
Sidlaghatta : ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಬೈಕ್ ರ‍್ಯಾಲಿ ಗಮನ ಸೆಳೆಯಿತು.
ನಗರದ ತಾಲ್ಲೂಕು ಆಡಳಿತ ಭವನದಿಂದ ಹೊರಟ ಬೈಕ್ ರ‍್ಯಾಲಿಯಲ್ಲಿ ಮಾನ್ಯ ಆಡಳಿತಾಧಿಕಾರಿಗಳು, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಹ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ತಾಲ್ಲೂಕು ಆಡಳಿತ ಭವನದಿಂದ ಆರಂಭಗೊಂಡ ಬೈಕ್ ರ‍್ಯಾಲಿಯು ದಿಬ್ಬೂರಹಳ್ಳಿ ಜೋಡಿ ರಸ್ತೆ ಮೂಲಕ ಕೋಟೆ ಸರ್ಕಲ್ ತೆರಳಿ ಅಲ್ಲಿಂದ ಮಯೂರ ಸರ್ಕಲ್, ಚಿಂತಾಮಣಿ ಚಿಕ್ಕಬಳ್ಳಾಪುರ ಜೋಡಿ ರಸ್ತೆಯಿಂದ ಸರ್ಕಲ್ ಮೂಲಕ ಬೈಪಾಸ್ ರಸ್ತೆಯಿಂದ ತಾಲ್ಲೂಕು ಆಡಳಿತ ಭವನದಲ್ಲಿ ಮುಕ್ತಾಯವಾಯಿತು.
ಇದೇ ವೇಳೆ ಮಾನ್ಯ ಆಡಳಿತಾಧಿಕಾರಿಯವರಾದ ಶ್ರೀ ಆಬಿದ ಎಸ್.ಎಸ್ ರವರು ಮಾತನಾಡಿ, ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಕೈಗೊಳ್ಳಲು ಅಧಿಸೂಚನೆ ಹೊರಡಿಸಿ ವೇಳಾಪಟ್ಟಿ ಪ್ರಕಟಿಸಿದೆ. ಈ ಸಂಬಂಧ ಸ್ವೀಪ್ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದು, ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಪಂಚಾಯತಿ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಎಸ್‌ಐಆರ್ ಪ್ರಕ್ರಿಯೆಯು ಎಲ್ಲ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸುವುದು ಆಗಿದೆ. ಈ ವಿಶೇಷ ಸಮಗ್ರ ಪರಿಷ್ಕರಣೆಯ ಅವಧಿಯಲ್ಲಿ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳುವ ಮೂಲಕ ಬಿಎಲ್‌ಓ ಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.
ನಂತರ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಹೇಮಾವತಿ.ಆರ್ ರವರು ಮಾತನಾಡಿ, ತಾಲ್ಲೂಕಿನಲ್ಲಿ ಜಾಗೃತಿ ಮೂಡಿಸಲಾಗಿದೆ. ಶಾಲಾ ಕಾಲೇಜುಗಳು, ಗ್ರಾಮೀಣ ಪ್ರದೇಶದಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ನಿಖರ ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಭದ್ರ ಅಡಿಪಾಯ, ಪ್ರತಿಯೊಬ್ಬ ಅರ್ಹ ನಾಗರಿಕರು ಬಿಎಲ್‌ಓ ಗಳಿಗೆ ಅಗತ್ಯ ಮಾಹಿತಿ ನೀಡಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಾನ್ಯ ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿಯವರಾದ ಶ್ರೀ ಆಬಿದ ಎಸ್.ಎಸ್ ರವರು, ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರು, ಮಾನ್ಯ ನರೇಗಾ ಸಹಾಯಕ ನಿರ್ದೇಶಕರವರು, ತಾಲ್ಲೂಕು ಯೋಜನಾಧಿಕಾರಿಯವರು, ವಿವಿಧ ಇಲಾಖೆಗಳ ತಾಲ್ಲೂಕು ಅಧಿಕಾರಿಯವರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯವರು, ಪೊಲೀಸ್ ಇಲಾಖೆಯವರು, ತಾಲ್ಲೂಕು ಕಚೇರಿ ಸಿಬ್ಬಂದಿ, ನರೇಗಾ ಮತ್ತು ಎನ್.ಆರ್.ಎಲ್.ಎಂ ಸಿಬ್ಬಂದಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಇತರರು ಹಾಜರಿದ್ದರು.
In English: Sidlaghatta’s Taluk Panchayat, Taluk Administration and SVEEP Committee organized a bike rally in town on Friday to raise public awareness about the Special Intensive Revision (SIR) of the voters’ list ordered by the Election Commission of India. Administrator Abid S.S. and Executive Officer Hemavathi R. led the rally through the town’s main circles and urged eligible citizens to verify their names on the electoral roll and cooperate with Booth Level Officers (BLOs) during the revision period.












