ಶತಮಾನಗಳ ಕಾಲದಿಂದ ಬೆಳೆದು ಬಂದಿರುವ ತಮಟೆವಾದನ ಜಾನಪದ ಕಲೆಯಲ್ಲಿ ಗಂಡು ಕಲೆ ಎನಿಸಿದೆ. ಇದು ಜನಸಮುದಾಯದ ನಡುವೆ ಸಾಮರಸ್ಯವನ್ನು ಉಂಟು ಮಾಡುತ್ತದೆ ಎಂದು ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ ತಿಳಿಸಿದರು.
ನಗರದ ಬಸ್ನಿಲ್ದಾಣದ ಬಳಿಯಿರುವ ರೇಷ್ಮೆ ಇಲಾಖೆಯ ತಾಂತ್ರಿಕ ಕೇಂದ್ರದ ಬಳಿ ಭಾನುವಾರ ಜೀತ ವಿಮುಕ್ತಿ ಕರ್ನಾಟಕ ಸಂಘಟನೆಯು ಆಯೋಜಿಸಿರುವ ‘ಮಿಂಚು 12’ ಎಂಬ ರಾಜ್ಯಮಟ್ಟದ ದಲಿತ ಸಂಗೀತ ಕಲೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ತಮಟೆ ವಾದನ ಬಯಲು ಸೀಮೆಯ ಜನಕ್ಕೆ ಸುಪರಿಚಿತ. ಅಂತಿಮ ಯಾತ್ರೆಯಲ್ಲಿ ಮಸಣದವರೆಗೂ ಜತೆ ನೀಡಿ ವಿದಾಯ ಹೇಳುವುದೂ ತಮಟೆಯ ನಾದದಿಂದಲೇ. ಊರ ಜಾತ್ರೆ, ಮೆರವಣಿಗೆ ಅಥವಾ ಕರಗದಂತಹ ಸಾಂಸ್ಕೃತಿಕ ಉತ್ಸವಗಳಲ್ಲಿ ತಮಟೆ ಸದ್ದು ಕೇಳಿಸಲೇಬೇಕು. ಜಾನಪದ ಸಂಸ್ಕೃತಿಯು ಎಲ್ಲಾ ಜ್ಞಾನ ಶಾಖೆಗಳಿಗೂ ತಾಯಿ ಬೇರಾಗಿದೆ. ಗ್ರಾಮೀಣ ಪ್ರದೇಶದ ಜನಸಮುದಾಯ ಇಂದಿಗೂ ನಮ್ಮ ಪೂರ್ವಿಕರ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದೆ. ಜಾನಪದ ಕಲೆಯ ಬೆಳವಣಿಗೆಗೆ ಸರ್ಕಾರ, ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.
ನೆಲ ಸಂಸ್ಕೃತಿಯ ತಮಟೆ ವಾದನ ಕಲೆಗೆ ನಮ್ಮ ತಾಲ್ಲೂಕಿನ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಹೊಸ ಭಾಷ್ಯವನ್ನು ಬರೆದ ಅದ್ಭುತ ಕಲಾವಿದರು. ದೇಶ ವಿದೇಶಗಳಲ್ಲಿ ತಮಟೆ ನಾದವನ್ನು ಮೊಳಗಿಸಿ ಕನ್ನಡನಾಡಿಗೆ ಕೀರ್ತಿ ತಂದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಪ್ರಶಸ್ತಿಯೂ ಸಂದಿದೆ. ಜನಪದ ಅಕಾಡೆಮಿಯ ಸದಸ್ಯರೂ ಆಗಿದ್ದಾರೆ. ಅವರ ಪ್ರೇರಣೆಯು ಎಲ್ಲಾ ಕಲಾವಿದರಿಗೂ ಸಿಗಲಿ ಎಂದು ಹಾರೈಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಶೇಷ ತಮಟೆ ಪ್ರದರ್ಶನಗಳು ಹಾಗೂ ತಮಟೆ ಕಲಾವಿದರಿಗೆ ಸನ್ಮಾನವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳು, ವಿಶೇಷವಾಗಿ ತಮಿಳುನಾಡು ದಿಂಡಿಗಲ್ ಶಕ್ತಿ ಮಹಿಳಾ ತಂಡದಿಂದ ತಮಟೆ ಹೊಡೆತ ಮತ್ತು ನೃತ್ಯ ಪ್ರದರ್ಶನ ಆಕರ್ಷಕವಾಗಿತ್ತು.
ಜೀವಿಕ ಸಂಚಾಲಕ ಕಿರಣ್ ಕಮಲ್ ಪ್ರಸಾದ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷೆ ಯೋಗೀಶ್ವರಿ ವಿಜಯ, ನಾಡೋಜ ಮುನಿವೆಂಕಟಪ್ಪ, ಈಧರೆ ತಿರುಮಲ ಪ್ರಕಾಶ್, ಜೀವಿಕ ಸಂಸ್ಥೆಯ ರವಿಕುಮಾರ್, ಗೋಪಾಲ, ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
- Advertisement -
- Advertisement -
- Advertisement -
- Advertisement -