ಮಲತ್ಯಾಜ್ಯ ವಿಲೇವಾರಿ: ಕೆರೆ, ಬಾವಿ, ತೋಟಗಳಲ್ಲಿ ಸುರಿದರೆ ಕಾನೂನು ಕ್ರಮ

Sidlaghatta : ಮಲತ್ಯಾಜ್ಯ ವಿಲೇವಾರಿಗೆ ನಿಗದಿಪಡಿಸಿದ ಘಟಕಗಳನ್ನು ಬಿಟ್ಟು ಕೆರೆ, ಬಾವಿ, ಖಾಸಗಿ ಜಮೀನು ಅಥವಾ ತೋಟಗಳಲ್ಲಿ ಸುರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ನರೇಗಾ ಸಹಾಯಕ ನಿರ್ದೇಶಕ ಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ (ನ.24) ನಡೆದ ಸಕ್ಕಿಂಗ್ ಮತ್ತು ಜಟ್ಟಿಂಗ್ ವಾಹನಗಳ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎರಡು ಘಟಕಗಳಲ್ಲಿ ಮಾತ್ರ ವಿಲೇವಾರಿ
ತಾಲ್ಲೂಕಿನಲ್ಲಿ ಸಂಗ್ರಹಿಸುವ ಮಲತ್ಯಾಜ್ಯವನ್ನು ಮಳಮಾಚನಹಳ್ಳಿ ಮತ್ತು ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿಲೇವಾರಿ ಘಟಕಗಳಿಗೇ ಸಾಗಿಸಬೇಕು. ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ನಿಯಮವನ್ನು ವಾಹನ ಮಾಲೀಕರು ಕಡ್ಡಾಯವಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಪರಿಸರಕ್ಕೆ ಹಾನಿಯಾಗುವ ರೀತಿಯಲ್ಲಿ ಸುರಿದಿರುವುದು ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದರು.
ತಾಲ್ಲೂಕಿನಲ್ಲಿ ಕೆರೆಗಳಲ್ಲಿ ತ್ಯಾಜ್ಯ ಸುರಿಯುವ ಪ್ರಕರಣಗಳು ಈಚೆಗೆ ವರದಿಯಾಗಿದ್ದವು.
ದರ ಮತ್ತು ನಿಗಾ
- ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಲತ್ಯಾಜ್ಯ ಸಂಗ್ರಹಕ್ಕೆ ಸರ್ಕಾರ ನಿಗದಿಪಡಿಸಿದ ದರವನ್ನು ಮಾತ್ರ ಪಡೆಯಬೇಕು
- ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಬಾರದು
- ನಿಯಮಬಾಹಿರ ವಿಲೇವಾರಿ ಹಾಗೂ ಹೆಚ್ಚುವರಿ ವಸೂಲಿ ನಡೆಯದಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಿಗಾ ವಹಿಸಬೇಕು
ಸಭೆಯಲ್ಲಿ ಮಳಮಾಚನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನೈನಾ, ದೊಡ್ಡತೇಕಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಜ್ರೇಶ್ ಕುಮಾರ್, ತಾಲ್ಲೂಕು ಐಇಸಿ ಸಂಯೋಜಕ ಲೋಕೇಶ, ವಾಹನಗಳ ಮಾಲೀಕರು ಹಾಗೂ ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

For Daily Updates WhatsApp ‘HI’ to 7406303366
Summary in English
The NREGA Assistant Director has warned that septage (faecal sludge) collected in Sidlaghatta taluk must be dumped only at the designated disposal units in Malamachanahalli and Doddatekahalli gram panchayat limits, not in lakes, wells, private land or farms. Violators face legal action. Vehicle owners may charge only the government-fixed rate, he said at a meeting at the Taluk Panchayat hall on Tuesday.
Be a reporter
ಊರಿನ ಸುದ್ದಿ, ಫೋಟೋ ಕಳುಹಿಸಿ.
Send news


