ತಾಲ್ಲೂಕಿನ ಬಡ ನಿರುದ್ಯೋಗ ಯುವಕ ಯುವತಿಯರಿಗೆ ಅಹಾಯಕವಾಗುವಂತೆ ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಭವನ್ ಪ್ರಾರಂಭಿಸುತ್ತಿರುವುದಾಗಿ ಲೋಕಿ ಫೌಂಡೇಷನ್ ಅಧ್ಯಕ್ಷ ಲೋಕೇಶ್ ಗೌಡ ತಿಳಿಸಿದರು.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲವು ರೀತಿಯಲ್ಲಿ ಕೌಶಲ್ಯ ಅಭಿವೃದ್ಧಿ ಪಡಿಸಲು ಸುಸಜ್ಜಿತ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ನಗರದ ಕೋಟೆ ವೃತ್ತದ ಬಳಿ ಎಚ್.ಎಂ.ಎಸ್ ಕಾಂಪ್ಲೆಕ್ಸ್ನಲ್ಲಿ ಜನವರಿ 7 ರ ಗುರುವಾರ ಪ್ರಾರಂಭಿಸಲಾಗುತ್ತಿದೆ. ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣಸ್ವಾಮಿ, ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕಾವೇರಿ ಮುಂತಾದ ಅಧಿಕಾರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.
ಭಾರತರತ್ನ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ತಜ್ಞರಿಂದ ಉಚಿತವಾಗಿ ಕಂಪ್ಯೂಟರ್ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ತರಬೇತಿ, ಅಗರಬತ್ತಿ ತಯಾರಿಕೆ, ಸ್ಪೋಕನ್ ಇಂಗ್ಲೀಷ್, ಮೋಟರ್ ವೈಂಡಿಂಗ್, ಪ್ಲಂಬಿಂಗ್, ರೇಷ್ಮೆ ಗೂಡಿನಿಂದ ಹಾರ ಮುಂತಾದ ಕಲಾಕೃತಿಗಳನ್ನು ತಯಾರಿಸುವ ತರಬೇತಿ ನೀಡಲಾಗುವುದು. ಸ್ತ್ರೀ ಶಕ್ತಿ ಸಂಘಗಳು ಅಥವಾ ಸಂಘ ಸಂಸ್ಥೆಗಳು ಬಯಸಿದ್ದಲ್ಲಿ ಅಗರಬತ್ತಿ ತಯಾರಿಸುವ ಅತ್ಯಾಧುನಿಕ ಯಂತ್ರವನ್ನು ಕಡಿಮೆ ಬೆಲೆಗೆ ಕೊಡಿಸಲಾಗುವುದು. ಜೊತೆಯಲ್ಲಿ ಕಚ್ಚಾ ಸಾಮಗ್ರಿ ನೀಡುವುದು, ತಯಾರಾದ ಸಾಮಗ್ರಿಯನ್ನು ಕೊಳ್ಳುವ ಮೂಲಕ ಮಾರುಕಟ್ಟೆಯ ವ್ಯವಸ್ಥೆಯನ್ನು ಸಹ ಕಲ್ಪಿಸಿಕೊಡಲಾಗುತ್ತದೆ.
ನಮ್ಮ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ತರಬೇತಿ ಹೊಂದಿದ ಯುವಕ ಯುವತಿಯರಿಗೆ ಮುದ್ರಾ ಯೋಜನೆಯಲ್ಲಿ ಸ್ವಯಂ ಉದ್ಯೋಗಕ್ಕೆ ಸಾಲ ಸೌಲಭ್ಯವನ್ನು ಕೊಡಿಸಲಾಗುವುದು, ಮಾರುಕಟ್ಟೆ ಸೌಲಭ್ಯ ಹಾಗೂ ಉದ್ಯೋಗವಕಾಶವನ್ನು ಸಹ ಒದಗಿಸಲಾಗುವುದು ಎಂದು ತಿಳಿಸಿದರು.
ಲೋಕಿ ಫೌಂಡೇಷನ್ ವತಿಯಿಂದ ಈಗಾಗಲೇ ತಾಲ್ಲೂಕಿನ ಹಲವಾರು ಮಂದಿ ಕುರಿ ಸಾಕಾಣಿಕೆದಾರರಿಗೆ ಉಚಿತ ತರಬೇತಿ ಕೊಡಿಸಲಾಗಿದೆ. ಟೈಲರಿಂಗ್ ಕೇಂದ್ರ ಈಗಾಗಲೇ ಯಶಸ್ವಿಯಾಗಿ ಹಲವರಿಗೆ ಉಪಯುಕ್ತವಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಜನರಿಗೆ ಅತ್ಯಗತ್ಯವಾಗಿರುವ ಹಲವು ರೀತಿಯ ಕೌಶಲ್ಯ ತರಬೇತಿಗಳನ್ನು ನೀಡುವ ಮೂಲಕ ಉದ್ಯೋಗವಕಾಶ ಹಾಗೂ ಆರ್ಥಿಕತೆಯ ಹೆಚ್ಚಳಕ್ಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.
ಪ್ರಗತಿಪರ ಕುರಿ ಸಾಕಾಣಿಕಾ ಸಂಘದ ವೀರಾಪುರ ರಾಮಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -