ನಗರದಲ್ಲಿ ಆಗಸ್ಟ್ ೧೪ ರ ರಾತ್ರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ “ಯಾರಿಗೆ ಬಂತು, ಎಲ್ಲಿಗೆ ಬಂತು ೪೭ ರ ಸ್ವಾತಂತ್ರ್ಯ” ಎಂದು ಪ್ರಶ್ನಿಸುತ್ತಾ ತಾಲ್ಲೂಕು ಆಡಳಿತದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ತಹಶಿಲ್ದಾರ್ ಅವರ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಕದಸಂಸ ಪದಾಧಿಕಾರಿಗಳ ಸಭೆಯನ್ನು ತಹಶೀಲ್ದಾರ್ ಎಂ.ದಯಾನಂದ್ ಆಯೋಜಿಸಿದ್ದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಮೇಲೂರು ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಭವನಕ್ಕೆ ನಗರದಲ್ಲಿ ನಾಲ್ಕೈದು ಸ್ಥಳಗಳನ್ನು ಸೂಚಿಸಿದ್ದೇವೆ. ಯಾವುದಾದರೂ ಒಂದನ್ನು ತಾಲ್ಲೂಕು ಆಡಳಿತ ಆಯ್ಕೆ ಮಾಡಿ ಅಂಬೇಡ್ಕರ್ ಭವನವನ್ನು ನಿರ್ಮಿಸಬೇಕು. ನಗರದಿಂದ ದೂರ ಎಲ್ಲೋ ಮೂರ್ನಾಕು ಕಿ.ಮೀ ದೂರದಲ್ಲಿ ಅಂಬೇಡ್ಕರ್ ನಿರ್ಮಾಣ ಮಾಡುವ ಅವಶ್ಯಕತೆ ಏನಿದೆ. ಅದು ಸಾರ್ವಜನಿಕರ ಆಸ್ಥಿ. ನಗರದ ಮಧ್ಯೆ ಇದ್ದಾಗ ಮಾತ್ರ ಎಲ್ಲರೂ ಅದನ್ನು ಬಳಕೆ ಮಾಡಿಕೊಳ್ಳಲು, ಕಾರ್ಯಕ್ರಮಗಳನ್ನು ಮಾಡಲು, ನೋಡಲು ಸಾಧ್ಯ ಎಂದು ವಿವರಿಸಿದರು.
ತಹಶೀಲ್ದಾರ್ ಎಂ.ದಯಾನಂದ್ ಮಾತನಾಡಿ, ತಾಲ್ಲೂಕು ಆಡಳಿತ ನಿಮಗೆ ಸಹಮತ ನೀಡುತ್ತದೆ. ನೀವು ಆಯ್ಕೆ ಮಾಡಿರುವ ಸ್ಥಳಗಳ ವಿವರ ನೀಡಿ ಅರ್ಜಿ ಸಲ್ಲಿಸಿ, ನಾನು ತಕ್ಷಣವೇ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸುತ್ತೇನೆ ಎಂದರು.
ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ದಡಂಘಟ್ಟ ತಿರುಮಲೇಶ್ ಮಾತನಾಡಿ, ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಂದಗಾನಹಳ್ಳಿ ಗ್ರಾಮದ ಸರ್ವೇ ನಂ ೨೯ ರಲ್ಲಿ ಕಳೆದ ಒಂದು ವರ್ಷದಿಂದ ಗುಡಿಸಲು ನಿರ್ಮಿಸಿಕೊಂಡು ಜೀವನ ನಡೆಸುವವರೆಗೆ ಕೂಡಲೇ ನಿವೇಶನ ಮಂಜೂರು ಮಾಡಬೇಕು. ಇಂದಿಗೂ ತಾಲ್ಲೂಕಿನಾದ್ಯಂತ ಇರುವ ದಲಿತ ಕೇರಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಿರಂತರವಾಗಿ ನಡೆಯುತ್ತಿದೆ. ಅದನ್ನು ತಡೆಗಟ್ಟಬೇಕು ಎಂದು ಮದ್ಯ ಮಾರಾಟ ಮಾಡುವ ವೀಡಿಯೋ ತೋರಿಸಿದರು.
ಸರ್ಕಲ್ ಇನ್ಸ್ ಪೆಕ್ಟರ್ ಆನಂದ್ ಕುಮಾರ್ ಮಾತನಾಡಿ, ಅಬಕಾರಿ ಇಲಾಖೆಯವರು ನಮಗೆ ಸಹಕಾರ ನೀಡಿದಲ್ಲಿ ಅಕ್ರಮ ಮದ್ಯ ಮಾರಾಟವನ್ನು ತಡೆಗಟ್ಟುವುದು ಸುಲಭಸಾಧ್ಯ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್, ಶಿರಸ್ತೆದಾರ್ ಮಂಜುನಾಥ್, ಬೆಸ್ಕಾಂ ಅಧಿಕಾರಿಗಳು, ರಾಜಸ್ವ ನಿರೀಕ್ಷಕರು ಹಾಜರಿದ್ದರು.
- Advertisement -
- Advertisement -
- Advertisement -