ಆಧುನಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಪುಸ್ತಕದ ಸ್ಪರ್ಶ ನೀಡುವ ಆನಂದ ಬಣ್ಣಿಸಲಾಗದು. ಓದುವ ಸಂಸ್ಕೃತಿ ಬೆಳೆಸಲು ಸಹಕರಿಸುವ ಈ ಕಾರ್ಯಕ್ರಮ ವಿನೂತನವಾದದ್ದು ಹಾಗೂ ರಾಜ್ಯಕ್ಕೇ ಮಾದರಿಯಾದದ್ದು ಎಂದು ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ ತಿಳಿಸಿದರು.
ನಗರದ ಸಾರ್ವಜನಿಕ ಗ್ರಾಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಹಾಗೂ ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ನಡೆದ ‘ಓದಿನರಮನೆಯಲ್ಲಿ ಪುಸ್ತಕ ಪರಿಚಯ’ ಕಾರ್ಯಕ್ರಮವನ್ನುಉದ್ಘಾಟಿಸಿ ಅವರು ಮಾತನಾಡಿದರು.
ಗ್ರಂಥಾಲಯವನ್ನು ಓದಿನರಮನೆ ಎಂದು ಹೆಸರಿಸಿರುವ ಮನಸ್ಸುಗಳ ಹಿಂದೆ ಇರುವ ಸದುದ್ದೇಶ ಮೆಚ್ಚತಕ್ಕದ್ದು. ಪ್ರತಿ ತಿಂಗಳೂ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಒಂದೊಂದು ಪುಸ್ತಕ ಪರಿಚಯ ಮಾಡಿಕೊಡುವ, ಸ್ಥಳೀಯ ಲೇಖಕರನ್ನು, ಸಾಧಕರನ್ನು ಕರೆಸಿ ಗೌರವಿಸುವ ಕೆಲಸ ನಿರಂತರವಾಗಿ ಸಾಗಲಿ. ಜಿಲ್ಲಾ ಕೇಂದ್ರದಲ್ಲಿ, ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ಮೂಲಕ ಕಾರ್ಯಕ್ರಮಗಳು ನಡೆಯಲಿ. ಇದರಿಂದ ಗ್ರಂಥಾಲಯಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತದೆ. ಓದುಗರನ್ನು ಬೆಳೆಸುವ, ಆಕರ್ಷಿಸುವ, ಪ್ರೋತ್ಸಾಹಿಸುವ ಕೆಲಸಕ್ಕೆ ಇಲಾಖೆಯಿಂದ ಸದಾ ಬೆಂಬಲವಿದೆ ಎಂದು ನುಡಿದರು.
ಸಾಹಿತಿ ಶಿವರಾಮ್ ಮಾತನಾಡಿ, ಪುಸ್ತಕಗಳು ನೀಡುವ ಜ್ಞಾನ, ರಂಜನೆ, ಜೀವನದ ಆದರ್ಶ, ಶಿಕ್ಷಣ, ಜ್ಞಾನೋದಯ ಬೆಲೆ ಕಟ್ಟಲಾಗದ್ದು. ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಗ್ರಂಥಾಲಯ ದೇವಾಲಯವಿದ್ದಂತೆ. ಗ್ರಾಮಾಂತರ ಪ್ರದೇಶ, ತಾಲ್ಲೂಕು ಕೇಂದ್ರಗಳಲ್ಲಿ ಓದುವ ಹವ್ಯಾಸವನ್ನು ವೃದ್ಧಿಸುವ ಕೆಲಸಗಳು ನಡೆಯಬೇಕು. ಗ್ರಂಥಾಲಯಕ್ಕೆ ಬನ್ನಿ, ಪುಸ್ತಕಗಳನ್ನು ಓದಿ, ಜ್ಞಾನವಂತರಾಗಿ, ಜ್ಞಾನವನ್ನು ಇತರರಿಗೂ ಹಂಚಿ ಎಂದು ಹೇಳಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ‘ನಮ್ಮ ಶಿಡ್ಲಘಟ್ಟ’ ಪುಸ್ತಕ ಪರಿಚಯ ಮಾಡಿಕೊಟ್ಟರು. ಹುಟ್ಟಿದ ಊರು, ತಾಲ್ಲೂಕು ಕುರಿತಂತೆ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕು. ಇದು ನಮ್ಮ ಊರು ಎಂಬ ಹೆಮ್ಮೆ, ಅಭಿಮಾನದಿಂದ ಇಷ್ಟು ವಿವರವಾದ ಪುಸ್ತಕ ರೂಪುಗೊಂಡಿದೆ. ಶಿಡ್ಲಘಟ್ಟ ಹಾಗೂ ತಾಲ್ಲೂಕಿನ ಒಡಲೊಳಗೆ ಇಷ್ಟೊಂದು ಸಿರಿವಂತಿಕೆ ಉಂಟೆ ಎಂಬ ಬೆರಗು ಮೂಡಿಸುವ ಈ ಕೃತಿ ಅನೇಕ ವಿಷಯಗಳ ದಾಖಲೆಯಿಂದಾಗಿ ಸಂಶೋಧನೆಗಳಿಗೆ ಕೈಪಿಡಿಯಾಗುತ್ತದೆ. ವ್ಯಾಪಕ ಕ್ಷೇತ್ರ ಸಂಚಾರದ ಫಲ ಈ ಕೃತಿ. ಇದು. ಜನಜೀವನ, ಸಸ್ಯ-ಪ್ರಾಣಿ ಪರಿಸರ, ಗತ ಹಾಗು ವರ್ತಮಾನದ ಚಹರೆಗಳನ್ನು ಬಿಡಿಸಿರುವ ಈ ಕೃತಿ ಕಾಲ, ಕಾರ್ಯ, ಕಾರಣಗಳತ್ತಲೂ ಗಮನ ಸೆಳೆಯುತ್ತದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾರಸ್ವತ ಪರಿಚಾರಿಕೆ ವತಿಯಿಂದ ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ಕುಮಾರ್ ಹೊಸಮನಿ, ಸಾಹಿತಿ ಶಿವರಾಮ್ ಮತ್ತು ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಪ್ಪ ಅವರನ್ನು ಗೌರವಿಸಲಾಯಿತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಖಜಾಂಚಿ ಸತೀಶ್, ಅಜಿತ್ ಕೌಂಡಿನ್ಯ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಪ್ಪ, ಸುಂದರನ್, ಗ್ರಂಥಾಲಯ ಸಹಾಯಕರಾದ ಶ್ರೀರಾಮ್, ಬಾಂಧವ್ಯ, ಗ್ರಾಮ ಪಂಚಾಯ್ತಿ ಗ್ರಂಥಾಲಯ ಮೇಲ್ವಿಚಾರಕರಾದ ಜಂಗಮಕೋಟೆ ಮುನಿಸ್ವಾಮಿ, ದೇವಣ್ಣ, ಮುನಿರಾಜು, ನಾಗರಾಜು, ವೆಂಕಟರೆಡ್ಡಿ, ನಯಾಜ್, ಲಕ್ಷ್ಮೀ, ಚನ್ನಕೇಶವ, ಶಿವಣ್ಣ, ಕೃಷ್ಣಪ್ಪ, ನಾಗರಾಜು, ಆದಿನಾರಾಯಣಪ್ಪ, ಗೋಪಾಲ್, ಅಂಬಿಕಾ, ಅಭಿಷೇಕ್, ಮಂಜುನಾಥ್, ಮುನಿಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -
- Advertisement -