ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹಾಗೂ ಶಾಶ್ವತ ನೀರಾವರಿ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಬಂದ್ ಆಚರಿಸದೇ ಬೇರೆ ಮಾರ್ಗವಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆಂಜನೇಯರೆಡ್ಡಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಗುರುವಾರ ವಿವಿಧ ಸಂಘಟನೆಗಳೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಶಾಶ್ವತ ನೀರಾವರಿಗಾಗಿ ಅನಿರ್ಧಿಷ್ಟಕಾಲ ಹೋರಾಟವನ್ನು ನಡೆಸುತ್ತಿದ್ದರೂ ಇದುವರೆಗೂ ಸರ್ಕಾರ ಯಾವುದೇ ಸ್ಪಷ್ಟವಾದ ನಿಲುವಿಗೆ ಬರದೆ ಬಯಲು ಸೀಮೆಯ ಜಿಲ್ಲೆಗಳನ್ನು ಕಡೆಗಣಿಸಿದೆ. ಶುದ್ಧ ಜಲವನ್ನು ಕೇಳುವುದು ನಮ್ಮ ಹಕ್ಕು. ಅದಕ್ಕಾಗಿ ಶಾಶ್ವತ ಯೋಜನೆಯನ್ನು ರೂಪಿಸದೇ ಸರ್ಕಾರ ಕೇವಲ ದಿನದೂಡುತ್ತಿದ್ದರೆ ಬಯಲು ಸೀಮೆ ಮರುಭೂಮಿಯಾಗುತ್ತದೆ. ರೈತರು, ಜಾನುವಾರುಗಳು ಈಗಾಗಲೇ ತೊಂದರೆಯನ್ನು ಅನುಭವಿಸುತ್ತಿದ್ದು, ಈ ಆರ್ಥಿಕ ದುಷ್ಪರಿಣಾಮ ಎಲ್ಲಾ ವ್ಯಾಪಾರ ವ್ಯವಹಾರಗಳಿಗೂ ಬಿಸಿ ತಟ್ಟಿದೆ. ಕಾಲಹರಣ ಮಾಡುತ್ತಿರುವ ಸರ್ಕಾರದ ಧೋರಣೆಯನ್ನು ಖಂಡಿಸಿ ಡಿಸೆಂಬರ್ 21 ರ ಸೋಮವಾರದಂದು ಚಿಕ್ಕಬಳ್ಳಾಪುರ ಮತ್ತು ಕೋಲಾರ ಅವಳಿ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಬಂದ್ನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಅಂಗಡಿಮುಂಗಟ್ಟುಗಳು, ಹೋಟೆಲ್, ಸಿನಿಮಾಮಂದಿರಗಳು, ಪೆಟ್ರೋಲ್ ಬಂಕ್, ಶಾಲಾ ಕಾಲೇಜುಗಳನ್ನು, ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಬಂದ್ ಮಾಡುವ ಮೂಲಕ ನೀರಾವರಿ ಹೋರಾಟಕ್ಕೆ ಬೆಂಬಲಿಸಬೇಕೆಂದು ಕೋರಿದರು.
ಬಂದ್ ನಡೆಸಿ ಸರ್ಕಾರವನ್ನು ಒತ್ತಾಯಿಸಲು ವಿವಿಧ ಸಂಘಟನೆಗಳ ಮುಖಂಡರು ಸಹಮತವನ್ನು ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬೈರೇಗೌಡ, ಮಳ್ಳೂರು ಹರೀಶ್, ಯಲುವಳ್ಳಿ ಸೊಣ್ಣೇಗೌಡ, ಸಮಾನ ಮನಸ್ಕರ ಹೋರಾಟ ಸಮಿತಿ ಅಧ್ಯಕ್ಷ ಜೆ.ವಿ.ವೆಂಕಟಸ್ವಾಮಿ, ಮುನಿನಂಜಪ್ಪ, ತಿರುಮಳೇಶ್, ವೆಂಕಟೇಶ್, ವಿವಿಧ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -