ಜೆಡಿಎಸ್ ಪಕ್ಷದ ಹಾಲಿ ಶಾಸಕರೊಂದಿಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಡೆದುಕೊಂಡ ರೀತಿ ಸರಿಯಿಲ್ಲ, ನನಗೆ ಬಿ ಫಾರಂ ನೀಡಿ ನನಗೆ ಗೊತ್ತಿಲ್ಲದಂತೆ ಮತ್ತೊಬ್ಬರಿಗೆ ಬಿ ಫಾರಂ ನೀಡುವ ಮೂಲಕ ಹಾಲಿ ಶಾಸಕರ ಕತ್ತು ಕುಯ್ಯುವ ಕೆಲಸ ಮಾಡಿದ್ದಾರೆ ಎಂದು ಎಂ.ರಾಜಣ್ಣ ಆರೋಪಿಸಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಘೋಷ್ಠಿ ನಡೆಸಿ ಮಾತನಾಡಿದರು.
ಕ್ಷೇತ್ರದಲ್ಲಿ ಪಕ್ಷ ವಿರೋಧಿ ಚಟುವಟಿಕೆ, ಅಥವ ತಮ್ಮ ಕುಟುಂಬದ ವಿರುದ್ದ ಏನಾದರೂ ಕೆಟ್ಟದ್ದಾಗಿ ನಡೆದುಕೊಂಡಿದ್ದರೆ ಸಾಭೀತುಪಡಿಸಲಿ. ಅದು ಬಿಟ್ಟು ಪಕ್ಷದ ಕೋರ್ ಕಮಿಟಿ ಸಭೆ, ಫೆ ೧೭ ರಂದು ಯಲಹಂಕದಲ್ಲಿ ನಡೆದ ಕುಮಾರಪರ್ವ ಕಾರ್ಯಕ್ರಮದಲ್ಲಿ ಲಕ್ಷಾಂತರ ಕಾರ್ಯಕರ್ತರ ಮುಂದೆ ತಮ್ಮ ಹೆಸರು ಘೋಷಿಸಿ ಕೊನೆ ಗಳಿಗೆಯಲ್ಲಿ ತಮ್ಮ ವಿರೋಧಿಗಳಿಗೆ ೪ ನೇ ಬಿ ಫಾರಂ ನೀಡಿ ಕಣಕ್ಕಿಳಿಸುವ ಮೂಲಕ ನೀಚ ರಾಜಕಾರಣಕ್ಕೆ ಮುಂದಾಗಿರುವ ಬಗ್ಗೆ ಕ್ಷೇತ್ರದ ನಿಷ್ಟಾವಂತ ಜೆಡಿಎಸ್ ಕಾರ್ಯಕರ್ತರಿಗೆ ಉತ್ತರ ನೀಡಬೇಕು ಎಂದರು.
ಇವರ ಇಂತಹುದೇ ವರ್ತನೆಯಿಂದ ಬೇಸತ್ತ ಬಹುತೇಕ ಜೆಡಿಎಸ್ ಶಾಸಕರು ಈ ಹಿಂದೆಯೇ ಪಕ್ಷ ತೊರೆದು ಹೋದರು. ಆದರೆ ನಾನು ಕ್ಷೇತ್ರದ ಜನತೆ ನೀಡಿರುವ ಮತಗಳಿಗೆ ಗೌರವ ನೀಡಿ ಕಳೆದ ಐದು ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ದುಡಿದಿದ್ದೇನೆ. ಪ್ರತಿನಿತ್ಯ ಕ್ಷೇತ್ರದ ಒಬ್ಬ ಸಾಮಾನ್ಯ ವ್ಯಕ್ತಿಗೂ ಸಿಗಬೇಕು ಎಂಬ ಉದ್ದೇಶದಿಂದ ನಗರದಲ್ಲಿಯೇ ಉಳಿದುಕೊಂಡೆ. ಇಷ್ಟು ಪ್ರಾಮಾಣಿಕವಾಗಿ ದುಡಿದ ನನ್ನಂತಹ ನಿಷ್ಠಾವಂತನಿಗೆ ಮೋಸ ಮಾಡಲು ಮನಸಾದರೂ ಹೇಗೆ ಬಂತು.
