ಕೃಷಿಯು ಕೂಡ ವಿಜ್ಞಾನದಂತೆ ಆಧುನೀಕರಣಗೊಳ್ಳಬೇಕು. ಹೊಸ ತಂತ್ರಜ್ಞಾನ, ನೀರಿನ ಸದ್ಭಳಕೆ, ಭೂಮಿಯ ಫಲವತ್ತತೆ, ಉತ್ತಮ ಇಳುವರಿ ಮುಂತಾದ ವಿಷಯಗಳನ್ನು ವಿದ್ಯಾರ್ಥಿಗಳಂತೆ ರೈತರು ಕಲಿಯಬೇಕು ಎಂದು ಪಿ.ಎಲ್.ಡಿ ಬ್ಯಾಂಕ್ ಸದಸ್ಯ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ರಾಯಪ್ಪನಹಳ್ಳಿಯಲ್ಲಿ ಬುಧವಾರ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನಡೆಸಿದ ಕೃಷಿ ವಸ್ತು ಪ್ರದರ್ಶನ ಹಾಗೂ ರೈತರ ವಿಜ್ಞಾನಗಳ ಮತ್ತು ಅಭಿವೃದ್ಧಿ ಇಲಾಖೆಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೇಷ್ಮೆ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹಲವಾರು ದಿನಗಳಿಂದ ಗ್ರಾಮದಲ್ಲಿ ಉಳಿದು ರೈತರೊಂದಿಗೆ ಚರ್ಚಿಸಿ, ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ರೈತರ ಸಮಸ್ಯೆಗಳನ್ನು ದಾಖಲಿಸುತ್ತಾ ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಿದ್ದಾರೆ. ಒಂದೆಡೆ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಾ ರೈತರಿಗೆ ಹೊಸ ಮಾಹಿತಿಯನ್ನು ನೀಡುವಲ್ಲಿ ಶ್ರಮಿಸಿದ್ದಾರೆ. ಈ ದಿನ ಕೃಷಿಯನ್ನು ಉತ್ತಮಗೊಳಿಸಲು ಅಗತ್ಯವಿರುವ ಎಲ್ಲಾ ವಿಷಯಗಳ ಬಗ್ಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ತಜ್ಞರನ್ನು ಕರೆಸಿ ರೈತರಿಗೆ ಮಾಹಿತಿಯನ್ನು ನೀಡುತ್ತಾ ನೆರವಾಗುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಹೊಂಡ, ನೀರಿನ ಮರುಪೂರಣ, ಪಾಲಿಹೌಸ್, ಸಾವಯವ ಗೊಬ್ಬರ, ಮಳೆ ನೀರನ್ನು ಸಂಗ್ರಹಿಸುವುದು, ಸಸ್ಯ ಮಾದರಿಗಳು, ಅರಣ್ಯೀಕರಣ ಮುಂತಾದ ಹಲವು ವಿಷಯಗಳ ಕುರಿತಂತೆ ವಸ್ತು ಪ್ರದರ್ಶನ ಏರ್ಪಡಿಸಿದ್ದು, ವಿದ್ಯಾರ್ಥಿಗಳು ವಿವರ ನೀಡುತ್ತಿದ್ದರು.
ತಾಲ್ಲೂಕು ಪಂಚಾಯತಿ ಸದಸ್ಯ ಯರ್ರಬಚ್ಚಪ್ಪ, ರೇಷ್ಮೆ ಕೃಷಿ ಸಹಾಯಕ ನಿರ್ದೇಶಕ ಎಂ.ಸಿ.ಚಂದ್ರಪ್ಪ, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಕಮಲಮ್ಮ, ಸದಸ್ಯರಾದ ಶ್ರೀನಿವಾಸರೆಡ್ಡಿ, ಟಿ.ಕೆ.ಅರುಣ್ಕುಮಾರ್, ರತ್ನಮ್ಮ, ಪ್ರಸನ್ನಕುಮಾರ್, ನರಸಿಂಹರೆಡ್ಡಿ, ಚಿನ್ನಮ್ಮ, ದ್ಯಾವಮ್ಮ, ಸರಸ್ವತಮ್ಮ, ಮುನಿವೆಂಕಟಪ್ಪ, ದ್ಯಾವಪ್ಪ, ನಾರಾಯಣಸ್ವಾಮಿ, ವೆಂಕಟಲಕ್ಷ್ಮಮ್ಮ, ರಾಮಚಂದ್ರಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -