ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ತಾಲ್ಲೂಕು ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ 13 ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ. ಎಂ. ಶಿವಕುಮಾರ್ ಅವರು ಮಾತನಾಡಿದರು.
ಮಕ್ಕಳು ದೊಡ್ಡ ಪುಸ್ತಕಗಳನ್ನು ಓದುವುದಿಲ್ಲ ಹಾಗಾಗಿ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಚಿಕ್ಕಚಿಕ್ಕ ವಿಷಯವಾಗಿ ಕೊಡುವ ಪ್ರಯತ್ನ ಮಾಡಿರುವೆ. ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ, ಭರವಸೆ ನೀಡಿದರೆ ಅವರು ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಪರೀಕ್ಷೆಗೆ ಹೇಗೆ ಓದಬೇಕು, ಹೇಗೆ ಓದಿದ್ದನ್ನು ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಹೇಗೆ, ಈ ಹಲವು ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಕಾಡುತ್ತದೆ. ಇಂತಹ ಪ್ರಶ್ನೆಗಳಿಗೆ ಅವರಿಗೆ ಉತ್ತರ ರೂಪದಲ್ಲಿ ‘ನೀವೂ ಯಶಸ್ಸನ್ನು ಗಳಿಸಬಲ್ಲಿರಿ’ ಎಂಬ ಪುಸ್ತಕವನ್ನು ಬರೆದಿರುವೆ. ವಿದ್ಯಾರ್ಥಿ ಜೀವನದ ದಾರಿದೀಪವಾಗಲಿ ಎಂಬ ಉದ್ದೇಶ ಇದರ ಹಿನ್ನೆಲೆಯಲ್ಲಿದೆ ಎಂದರು.
ಆಂತರಿಕ ಪ್ರೇರಣೆಯಿಂದ ಅದ್ಭುತಗಳನ್ನು ಸೃಷ್ಟಿಸಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಪ್ರೇರಣೆ ಸಿಕ್ಕಲ್ಲಿ ಸಾಧನೆಗೆ ದಾರಿಯಾಗುತ್ತದೆ ಎಂದು ಅವರು ತಿಳಿಸಿದರು.
ಸ್ವಾಮಿ ವಿವೇಕಾನಂದರು, ಸರ್ವೇಪಲ್ಲಿ ರಾಧಾಕೃಷ್ಣನ್, ಡಾ.ಅಬ್ದುಲ್ ಕಲಾಂ ನನಗೆ ಪ್ರೇರಣೆ. ಸ್ವ ಇಚ್ಛೆಯಿಂದ ವಿದ್ಯಾರ್ಥಿಗಳು ಕಲಿಯಲು ಬಯಸಬೇಕು. ಆ ಕಲಿಕಾ ಪ್ರವೃತ್ತಿ ಹುಟ್ಟಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದರು.
ಸಾಹಿತಿ ಚಂದ್ರಶೇಖರ್ ಹಡಪದ್ ಮಾತನಾಡಿ, ಜ್ಞಾನವನ್ನು ಪರಿಚಯಿಸುವ ಗ್ರಂಥಾಲಯವನ್ನು ಅರಮನೆಯೆಂದು ಕರೆಯುವ ಮೂಲಕ ಲೇಖಕರ ಪರಿಚಯವನ್ನು ಮಾಡಿಕೊಡುವ ಉತ್ತಮ ಕಾರ್ಯ ನಡೆಯುತ್ತಿದೆ. ಪ್ರತಿಯೊಬ್ಬರಿಗೂ ಅವಕಾಶ ಲಭಿಸುತ್ತದೆ ಆದರೆ ಸಂದರ್ಭಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಆಧಾರದಲ್ಲಿ ನಮ್ಮ ವ್ಯಕ್ತಿತ್ವ ನಿರ್ಧಾರವಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶಿಕ್ಷಕ ಡಾ. ಎಂ. ಶಿವಕುಮಾರ್ ಅವರು ತಮ್ಮ ‘ನೀವೂ ಯಶಸ್ಸನ್ನು ಗಳಿಸಬಲ್ಲಿರಿ’ ಪುಸ್ತಕವನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಶಿಕ್ಷಕ ಡಾ. ಎಂ. ಶಿವಕುಮಾರ್ ಮತ್ತು ಸಾಹಿತಿ ಚಂದ್ರಶೇಖರ ಹಡಪದ್ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಸ್ಥಳೀಯ ಲೇಖಕರನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದೆ ಎಂದು ಹೇಳಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕಾರ್ಯದರ್ಶಿ ಸತೀಶ್, ಗ್ರಂಥಪಾಲಕ ಬಚ್ಚರೆಡ್ಡಿ, ಸಿಬ್ಬಂದಿ ಬಾಂಧವ್ಯ, ಚಲನಚಿತ್ರ ನಟ ಸಿ.ಎನ್.ಮುನಿರಾಜು, ನಿವೃತ್ತ ಶಿಕ್ಷಕ ಸುಂದರನ್, ಕುಸ್ತಿಪಟು ಶೇಖರ್, ಅಜಿತ್ ಕೌಂಡಿನ್ಯ, ವಿ.ವೆಂಕಟರಮಣ, ಬೆಳ್ಳೂಟಿ ರಮೇಶ್, ವೃಷಬೇಂದ್ರಪ್ಪ ಹಾಜರಿದ್ದರು.
- Advertisement -
- Advertisement -
- Advertisement -