ಒಂದು ವೇಳೆ ಮೋಸ ಮಾಡಲೇ ಬೇಕೆಂದಿದ್ದವರು ಮೊದಲೇ ಹೇಳಬೇಕಿತ್ತು. ಇಲ್ಲವೇ ಇಬ್ಬರನ್ನೂ ಕೂಡಿಸಿ ಮಾತನಾಡಬಹುದಿತ್ತು. ಆದರೆ ಬಿ ಫಾರಂ ನೀಡಿ ಸಿಹಿ ಊಟ ಬಡಿಸಿ ಊಟದಲ್ಲಿ ವಿಷ ಹಾಕುವ ಕೆಲಸ ಯಾಕೆ ಮಾಡಬೇಕಿತ್ತು ಎಂದರು.
ಕ್ಷೇತ್ರದ ನಿಷ್ಠಾವಂತ ಕಾರ್ಯಕರ್ತರೂ ಹಾಗು ತಮ್ಮ ಅಭಿಮಾನಿಗಳ ಒತ್ತಾಯದ ಮೇರೆಗೆ ಈ ಭಾರಿಯ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು ಕ್ಷೇತ್ರದ ಮತದಾರರು ಆಟೋ ಗುರುತಿಗೆ ಮತ ಹಾಕುವ ಮೂಲಕ ಮುಂದಿನ ಐದು ವರ್ಷಗಳ ಕಾಲ ಕ್ಷೇತ್ರದ ಅಭಿವೃದ್ದಿಗಾಗಿ ದುಡಿಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಡಾ.ಧನಂಜಯರೆಡ್ಡಿ ಮಾತನಾಡಿ ಕ್ಷೇತ್ರದ ಶಾಸಕ ಎಂ.ರಾಜಣ್ಣ ಹಾಗು ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮೋಸ ಮಾಡಿರುವ ವರಿಷ್ಠರ ಕ್ರಮ ವಿರೋಧಿಸಿ ಈ ಭಾರಿಯ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಫರ್ಧೆ ಮಾಡುತ್ತಿದ್ದು ಈ ಭಾರಿಯ ಚುನಾವಣೆ ಧರ್ಮ ಹಾಗು ಅಧರ್ಮಗಳ ನಡುವೆ ನಡೆಯುವಂತಾಗಿದೆ. ಕ್ಷೇತ್ರದ ಮತದಾರ ರಾಜಣ್ಣರನ್ನು ಜಯಶೀಲರನ್ನಾಗಿಸುವ ಮೂಲಕ ಧರ್ಮಕ್ಕೆ ಜಯ ನೀಡಲಿದ್ದಾರೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷಗಿರಿಗೆ ರಾಜೀನಾಮೆ ಸಲ್ಲಿಸಿದ್ದೀರಾ ಅಥವ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾವೆಲ್ಲಾ ಎಚ್.ಡಿ.ಕುಮಾರಸ್ವಾಮಿಗೆ ನಿಷ್ಠೆಯಾಗಿರುವವರು. ಅವರು ಕೇಳಿದರೆ ಈ ಕ್ಷಣವೇ ರಾಜೀನಾಮೆ ಸಲ್ಲಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಡಾ.ಎ.ಎಂ.ಜಯರಾಮರೆಡ್ಡಿ, ನಗರಸಭೆ ಅಧ್ಯಕ್ಷ ಅಪ್ಸರ್‌ಪಾಷ, ಮುಖಂಡರಾದ ರೆಹಮತ್ತುಲ್ಲಾ, ಕೆ.ಮಂಜುನಾಥ್, ಕೆ.ಎಸ್.ಕನಕಪ್ರಸಾದ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -