ಒತ್ತಡದ ಜೀವನ ಕ್ರಮ ಹಾಗು ಆಹಾರ ಪದ್ಧತಿಯಿಂದ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು ಎಲ್ಲರೂ ಜೀವನಕ್ರಮವನ್ನು ಬದಲಾಯಿಸಿಕೊಳ್ಳಬೇಕು ಎಂದು ನಗರದ ಮಾನಸ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಮೋಹನ್ಭಾರ್ಗವ್ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಭಾನುವಾರ ಪ್ರಥಮ ದರ್ಜೆ ಕಾಲೇಜಿನಲ್ಲಿ ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಟಿಪ್ಪು ಸುಲ್ತಾನ್ ಸಂಘ ಹಾಗು ಮಾನಸ ಆಸ್ಪತ್ರೆಯ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ಶಿಬಿರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನಮ್ಮ ಹಿರಿಯರು ಅವರ ಆಹಾರ ಪದ್ಧತಿಯಲ್ಲಿ ತರಕಾರಿ, ಸೊಪ್ಪು, ಹಣ್ಣು ಹಂಪಲುಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಇದರಿಂದ ಆವರು ಶಾರೀರಕವಾಗಿ ಸದೃಢರಾಗಿರುವುದರೊಂದಿಗೆ ಉತ್ತಮ ಆರೋಗ್ಯದಿಂದ ದೀರ್ಘಕಾಲ ಜೀವಿಸುತ್ತಿದ್ದರು. ಆದರೆ ಇಂದು ಬಹಳಷ್ಟು ಫಾಸ್ಟ್ಫುಡ್, ಜಂಕ್ಫುಡ್ ಸೇವಿಸುವುದರಿಂದ ದೇಹಕ್ಕೆ ಅವಶ್ಯಕವಾಗಿರುವ ಪೌಷ್ಠಿಕಾಂಶಗಳು ಸಿಗದೇ ಅನಾರೋಗ್ಯದಿಂದ ಬಳಲುತ್ತಿದ್ದೇವೆ.
ಹೆಚ್ಚು ಸೊಪ್ಪು, ಹಸಿ ತರಕಾರಿ ಹಣ್ಣು ಹಂಪಲು ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ನಗರದ ಬಹುತೇಕ ಜನತೆ ರೇಷ್ಮೆಯನ್ನೇ ನಂಬಿ ಜೀವಿಸಬೇಕಾದ ಅನಿವಾರ್ಯವಿರುವುದರಿಂದ ತಮ್ಮ ಆರೋಗ್ಯದ ಕಡೆ ಹೆಚ್ಚು ಗಮನ ನೀಡುವುದಿಲ್ಲ. ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸುವ ಇಂತಹ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಎಂ.ವಿ.ಶಿವಪ್ರಕಾಶ್, ಕರ್ನಾಟಕ ಟಿಪ್ಪು ಸುಲ್ತಾನ್ ಸಂಘದ ತಾಲ್ಲೂಕು ಅಧ್ಯಕ್ಷ ಅಫ್ಜಲ್ಪಾಷ, ಆರ್.ಸುರೇಶ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -