ಮಹದಾಯಿ -ಕಳಸಾಬಂಡೂರಿ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ಗೆ ತಾಲೂಕಿನಾದ್ಯಂತ ಎಲ್ಲಾ ಕಡೆಗಳಲ್ಲಿ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗಿದೆ.
ನಗರದ ಬಸ್ನಿಲ್ದಾಣದ ಸಮೀಪದಲ್ಲಿ ಶನಿವಾರ ಮಾನವ ಸರಪಳಿಯನ್ನು ನಿರ್ಮಾಣ ಮಾಡಿದ್ದ ಕರ್ನಾಟಕ ರಕ್ಷಣಾ ವೇದಿಕೆ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸೇನೆ ಕಾರ್ಯಕರ್ತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಬೆಂಬಲವನ್ನು ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆಗಳ ಜನತೆಯ ಕೂಗು ನೀರಿನ ವಿಚಾರದ್ದಾಗಿರುವುದರಿಂದ ಮಹದಾಯಿ- ಕಳಸಾಬಂಡೂರಿ ವಿಚಾರಕ್ಕೆ ಬೆಂಬಲ ನೀಡುತ್ತಿದ್ದೇವೆ. ಬಯಲು ಸೀಮೆ ಭಾಗಗಳಲ್ಲಿನ ಜನರು ಕಳೆದ ೪ ದಶಕಗಳಿಂದ ನೀರಾವರಿ ತಜ್ಞ ಡಾ.ಪರಮಶಿವಯ್ಯ ಅವರ ವರದಿಯಂತೆ ನಮ್ಮ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿರುವ ಹೋರಾಟಗಳಿಗೆ ಇದುವರೆಗೂ ಪ್ರತಿಫಲ ದೊರೆತಿಲ್ಲ. ಆದ್ದರಿಂದ ಮುಂದಿನ ಶಾಶ್ವತ ನೀರಾವರಿ ಹೋರಾಟಕ್ಕೂ ಕೂಡಾ ಉತ್ತರ ಕರ್ನಾಟಕದ ಜನತೆ ಬೆಂಬಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಂಗಳೂರು ಭಾಗದಲ್ಲಿನ ಜನತೆಗೆ ತೊಂದರೆಯಾಗುತ್ತದೆ ಎನ್ನುವ ಮೂಲಕ ಬಯಲುಸೀಮೆಯ ಜನರನ್ನು ಕಡೆಗಣಿಸುತ್ತಿರುವ ಮಾಜಿ ಕೆ.ಪಿ.ಸಿ.ಸಿ.ಅಧ್ಯಕ್ಷ ಜನಾರ್ಧನ ಪೂಜಾರಿ ಅವರು ಈ ಭಾಗದ ರೈತರ ಕ್ಷಮೆ ಕೇಳಬೇಕು. ಎತ್ತಿನಹೊಳೆ ಯೋಜನೆಯನ್ನು ತೋರಿಸಿ ಈ ಭಾಗದ ಜನತೆಯನ್ನು ದಿಕ್ಕು ತಪ್ಪಿಸುತ್ತಿರುವ ಸರ್ಕಾರ, ನೆರೆಯ ಆಂದ್ರಪ್ರದೇಶದ ಮಾದರಿಯಲ್ಲಿ ಶಾಶ್ವತವಾಗಿ ನೀರಾವರಿ ಸೌಲಭ್ಯವನ್ನು ಕಲ್ಪಿಸಬೇಕು. ಉತ್ತರ ಕರ್ನಾಟಕದ ಜನತೆ ಬಂದ್ನ ಅಂಗವಾಗಿ ಸರ್ಕಾರಕ್ಕೆ ಸಲ್ಲಿಸುವಂತಹ ಮನವಿಯ ಜೊತೆಯಲ್ಲಿ ಶಾಶ್ವತ ನೀರಾವರಿ ಯೋಜನೆಯ ಅನುಷ್ಠಾನದ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತರಾಗಿ ಮುಚ್ಚಿ ಬಂದ್ಗೆ ಬೆಂಬಲ ಸೂಚಿಸಿದ್ದರು. ದೂರದ ಊರುಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು, ಬಸ್ ಸಂಚಾರವಿಲ್ಲದೆ ಪರದಾಡಬೇಕಾಯಿತು. ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿತ್ತು. ಹೋಟೆಲುಗಳು, ಚಲನಚಿತ್ರಮಂದಿರಗಳು ಬಂದ್ ಆಗಿದ್ದವು, ಸಾರಿಗೆ ಇಲಾಖೆಯ ಬಸ್ಸುಗಳು ಸೇರಿದಂತೆ ಖಾಸಗಿ ಬಸ್ಸುಗಳೂ ರಸ್ತೆಗೆ ಇಳಿಯಲಿಲ್ಲ, ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳ ಗೈರು ಹಾಜರಿ ಎದ್ದುಕಾಣುತ್ತಿತ್ತು. ವಿವಿಧ ವಾಹನಗಳ ಮೂಲಕ ಆಸ್ಪತ್ರೆಗಳಿಗೆ ಬಂದಿದ್ದ ರೋಗಿಗಳು, ಆಸ್ಪತ್ರೆಗೆ ಸೇರಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದಲ್ಲಿನ ರೇಷ್ಮೆ ಗೂಡಿನ ಮಾರುಕಟ್ಟೆಗೆ ಬೇರೆ ಬೇರೆ ಕಡೆಗಳಿಂದ ಸುಮಾರು ೯೦೦ ಲಾಟುಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ರೇಷ್ಮೆ ಗೂಡು ಬಂದಿದ್ದರಿಂದ ಗೂಡಿನ ಬೆಲೆಗಳು ೧೫೦ ರೂಪಾಯಿಗಳಿಂದ ಹರಾಜು ಪ್ರಾರಂಭವಾಗಿ, ೨೫೭ ರವರೆಗೆ ಹರಾಜಾಯಿತು.
ಬೆಳಗಿನಿಂದಲೇ ಜಿನುಗುತ್ತಿದ್ದ ಮಳೆಯ ಹನಿಗಳ ನಡುವೆಯೆ ರಸ್ತೆ ತಡೆಯನ್ನು ನಡೆಸಿ, ಮಹಾರಾಷ್ಟ್ರ, ಗೋವಾ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ, ತಮ್ಮ ಆಕ್ರೋಶ ವ್ಯಕ್ತಪಡಿಸಿ, ಬಸ್ ನಿಲ್ದಾಣದಿಂದ ತಾಲ್ಲೂಕು ಕಚೇರಿಯವರೆಗೆ ವಿವಿಧ ಸಂಘಟನೆಗಳ ಸದಸ್ಯರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ರೈತ ಸಂಘದ ಮುಖಂಡರಾದ ಎಸ್.ಎಂ.ರವಿಪ್ರಕಾಶ್, ತಾದೂರು ಮಂಜುನಾಥ್, ಭಕ್ತರಹಳ್ಳಿಪ್ರತೀಶ್, ಒಕ್ಕಲಿಗರ ಸಂಘದ ಅಧ್ಯಕ್ಷ ಉಲ್ಲೂರುಪೇಟೆ ನಾರಾಯಣಸ್ವಾಮಿ, ಲಕ್ಕಹಳ್ಳಿ ದೇವರಾಜ್, ಆನೂರು ದೇವರಾಜ್, ಸಮಾನ ಮನಸ್ಕರ ಸಮಿತಿಯ ಅಧ್ಯಕ್ಷ ಜೆ.ವೆಂಕಟಸ್ವಾಮಿ, ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಶ್ರೀಧರ, ರಮೇಶ್, ಪ್ರತಾಪ್, ಮಂಜುನಾಥ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಜಿಲ್ಲಾ ಸಂಚಾಲಕ ಶಿವಪ್ರಕಾಶ್, ನಟರಾಜ್, ಮಧುಕುಮಾರ್, ದಲಿತ ಸೇನೆಯ ತಾಲ್ಲೂಕು ಅಧ್ಯಕ್ಷ ಸುರೇಶ್, ಚಂದ್ರು ಮುಂತಾದವರು ಹಾಜರಿದ್ದರು.
ವಕೀಲರ ಸಂಘದ ಬೆಂಬಲ

ನಗರದ ದಿಬ್ಬೂರಹಳ್ಳಿ ರಸ್ತೆಯಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವಕೀಲರು, ಬಯಲು ಸೀಮೆಯ ಭಾಗಗಳಿಗೆ ನೀರಾವರಿ ಸೌಲಭ್ಯಗಳನ್ನು ಶೀಘ್ರವಾಗಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಪಾಪಿರೆಡ್ಡಿ ಮಾತನಾಡಿ, ಮಹದಾಯಿ- ಕಳಸಾಬಂಡೂರಿ ಯೋಜನೆ, ಹಾಗೂ ಶಾಶ್ವತ ನೀರಾವರಿ ಹೋರಾಟಗಳು ತುಂಬಾ ಹಳೇಯ ಹೋರಾಟಗಳಾಗಿವೆ. ಉತ್ತರ ಕರ್ನಾಟಕದ ಎರಡು ಮೂರು ತಾಲ್ಲೂಕುಗಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಶಾಶ್ವತ ನೀರಾವರಿ ಯೋಜನೆ ೬ ಜಿಲ್ಲೆಗಳಿಗೆ ಸಂಬಂಧಿಸಿದ ಯೋಜನೆಯಾಗಿದೆ. ಈ ಭಾಗದಲ್ಲಿನ ರೈತರು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರು ಕೇಳುವುದು ನಮ್ಮ ಸಂವಿಧಾನ ಬದ್ಧವಾದ ಹಕ್ಕಾಗಿದ್ದು, ಸರ್ಕಾರಗಳು ಅನೇಕ ವರ್ಷಗಳ ಬೇಡಿಕೆಯನ್ನು ಈಡೇರಿಸಬೇಕಾಗಿದೆ. ಆದ್ದರಿಂದ ಬಂದ್ಗೆ ನಮ್ಮ ಬೆಂಬಲ ಸೂಚಿಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸದೆ ನೀರಾವರಿ ಹೋರಾಟಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದರು.
ವಕೀಲರ ಸಂಘದ ಕಾರ್ಯದರ್ಶಿ ವಿ.ಎಂ.ಬೈರಾರೆಡ್ಡಿ, ವಕೀಲರಾದ ಎಂ.ಬಿ.ಲೊಕೇಶ್, ಯಣ್ಣಂಗೂರು ಮಂಜುನಾಥ್, ಮುನೇಗೌಡ, ಕೆಂಪೇಗೌಡ, ನೌಷದ್ಆಲಿ, ಬಾಸ್ಕರ್, ವೇಣುಗೋಪಾಲ್, ರಘು, ಮುಂತಾದವರು ಹಾಜರಿದ್ದರು.
ಜಂಗಮಕೋಟೆ ಕ್ರಾಸ್ನಲ್ಲಿ ಪ್ರತಿಭಟನೆ

ಜಂಗಮಕೋಟೆ ಕ್ರಾಸ್ನ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ರೈತ ಸಂಘ, ಆಟೋ ಚಾಲಕರ ಸಂಘ, ವ್ಯಾಪಾರಿಗಳ ಸಂಘ, ಟೆಂಪೋ ಮಾಲಿಕರ ಸಂಘಟನೆಗಳು ಬಂದ್ಗೆ ಬೆಂಬಲ ವ್ಯಕ್ತಪಡಿಸಿರು.
ಪೆಟ್ರೋಲ್ ಬಂಕ್, ಅಂಗಡಿ ಮುಂಗಟ್ಟುಗಳು, ಹೋಟೆಲ್ ಸ್ವಯಂಪ್ರೇರಿತರಾಗಿ ಮುಚ್ಚಿದ್ದು, ಬಂದ್ ಯಶಸ್ವಿಗೆ ಕಾರಣರಾದರು.
ಕರ್ನಾಟಕ ರಕ್ಷಣಾ ವೇದಿಕೆಯ ಮುನಿರಾಜ್(ಕುಟ್ಟಿ), ಕನ್ನಡ ಸೇನೆಯ ಮುರಳಿ, ರೈತ ಸಂಘದ ಮೂರ್ತಿ, ಸುಗಟೂರು ರಾಜು, ಕೆಂಪೇಗೌಡ, ಮಧು, ಸೂರಿ, ನಾಗೇಶ್, ರಮೇಶ್, ಡಿ.ಸಿ.ಮುನಿರಾಜು, ಸುರೇಶ್, ನರಸಿಂಹ, ಶಿವು, ನಾರಾಯಣ್, ದಿನಕರ, ಪ್ರಕಾಶ್, ಮಂಜುನಾಥ, ನಾರಾಯಣಸ್ವಾಮಿ, ಹರೀಶ್, ಅರುಣ್, ಮಣಿ ಮತ್ತಿತರರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







