
Sidlaghatta : ತಾಲ್ಲೂಕಿನ ಚೀಮಂಗಲ ಗ್ರಾಮದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಶ್ರೀ ಶಾರದಾದೇವಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.
ಶಾಲೆಯ ಹಳೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಷ್ಠಾಪನೆ ಅಂಗವಾಗಿ ಗಣಪತಿ ಪೂಜೆ, ವಾಸ್ತು ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ವೇದಮೂರ್ತಿ ಅಭಿಲಾಷ್ ಅವರ ನೇತೃತ್ವದಲ್ಲಿ ಮಂತ್ರಘೋಷಗಳ ನಡುವೆ ಶಾರದಾದೇವಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ವಿಶೇಷ ಪೂಜೆಗಳನ್ನು ಶಾಸ್ತ್ರೋಕ್ತವಾಗಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಸ್ವಾಮಿ ಮಾತನಾಡಿ, “ಶಾಲೆಗಳು ಕೇವಲ ಶಿಕ್ಷಣ ನೀಡುವ ಕೇಂದ್ರಗಳಷ್ಟೇ ಅಲ್ಲ, ಉತ್ತಮ ಸಂಸ್ಕಾರ ರೂಪಿಸುವ ಪವಿತ್ರ ತಾಣಗಳಾಗಬೇಕು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ, ಕಲಿಕೆಯ ಆಸಕ್ತಿ, ಗುರುಹಿರಿಯರ ಬಗ್ಗೆ ಗೌರವ ಹಾಗೂ ಸನ್ಮಾರ್ಗದಲ್ಲಿ ಸಾಗುವ ಮೌಲ್ಯಗಳನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ” ಎಂದು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಕೆ.ಎನ್. ಸುಬ್ಬಾರೆಡ್ಡಿ, ಮುಖ್ಯಶಿಕ್ಷಕ ಎಂ. ನಾಗರಾಜು, ಎಸ್.ಡಿ.ಎಂ.ಸಿ ಅಧ್ಯಕ್ಷ ಆದರ್ಶ್ ರವಿ, ಸಮಾಜ ಸೇವಕ ಶ್ರೀನಿವಾಸ್, ನಿವೃತ್ತ ಮುಖ್ಯಶಿಕ್ಷಕ ಸಿ.ಎಂ. ಮುನಿರಾಜು, ಮಧು, ಗ್ರಾಮದ ಮುಖಂಡರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
In English: A Sharadadevi idol installation ceremony was held on Saturday at the PM Shri Government Higher Primary School in Cheemangala village, Sidlaghatta taluk, with full religious rites led by Vedic scholar Abhilash. Block Education Officer P. Swamy said such programmes help build discipline, learning interest and values among students. Former students, teachers, SDMC members and villagers attended.












