ಎಲ್ಲಿಯ ತನಕ ನಾವು ಕನ್ನಡವನ್ನು ಉಪಯೋಗಿಸುತ್ತೇವೊ, ಅಲ್ಲಿಯ ತನಕ ಉಳಿಯುತ್ತದೆ. ತಂದೆ ತಾಯಿ ಗುರು ಹಿರಿಯರಂತೆ ಕನ್ನಡ ಭಾಷೆಯನ್ನು ಪ್ರೀತಿಸಬೇಕು ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಾಡ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ೬೦ ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರ್ನಾಟಕದ ಗತಕಾಲದ ವೈಭವವನ್ನು ಸ್ಮರಿಸುವುದರೊಂದಿಗೆ ನಮ್ಮ ಮಾತೃ ಭಾಷೆಯ ಅಭಿವೃದ್ಧಿಗಾಗಿ ಎಲ್ಲರೂ ಶ್ರಮಿಸಬೇಕು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಅನೇಕ ಮಂದಿ ಸಾಧಕರನ್ನು ನೀಡಿರುವಂತಹ ನಾಡಿನಲ್ಲಿ ಕನ್ನಡವನ್ನು ನಮ್ಮ ರಾಜ್ಯದಲ್ಲಿ ಉಳಿಸಿಕೊಳ್ಳಲು ಹೋರಾಟದ ಹಾದಿ ಹಿಡಿದಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಮಹಮ್ಮದ್ಖಾಸಿಂ ಮಾತನಾಡಿ, ವರ್ಷಕ್ಕೊಮ್ಮೆ ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಮಂತ್ರ ಜಪಿಸುವ ನಾವುಗಳು ನಮ್ಮ ಮಕ್ಕಳನ್ನು ಕನ್ನಡ ಭಾಷೆಯಿಂದ ದೂರವಿಡುವುದಷ್ಟೇ ಅಲ್ಲದೇ ಇಂಗ್ಲಿಷ್ ವ್ಯಾಮೋಹ ಬೆಳೆಸಿಕೊಂಡಿದ್ದೇವೆ. ನಮ್ಮ ನುಡಿಗಟ್ಟಿನಲ್ಲಿರುವ ಭಾವನಾತ್ಮಕ ಸಂಬಂಧವನ್ನು ಮಕ್ಕಳಿಂದ ದೂರಮಾಡುತ್ತಿದ್ದೇವೆ. ಕನ್ನಡ ಹೃದಯದ ಭಾಷೆಯಾಗಬೇಕು. ಹಲವಾರು ಭಾಷೆಗಳನ್ನು ಕಲಿಯಬೇಕು. ಅದರಿಂದ ನಮ್ಮ ಜ್ಞಾನ ವಿಸ್ತರಿಸುತ್ತದೆ. ಆದರೆ ಕನ್ನಡ ಮಾತ್ರ ನಮ್ಮ ಉಸಿರಿನಂತಿರಬೇಕು. ಕನ್ನಡದ ಸಾಹಿತ್ಯ ಮಕ್ಕಳಿಗೆ ಪರಿಚಯವಾಗಬೇಕು. ಓದುವ ಹವ್ಯಾಸ ಬೆಳೆಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯಲ್ಲಿ ಶೇ. ೧೦೦ ರಷ್ಟು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಕಸಾಪ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತಹಸೀಲ್ದಾರ್ ಜಿ.ಎ.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರಘುನಾಥರೆಡ್ಡಿ, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಆಂಜಿನಮ್ಮ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ಕಸಾಪ ತಾಲ್ಲೂಕು ಅಧ್ಯಕ್ಷ ಕೃ.ನಾ.ಶ್ರೀನಿವಾಸಮೂರ್ತಿ, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಅನಂತಕೃಷ್ಣ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರವಿಪ್ರಕಾಶ್, ತಾದೂರು ಮಂಜುನಾಥ್, ರೇಷ್ಮೆ ಸಹಾಯಕ ನಿರ್ದೇಶಕ ಚಂದ್ರಪ್ಪ, ಸಿ.ಡಿ.ಪಿ.ಒ ಲಕ್ಷ್ಮೀದೇವಮ್ಮ, ಪಶುಇಲಾಖೆಯ ಸಹಾಯಕ ನಿರ್ದೇಶಕ ಡಾ.ಮುನಿನಾರಾಯಣರೆಡ್ಡಿ, ಡಾ.ಅನಿಲ್ ಕುಮಾರ್ ಮತ್ತಿತರರು ಹಾಜರಿದ್ದರು.
- Advertisement -
- Advertisement -
- Advertisement -
- Advertisement -