ನಗರದ ಬಸ್ ನಿಲ್ದಾಣದ ಹತ್ತಿರ ಬಿ.ವಿ.ಮುನೇಗೌಡ ಕಾರ್ಖಾನೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಸೌಂದರ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಸಾಂತ್ವನ ಕೇಂದ್ರ ರವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ‘ಮಾನವ ಕಳ್ಳ ಸಾಗಣೆ ಮತ್ತು ಲೈಂಗಿಕ ಶೋಷಣೆಯ ಸಂತ್ರಸ್ತರ ಯೋಜನೆ- 2015’ ಕುರಿತಾದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಜೆಎಂಎಫ್‌ಸಿ ಮತ್ತು ಹಿರಿಯ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ್ ಮಾತನಾಡಿದರು.
ಮಾನವ ಕಳ್ಳ ಸಾಗಣೆ ಪ್ರಕರಣಗಳು ಕಂಡು ಬಂದರೆ, ತಕ್ಷಣವೇ ಕ್ರಮಕೈಗೊಂಡು ನೊಂದವರಿಗೆ ರಕ್ಷಣೆ ನೀಡಬೇಕು ಎಂದು ಅವರು ತಿಳಿಸಿದರು.
‘ಹಳ್ಳಿಗಳಲ್ಲಿ ಬಡತನ ಪ್ರಮಾಣ ಹೆಚ್ಚಿರುವುದರಿಂದ ಚಿಕ್ಕ ಮಕ್ಕಳ ಮಾರಾಟ, ಸಾಗಾಣಿಕೆ ಹಾಗೂ ಹೆಣ್ಣು ಮಕ್ಕಳನ್ನು ಮಾರುಕಟ್ಟೆಯ ಉದ್ದೇಶದಿಂದ ನಗರ ಪ್ರದೇಶಗಳಿಗೆ ಸಾಗಾಣಿಕೆ ಮಾಡುವ ವ್ಯವಸ್ಥೆ ಉಂಟಾಗುತ್ತಿದ್ದು, ತಡೆಗಟ್ಟಬೇಕು. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಶೋಷಿತರು ಕಾನೂನಿನ ನೆರವು ಪಡೆಯಬೇಕು’ ಎಂದು ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಡಿಯಲ್ಲಿರುವ ಪ್ರತಿಯೊಂದು ಹಕ್ಕುಗಳು ಮಹಿಳೆಯರಿಗೆ ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸಿಗಬೇಕು. ಆರ್ಥಿಕವಾಗಿ ಹಿಂದುಳಿದ ಮತ್ತು ಶೋಷಿತ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ವ್ಯಾಪಾರೀಕರಣ, ಮಾನವ ಸಾಗಾಣಿಕೆ ತಡೆಗಟ್ಟಬೇಕು. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ರಕ್ಷಣೆ ನೀಡಬೇಕು ಎಂದರು.
ಮಹಿಳಾ ಸಾಂತ್ವನ ಕೇಂದ್ರದ ಡಾ.ವಿಜಯ ವೆಂಕಟರಾಮ್ ಮಾತನಾಡಿ, ಪ್ರಪಂಚದಲ್ಲಿ ಪುರುಷ ಮಾತ್ರ ಮಹಿಳೆಯನ್ನು ಶೋಷಣೆ ಮಾಡುತ್ತಿಲ್ಲ. ವಿದ್ಯಾವಂತ ಮಹಿಳೆಯರಿಂದ ಅವಿದ್ಯಾವಂತ ಮಹಿಳೆಯರ ಮೇಲೆ, ಶ್ರೀಮಂತ ಮಹಿಳೆಯರಿಂದ ಬಡ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ಹೊಸತೇನಲ್ಲ. ಶಿಕ್ಷಣದಲ್ಲಿ, ಉದ್ಯೋಗದಲ್ಲಿ, ರಾಜಕೀಯದಲ್ಲಿ ಮತ್ತು ಸಮಾಜದಲ್ಲಿರುವ ಅವಕಾಶಗಳನ್ನು ನಿರಾಕರಿಸುವುದೇ ಮಹಿಳಾ ಶೋಷಣೆ ಆಗಿದೆ. ಇವುಗಳಲ್ಲದೇ ಮಹಿಳೆ ಲೈಂಗಿಕವಾಗಿಯೂ ಪುರುಷರಿಂದ ಶೋಷಣೆ ಅನುಭವಿಸುತ್ತಿದ್ದಾಳೆ. ಶೋಷಿತರು ದನಿ ಎತ್ತಬೇಕು. ಸಾಂತ್ವನ ಕೇಂದ್ರದಲ್ಲಿ ಬಂದು ಸಹಾಯ ಪಡೆಯಿರಿ ಎಂದರು.
ಸಿವಿಲ್ ನ್ಯಾಯಾಧೀಶರಾದ ಟಿ.ಎಲ್.ಸಂದೀಶ್, ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಚಂದ್ರಶೇಖರಗೌಡ, ಸರಕಾರಿ ವಕೀಲೆ ಎಸ್.ಕುಮುದಿನಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀದೇವಮ್ಮ, ಸರ್ಕಾರಿ ವೈದ್ಯಾಧಿಕಾರಿ ಡಾ.ವಿಜಯ್‌ಕುಮಾರ್, ವಕೀಲರಾದ ಎಂ.ಬಿ.ಲೋಕೇಶ್, ವೀಣಾ ಭಾಸ್ಕರ್ ಹಾಜರಿದ್ದರು.
- Advertisement -
- Advertisement -
- Advertisement -