Sidlaghatta : ಶಿಡ್ಲಘಟ್ಟ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಅರ್ಹ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಹಕರಿಸಬೇಕು ಎಂದು ಮೇಲೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ಎ. ಉಮೇಶ್ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಅಂಗನವಾಡಿ–2ರಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಂಗವಾಗಿ ಎನ್ಯುಮರೇಷನ್ ನಮೂನೆಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಪ್ರತಿಯೊಬ್ಬ ನಾಗರಿಕರೂ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ. ಮತಗಟ್ಟೆ ಅಧಿಕಾರಿಗಳು ಅಗತ್ಯ ಮಾರ್ಗದರ್ಶನ ನೀಡಲಿದ್ದು, ಸೂಚಿಸಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರಬೇಕು. ಎರಡು ಕ್ಷೇತ್ರಗಳಲ್ಲಿ ಮತದಾರರಾಗಿ ಹೆಸರು ಹೊಂದಿರುವವರು ಒಂದು ಸ್ಥಳದಲ್ಲಿ ಮಾತ್ರ ಎನ್ಯುಮರೇಷನ್ ಅರ್ಜಿ ಸಲ್ಲಿಸಬೇಕು. ಎರಡೂ ಕಡೆ ಅರ್ಜಿ ಸಲ್ಲಿಸಿದರೆ ಹೆಸರು ಮತದಾರರ ಪಟ್ಟಿಯಿಂದ ಅಳಿಸುವ ಸಾಧ್ಯತೆ ಇರುತ್ತದೆ” ಎಂದು ತಿಳಿಸಿದರು.
ಕುಟುಂಬದಲ್ಲಿ ಮೃತಪಟ್ಟಿರುವವರು, ಬೇರೆ ಊರುಗಳಲ್ಲಿ ಮತದಾರರಾಗಿ ಹೆಸರು ಹೊಂದಿರುವವರು ಹಾಗೂ ಮದುವೆಯಾಗಿ ಬೇರೆ ಊರುಗಳಿಗೆ ತೆರಳಿರುವ ಮಹಿಳೆಯರ ಹೆಸರುಗಳನ್ನು ಪಟ್ಟಿಯಿಂದ ತೆಗೆಸಬೇಕು. 18 ವರ್ಷ ಪೂರೈಸಿದ ಯುವಕರು ನಮೂನೆ–6ರಲ್ಲಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿಕೊಳ್ಳಬೇಕು ಎಂದರು.
ಮುಖಂಡ ರಾಮಕೃಷ್ಣಪ್ಪ ಮಾತನಾಡಿ, “ಮನೆಗಳಿಗೆ ಆಗಮಿಸುವ ಮತಗಟ್ಟೆ ಅಧಿಕಾರಿಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕು. ಅಧಿಕಾರಿಗಳು ನೀಡುವ ಎರಡು ನಮೂನೆಗಳಲ್ಲಿ ಒಂದನ್ನು ಭರ್ತಿ ಮಾಡಿ ಅವರಿಗೆ ಹಿಂದಿರುಗಿಸಿ, ಮತ್ತೊಂದನ್ನು ತಮ್ಮ ಬಳಿ ಇರಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸ ಸೇರಿದಂತೆ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ ಸೂಕ್ತ ದಾಖಲೆಗಳೊಂದಿಗೆ ಮಾಡಿಸಿಕೊಳ್ಳಬಹುದು. ಜೂನ್ 30ರಿಂದ ಜುಲೈ 29ರವರೆಗೆ ಈ ಪ್ರಕ್ರಿಯೆ ನಡೆಯಲಿದ್ದು, ಸಾರ್ವಜನಿಕರು ಸಹಕರಿಸಬೇಕು” ಎಂದು ಹೇಳಿದರು.
ಗ್ರಾಮ ಆಡಳಿತಾಧಿಕಾರಿ ತಿರುಮೂರ್ತಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರವಿಪ್ರಸಾದ್, ಮಂಜುನಾಥ್, ಮತಗಟ್ಟೆ ಅಧಿಕಾರಿ ವೆಂಕಟಲಕ್ಷ್ಮಮ್ಮ, ಗ್ರಾಮ ಸಹಾಯಕ ರಮೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.








