ಡಿ.ಸಿ.ಸಿ.ಬ್ಯಾಂಕುಗಳಿಂದ ಪಡೆದಂತಹ ಸಾಲವನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವಲ್ಲಿ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳು ಪ್ರಥಮ ಸ್ಥಾನದಲ್ಲಿವೆ ಎಂದು ಜಿಲ್ಲಾ ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಹೇಳಿದರು.
ತಾಲ್ಲೂಕಿನ ಎ.ಹುಣಿಸೇನಹಳ್ಳಿ ಗ್ರಾಮದಲ್ಲಿ ಶನಿವಾರ ಸ್ವ ಸಹಾಯ ಗುಂಪುಗಳಿಗೆ ಸಾಲ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿನ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಡಿ.ಸಿ.ಸಿ.ಬ್ಯಾಂಕ್ನ ಮೂಲಕ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ವಿತರಣೆ ಮಾಡಲಾಗುತ್ತಿದ್ದು, ಇದರಿಂದ ಬ್ಯಾಂಕುಗಳಿಗೆ ಸಾಲ ನೀಡುವಂತೆ ಅಲೆದಾಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಮೊದಲ ಬಾರಿಗೆ ಸ್ವ-ಸಹಾಯ ಗುಂಪುಗಳಿಗೆ ಸಾಲ ನೀಡಲು ಅವರ ಮನೆ ಬಾಗಿಲಿಗೆ ಬ್ಯಾಂಕ್ ಅಧಿಕಾರಿಗಳು ಬಂದು ಸಾಲ ನೀಡುವ ವಿನೂತನ ಪ್ರಯೋಗವನ್ನು ಮಾಡಲಾಗುತ್ತಿದೆ, ರೈತರು, ಸ್ವ-ಸಹಾಯ ಗುಂಪುಗಳು, ಬ್ಯಾಂಕ್ಗೆ ಬಂದು ಖಾತೆ ತೆರೆದು ಸಾಲ ಪಡೆಯಬಹುದು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ರಾಷ್ಟ್ರೀಕೃತ ಬ್ಯಾಂಕುಗಳಿಂದಾಗಲಿ ಅಥವಾ ಸಹಕಾರಿ ಬ್ಯಾಂಕುಗಳಿಂದಾಗಲಿ ಪಡೆದುಕೊಂಡಂತಹ ಸಾಲಗಳನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರಿ ಕ್ಷೇತ್ರವನ್ನು ಉಳಿಸಬೇಕು ಎಂದರು.
ನಗರದ ಎಸ್.ಎಫ್.ಸಿ.ಸೊಸೈಟಿಯಿಂದ ತಿಪ್ಪೇನಹಳ್ಳಿಯ ಶ್ರೀ ಮಂಜುನಾಥ ಸ್ವ ಸಹಾಯ ಸಂಘಕ್ಕೆ ೩.೭೫ ಲಕ್ಷ, ಮುನೇಶ್ವರ ಸ್ವ ಸಹಾಯ ಸಂಘಕ್ಕೆ ೩.೭೫ ಲಕ್ಷ ಅಬ್ಲೂಡು ಗ್ರಾಮದ ಕರಗದಮ್ಮ ಸ್ವ ಸಹಾಯ ಸಂಘಕ್ಕೆ ೩ ಲಕ್ಷರೂ ಸಾಲ ವಿತರಣೆ ಮಾಡಲಾಯಿತು.
ಡಿ.ಸಿ.ಸಿ ಬ್ಯಾಂಕ್ ವತಿಯಿಂದ ದೇವರ ಮಳ್ಳೂರು ಗ್ರಾಮದ ಭವಾನಿ ಸ್ವಸಹಾಯ ಸಂಘಕ್ಕೆ ೧.೫ ಲಕ್ಷ, ಎ.ಹುಣಿಸೇನಹಳ್ಳಿ ಗ್ರಾಮದ ಕೃತಿಕ ಸ್ವಸಹಾಯ ಸಂಘಕ್ಕೆ ೩ ಲಕ್ಷ, ಶಿಡ್ಲಘಟ್ಟದ ಮಲ್ಲಿಗೆ ಸ್ವ ಸಹಾಯ ಸಂಘಕ್ಕೆ ೪ ಲಕ್ಷ, ಅಮ್ಮಾಜಾನ್ ಸ್ವಸಹಾಯ ಸಂಘಕ್ಕೆ ೪ ಲಕ್ಷ, ಕುತ್ತಾಂಡ ಹಳ್ಳಿ ಶ್ರೀ ಲಕ್ಷೀ ಸ್ವಸಹಾಯ ಸಂಘಕ್ಕೆ ೯೦ ಸಾವಿರ ರೂ ಸಾಲ ವಿತರಣೆ ಮಾಡಲಾಯಿತು.
ಕೋಚಿಮುಲ್ ನಿರ್ದೇಶಕ ಬಂಕ್ ಮುನಿಯಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೆಶಕರಾದ ಪಿ.ಶಿವಾರೆಡ್ಡಿ, ಪಿ.ವಿ.ನಾಗರಾಜ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -