ನಗರ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ, ಕೇಂದ್ರ ಗ್ರಂಥಾಲಯದ ಸಹಯೋಗದೊಂದಿಗೆ ಆಯೋಜಿಸಿದ್ದ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” ೨೦ ನೇ ತಿಂಗಳ ಕಾರ್ಯಕ್ರಮದಲ್ಲಿ ಸಾಹಿತಿ ಕಾಗತಿ.ವಿ.ವೆಂಕಟರತ್ನಂ ಮಾತನಾಡಿದರು.
ಸಾಹಿತಿಯು ಸುಮದಂತೆ ಇರಬೇಕು. ತಾನು ಹೊರಸೂಸುವ ಸುಗಂಧವು ಇತರರಿಗೂ ಮನಪರಿವರ್ತನೆಗೆ, ಕಲಾಸ್ವಾದನೆಗೆ ತೊಡಗುವಂತೆ ಮಾಡಬೇಕು. ಈ ನಿಟ್ಟಿನಲ್ಲಿ ವಿವಿಧ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಬರೆಯಲು ಪ್ರೇರೇಪಿಸಿ, ಆ ಬರಹಗಳ ಸಂಕಲನವನ್ನು ಹೊರತಂದಿದ್ದೇನೆ ಎಂದು ಅವರು ತಿಳಿಸಿದರು.
ಸರ್ಕಾರಿ ಉದ್ಯೋಗದಿಂದ ನಿವೃತ್ತನಾದ ನಂತರ ಸಾಹಿತ್ಯದ ಚಟುವಟಿಕೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ಕನ್ನಡ ಸಾಹಿತ್ಯ ವೇದಿಕೆ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ನಿರಂತರವಾಗಿ ಸಾಹಿತ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ನನ್ನ ಬರಹಗಳನ್ನಷ್ಟೇ ಅಲ್ಲದೆ ಹೊಸಬರಿಗೆ, ವಿದ್ಯಾರ್ಥಿಗಳಿಗೆ ಬರವಣಿಗೆಗೆ ಪ್ರೇರೇಪಿಸಲು ಕೆಲವಾರು ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿ ಯುವ ಬರಹಗಾರರ ಬರವಣಿಗೆಗಳನ್ನು ಸಂಕಲಿಸಿ ಪುಸ್ತಕ ಮಾಡಿದ್ದೇನೆ. ಶಾಲಾ ಅಂಗಳದಲ್ಲಿ ಕವಿ ಕಾವ್ಯ ಕಾರ್ಯಕ್ರಮ, ಧಾರ್ಮಿಕ ಪಠಣ, ವಚನಾಮೃತ ಮೊದಲಾದ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಕಿಡಿ ಹೊತ್ತಿಸುವ ಪ್ರಯತ್ನ ಮಾಡಿರುವುದಾಗಿ ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ(ಕಸಾಪ) ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ಮಾತನಾಡಿ, ಸುಮಾರು ಇಪ್ಪತ್ತು ತಿಂಗಳಿನಿಂದ ಇಪ್ಪತ್ತು ಲೇಖಕರು ಹಾಗೂ ಅವರ ಕೃತಿಗಳನ್ನು ಓದುಗರಿಗೆ ಪರಿಚಯಿಸಲಾಗಿದೆ. ಲೇಖಕರು ತಮ್ಮ ಕೃತಿರಚನೆಯ ಹಿಂದಿನ ನೋವು ನಲಿವುಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿ, ಸಾಹಿತಿ ಕಾಗತಿ.ವಿ.ವೆಂಕಟರತ್ನಂ ಅವರ ಪರಿಚಯವನ್ನು ಮಾಡಿಕೊಟ್ಟರು.
ಹಿರಿಯ ಸಾಹಿತಿ ಶಿವರಾಮ್ ಮಾತನಾಡಿ, ಎಲೆ ಮರೆಯ ಕಾಯಿಗಳಂತೆ ತಮ್ಮ ಪಾಡಿಗೆ ತಾವು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಪರಿಚಯಿಸುವ ಈ ವಿನೂತನ ಕಾರ್ಯಕ್ರಮ ಬೇರೆಲ್ಲೂ ನಡೆಯುತ್ತಿಲ್ಲ. ನಿಜವಾದ ಅರ್ಥದಲ್ಲಿ ಸಾಹಿತ್ಯದ ಪರಿಚಾರಿಕೆಯನ್ನು ಈ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದರು.
ಸಾಹಿತಿ ಕಾಗತಿ.ವಿ.ವೆಂಕಟರತ್ನಂ ಅವರು ಗ್ರಂಥಾಲಯಕ್ಕೆ ತಾವು ರಚಿಸಿರುವ ೧೬ ಕೃತಿಗಳನ್ನು ಕೊಡುಗೆಯಾಗಿ ನೀಡಿದರು. ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್ ಜನಪದ ಗೀತೆಗಳನ್ನು ಹಾಡಿದರು.
ಜಾನಪದ ಕಲಾವಿದ ದೇವರಮಳ್ಳೂರು ಮಹೇಶ್, ಕಸಾಪ ತಾಲ್ಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಗ್ರಂಥಪಾಲಕಿ ರಾಮಲೀಲಾ ಸಿಬ್ಬಂದಿ ಬಾಂದವ್ಯ, ಚಿತ್ರನಟ ಮುನಿರಾಜು, ಸುಂದರನ್, ಅಜಿತ್ ಕೌಂಡಿನ್ಯ, ವೃಷಭೇಂದ್ರಪ್ಪ, ಅಭಿಷೇಕ್, ವಿ.ವೆಂಕಟರಮಣ, ಗೋಪಾಲಕೃಷ್ಣ, ಮುಕ್ತಿಯಾರ್, ಮಕ್ಸೂದ್, ಲಕ್ಷ್ಮೀಕಾಂತ್, ವಿ.ಕೃಷ್ಣ ಹಾಜರಿದ್ದರು.
- Advertisement -
- Advertisement -
- Advertisement -