27.1 C
Sidlaghatta
Monday, July 14, 2025

ಗೊಂಬೆಹಬ್ಬದಲ್ಲಿ ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯ ಕಲಿಕೆ

- Advertisement -
- Advertisement -

ನಗರದ ಗೌಡರ ಬೀದಿಯ ಡಿ. ಪಾರ್ಥಸಾರಥಿ ಮತ್ತು ಮಂಜುನಾಥ ಅವರ ಮನೆಯಲ್ಲಿ ದಸರಾ ಸಂಭ್ರಮಾಚರಣೆಯ ಅಂಗವಾಗಿ ವೈವಿಧ್ಯಮಯ ಗೊಂಬೆಗಳನ್ನು ಜೋಡಿಸಿಡಲಾಗಿದೆ.
ಗೊಂಬೆಗಳ ಜೊತೆ ವಿವಿಧ ತಿಂಡಿಗಳನ್ನು ಮಾಡಿಟ್ಟು ನವರಾತ್ರಿಯ ಗೊಂಬೆ ಹಬ್ಬವನ್ನು ಆಚರಿಸಲಾಗುತ್ತಿದೆ. ಹಲವಾರು ವರ್ಷಗಳಿಂದ ಗೊಂಬೆ ಹಬ್ಬವನ್ನು ಆಚರಿಸಿಕೊಂಡು ಬರುತ್ತಿರುವ ಅವರ ಮನೆಯಲ್ಲಿ ಮಹಿಳೆಯರು ಮಕ್ಕಳಿಗೆ ಉಚಿತವಾಗಿ ಗೊಂಬೆ ತಯಾರಿಕೆಯನ್ನು ಹೇಳಿಕೊಡುವ ಮೂಲಕ ಗೊಂಬೆ ಹಬ್ಬಕ್ಕೆ ವಿಶೇಷ ಅರ್ಥವನ್ನು ಕಲ್ಪಿಸಿದ್ದಾರೆ. ಗೊಂಬೆ ವೀಕ್ಷಿಸಲು ಬರುವ ಮಕ್ಕಳಿಗೆ ಸಿಹಿ ಹಂಚಿ, ಕಲಿಯುವ ಆಸಕ್ತಿಯುಳ್ಳವರಿಗೆ ಕಲಿಸುತ್ತಾ, ಗೊಂಬೆಗಳ ಮೂಲಕ ಹಲವು ಕಥೆಗಳನ್ನು ತಿಳಿಸುತ್ತಿದ್ದಾರೆ.
ದೇವಾನು ದೇವತೆಗಳು, ಪದ್ಮಾವತಿ ಪರಿಣಯ, ಗೋಕುಲದ ಶ್ರೀಕೃಷ್ಣ, ದಶಾವತಾರ, ಕಾಳಿಂಗಮರ್ಧನ, ಕೈಲಾಸ, ಅನಂತಪದ್ಮನಾಭ, ವ್ಯಾಪಾರಕ್ಕೆ ಕುಳಿತ ಶೆಟ್ಟಿ ದಂಪತಿಗಳು, ಅವರ ವ್ಯಾಪಾರೀ ವಸ್ತುಗಳು, ಆಟಿಕೆಗಳು, ಪಕ್ಷಿಗಳು, ಹಣ್ಣುಗಳು, ವಿವಾಹ ಮಂಟಪ, ಪಟ್ಟದ ಗೊಂಬೆಗಳು, ಸಾಯಿಬಾಬಾ, ಚಾಮುಂಡೇಶ್ವರಿ, ರಾಘವೇಂದ್ರಸ್ವಾಮಿ, ಯೋಧರು, ಗೋಪೂಜೆ ಮುಂತಾದ ಗೊಂಬೆಗಳು ಸಾಲುಸಾಲಾಗಿ ಜೋಡಿಸಿಡಲಾಗಿದೆ. ಪೈರನ್ನು ಬೆಳೆಸಿ ಹಸುರನ್ನು ಮೂಡಿಸಿ ಕಾಡಿನಲ್ಲಿನ ಪ್ರಾಣಿಗಳು ಇಟ್ಟಿದ್ದಾರೆ.
‘ನಮ್ಮ ಮನೆಯಲ್ಲಿ ಸುಮಾರು 20 ವರ್ಷಗಳಿಗೂ ಹಿಂದಿನಿಂದ ಈ ಗೊಂಬೆ ಹಬ್ಬವನ್ನು ಆಚರಿಸುವುದು ರೂಢಿಯಲ್ಲಿದೆ. ನಾವು ಹೋದೆಡೆಯಲ್ಲೆಲ್ಲಾ ಗೊಂಬೆಗಳನ್ನು ಮತ್ತು ಅವುಗಳನ್ನು ಅಲಂಕರಿಸಲು ಬೇಕಾದ ವಸ್ತುಗಳನ್ನು ಹುಡುಕುತ್ತೇವೆ. ಮನೆಯಲ್ಲಿ ಗೊಂಬೆಗಳನ್ನು ವಸ್ತು ವಿಷಯಕ್ಕೆ ಸಂಬಂಧಿಸಿದಂತೆ ತಯಾರಿಸುತ್ತೇವೆ ಹಾಗೂ ಅಲಂಕರಿಸುತ್ತೇವೆ. ಗೊಂಬೆಗಳನ್ನು ನೋಡಲು ಬರುವ ಮಕ್ಕಳಿಗೆ ಸಿಹಿ ನೀಡಿ ಕಥೆ ಹೇಳುತ್ತೇವೆ. ಮನೆಯ ಹತ್ತಿರದ ಕೆಲ ಮಕ್ಕಳು ಕುಸುರಿ ಕೆಲಸ, ಗೊಂಬೆ ಅಲಂಕಾರ ಹಾಗೂ ಕಸದಿಂದ ರಸ ಎಂಬಂತೆ ಬಿಸಾಡುವ ಪದಾರ್ಥದಿಂದ ಕಲಾಕೃತಿ ಮಾಡುವುದನ್ನು ಕಲಿಸುತ್ತೇವೆ’ ಎಂದು ಲತಾ ಮಂಜುನಾಥ್ ತಿಳಿಸಿದರು.
‘ರಾಮಾಯಣ, ಮಹಾಭಾರತ ಸೇರಿದಂತೆ ಹಲವಾರು ದೇವರ ವಿಗ್ರಹಗಳ ಜೊತೆಗೆ ಹಲವಾರು ಬೊಂಬೆಗಳನ್ನು ಜೋಡಿಸಿ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸುವ ವಿಧಾನವನ್ನು ಹಲವಾರು ವರ್ಷಗಳಿಂದಲೂ ಸಹ ಮಾಡುತ್ತಾ ಬಂದಿದ್ದು, ವರ್ಷಕ್ಕೊಮ್ಮೆ ಬರುವ ನವರಾತ್ರಿ ಹಬ್ಬಕ್ಕೆ ಬೊಂಬೆಗಳನ್ನು ಸಿಂಗರಿಸಲಾಗುತ್ತದೆ. ಈಬಾರಿ ಪಾಂಡುರಂಗನ ವಿಗ್ರಹ ಹೊಸದಾಗಿ ಸೇರ್ಪಡೆಯಾಗಿದೆ’ ಎಂದು ರೂಪಾ ಪಾರ್ಥಸಾರಥಿ ತಿಳಿಸಿದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!