27.1 C
Sidlaghatta
Monday, July 14, 2025

ಜೆಡಿಎಸ್ ಪಕ್ಷ ಮತ್ತೆ ಸೇರುವ ಪ್ರಮೇಯವೇ ಇಲ್ಲ – ಮಾಜಿ ಶಾಸಕ ಎಂ.ರಾಜಣ್ಣ

- Advertisement -
- Advertisement -

ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಘೋಷ್ಠಿ ನಡೆಸಿ ಮಾಜಿ ಶಾಸಕ ಎಂ.ರಾಜಣ್ಣ ಮಾತನಾಡಿದರು.
ಪರಿಶಿಷ್ಠ ಜಾತಿ, ಪಂಗಡ ಸೇರಿದಂತೆ ಬಿಸಿಎಂ ನಿಗಮಗಳಲ್ಲಿ ಇತ್ತೀಚೆಗೆ ಮಧ್ಯವರ್ತಿಗಳ ಹಾವಳಿ ಹೆಚ್ಚಿದ್ದು ಅರ್ಹ ಫಲಾನುಭವಿಗಳಿಗೆ ಯಾವುದೇ ಯೋಜನೆಯ ಸವಲತ್ತು ಸಿಗುತ್ತಿಲ್ಲ. ತಮ್ಮ ಅಧಿಕಾರಾವಧಿಯ 2016-17, 2017-18 ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಆಯ್ಕೆ ಮಾಡಿದ ಫಲಾನುಭವಿಗಳ ಜಮೀನಿನಲ್ಲಿಯೇ ಕೊಳವೆ ಬಾವಿ ಕೊರೆಸಬೇಕು ಎಂದು ಅವರು ಹೇಳಿದರು.
ತಮ್ಮ ಅಧಿಕಾರಾವಧಿಯಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡಿ ಅನುಮೋದನೆ ಸಹ ಪಡೆಯಲಾಗಿತ್ತಾದರೂ ಗುತ್ತಿಗೆದಾರರು ಕೋರ್ಟ್ ಮೊರೆ ಹೋಗಿದ್ದರಿಂದ ಕೊಳವೆಬಾವಿ ಕೊರೆಸುವ ಪ್ರಕ್ರಿಯೆಗೆ ತಡೆ ಉಂಟಾಗಿತ್ತು. ಇದೀಗ ಗುತ್ತಿಗೆದಾರರ ವ್ಯಾಜ್ಯ ಕೋರ್ಟ್‌ನಲ್ಲಿ ಬಗೆಹರಿದಿದ್ದು ಇದೀಗ ಕೊಳವೆಬಾವಿ ಕೊರೆಸಲು ಮುಂದಾಗಿರುವುದು ಸಂಸತದ ವಿಷಯವಾಗಿದೆ. ಆದರೆ ಹಿಂದಿನ ಪಟ್ಟಿಯಲ್ಲಿರುವ ಫಲಾನುಭವಿಗಳ ಹೆಸರನ್ನು ತೆಗೆದು ಬೇರೊಬ್ಬರನ್ನು ಸೇರಿಸುತ್ತಿರುವ ಬಗ್ಗೆ ಅನುಮಾನವಿದ್ದು ಈ ಹಿಂದೆ ನಮ್ಮ ಅವಧಿಯಲ್ಲಿ ಸಿದ್ದ ಪಡಿಸಲಾಗಿದ್ದ ಫಲಾನುಭವಿಗಳ ಜಮೀನುಗಳಲ್ಲಿಯೇ ಕೊಳವೆ ಬಾವಿ ಕೊರೆಸಬೇಕು ಎಂದು ಒತ್ತಾಯಿಸಿದರು.
ಮುಂದಿನ ರಾಜಕೀಯ ನಡೆ :
ರಾಜ್ಯ ಹಾಗೂ ಕ್ಷೇತ್ರದ ರಾಜಕೀಯ ವಿದ್ಯಾಮಾನಗಳನ್ನು ಕಂಡು ಕಳೆದ ಒಂದೂವರೆ ವರ್ಷದಿಂದ ರಾಜಕೀಯವಾಗಿ ತಟಸ್ಥನಾಗಿದ್ದೇನೆ. ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದ ಶಾಸಕನಾಗಿ ಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳು ಮಾಡಿರುವ ತೃಪ್ತಿಯಿದೆ. ಕ್ಷೇತ್ರದ ಯಾವುದೇ ಜನತೆ ನನಗೆ ಮೋಸ ಮಾಡಲಿಲ್ಲ. ಬದಲಿಗೆ ಮೂವತ್ತು ವರ್ಷಗಳು ನಿಷ್ಠೆಯಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದರೂ ಪಕ್ಷದ ವರಿಷ್ಠರು ನನಗೆ ಟಿಕೆಟ್ ತಪ್ಪಿಸುವ ಮೂಲಕ ಮೋಸ ಮಾಡಿದರು. ಅನಾಥನನ್ನಾಗಿ ಮಾಡಿದರು.
ಕಳೆದ ಒಂದೂವರೆ ವರ್ಷದಿಂದ ರಾಜಕೀಯವಾಗಿ ದೂರವುಳಿದಿದ್ದು ನನ್ನ ಅಭಿಮಾನಿಗಳು ಹಾಗೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಮುಂದಿನ ಒಂದು ತಿಂಗಳೊಳಗೆ ಕಾರ್ಯಕರ್ತರ ಸಭೆ ನಡೆಸಿ ಅವರ ತೀರ್ಮಾನದಂತೆ ರಾಜಕೀಯ ನಿಲುವು ಪ್ರಕಟಿಸುತ್ತೇನೆ ಎಂದರು. ಈಗಾಗಲೇ ಜೆಡಿಎಸ್ ನನಗೆ ಮೋಸ ಮಾಡಿರುವುದರಿಂದ ಜೆಡಿಎಸ್ ಪಕ್ಷ ಮತ್ತೆ ಸೇರುವ ಪ್ರಮೇಯವೇ ಇಲ್ಲ. ಬದಲಿಗೆ ಬಿಜೆಪಿ, ಕಾಂಗ್ರೆಸ್ ಅಥವ ಸ್ವತಂತ್ರವಾಗಿ ಹೋರಾಡಲು ನನ್ನ ಅಭಿಮಾನಿಗಳು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆಯೋ ಅದಕ್ಕೆ ನಾನು ಬದ್ದ ಎಂದರು.
ಅಭಿವೃದ್ದಿಗೆ ನನ್ನ ಸಹಕಾರ :
ನನ್ನ ಅಧಿಕಾರಾವಧಿಯಲ್ಲಿ ಕ್ಷೇತ್ರದಲ್ಲಿ ಅಗ್ನಿಶಾಮಕ ದಳ, ಕೆಎಸ್‌ಆರ್‌ಟಿಸಿ ಡಿಪೋ, ಐಟಿಐ ಕಾಲೇಜು ನಿರ್ಮಾಣ ಮಾಡಿದ ತೃಪ್ತಿಯಿದೆ. ಕ್ಷೇತ್ರದಲ್ಲಿ ಪಾಲಿಟೆಕ್ನಿಕ್ ಹಾಗೂ ಕಾರ್ಮಿಕ ವರ್ಗದವರಿಗಾಗಿ ಇಎಸ್‌ಐ ಆಸ್ಪತ್ರೆ ನಿರ್ಮಾಣ ಮಾಡಬೇಕೆನ್ನುವ ಆಸೆ ಹಾಗೆಯೇ ಉಳಿದಿದೆ. ಯಥಾ ರಾಜ ತಥಾ ಪ್ರಜಾ ಎಂಬ ಮಾತಿನಂತೆ ಈಗಿನ ಕ್ಷೇತ್ರದ ಆಡಳಿತ ಮತ್ತು ಭ್ರಷ್ಟಾಚಾರ ಸಾಗಿದೆ. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ. ನನ್ನ ಅವಧಿಯಲ್ಲಿ ನಾನು ಮಾಡಿದ ಕೆಲಸ ಕಾರ್ಯಗಳಿಂದ ಕ್ಷೇತ್ರದಾದ್ಯಂತ ಜನ ನನ್ನ ಮೇಲೆ ತೋರಿಸುವ ಅಭಿಮಾನಕ್ಕೆ ನಾನು ಚಿರಋಣಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಸ್.ಕನಕಪ್ರಸಾದ್, ಲಕ್ಷ್ಮಿನಾರಾಯಣ, ಸೋಮಶೇಖರ್, ಮುರಳಿ, ದ್ಯಾವಪ್ಪ, ಮುನಿರೆಡ್ಡಿ, ದೇವು ಹಾಜರಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!