ತಾಲ್ಲೂಕಿನಾದ್ಯಂತ ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಸಿದ್ದಾರ್ಥ ನಗರದ ಹರಿಜನ ಕಾಲೋನಿಯಲ್ಲಿ ಸುಮಾರು ಹದಿನೈದು ಮನೆಗಳು ಬಿದ್ದುಹೋಗಿದ್ದವು. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲವಾದರೂ ಮನೆ ಕಳೆದುಕೊಂಡವರು ಯಾವುದೇ ಪರ್ಯಾಯ ವ್ಯವಸ್ಥೆಯಿಲ್ಲದೇ ಪ್ಲಾಸ್ಟಿಕ್ ಶೀಟ್ಗಳನ್ನು ಮನೆಯ ಮೇಲ್ಚಾವಣೆಗೆ ಅಳವಡಿಸಿ ಜೀವನ ನಡೆಸುವಂತಾಗಿದೆ.
ಸ್ಥಳಕ್ಕೆ ನವೆಂಬರ್ ೧೯ ರಂದು ಜಿಲ್ಲಾಧಿಕಾರಿ ಸೇರಿದಂತೆ ತಹಸೀಲ್ದಾರ್ ಭೇಟಿ ನೀಡಿ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿಯಲ್ಲಿ ಪರಿಹಾರ ನೀಡುವ ಭರವಸೆ ನೀಡಿದ್ದರಾದರೂ ಈವರೆಗೂ ಪರಿಹಾರದ ಹಣ ಫಲಾನುಭವಿಗಳ ಕೈ ಸೇರಿಲ್ಲವಾದ್ದರಿಂದ ಕಳೆದ ೨೦ ದಿನಗಳಿಂದಲೂ ಅದೇ ಬಿದ್ದು ಹೋಗಿರುವ ಮನೆಗಳಿಗೆ ಪೇಪರ್ ಅಳವಡಿಸಿಕೊಂಡು ಜೀವಿಸುವಂತಾಗಿದೆ.
ನಗರದ ಸಿದ್ದಾರ್ಥನಗರದ ೮ ಮತ್ತು ೯ ನೇ ವಾರ್ಡುಗಳಲ್ಲಿ ವಾಸಮಾಡುತ್ತಿರುವವರು ಶೇ. ೯೦ ರಷ್ಟು ಮಂದಿ ಪರಿಶಿಷ್ಟಜಾತಿಗೆ ಸೇರಿದ ರೇಷ್ಮೆ ಕೂಲಿ ಕೆಲಸ ಮಾಡುವವರಾಗಿದ್ದಾರೆ. ಈವರೆಗೂ ಇಲ್ಲಿನ ಜನರಿಗೆ ವಾಸ ಮಾಡಲು ಯೋಗ್ಯವಾದ ಮನೆಗಳಿಲ್ಲ, ರಸ್ತೆಯಿಲ್ಲ, ಉತ್ತಮ ಶಾಲೆಯಿಲ್ಲ ಕೇವಲ ಚುನಾವಣೆ ಸಮಯದಲ್ಲಿ ಓಟಿಗಾಗಿ ಬಳಸಿಕೊಳ್ಳುವ ಇವರಿಗೆ ಮೂಲಭೂತ ಸವಲತ್ತು ಕಲ್ಪಿಸುವಲ್ಲಿ ಹಿಂದಿನ ಹಾಗೂ ಹಾಲಿ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿರುವುದೇ ಕಾರಣ ಎಂದು ದೂರುತ್ತಾರೆ ಇಲ್ಲಿನ ನಾಗರೀಕರು.
ಕೂಡಲೇ ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಲು ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಶಾಸಕರ ಮನೆ ಮುಂದೆ ಧರಣಿ ಹಮ್ಮಿಕೊಳ್ಳುವುದಾಗಿ ಜನರು ಎಚ್ಚರಿಸಿದ್ದಾರೆ.
‘ಮನೆ ಬಿದ್ದು ೨೦ ದಿನಗಳಾಯಿತು ಈವರೆಗೂ ಸರ್ಕಾರದಿಂದ ಯಾವುದೇ ಪರಿಹಾರ ಬಂದಿಲ್ಲ. ಕೂಲಿ ನಾಲಿ ಮಾಡುವ ನಾವುಗಳು ಬೇರೆ ಮನೆ ಬಾಡಿಗೆಗೆ ಪಡೆಯಬೇಕು ಎಂದರೆ ಕಷ್ಟ. ಆರ್ಥಿಕವಾಗಿ ಹಿಂದುಳಿದಿರುವ ನಮ್ಮಂತಹವರು ಸಾವಿರಾರು ರೂ ಬಾಡಿಗೆ ನೀಡಲು ಆಗಲ್ಲ. ಹಾಗಾಗಿ ಬಿದ್ದು ಹೋಗಿರುವ ಮನೆಗೆ ಪ್ಲಾಸ್ಟಿಕ್ ಪೇಪರ್ ಅಳವಡಿಸಿಕೊಂಡು ಜೀವಿಸುತ್ತಿದ್ದೇವೆ’ ಎಂದು ಮನೆ ಕಳೆದುಕೊಂಡ ಆನಂದ್ ತಿಳಿಸಿದ್ದಾರೆ.
- Advertisement -
- Advertisement -
- Advertisement -
- Advertisement -