ಸುಮಾರು ಇಪ್ಪತ್ತೈದು ಮಂದಿ ರೈತ ಮಹಿಳೆಯರು ತೆಲಂಗಾಣ ರಾಜ್ಯಕ್ಕೆ ಕೃಷಿ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಿದ್ದು, ನೀರಿನ ಸದ್ಭಳಕೆ, ಒಣಬೇಸಾಯದಲ್ಲಿ ಕೃಷಿಯನ್ನು ನಡೆಸುವ ಬಗ್ಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲಿದ್ದಾರೆ ಎಂದು ರೈತಕೂಟಗಳ ಒಕ್ಕೂಟದ ಅಧ್ಯಕ್ಷ ಹಿತ್ತಲಹಳ್ಳಿ ಎಚ್.ಜಿ.ಗೋಪಾಲಗೌಡ ತಿಳಿಸಿದ್ದಾರೆ.
ಮಳ್ಳೂರಿನ ಭಾರತಾಂಬೆ ಮಹಿಳಾ ರೈತಕೂಟದ ಸಭೆಯಲ್ಲಿ ಅವರು ಮಾತನಾಡಿದರು.
ರೈತರು ಅದರಲ್ಲೂ ಮುಖ್ಯವಾಗಿ ರೈತ ಮಹಿಳೆಯರು ಪ್ರಗತಿಪರ ರೈತರ ಬೇಸಾಯ ಕ್ರಮಗಳನ್ನು, ಕೃಷಿ ವಿಶ್ವವಿದ್ಯಾಲಯಗಳನ್ನು, ಸಮಗ್ರ ಕೃಷಿ ಪದ್ಧತಿಗಳನ್ನು, ಪ್ರಗತಿ ಕಂಡಿರುವ ರೈತ ಆಸಕ್ತ ಗುಂಪುಗಳನ್ನು ವೀಕ್ಷಣೆ ಮಾಡಿ ಬರಬೇಕು. ಇದರಿಂದ ಆರ್ಥಿಕ ಮಟ್ಟ ಸುಧಾರಣೆಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ಉದ್ದೇಶದಿಂದಲೇ ಕೃಷಿ ಅಧ್ಯಯನ ಪ್ರವಾಸವನ್ನು ಕೈಗೊಳ್ಳಲಾಗುತ್ತಿದೆ. ಇದಕ್ಕೆ ಪೂರಕವಾಗಿ ನಬಾರ್ಡ್ ಬ್ಯಾಂಕಿನ ಮತ್ತು ಪ್ರಗತಿ ಕೃಷ್ಣ ಬ್ಯಾಂಕಿನ ಸಹಕಾರವಿದೆ ಎಂದರು.
ಸಿರಿ ರೈತರ ಕೂಟ, ಮಳ್ಳೂರು ಭಾರತಾಂಬೆ ಮಹಿಳಾ ರೈತ ಕೂಟ ಮತ್ತು ಯುವಕ ರೈತ ಸಮಾಜದ ಒಟ್ಟು 49 ಮಂದಿ ನಾಲ್ಕು ದಿನಗಳ ಕೃಷಿ ಪ್ರವಾಸವನ್ನು ಜೂನ್ 28 ರಂದು ಕೈಗೊಂಡಿದ್ದೇವೆ. ತೆಲಂಗಾಣ ರಾಜ್ಯದ ನೂತನ ರಾಜಧಾನಿ ಅಮರಾವತಿಯ ಹತ್ತಿರದ ಕೃಷಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡುತ್ತಿದ್ದು, ನೀರಿನ ಸದ್ಭಳಕೆಗಾಗಿ ತೆಲಂಗಾಣ ರಾಜ್ಯ ಕೈಗೊಂಡಿರುವ ಕ್ರಮಗಳನ್ನು ಅಧ್ಯಯನ ಮಾಡಲಿದ್ದೇವೆ. ವಿವಿಧ ರೀತಿಯ ಚೆಕ್ ಡ್ಯಾಂಗಳನ್ನು ಸಹ ವೀಕ್ಷಿಸಿ, ಮಂತ್ರಾಲಯ, ಶ್ರೀಶೈಲ ಮತ್ತು ಮಹಾನಂದಿಗೆ ಭೇಟಿ ನೀಡಿ ವಾಪಸಾಗಲಿದ್ದೇವೆ.
ವ್ಯವಸಾಯದಲ್ಲಿ ಮುಂದುವರೆಯಲು ರೈತರು ಮತ್ತು ರೈತ ಮಹಿಳೆಯರಲ್ಲಿ ಜೀವನೋತ್ಸಾಹ ತುಂಬಲು ಇಂಥಹ ಅಧ್ಯಯನ ಪ್ರವಾಸಗಳನ್ನು ಸೃಷ್ಟಿಸುವ ಅಗತ್ಯವಿದೆ. ಆಗ ರೈತ ಬಾಂಧವರು ಹೆಚ್ಚಿನ ಪ್ರಗತಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಎಸ್.ಎಂ.ನಾರಾಯಣಸ್ವಾಮಿ, ಕೆಂಪರೆಡ್ಡಿ, ಸೀಗಳ್ಳಿ ವೀರಣ್ಣ, ಮಳಮಾಚನಹಳ್ಳಿ ಎಂ.ಸಿ.ಜಗದೀಶ್, ಬೂದಾಳ ರಾಮಾಂಜಿ, ಮಳ್ಳೂರು ಭಾರತಾಂಬೆ ಮಹಿಳಾ ರೈತ ಕೂಟದ ಅಧ್ಯಕ್ಷೆ ಕಾಚಹಳ್ಳಿ ರತ್ನಮ್ಮ, ಮಳ್ಳೂರು ವನಿತಾ, ಕೆ.ಎಸ್.ಲಲಿತಾ, ಸರೋಜಮ್ಮ ಹಾಜರಿದ್ದರು.
- Advertisement -
- Advertisement -
- Advertisement -
- Advertisement -