ತಾಲ್ಲೂಕಿನ ಭಕ್ತರಹಳ್ಳಿ ಬಿ.ಎಂ.ವಿ.ಎಜುಕೇಷನ್ ಟ್ರಸ್ಟ್‌ನ ಶಾಲಾ ಆವರಣದಲ್ಲಿ ಬುಧವಾರ ಕನ್ಸುಲೇಟ್ ಜನರಲ್ ಆಫ್ ಜರ್ಮನಿಯವರ ಆರ್ಥಿಕ ನೆರವಿನಿಂದ ನಿರ್ಮಾಣವಾಗಿರುವ ಗ್ರಂಥಾಲಯ ಮತ್ತು ಪ್ರಯೋಗಾಲಯವನ್ನು ಉದ್ಘಾಟನೆ ಮಾಡಿ ಕನ್ಸುಲ್ ಜನರಲ್ ಆಫ್ ಜರ್ಮನಿ, ಮಾರ್ಗಿಟ್ ಹೆಲ್‌ವಿಗ್ ಬೊಟ್ಟೆ ಮಾತನಾಡಿದರು.
ಪುಸ್ತಕ ಓದುವುದು ಮತ್ತು ವೈಜ್ಞಾನಿಕ ಪ್ರಯೋಗಗಳ ಮೂಲಕ ಮಕ್ಕಳ ಮನೋವಿಕಾಸವಾಗಬೇಕೆಂಬುದು ನಮ್ಮ ಆಶಯವಾಗಿದೆ ಎಂದು ಅವರು ತಿಳಿಸಿದರು.
ಭಾರತದ ಮೇಧಾವಿ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರಿನಿಂದ ಗ್ರಾಮೀಣ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಮತ್ತು ಜೀವನಾದರ್ಶಗಳನ್ನು ಕಲಿಸುವ ಈ ಶಾಲೆಯ ಮಕ್ಕಳ ಶಿಸ್ತನ್ನು ಕಂಡು ಖುಷಿಯಾಯಿತು. ಈ ಹಳ್ಳಿಗೂ ಜರ್ಮನಿಗೂ ನಂಟಿದೆ ಎಂಬುದು ತಿಳಿದು ಸಂತಸವಾಯಿತು. ತೋಟಗಾರಿಕಾ ತಜ್ಞ ಜರ್ಮನ್ ದೇಶದ ಕೃಂಬೀಗಲ್ ಇಲ್ಲಿ ಸುಂದರವಾದ ಕಂಬಗಳನ್ನು ನಿರ್ಮಿಸಿರುವುದು ತಿಳಿಯಿತು. ಗ್ರಂಥಾಲಯ ಮತ್ತು ಪ್ರಯೋಗಾಲಯದ ಮೂಲಕ ಈ ನಂಟನ್ನು ಮುಂದುವರೆಸಿದ್ದೇವೆ ಎಂದರು.
ಹಳ್ಳಿಯಲ್ಲಿ ಓದಿ ನಗರವನ್ನು ಸೇರುವವರು ಮತ್ತೆ ಹಳ್ಳಿಗೆ ಹಿಂದಿರುಗಿ ತಾವು ಓದಿದ ಶಾಲೆಗೆ ನೆರವು ನೀಡುತ್ತಿರುವುದನ್ನು ಕಂಡು ಸಂತಸವಾಗುತ್ತಿದೆ. ಮಕ್ಕಳಲ್ಲಿ ಈ ರೀತಿಯ ಮೌಲ್ಯಗಳನ್ನು ಬಿತ್ತುವುದೇ ನಿಜವಾದ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮುಂದುವರೆದಂತೆಲ್ಲಾ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಆದರೂ ಪುಸ್ತಕ ಓದಿಗೆ ಸರಿಸಾಟಿಯಿಲ್ಲ. ಗ್ರಂಥಾಲಯ ಮತ್ತು ವಿಜ್ಞಾನದ ಪ್ರಯೋಗಾಲಯಗಳ ಸದ್ಭಳಕೆಯಾಗಲಿ ಎಂದು ನುಡಿದರು.
