
Sidlaghatta : ಶಿಡ್ಲಘಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರ ಹೊರ ಹೊರವಲಯದ ಶ್ರೀ ಬಾಲಾಜಿ ಕನ್ವೆನ್ಷನ್ ಹಾಲ್‌ನಲ್ಲಿ “ಚಿಗುರು”’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾನುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, “ಮೊನ್ನೆಗಳನ್ನು ಮರೆತವರು, ನಿನ್ನೆಗಳನ್ನು ನೆನೆಯದವರು, ಇಂದಿನ ಜೊತೆ ಇಲ್ಲದವರು ನಾಳೆಗಳನ್ನು ನೋಡಲಾರರು” ಎಂದು ಹೇಳುವ ಮೂಲಕ ಸಮಾಜದಲ್ಲಿ ವೈಚಾರಿಕ ಪ್ರಜ್ಞೆ ಬೆಳೆಸಿಕೊಳ್ಳಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ಪ್ರತಿಯೊಬ್ಬರೂ ಸಮಾಜಕ್ಕೆ ತಾವೇನು ಕೊಡಬೇಕು ಎಂಬುದನ್ನು ಆಲೋಚಿಸಿ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದ ಅವರು, ಚಿತ್ರರಂಗದ ನಟ-ನಟಿಯರು ಆದರ್ಶವಾಗಬಾರದು; ಬದಲಿಗೆ ನಮ್ಮ ತಾತ, ಮುತ್ತಾತ, ತಂದೆ-ತಾಯಿ ಹಾಗೂ ನೆಲ, ಜಲ, ಪ್ರಕೃತಿಯೇ ಆದರ್ಶವಾಗಬೇಕು ಎಂದು ಪ್ರತಿಪಾದಿಸಿದರು. ಬಸವಣ್ಣ, ವೇಮನ, ಕನಕದಾಸ, ಅಂಬೇಡ್ಕರ್ ಹಾಗೂ ಕುವೆಂಪು ಅವರಂತಹ ಮಹನೀಯರ ಹಾದಿಯನ್ನು ಎಲ್ಲರೂ ಅನುಸರಿಸಬೇಕು ಎಂದು ಸಲಹೆ ನೀಡಿದರು.
ಸಾಂಸ್ಕೃತಿಕ ವೈವಿಧ್ಯದ ರಸದೌತಣ :
ಕಾರ್ಯಕ್ರಮದಲ್ಲಿ ಸಪ್ತಸ್ವರ ಸಂಗೀತ ಶಾಲೆಯ ಧಾತ್ರಿರಾಮ್ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ, ಆಶಾಕಿರಣ ಅಂಧ ಮಕ್ಕಳ ವಸತಿಯುತ ಶಾಲೆಯ ವಿದ್ಯಾರ್ಥಿಗಳಿಂದ ಸುಗಮ ಸಂಗೀತ, ವರದನಾಯಕನಹಳ್ಳಿಯ ಜವನಿ ವಿ.ಟಿ ಮತ್ತು ತಂಡದವರಿಂದ ಜನಪದ ಗೀತೆಗಳ ಗಾಯನ ಪ್ರಸ್ತುತಗೊಂಡಿತು.
ನಿರ್ಮಲ್ ತೇಜ್ ಮತ್ತು ತಂಡದವರು ಜಾನಪದ ನೃತ್ಯ ಪ್ರದರ್ಶಿಸಿದರೆ, ಶ್ರೀ ಶಾರದಾ ವಿದ್ಯಾ ಸಂಸ್ಥೆಯ ಮಹಾಲಕ್ಷ್ಮೀ ಮತ್ತು ತಂಡದವರು ಭರತನಾಟ್ಯ ಪ್ರದರ್ಶಿಸಿ ಗಮನ ಸೆಳೆದರು. ವಿಶ್ವತ್ ಮತ್ತು ವಿಶ್ವಜ ಮತ್ತು ತಂಡದವರು ಏಕಪಾತ್ರಾಭಿನಯ ನೀಡಿದರು. ಸಕಲ ರಂಗಹೆಜ್ಜೆ ಟ್ರಸ್ಟ್ ತಂಡದವರು ಚಂದ್ರಶೇಖರ ಕಂಬಾರ ಅವರ ರಚನೆಯ ‘ಕಲ್ಯಾಣದ ಕೂಗು’ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ಸದಸ್ಯ ಡಿ.ಆರ್.ರಾಜಪ್ಪ, ವಕೀಲರ ಸಂಘದ ಅಧ್ಯಕ್ಷ ಎ.ನಾರಾಯಣಸ್ವಾಮಿ, ಶ್ರೀ ಶಾರದಾ ವಿದ್ಯಾ ಸಂಸ್ಥೆ ಕಾರ್ಯದರ್ಶಿ ಶ್ರೀಕಾಂತ್, ಎಆರ್‌ಎಂ ಪಿಯು ಕಾಲೇಜು ಪ್ರಾಂಶುಪಾಲ ಮೂರ್ತಿ ಸಾಮ್ರಾಟ್, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಎ.ಎಂ.ತ್ಯಾಗರಾಜ್, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಮುನಿನಾರಾಯಣಪ್ಪ, ಕಲಾವಿದ ಸೋ.ಸೊ.ನಾಗೇಂದ್ರ, ‘ಈ ನೆಲ ಈ ಜನ’ ಸಂಸ್ಥೆಯ ವೆಂಕಟಾಚಲಪತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ‘ಚಕೋರ’ ಜಿಲ್ಲಾ ಸಂಚಾಲಕ ಈ ಧರೆ ಪ್ರಕಾಶ್ ಹಾಗೂ ಇಲಾಖೆಯ ಸಿಬ್ಬಂದಿ ಅರುಣಮ್ಮ ಭಾಗವಹಿಸಿದ್ದರು.
In English: The Kannada and Culture Department organized the ‘Chiguru’ cultural program in Sidlaghatta on Sunday, featuring classical and folk music, dance, and a drama performance. Karnataka Janapada Academy chief Gollahalli Shivaprasad urged people to preserve local culture rather than emulate film personalities.












