ತಾಲ್ಲೂಕಿನಲ್ಲಿ ನೀರಿನ ಕೊರತೆಯಿಂದಾಗಿ ರೇಷ್ಮೆ ಬೆಳೆಯು ಕುಸಿಯುತ್ತಿದೆ. ಉಳಿದಿರುವ ಏಕೈಕ ದಾರಿ ಹೈನುಗಾರಿಕೆಯಾದ್ದರಿಂದ ಈ ಉದ್ಯಮವನ್ನು ಎಲ್ಲರ ಸಹಕಾರದಿಂದ ಉಳಿಸಿಕೊಂಡು ಹೋಗಬೇಕಾದಂತಹ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಕೋಚಿಮುಲ್ ನಿರ್ದೇಶಕ ಆರ್.ಶ್ರೀನಿವಾಸ್ ತಿಳಿಸಿದರು.
ನಗರದ ಕೋಚಿಮುಲ್ ಶಿಬಿರ ಘಟಕದ ಕಚೇರಿ ಸಭಾಂಗಣದಲ್ಲಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ವತಿಯಿಂದ ಸೋಮವಾರ ಏರ್ಪಡಿಸಲಾಗಿದ್ದ ಕೋಚಿಮುಲ್ ನೂತನ ನಿರ್ದೇಶಕರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳು ಅಭಿವೃದ್ದಿಯಾಗಬೇಕಾದರೆ ಅಲ್ಲಿ ಕೆಲಸ ಮಾಡುವಂತಹ ಸಿಬ್ಬಂದಿ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುವುದರೊಂದಿಗೆ ಹಾಲಿನ ಗುಣಮಟ್ಟ ಕಾಪಾಡಬೇಕು ಎಂದರು.
ವಿವಿಧ ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಅನುಭವ ಹೊಂದಿದ್ದು ಕೋಚಿಮುಲ್‌ನ ನಿರ್ದೇಶಕನಾಗಿ ನನ್ನ ಅಧಿಕಾರಾವಧಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದರು.
ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ.ತಿಪ್ಪಾರೆಡ್ಡಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ನಾವು ಬೇರೆ ರಾಜ್ಯ ಮತ್ತು ರಾಷ್ಟ್ರದೊಂದಿಗೆ ಸ್ಪರ್ಧೆ ಮಾಡಬೇಕಾದರೆ ಉತ್ಪಾದನೆಯ ಜೊತೆ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಹಾಗಾಗಿ ಹಾಲಿನ ಉತ್ಪಾದನೆಯ ಜೊತೆಗೆ ಗುಣಮಟ್ಟ ಕಾಪಾಡಲು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರೂ ಹಾಗೂ ಕಾರ್ಯದರ್ಶಿಗಳು ತಮ್ಮ ಕರ್ತವ್ಯ ನಿರ್ವಹಿಸಬೇಕು. ಇನ್ನು ತಾಲ್ಲೂಕಿನ ಸಾದಲಿ ಹೋಬಳಿಯ ಎಸ್.ಗೊಲ್ಲಹಳ್ಳಿ ಬಳಿ ನಿರ್ಮಿಸಲು ಉದ್ದೇಶಿಸಿರುವ ಪಶು ಆಹಾರ ಘಟಕದಿಂದ ಸ್ಥಳೀಯರಿಗೆ ಉದ್ಯೋಗ ಸಿಗುವುದರಿಂದ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ನೂತನ ನಿರ್ದೇಶಕರು ಕ್ರಮ ಜರುಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಶಿಬಿರ ಘಟಕದ ಉಪವ್ಯವಸ್ಥಾಪಕ ಡಾ.ಚಂದ್ರಶೇಖರ್, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಬೋದಗೂರು ಚಂದ್ರೇಗೌಡ, ಉಪಾಧ್ಯಕ್ಷ ರಾಮದಾಸ್, ಶಿಬಿರ ಘಟಕದ ಸಿಬ್ಬಂದಿ ಕುಮ್ಮಣ್ಣ, ವಿಸ್ತರಣಾಧಿಕಾರಿಗಳಾದ ಉಮೇಶ್‌ರೆಡ್ಡಿ, ಶಂಕರ್, ಜಯಚಂದ್ರ, ನರಸಿಂಹಯ್ಯ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