ಬರೋಡದ ರಾಜಮನೆತನದ ರಾಯಲ್ ಹೆರಿಟೇಜ್ ಗ್ರೀನ್ ಮಿಷನ್ ಮುಖ್ಯಸ್ಥ ಜೀತೇಂದ್ರಸಿಂಗ್ ಜಿ ಗಾಯಕ್‌ವಾಡ್ ಮಾತನಾಡಿ, ಹಿಂದಿನಿಂದಲೂ ಬರೋಡ ರಾಜ ಮನೆತನ ಶಾಲೆಗಳ ಸ್ಥಾಪನೆ, ಗ್ರಂಥಾಲಯಗಳ ಸ್ಥಾಪನೆ ಮತ್ತು ಗಿಡಬೆಳೆಸಲು ಉತ್ತೇಜನ ನೀಡುತ್ತಾ ಬಂದಿದೆ. ಬರೋಡ ಸಂಸ್ಥಾನಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ. ಬರೋಡದಲ್ಲಿ ಮೈಸೂರು ಜಯಚಾಮರಾಜೇಂದ್ರ ಮಹಾರಾಜರ ಹೆಸರಿನ ರಸ್ತೆಯಿದ್ದರೆ, ಮೈಸೂರಿನಲ್ಲಿ ಸಯ್ಯಾಜಿರಾವ್ ಗಾಯಕವಾಡ್ ಮಹಾರಾಜರ ಹೆಸರಿನ ರಸ್ತೆಯಿದೆ. ಈ ಬಾಂಧವ್ಯ ಭಕ್ತರಹಳ್ಳಿಗೂ ವಿಸ್ತರಿಸಿದೆ ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿನ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ಮಾಡುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿದೆ. ಬಿ.ಎಂ.ವಿ. ಶಾಲೆಯನ್ನು ಹಿರಿಯರು ಸಾಮಾಜಿಕ ಕಳಕಳಿಯಿಂದ ಪ್ರಾರಂಭಿಸಿದ್ದನ್ನು ಅವರ ಮುಂದಿನ ತಲೆಮಾರು ಅದೇ ಬದ್ಧತೆಯಿಂದ ಬೆಳೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬರೋಡದ ರಾಜಮನೆತನದ ಜೀತೇಂದ್ರಸಿಂಗ್ ಜಿ ಗಾಯಕ್‌ವಾಡ್ ರವಿವರ್ಮ ಚಿತ್ರಿಸಿರುವ ಜಯಚಾಮರಾಜೇಂದ್ರ ಮಹಾರಾಜರ ಮತ್ತು ಸಯ್ಯಾಜಿರಾವ್ ಗಾಯಕವಾಡ್ ಮಹಾರಾಜರ ಚಿತ್ರವನ್ನು ಮತ್ತು ಉತ್ತಮ ಅಂಕ ಪಡೆದ ಮಕ್ಕಳಿಗೆ ಪ್ರಶಸ್ತಿ ನೀಡಲು ಸಹಾಯಧನ ಹಾಗೂ ಬರೋಡ ಸಂಸ್ಥಾನದ ಕುರಿತ ಪುಸ್ತಕವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರೆಲ್ಲಾ ಶಾಲೆಯ ಆವರಣದಲ್ಲಿ ಹಣ್ಣಿನ ಗಿಡಗಳನ್ನು ನೆಟ್ಟರು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರವನ್ನು ಅನಾವರಣಗೊಳಿಸಲಾಯಿತು. ನಾರಾಯಣ ಮಾನೆ ಅವರು ಶಾಲೆಗೆ ಹತ್ತು ಕಂಪ್ಯೂಟರ್‌ಗಳನ್ನು ನೀಡಿದರು. ಶಾಲೆಯ ವಿದ್ಯಾರ್ಥಿಗಳ ರೋಟರಾಕ್ಟ್ ಕ್ಲಬ್‌ನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನಡೆಯಿತು.
ಬಿ.ಎಂ.ವಿ.ಸಂಸ್ಥೆಯ ಅಧ್ಯಕ್ಷ ಬಿ.ವಿ.ಮುನೇಗೌಡ, ಕಾರ್ಯದರ್ಶಿ ಎಲ್. ಕಾಳಪ್ಪ, ರಾಣೀ ಸಾಹೇಬ್ ದುರ್ಗಾರಾಜೇ ಗಾಯಕ್ ವಾಡ್, ರೋಟರಿ ಬೆಂಗಳೂರು ಸೆಂಟೀನಿಯಲ್ ಅಧ್ಯಕ್ಷೆ ನಂದಿನಿ ಜಗನ್ನಾಥ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಎಚ್.ಪಿ.ಮೋಹನ್, ಸ್ಟೈಲ್ ಫೌಂಡೇಷನ್‌ನ ಸಿ.ಎಂ.ಮುನೇಗೌಡ, ಬಿ.ಎಂ.ವಿ.ಸಂಸ್ಥೆಯ ಟ್ರಸ್ಟಿಗಳಾದ ಎಸ್.ನಾರಾಯಣಸ್ವಾಮಿ, ವೆಂಕಟಮೂರ್ತಿ, ಪುಟ್ಟಮೂರ್ತಿ, ನಂಜುಡಾರಾಧ್ಯ, ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬೈರೇಗೌಡ, ಸತೀಶ್ ಮೋಕ್ಷಗುಂಡಂ, ಡಾ.ಹಿತ್ತಲಮನಿ, ಜಯರಾಮೇಗೌಡ, ನಾರಾಯಣ್‌ಮಾನೆ ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







