ಮಳೆಗಾಲದ ದಿನಗಳು, ಗಣೇಶ ಹಬ್ಬದ ಆಗಮನ ಮತ್ತು ಗೀಜಗ ಹಕ್ಕಿಯ ಗೂಡು ನಿರ್ಮಾಣ ಹೆಚ್ಚೂಕಡಿಮೆ ಒಟ್ಟೊಟ್ಟಿಗೇ ನಡೆಯುತ್ತವೆ. ತಾಲ್ಲೂಕಿನ ಹಲವೆಡೆ ಪಕ್ಷಿ ಪ್ರಪಂಚದಲ್ಲಿ ತನ್ನ ಗೂಡಿನಿಂದ ಗುರುತಿಸಿಕೊಳ್ಳುವ ಏಕೈಕ ಪಕ್ಷಿ ಗೀಜಗ ತನ್ನ ಗೂಡಿನ ನಿರ್ಮಾಣದಲ್ಲಿ ನಿರತವಾಗಿವೆ.
ತಾಲ್ಲೂಕಿನ ಅಪ್ಪೇಗೌಡನಹಳ್ಳಿಯ ಹೊರವಲಯದ ಹಾಳು ಬಾವಿಯ ಅಂಚಿನಲ್ಲಿ ಬೆಳೆದಿರುವ ಬೇವಿನ ರೆಂಬೆಗಳಿಗೆ ಗೊಂಚಲು ಗೊಂಚಲಾಗಿ ಗೀಜಗ ಹಕ್ಕಿಗಳು ಗೂಡು ನಿರ್ಮಿಸಿವೆ. ಗೀಜಗ ಹಕ್ಕಿ ಇಕ್ಕಳದಂಹ ತನ್ನ ಚಿಕ್ಕ ಚುಂಚಿನಲ್ಲಿ ನೇಯುವ ಕಸೂತಿ ಕೆಲಸ ಯಾವುದೇ ಯಂತ್ರಕ್ಕೂ ಸರಿಸಾಟಿಯಾಗಲಾರದು. ಈ ಹಕ್ಕಿಗಳಿಗೆ ಪ್ರಮುಖ ವೈರಿಯೇ ಮಾನವ. ಕಾಲು ಚೀಲದ ಆಕಾರದಲ್ಲಿ ಸುಂದರವಾಗಿ ನಿರ್ಮಾಣವಾಗುವ ಇದರ ಗೂಡುಗಳು ಕೂಡ ಅಲಂಕಾರಿಕ ಸಾಧನವಾಗಿದೆ. ಹಲವಾರು ಕಾಳಜಿಯುಳ್ಳವರು ಈ ಬಗ್ಗೆ ವಿವರಿಸಿ ಗೂಡನ್ನು ಕೀಳದಂತೆ ಮನವಿ ಮಾಡುತ್ತಿದ್ದಾರೆ.
ಗೂಡನ್ನು ಕಟ್ಟುತ್ತಾ ತನ್ನ ಮರಿಗಳಿಗೆ ಬದುಕನ್ನು ಕಟ್ಟಿಕೊಡುವ ಅದಮ್ಯ ಆಸೆ ಈ ಹಕ್ಕಿಗೆ. ಹಾಗೆಯೇ ಭವಿಷ್ಯ ರೂಪಿಸುವ ಕಾಳಜಿ. ಗೂಡು ಕಟ್ಟುವ ಕಾಯಕದಲ್ಲಿ ಒಂದೊಂದು ಎಳೆಯೂ ಕಲಾತ್ಮಕವಾಗಿ ಬಿಗಿದುಕೊಳ್ಳುತ್ತದೆ. ನೋಡಲಿಕ್ಕೆ ಗುಬ್ಬಿಯಷ್ಟೇ ಚಿಕ್ಕದು. ಇದು ಗುಬ್ಬಿಯ ಸಂತತಿಗೆ ತೀರಾ ಹತ್ತಿರ ಕೂಡಾ. ಈ ಹಕ್ಕಿಗಳು ಸಂಘ ಜೀವನ ನಡೆಸುತ್ತವೆ.
ಗಂಡು ಗೀಜಗ ಅತ್ಯಂತ ಚಾಕಚಕ್ಯತೆಯಿಂದ ಹುಲ್ಲು ಬಳಸಿ ಗೂಡು ಕಟ್ಟುತ್ತದೆ. ಗೂಡು ನೇಯ್ದಾದ ಮೇಲೆ ಗಂಡಿನ ಕುಶಲತೆಗೆ ಮನಸೋತ ಹೆಣ್ಣು ಗೀಜಗವೊಂದು ಜೊತೆಯಾಗುತ್ತದೆ. ಮುಂದೆ ತನಗೆ ಬೇಕಾದ ಹಾಗೆ ಅನುಕೂಲವಾಗುವ ರೀತಿಯಲ್ಲಿ ಗೂಡನ್ನು ಗಂಡಿನಿಂದ ರೂಪಿಸಿಕೊಳ್ಳುತ್ತದೆ. ನಂತರ ನೂತನ ಗೃಹ ಪ್ರವೇಶ.
‘ಗಣೇಶ ಹಬ್ಬದ ಸಮಯದಲ್ಲಿ ಹಲವರು ಈ ಕಲಾತ್ಮಕವಾದ ಗೂಡನ್ನು ಕಿತ್ತು ಮಾರುವ ರೂಢಿ ಇತ್ತೀಚೆಗೆ ಬೆಳೆಸಿಕೊಳ್ಳುತ್ತಿದ್ದಾರೆ. ದಯವಿಟ್ಟು ಈ ಬಾರಿ ಯಾರೂ ಗೀಜಗನ ಗೂಡುಗಳನ್ನು ಅಲಂಕಾರದ ಹೆಸರಿನಲ್ಲಿ ಖರೀದಿಸಬೇಡಿ. ಹಾಗೇನಾದರೂ ಗೂಡನ್ನು ಕೀಳುವುದು ಅಥವಾ ಮಾರುವುದು ಕಂಡುಬಂದಲ್ಲಿ ತಕ್ಷಣವೇ ಅರಣ್ಯ ಇಲಾಖೆಯವರಿಗೆ ತಿಳಿಸಿ’ ಎಂದು ಗ್ರಾಮ ಪಂಚಾಯತಿ ಸದಸ್ಯ ಎ.ಎಂ.ತ್ಯಾಗರಾಜ್ ತಿಳಿಸಿದರು.
- Advertisement -
- Advertisement -
- Advertisement -
- Advertisement -