ನಗರದ ಶ್ರೀ ಕರಗದಮ್ಮದೇವಿಯ ಹಸಿ ಕರಗವು ಗುರುವಾರ ರಾತ್ರಿ ನಡೆಯಿತು.
ನಗರದಲ್ಲಿ ನಡೆಯುವ ಶ್ರೀ ಕರಗದಮ್ಮದೇವಿಯ ಕರಗವು ಸ್ವಸ್ತಶ್ರೀ ವಿಳಂಬಿ ಸಂವತ್ಸರ ಚೈತ್ರ ಮಾಸ ಶುದ್ಧ ಬಹುಳ ತ್ರಯೋದಶಿ ಗುರುವಾರ ಧ್ವಜಾರೋಹಣದಿಂದ ಆರಂಭವಾಗಿ ಸೋಮವಾರದವರೆಗೆ ಅನೇಕ ಪೂಜಾ ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ.
ಹಸಿಕರಗದ ರಚನೆ ಬಹು ಕಟ್ಟುನಿಟ್ಟಾದ ಹಾಗೂ ಸಂಪ್ರದಾಯಬದ್ಧವಾದ ಕಾರ್ಯ. ಶಾಸ್ತ್ರಬದ್ಧವಾಗಿ ಹಸಿ ಮಣ್ಣಿನಿಂದ ಕರಗವನ್ನು ರೂಪಿಸುವ ಹಕ್ಕು ನಿರ್ದಿಷ್ಟವಾದ ಮನೆತನದವರಿಗೆ ಮಾತ್ರ ಮೀಸಲು. ಸಂಜೆಯ ಸುಮಾರಿಗೆ ಕರಗ ಹೊತ್ತು ನಡೆಯುವ ವ್ಯಕ್ತಿಗೆ ವಪನ ಸಂಸ್ಕಾರ ಮಾಡಿ, ಕಂಕಣ ಕಟ್ಟಿ, ಕೈತುಂಬ ಕರಿ ಬಳೆ ತೊಡಿಸಿ, ಅಚ್ಚ ಮಲ್ಲಿಗೆಯ ಜಡೆಕುಚ್ಚುಗಳಿಂದ ಸಿಂಗರಿಸಿ, ಅರಿಶಿನದ ಸೀರೆ, ಕುಪ್ಪುಸ ಉಡಿಸಿ, ಆಭರಣಗಳಿಂದ ಅಲಂಕರಿಸುತ್ತಾರೆ. ಕರಗ ಹೊರುವ ವ್ಯಕ್ತಿ ನವವಧುವಿನಂತೆ ಶೋಭಿಸುತ್ತಾನೆ.
ಅನಂತರ ಶಕ್ತಿಸ್ವರೂಪನಾದ ಆ ವ್ಯಕ್ತಿಗೆ ಧೂಪ ದೀಪಗಳಿಂದ ಮಂಗಳವಾದ್ಯಗಳೊಂದಿಗೆ ಶಾಸ್ತ್ರೋಕ್ತವಾದ ಪೂಜೆ ನಡೆಯುತ್ತದೆ. ಅನಂತರ ಹಣೆಗೆ ನಾಮ, ನಡುಪಟ್ಟಿ ಧರಿಸಿ ಕೈಯಲ್ಲಿ ಕತ್ತಿ ಹಿಡಿದ ಅಂಗರಕ್ಷಕರ ತಂಡದ ವೀರಕುಮಾರರ ಕಾವಲಿನಲ್ಲಿ ಕರಗ ಹೊರುವ ವ್ಯಕ್ತಿಯನ್ನು ನಡೆಮಡಿಯೊಂದಿಗೆ ದೇವಸ್ಥಾನಕ್ಕೆ ಕರೆತರುತ್ತಾರೆ. ಅಷ್ಟರಲ್ಲಿ ಅರಿಶಿನ, ಕುಂಕುಮ ಮಲ್ಲಿಗೆ ಹೂವಿನಿಂದ ಅಲಂಕೃತವಾದ ಹಸಿಕರಗ ಸಿದ್ಧವಾಗಿರುತ್ತದೆ. ಕರಗದ ಮೇಲೆ ಗೋಪುರದಂತೆ ಮಲ್ಲಿಗೆ ಹೂವಿನ ಅಲಂಕಾರವಿದ್ದು ತುದಿಯಿಂದ ಇಳಿಬಿಟ್ಟ ಹೂ ಸರಗಳನ್ನು ಹೊರುವವರ ಭುಜದಿಂದ ಕೆಳಕ್ಕೆ ಮಾಲೆಯಂತೆ ಹರಡಿಕೊಳ್ಳುವ ರೀತಿಯಲ್ಲಿ ಕಟ್ಟಿರುತ್ತಾರೆ.
ವೀರಕುಮಾರರ ರಕ್ಷಣೆಯಲ್ಲಿ ಗುಡಿಯ ಅಂಗಳ ಬಿಟ್ಟ ಕರಗ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬೆಳಗಿನ ಜಾವಕ್ಕೆ ಮತ್ತೆ ಗರ್ಭಗುಡಿ ಪ್ರವೇಶಿಸಿತು. ದಾರಿಯುದ್ದಕ್ಕೂ ಭಕ್ತಾದಿಗಳಿಂದ ಪೂಜೆ ಸೇವೆ ನಡೆಯಿತು. ನಗರದ ಹಲವಾರು ಬೀದಿಗಳಲ್ಲಿ ವಿದ್ಯುತ್ ಅಲಂಕಾರ ಮಾಡಿ ಉಚಿತ ಭೋಜನದ ವ್ಯವಸ್ಥೆಗಳನ್ನೂ ವಿವಿಧ ದಾನಿಗಳು ಮಾಡಿದ್ದರು.
- Advertisement -
- Advertisement -
- Advertisement -