ಸ್ತ್ರೀ ಶಕ್ತಿ ಸಂಘದ ಸದಸ್ಯರು ಪರಸ್ಪರ ಸಹಕಾರ ನೀಡುತ್ತಾ, ಸಹಾಯ ಮಾಡುವ ಮೂಲಕ ಆರ್ಥಿಕವಾಗಿ ಮುಂದುವರೆಯುವುದರೊಂದಿಗೆ ಸಂಘದ ಯಶಸ್ಸಿಗೆ ಶ್ರಮಿಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬೆಂಗಳೂರಿನ ಪ್ರಾದೇಶಿಕ ನಿರ್ದೇಶಕ ಆನಂದಸುವರ್ಣ ಹೇಳಿದರು.
ತಾಲೂಕಿನ ವೈ ಹುಣಸೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಗುರುವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶಿಡ್ಲಘಟ್ಟ ವಲಯ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ನೂತನ ಒಕ್ಕೂಟಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹಮ್ಮಿಕೊಂಡಿರುವ ನಿರ್ಗತಿಕ ಮಾಸಾಶನ, ಜೀವ ಭದ್ರತಾ ವಿಮೆ, ಸುಜ್ಞಾನನಿಧಿ ಶಿಷ್ಯವೇತನ ದಂತಹ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಸ್ತ್ರೀ ಶಕ್ತಿ ಸಂಘದ ಸದಸ್ಯರು ನಾಗರಿಕರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.
ಇದೀಗ ತಾಲ್ಲೂಕಿನ ಶೀಗೆಹಳ್ಳಿ, ಕೊತ್ತನೂರು ಹಾಗು ದೊಡ್ಡದಾಸೇನಹಳ್ಳಿಯಲ್ಲಿ ಒಕ್ಕೂಟಗಳ ಉದ್ಘಾಟನೆ ನೆರವೇರಿಸಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಒಕ್ಕೂಟಗಳ ಸ್ಥಾಪನೆ ಮಾಡಲಾಗುವುದು. ಒಕ್ಕೂಟಗಳ ಉದ್ದೇಶ ಸ್ತ್ರೀ ಶಕ್ತಿ ಸಂಘಗಳ ಬಲವರ್ಧನೆ, ಮಹಿಳೆಯರಿಗೆ ನಾಯಕತ್ವ ನೀಡುವುದು ಹಾಗೂ ಆ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢಗೊಳಿಸುವುದಾಗಿದೆ ಎಂದರು.
ಕೊತ್ತನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಧಮ್ಮರವಿ, ಒಕ್ಕೂಟಗಳ ಅಧ್ಯಕ್ಷೆಯರಾದ ಸುಕನ್ಯಾ, ಶಾರದಮ್ಮ, ಆರತಿ, ಗ್ರಾಮಾಭಿವೃದ್ಧಿ ಸಂಸ್ಥೆಯ ವಲಯ ಮೇಲ್ವಿಚಾರಕಿ ಮಮತಾ, ತಾಲ್ಲೂಕು ಯೋಜನಾಧಿಕಾರಿ ಯೋಗೀಶ್ ಮತ್ತಿತರರು ಸಮಾರಂಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -