ತಪ್ಪಿಹೋಗಿದ್ದ ಪುಟ್ಟ ಬಾಲಕನನ್ನು ಪುರ ಪೊಲೀಸರು ತಾಯಿಯ ಮಡಿಲಿಗೆ ಒಪ್ಪಿಸಿರುವ ಘಟನೆ ಬುಧವಾರ ನಡೆದಿದೆ.
ಬುಧವಾರ ಮಧ್ಯಾಹ್ನ ನಗರದ ಕೆನರಾ ಬ್ಯಾಂಕಿನಲ್ಲಿ ಸುಮಾರು ಮೂರು ವರ್ಷದ ಪುಟ್ಟ ಬಾಲಕ ಒಬ್ಬನೇ ಅಳುತ್ತಾ ಕಂಡುಬಂದಿದ್ದಾನೆ. ಅಲ್ಲಿದ್ದವರನ್ನೆಲ್ಲಾ ವಿಚಾರಿಸಿದ ಬ್ಯಾಂಕಿನ ಸಿಬ್ಬಂದಿ ಈ ಬಾಲಕನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಸಬ್ಇನ್ಸ್ಪೆಕ್ಟರ್ ವಿಜಯ್ ಅವರ ಮಾರ್ಗದರ್ಶನದಂತೆ ಮುಖ್ಯ ಪೇದೆ ಪ್ರಕಾಶ್ ಬಾಲಕನನ್ನು ಬೈಕ್ನಲ್ಲಿ ಕೂರಿಸಿಕೊಂಡು ಊರೆಲ್ಲಾ ಸುತ್ತಾಡಿದ್ದಾರೆ. ಕೆನರಾ ಬ್ಯಾಂಕಿನ ಸಿಸಿ ಕ್ಯಾಮೆರಾದಲ್ಲಿ ಅಂಗನವಾಡಿ ಕಾರ್ಯಕರ್ತೆಯೊಂದಿಗೆ ಮಗು ಬ್ಯಾಂಕಿಗೆ ಬಂದದ್ದನ್ನು ನೋಡಿದ ನಂತರ ಪೊಲೀಸರು ಮಗುವಿನ ತಂದೆ ತಾಯಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
‘ತಪ್ಪಿಹೋಗಿದ್ದ ಮಗು ಜೌಗುಪೇಟೆಯ ಕೃಷ್ಣಮೂರ್ತಿ ಮತ್ತು ಗಾಯತ್ರಿ ಅವರ ಮಗ ಶ್ರೀನಿವಾಸ. ಬೆಳಿಗ್ಗೆಯಿಂದ ಸಂಜೆವರೆಗೂ ಕೆಲಸಕ್ಕೆ ಹೋಗುವ ಈ ದಂಪತಿಗಳು ಮಗುವನ್ನು ಅಂಗನವಾಡಿ ಕಾರ್ಯಕರ್ತೆಯ ಸುಪರ್ದಿಗೆ ಒಪ್ಪಿಸಿರುತ್ತಿದ್ದರು. ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋಗಿದ್ದ ಅಂಗನವಾಡಿ ಕಾರ್ಯಕರ್ತೆ ಮಗುವನ್ನು ಕರೆದೊಯ್ದಿರುವುದು ಮರೆತು ಹಿಂದಿರುಗಿಬಿಟ್ಟಿದ್ದಾಳೆ. ಇಬ್ಬರಿಗೂ ಬುದ್ದಿಹೇಳಿ ಮಗುವನ್ನು ಒಪ್ಪಿಸಿದೆವು’ ಎಂದು ಮುಖ್ಯ ಪೇದೆ ಪ್ರಕಾಶ್ ‘ಪ್ರಜಾವಾಣಿ’ಗೆ ತಿಳಿಸಿದರು.
- Advertisement -
- Advertisement -
- Advertisement -
- Advertisement -