲು ಇದು ಸಕಾಲ. ಅಂತರ್ಜಲ ಕುಸಿದಿರುವ ತಾಲ್ಲೂಕಿನಲ್ಲಿ ಗಿಡಮರಗಳು ಇಲ್ಲದಿದ್ದಲ್ಲಿ ಮುಂದೆ ಜೀವನ ಕಷ್ಟಕರವಾಗಲಿದೆ. ಅದಕ್ಕಾಗಿ ಸಸಿ ನೆಡುವ ಕೆಲಸ ಈಗ ಅತ್ಯಗತ್ಯವಾಗಿದೆ. ಶಿಡ್ಲಘಟ್ಟದಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿ ಈಗ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಚಲನಚಿತ್ರ ನಿರ್ದೇಶಕ ಆರ್.ಚಂದ್ರು ಅವರ ಅಭಿಮಾನಿಗಳು ಜೂನ್ 11ರ ಭಾನುವಾರದಂದು ಒಂದು ಲಕ್ಷ ಸಸಿಗಳನ್ನು ನೆಡಲು ಪ್ರಾರಂಭಿಸುತ್ತಿದ್ದೇವೆ. ನಗರದ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದ್ದು, ನಿರ್ದೇಶಕ ಆರ್.ಚಂದ್ರ, ನಟ ದುನಿಯಾ ವಿಜಿ ಹಾಗೂ ಇತರ ಚಿತ್ರನಟರು, ತಾಲ್ಲೂಕಿನ ರೈತ ಮುಖಂಡರು ಭಾಗವಹಿಸಲಿದ್ದಾರೆ. ಮೊದಲಿಗೆ ಆನೂರು ಗ್ರಾಮ ಪಂಚಾಯ್ತಿಯಿಂದ ಗಿಡ ನೆಡಲು ಪ್ರಾರಂಭಿಸುತ್ತೇವೆ. ಅದಕ್ಕಾಗಿ ಜೆಸಿಬಿಯನ್ನೂ ತರಿಸಿದ್ದೇವೆ ಎಂದು ಹೇಳಿದರು.
ಮುಂದಿನ ಜನಾಂಗಕ್ಕೆ ಹಸಿರು ಪರಿಸರವನ್ನು ನೀಡಬೇಕಾದ ಅಗತ್ಯವಿದೆ. ಅದಕ್ಕಾಗಿ ಗ್ರಾಮಗಳಲ್ಲಿ ಯುವಕರು ಮುಂದಾಗಬೇಕು. ತಮ್ಮ ಗ್ರಾಮಗಳಲ್ಲಿ ನೆಟ್ಟ ಗಿಡವನ್ನು ಕಾಪಾಡುವ ಉತ್ಸಾಹವಿರುವವರು ನಮ್ಮನ್ನು ಸಂಪರ್ಕಿಸಿದಲ್ಲಿ ನಾವೇ ಸ್ವತಃ ಆಯಾ ಗ್ರಾಮಗಳಿಗೆ ಹೋಗಿ ಗಿಡಗಳನ್ನು ನೆಟ್ಟು ಬರುತ್ತೇವೆ. ರಸ್ತೆ ಅಗಲೀಕರಣದಿಂದಾಗಿ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರದ ನಡುವೆ ರಸ್ತೆ ಬದಿಯ ಹಳೆಯ ಮರಗಳನ್ನೆಲ್ಲಾ ಕಡಿಯಲಾಗಿದೆ. ರಸ್ತೆ ಕಾಮಗಾರಿ ಮುಗಿದ ನಂತರ ರಸ್ತೆ ಬದಿಯಲ್ಲೆಲ್ಲಾ ಗಿಡಗಳನ್ನು ನೆಡುವುದಾಗಿ ಅವರು ತಿಳಿಸಿದರು.
ಆರ್.ಚಂದ್ರು ಅಭಿಮಾನಿ ಬಳಗದ ರಂಜಿತ್, ಸುರೇಶ್, ಪ್ರತಾಪ್, ಗಂಗಾಧರ್ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -