ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಉತ್ಕೃಷ್ಟ ಜನಪದ ಸಾಹಿತ್ಯ ಹಾಗೂ ಕಲಾವಿದರಿದ್ದಾರೆ. ಆದರೆ ಬಹುತೇಕ ಜನಪದ ಸಾಹಿತ್ಯ ತೆಲುಗು ಭಾಷೆಯಲ್ಲಿರುವುದರಿಂದ ಇತ್ತ ಕನ್ನಡಿಗರಿಂದ, ಬೇರೆ ರಾಜ್ಯದವರೆಂದು ಅತ್ತ ಆಂಧ್ರದವರಿಂದ ಅವಜ್ಞೆಗೆ ಒಳಗಾಗಿರುವುದು ದುರಂತದ ಸಂಗತಿ ಎಂದು ಜನಪದ ತಜ್ಞ ಡಾ.ಜಿ.ಶ್ರೀನಿವಾಸಯ್ಯ ಅಭಿಪ್ರಾಯಪಟ್ಟರು.
ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಇವರ ಸಹಯೋಗದಲ್ಲಿ ನಡೆದ ‘ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ’ ಕಾರ್ಯಕ್ರಮದಲ್ಲಿ ಅವರು ತಮ್ಮ ಜನಪದ ಸಂಶೋಧನಾ ಲೇಖನಗಳ ಸಂಗ್ರಹ ಪುಸ್ತಕ ‘ತಣಿಗೆ’ಯನ್ನು ಓದುಗರರಿಗೆ ಪರಿಚಯಿಸಿ ಮಾತನಾಡಿದರು.
ನಮ್ಮದು ಪ್ರಮುಖವಾಗಿ ಕನ್ನಡ ತೆಲುಗು ಭಾಷೆಗಳನ್ನು ಆಡುವ ಜನರ ನೆಲ. ಹಾಗಾಗಿ ಈ ಎರಡು ಭಾಷೆಗಳ ಜನಪದ ಸಾಹಿತ್ಯ, ಕಲೆಗಳನ್ನು ಸಂಗ್ರಹಿದಾಗಲೆ ಇದಕ್ಕೆ ಸಮಗ್ರತೆ ಲಭಿಸುವುದು. ಈ ಕಾರಣದಿಂದ ಈ ಕೃತಿಯಲ್ಲಿನ ಲೇಖನಗಳಲ್ಲಿ ಕನ್ನಡ ತೆಲುಗು ನಂಬಿಕೆ ಆಚರಣೆಗಳು ಒಳಗೊಂಡಿವೆ.
ಜಿಲ್ಲೆಯಾದ್ಯಂತ ಕ್ಷೇತ್ರ ಕಾರ್ಯವನ್ನು ನಡೆಸಿ, ಜನಪದರನ್ನು ಸಂದರ್ಶಿಸಿ, ಮೌಖಿಕ ಹಾಡುಗಳನ್ನು ಸಂಗ್ರಹಿಸಿದ್ದ ಹತ್ತು ವರ್ಷಗಳ ಜನಪದ ಅಧ್ಯಯನವನ್ನು ಸರಳೀಕರಿಸಿ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ‘ತಣಿಗೆ’ ಕೃತಿಯನ್ನು ಬರೆದಿದ್ದೇನೆ. ಜಾನಪದ ಬಳಕೆಗೊಂಡಷ್ಟು ಹೊಳಪುಗೊಳ್ಳುತ್ತದೆ ಎಂದು ಹೇಳಿದರು.
ಜಾನಪದವನ್ನು ಕಟ್ಟಿದವರು ಬಹುಮುಖಿ ಪ್ರತಿಭಾವಂತರು. ಇವರ ಪರಿಸರ ಜ್ಞಾನ ಅಪಾರವಾದುದು. ಜನಪದರ ವೈದ್ಯ ಪ್ರಜ್ಞೆ ಗಾಢವಾದುದು. ಜಾನಪದ ವೈದ್ಯ ಪದ್ಧತಿಯೇ ಒಂದು ಶಾಸ್ತ್ರ. ಪರಿಸರದಲ್ಲೇ ಮದ್ದಿನ ಗಿಡಮೂಲಿಕೆಗಳನ್ನು ಕಂಡು ಬಳಸಿದರು. ಜನ ಜಾನುವಾರುಗಳನ್ನು ಉಳಿಸಿಕೊಂಡ ಅವರ ಜ್ಞಾನ ವಿಶೇಷವಾದದ್ದು.
ಛಲವಾದಿ ಸಂಸ್ಕೃತಿ, ವಿವಾಹ ಸಂಪ್ರದಾಯಗಳು, ಜನಪದ ವೈದ್ಯಕೀಯ ಹಾಗೂ ಆಚರಣೆಗಳು, ಸೊರಗುತ್ತಿರುವ ಜಾನಪದ ಕಲೆಗಳು, ಬಾಣಂತನದ ಆಚಾರ ವಿಚಾರಗಳು, ಬಂಗಾರ ನೆಲದ ಸಿಂಗಾರ ಸಂಸ್ಕೃತಿ, ಕೋನಂಗಿ ಕಲೆ, ಕೊಂಡಮಾಮರ ಸಾಂಸ್ಕೃತಿಕ ಬದುಕು, ಬಯಲು ಸೀಮೆಯ ಬೇಟೆ ಸಂಸ್ಕೃತಿ ಕುರಿತಂತೆ ಈ ಕೃತಿಯಲ್ಲಿ ಲೇಖನಗಳಿದ್ದು, ಜಿಲ್ಲೆಯ ಜನಪದ ಸಂಸ್ಕೃತಿಯ ಅಧ್ಯಯನ ನೋಟವಾಗಿದೆ ಎಂದು ವಿವರಿಸಿದರು.
ಗ್ರಂಥಾಲಯ ಸಹಾಯಕ ಶ್ರೀನಿವಾಸಯ್ಯ ಮಾತನಾಡಿ, ಗ್ರಂಥಾಲಯದಲ್ಲಿ ಪುಸ್ತಕವನ್ನು ಪರಿಚಯಿಸುವ ಕಾರ್ಯಕ್ರಮದ ಮೂಲಕ ಓದುಗರನ್ನು ಹೆಚ್ಚಿಸುವ ಪ್ರಯತ್ನ ನಡೆದಿದೆ. ಗ್ರಂಥಾಲಯದಲ್ಲಿ ಕೇವಲ ಒಂದು ನೂರು ರೂ ನೀಡಿ ಸದಸ್ಯರಾಗಿ, ಮೂರು ಪುಸ್ತಕಗಳನ್ನು ತೆಗೆದುಕೊಂಡು ಹೋಗಿ ಓದಿ. ಒಳ್ಳೋಳ್ಳೆ ಪುಸ್ತಕಗಳು ಗ್ರಂಥಾಲಯದಲ್ಲಿವೆ. ಅವುಗಳನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಿ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಲೇಖಕ ಡಾ.ಜಿ.ಶ್ರೀನಿವಾಸಯ್ಯ ಅವರ ಕೃತಿ ‘ತಣಿಗೆ’ಯನ್ನು ಕೆಲ ಓದುಗರು ಲೇಖಕರಿಂದ ಹಸ್ತಾಕ್ಷರ ಪಡೆದು ಕೊಂಡಿದ್ದು ವಿಶೇಷವಾಗಿತ್ತು.
ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ಸತೀಶ್, ಚೌಡಸಂದ್ರ ಪಿ.ಈ.ಕರಗಪ್ಪ, ಅಜಿತ್ ಕೌಂಡಿನ್ಯ, ಗ್ರಂಥಾಲಯ ಸಹಾಯಕಿ ಭಾಂಧವ್ಯ, ಮಕ್ಸೂದ್, ವಿ.ಕೃಷ್ಣ, ನಯಾಜ್, ವೃಷಬೇಂದ್ರಪ್ಪ, ವಿ.ವೆಂಕಟರಮಣ, ವೀರಭದ್ರ, ಹರೀಶ್, ಹರ್ಷಿತಾ, ಮುನಿರಾಜು ಹಾಜರಿದ್ದರು.
- Advertisement -
- Advertisement -
- Advertisement -
- Advertisement -